ಬೆಟ್ಟಂಪಾಡಿ ಪರಿಸರದಲ್ಲಿ ತಲ್ಲಣ ಮೂಡಿಸಿದ ಈರ್ವರು ಯಕ್ಷಗಾನ ಕಲಾವಿದರ ಮರಣ
ಪುತ್ತೂರು:ವೇಗವಾಗಿ ಬಂದ ವಾಹನವೊಂದು ಇಬ್ಬರು ಪಾದಚಾರಿಗಳಿಗೆ ಢಿಕ್ಕಿ ಹೊಡೆದು, ತಲೆಗೆ ಗಂಭೀರವಾಗಿ ಗಾಯಗೊಂಡಿದ್ದ ಇಬ್ಬರೂ ಚಿಕಿತ್ಸೆಗೆ ಸ್ಪಂದಿಸದೆ ಮಂಗಳೂರಿನ ಆಸ್ಪತ್ರೆಯಲ್ಲಿ ಮೃತಪಟ್ಟ ಘಟನೆ ಕನಕಮಜಲು ಗ್ರಾಮದ ಕೋಡಿಯಲ್ಲಿ ಫೆ.8ರಂದು ರಾತ್ರಿ ಸಂಭವಿಸಿದೆ.ಬೆಟ್ಟಂಪಾಡಿ ಕಕ್ಕೂರು ನಿವಾಸಿ ರಾಮಯ್ಯ ರೈ(67ವ.)ಮತ್ತು ಸುಳ್ಯದ ಕುರುಂಜಿಕಾರ್ ಟ್ರೇಡರ‍್ಸ್‌ನಲ್ಲಿ ಕೆಲಸದಲ್ಲಿದ್ದ ಅವರ ಅಳಿಯ(ಮಗಳ ಗಂಡ)ಜನಾರ್ದನ ಶೆಟ್ಟಿ(50ವ.) ಮೃತಪಟ್ಟ ದುರ್ದೈವಿಗಳು. ಅಪಘಾತವೆಸಗಿ ಪರಾರಿಯಾಗಿದ್ದ ಕಾರನ್ನು ಪತ್ತೆಹಚ್ಚುವಲ್ಲಿ ಸುಳ್ಯ ಪೊಲೀಸರು ಯಶಸ್ವಿಯಾಗಿದ್ದಾರೆ.
ಕನಕಮಜಲಿನ ಶ್ರೀ ಆತ್ಮಾರಾಮ ಭಜನಾ ಮಂದಿರದಲ್ಲಿ ಫೆ.8ರಂದು ರಾತ್ರಿ ಏಕಾಹ ಭಜನೆ ಇದ್ದ ಕಾರಣ ರಾಮಯ್ಯ ರೈ ಅವರು ಸಂಜೆ ವೇಳೆಗೆ ಕನಕಮಜಲಿನ ತಮ್ಮ ಮಗಳು ಹೇಮಾವತಿ ಅವರ ಮನೆಗೆ ಬಂದು, ರಾತ್ರಿ 8.15ರ ಸುಮಾರಿಗೆ ಅಳಿಯ ಜನಾರ್ದನ ಅವರೊಂದಿಗೆ ಏಕಾಹ ಭಜನೆಗೆಂದು ಭಜನಾ ಮಂದಿರಕ್ಕೆ ಹೊರಟಿದ್ದರು.ಅವರು ತಮ್ಮ ಮನೆ ರಸ್ತೆಯಿಂದ ರಾಷ್ಟ್ರೀಯ ಹೆದ್ದಾರಿಗೆ ಬಂದು ಇಳಿಯುತ್ತಿದ್ದಂತೆ ಪುತ್ತೂರು ಕಡೆಯಿಂದ ವೇಗವಾಗಿ ಬಂದ ವಾಹನವೊಂದು ಇವರಿಬ್ಬರಿಗೂ ಢಿಕ್ಕಿ ಹೊಡೆಯಿತೆನ್ನಲಾಗಿದೆ.ಢಿಕ್ಕಿ ಹೊಡೆದ ರಭಸಕ್ಕೆ ರಾಮಯ್ಯ ರೈ ಅವರು ರಸ್ತೆ ಬದಿ ಎಸೆಯಲ್ಪಟ್ಟು ಗಂಭೀರವಾಗಿ ಗಾಯಗೊಂಡಿದ್ದರು.ಢಿಕ್ಕಿ ಹೊಡೆದ ಶಬ್ದ ಕೇಳಿದ ಸ್ಥಳೀಯರು ತಕ್ಷಣ ಬಂದು ಆಂಬ್ಯುಲೆನ್ಸ್‌ಗೆ ಫೋನಾಯಿಸಿ, ರಾಮಯ್ಯ ರೈ ಅವರನ್ನು ಸುಳ್ಯದ ಕೆವಿಜಿ ಆಸ್ಪತ್ರೆಗೆ ಕರೆತಂದು ದಾಖಲಿಸಿದರು.ಸ್ಥಳೀಯರು ಸ್ಥಳಕ್ಕೆ ಆಗಮಿಸುವಷ್ಟರಲ್ಲಿ, ಅಪಘಾತವೆಸಗಿದ್ದ ಕಾರನ್ನು ಅದರ ಚಾಲಕ ನಿಲ್ಲಿಸದೇ ಅಲ್ಲಿಂದ ಪರಾರಿಯಾಗಿರುವುದಾಗಿ ತಿಳಿದುಬಂದಿದೆ.ರಾಮಯ್ಯ ರೈ ಅವರ ಅಳಿಯ ಜನಾರ್ದನ ಅವರೂ ತಲೆಗೆ ಗಂಭೀರವಾಗಿ ಗಾಯಗೊಂಡು ರಸ್ತೆ ಪಕ್ಕದ ಚರಂಡಿಯಲ್ಲಿ ಬಿದ್ದಿರುವುದು ಬಳಿಕ ಗಮನಕ್ಕೆ ಬಂದು ಅವರನ್ನೂ ಕೆವಿಜಿ ಆಸ್ಪತ್ರೆಗೆ ದಾಖಲಿಸಿ, ಹೆಚ್ಚಿನ ಚಿಕಿತ್ಸೆಗಾಗಿ ಮಂಗಳೂರಿನ ಆಸ್ಪತ್ರೆಗೆ ಕರೆದೊಯ್ದು ದಾಖಲಿಸಲಾಗಿತ್ತು.ಫೆ.9ರಂದು ಬೆಳಿಗ್ಗೆ ಅವರಿಬ್ಬರೂ ಚಿಕಿತ್ಸೆ ಫಲಕಾರಿಯಾಗದೆ ಕೊನೆಯುಸಿರೆಳೆದಿರುವುದಾಗಿ ತಿಳಿದುಬಂದಿದೆ.
ಮೃತ ರಾಮಯ್ಯ ರೈ ಅವರು ಬೆಟ್ಟಂಪಾಡಿ ಶ್ರೀ ವಿನಾಯಕ ಭಜನಾ ಮಂದಿರದ ಮಾಜಿ ಅಧ್ಯಕ್ಷರಾಗಿದ್ದು, ಪ್ರಸ್ತುತ ಗೌರವ ಸಲಹೆಗಾರರಾಗಿ ಸೇವೆ ಸಲ್ಲಿಸುತ್ತಿದ್ದರು. ಬೆಟ್ಟಂಪಾಡಿ ಶ್ರೀ ಮಹಾಲಿಂಗೇಶ್ವರ ಯಕ್ಷಗಾನ ಕಲಾಸಂಘದ ಸದಸ್ಯರಾಗಿದ್ದು, ಹವ್ಯಾಸಿ ಚೆಂಡೆವಾದಕರಾಗಿಯೂ ಹಲವು ವರ್ಷಗಳಿಂದ ಸೇವೆ ಸಲ್ಲಿಸಿ, ಊರಲ್ಲಿ ‘ಚೆಂಡೆ ರಾಮಯ್ಯಣ್ಣ’ ಎಂದೇ ಪರಿಚಿತರಾಗಿದ್ದರು.
ಮೃತ ರಾಮಯ್ಯ ರೈ ಅವರು ಪತ್ನಿ ಮೀನಾಕ್ಷಿ, ಪುತ್ರ ಲಕ್ಷ್ಮೀಶ, ಪುತ್ರಿಯರಾದ ಹೇಮಾವತಿ, ಪುಷ್ಪಾವತಿ ಹಾಗೂ ಮೊಮ್ಮಕ್ಕಳನ್ನು ಅಗಲಿದ್ದಾರೆ.ಜನಾರ್ದನ ರೈಯವರು ಪತ್ನಿ ಶ್ರೀಮತಿ ಹೇಮಾವತಿ, ಪುತ್ರ ಕೀರ್ತನ್ ರೈ, ಪುತ್ರಿ ಹಿತಾಶ್ರೀ ಅವರನ್ನು ಅಗಲಿದ್ದಾರೆ.ಸುಳ್ಯ ಪೊಲೀಸರು ಸ್ಥಳಕ್ಕೆ ಆಗಮಿಸಿ, ಸ್ಥಳ ಪರಿಶೀಲನೆ ನಡೆಸಿ ಪ್ರಕರಣ ದಾಖಲಿಸಿಕೊಂಡಿದ್ದಾರೆ.
ಭಜನೆಗೆಂದೇ ಬೆಟ್ಟಂಪಾಡಿಯಿಂದ ಕನಕಮಜಲಿಗೆ ತೆರಳಿದ್ದ ರಾಮಯ್ಯ ರೈ
ರಾಮಯ್ಯ ರೈ ಅವರು ಫೆ.8ರಂದು ಸಂಜೆ ತನಕ ಬೆಟ್ಟಂಪಾಡಿ ದೇವಸ್ಥಾನದಲ್ಲಿ ಕಾರ್ಯಕ್ರಮವೊಂದರಲ್ಲಿ ಭಾಗವಹಿಸಿದ್ದವರು, ಕನಕಮಜಲಿನ ಶ್ರೀ ಆತ್ಮಾರಾಮ ಭಜನಾ ಮಂದಿರದ ಏಕಾಹ ಭಜನೆಗೆಂದೇ ಸಂಜೆ 6.30ರ ವೇಳೆಗೆ ಕನಕಮಜಲಿಗೆ ತೆರಳಿದ್ದರು.
ಡಿಕ್ಕಿಯಾಗಿ ಪರಾರಿಯಾಗಿದ್ದ ಇಕೋ ಕಾರು ವಶಕ್ಕೆ
ಪಾದಚಾರಿಗಳಿಬ್ಬರಿಗೆ ಗುದ್ದಿ ಅವರ ಸಾವಿಗೆ ಕಾರಣವಾದ ಇಕೋ ಕಾರನ್ನು ಪತ್ತೆಹಚ್ಚುವಲ್ಲಿ ಸುಳ್ಯ ಪೋಲೀಸರು ಯಶಸ್ವಿಯಾಗಿದ್ದಾರೆ. ಘಟನೆ ನಡೆದ ಕೂಡಲೇ ಸಮೀಪದ ಮಹಿಳೆಯೊಬ್ಬರು ಆಂಬುಲೆಗೆ ಫೋನ್ ಮಾಡಿದ್ದರು.ಆ ಸಮಯವನ್ನು ಗುರಿಯಾಗಿಸಿಕೊಂಡು ಸಿ.ಸಿ. ಕ್ಯಾಮರಾವನ್ನು ಪರಿಶೀಲಿಸಿದಾಗ ಇಕೋ ಕಾರೊಂದು ಬೀರಮಂಗಲದ ಕಡೆ ಹೋದುದು ಕಂಡುಬಂತು.ಪೋಲಿಸರು ಸ್ಥಳಕ್ಕೆ ಹೋಗಿ ಪರಿಶೀಲಿಸಿದಾಗ ಬೀರಮಂಗಲದ ಆರ್.ಕೆ. ಭಟ್‌ರವರ ಇಕೋ ಕಾರು ಎಂಬುದು ಗೊತ್ತಾಯಿತು.ಮನೆಯಲ್ಲಿದ್ದ ಆ ಕಾರು ಜಖಂ ಆಗಿರುವುದೂ ಕಂಡು ಬಂದಿದೆ.ಆದರೆ, ಕಾರು ಚಲಾಯಿಸಿಕೊಂಡಿದ್ದ ವ್ಯಕ್ತಿ ಸಿಕ್ಕಿಲ್ಲ ಎಂದು ಪೋಲೀಸರು ತಿಳಿಸಿದ್ದಾರೆ.ಕಾರನ್ನು ಯಾರು ಚಲಾಯಿಸುತ್ತಿದ್ದರೆಂದು ವಿಚಾರಿಸಲು ಆರ್.ಕೆ.ಭಟ್ ಅವರನ್ನು ಸಂಪರ್ಕಿಸಲು ಪ್ರಯತ್ನಿಸಿದಾಗ ಅವರು ಸಂಪರ್ಕಕ್ಕೆ ಲಭ್ಯರಾಗಿಲ್ಲ.
ಗಂಭೀರ ಗಾಯಗೊಂಡು ಚರಂಡಿಯಲ್ಲಿ ಬಿದ್ದಿದ್ದ ಜನಾರ್ದನರು
ರಾಮಯ್ಯ ರೈ ಅವರೊಂದಿಗೆ ಅವರ ಅಳಿಯ ಜನಾರ್ದನ ಶೆಟ್ಟಿಯವರು ಭಜನೆಗೆ ಬರುತ್ತಿದ್ದರೆಂಬ ಮಾಹಿತಿ ಯಾರಿಗೂ ಇರಲಿಲ್ಲ.ಅಪಘಾತ ನಡೆದು ಸುಮಾರು ಮುಕ್ಕಾಲು ಗಂಟೆಯ ಬಳಿಕ ಜನಾರ್ದನರ ಮನೆಯವರಲ್ಲಿ ವಿಚಾರಿಸಿದಾಗ, ಅವರು ಮಾವನ ಜೊತೆಗೆ ಭಜನೆಗೆ ಹೋಗಿದ್ದಾರೆ ಎಂದು ಮನೆಯವರು ಹೇಳಿದರು.ಆದರೆ ಭಜನಾ ಮಂದಿರದಲ್ಲಿ ಹುಡುಕಿದಾಗ ಅಲ್ಲೂ ಅವರು ಇರಲಿಲ್ಲ.ಹೀಗಾಗಿ ಮಂದಿರದಲ್ಲಿದ್ದ ಸ್ಥಳೀಯರು ಸೇರಿ ಹುಡುಕಾಡ ತೊಡಗಿದರು.ಈ ವೇಳೆ ಮನೆಯ ಕಾಂಕ್ರೀಟ್ ರಸ್ತೆ ಬಂದು ಮುಖ್ಯರಸ್ತೆಗೆ ಸೇರುವ ಬಳಿ ಚರಂಡಿಯಲ್ಲಿ ಜನಾರ್ದನರು ರಕ್ತದ ಮಡುವಿನಲ್ಲಿ ಜೀವನ್ಮರಣ ಸ್ಥಿತಿಯಲ್ಲಿ ಬಿದ್ದಿದ್ದರು.ಕೂಡಲೇ ಅವರನ್ನು ಸ್ಥಳೀಯರಾದ ಜಯಪ್ರಸಾದ್ ಕಾರಿಂಜ ಅವರ ಕಾರಿನಲ್ಲಿ ರಾತ್ರಿ 9.30ರ ವೇಳೆಗೆ ಸುಳ್ಯದ ಕೆವಿಜಿ ಆಸ್ಪತ್ರೆಗೆ ಕರೆತರಲಾಯಿತು.ಅಲ್ಲಿ ಪರೀಕ್ಷಿಸಿದ ವೈದ್ಯರು, ತಲೆಯಿಂದ ಹೆಚ್ಚು ರಕ್ತ ಸುರಿದಿರುವುದಾಗಿ ತಿಳಿಸಿದರು.ಅವರ ಸೂಚನೆಯಂತೆ ತಕ್ಷಣ ಆಂಬ್ಯುಲೆನ್ಸ್ ಮೂಲಕ ಅವರನ್ನು ಮಂಗಳೂರಿನ ಆಸ್ಪತ್ರೆಗೆ ಕರೆದೊಯ್ಯಲಾಯಿತು.ಇನ್ನೊಂದೆಡೆ, ಮೊದಲೇ ಆಸ್ಪತ್ರೆಗೆ ಕರೆತಂದಿದ್ದ ರಾಮಯ್ಯ ರೈ ಅವರ ತಲೆಗೆ ಗಂಭೀರವಾಗಿ ಗಾಯಗೊಂಡಿದ್ದ ಕಾರಣ ಅವರನ್ನೂ ಮಂಗಳೂರಿನ ಆಸ್ಪತ್ರೆಗೆ ಕರೆದೊಯ್ದು ಇಬ್ಬರನ್ನೂ ತೀವ್ರ ನಿಗಾ ಘಟಕದಲ್ಲಿ ದಾಖಲಿಸಿ, ಚಿಕಿತ್ಸೆ ಕೊಡಿಸಲಾಯಿತು.ಆದರೆ ಚಿಕಿತ್ಸೆಗೆ ಸ್ಪಂದಿಸದೆ ಅಲ್ಲಿ ಅವರೀರ್ವರೂ ಕೊನೆಯುಸಿರೆಳೆದಿರುವುದಾಗಿ ತಿಳಿದುಬಂದಿದೆ.
ಯಕ್ಷಗಾನ ಕಲಾಸಂಘದ ಈರ್ವರು ಸದಸ್ಯರ ಮರಣ
ಬೆಟ್ಟಂಪಾಡಿ ಶ್ರೀ ಮಹಾಲಿಂಗೇಶ್ವರ ಯಕ್ಷಗಾನ ಕಲಾಸಂಘದ ಈರ್ವರು ಸದಸ್ಯರು ಒಂದೇ ದಿನದ ಅಂತರದಲ್ಲಿ ಆಕಸ್ಮಿಕ ಮರಣಕ್ಕೆ ತುತ್ತಾಗಿರುವುದು ಸಂಘದ ಸದಸ್ಯರಲ್ಲಿ ಹಾಗೂ ಬೆಟ್ಟಂಪಾಡಿ ಪರಿಸರದಲ್ಲಿ ತಲ್ಲಣ ಮೂಡಿಸಿದೆ.ಇತ್ತೀಚೆಗಷ್ಟೇ ಜ್ವರದಿಂದ ಮಂಗಳೂರಿನ ಆಸ್ಪತ್ರೆಯಲ್ಲಿ ದಾಖಲಾಗಿ ಕೋಮಾವಸ್ಥೆಯಲ್ಲಿದ್ದ ಸಂಘದ ಕಾರ್ಯದರ್ಶಿ ಪ್ರದೀಪ ರೈ ಕೆ. ರವರು ಚಿಕಿತ್ಸೆಗೆ ಸ್ಪಂದಿಸದೆ ಫೆ. 7 ರಂದು ರಾತ್ರಿ ನಿಧನರಾದರು. ಅವರ ಅಂತ್ಯಕ್ರಿಯೆ ಫೆ. 8 ರಂದು ಬೆಟ್ಟಂಪಾಡಿ ಅವರ ಮನೆಯಲ್ಲಿ ನಡೆದಿತ್ತು. ಈ ಕಾರ್ಯದಲ್ಲಿ ರಾಮಯ್ಯ ಶೆಟ್ಟಿಯವರೂ ಪಾಲ್ಗೊಂಡು ಪ್ರದೀಪ್ ರೈಯವರ ಅಂತಿಮದರ್ಶನ ಮಾಡಿ ಸಂತಾಪ ಸೂಚಿಸಿದ್ದರು. ಬಳಿಕ ಬೆಟ್ಟಂಪಾಡಿ ಶ್ರೀ ಮಹಾಲಿಂಗೇಶ್ವರ ಭಜನಾ ಸಂಘದ ವಾರ್ಷಿಕೋತ್ಸವದಲ್ಲಿ ಪಾಲ್ಗೊಂಡಿದ್ದ ರಾಮಯ್ಯ ಶೆಟ್ಟಿಯವರು ಸಂಜೆ ಕನಕಮಜಲುವಿನಲ್ಲಿರುವ ತನ್ನ ಅಳಿಯನ ಮನೆಗೆ ಹೋಗಿದ್ದರು.