- ಸಂಸ್ಕಾರ ಮನೆಯಿಂದಲೇ ಜಾಗೃತವಾಗಬೇಕು – ಗಣರಾಜ ಭಟ್ ಕೆದಿಲ
- ಶ್ರೀರಾಮ ಗೆಳೆಯರ ಬಳಗ ದಶಮಾನೋತ್ಸವಕ್ಕೆ ಹಲವು ಕಾರ್ಯಕ್ರಮ – ಅರುಣ್ ಕುಮಾರ್ ಪುತ್ತಿಲ
ಪುತ್ತೂರು: ಶ್ರೀರಾಮ ಗೆಳೆಯರ ಬಳಗ ಮತ್ತು ಪುತ್ತಿಲ ಪರಿವಾರ ಮುಂಡೂರು ಇದರ ವತಿಯಿಂದ ಲೋಕ ಕಲ್ಯಾಣಾರ್ಥವಾಗಿ 3ನೇ ವರ್ಷದ ಸಾರ್ವಜನಿಕ ಶ್ರೀ ವೀರಾಂಜನೇಯ ಕಲ್ಪೋಕ್ತ ಪೂಜೆಯು ನಾರಾಯಣ ಐತಾಳ ಅವರ ಪೌರೋಹಿತ್ವದಲ್ಲಿ ಫೆ.8ರಂದು ಸಂಜೆ ಮುಂಡೂರು ಶ್ರೀ ಮೃತ್ಯುಂಜಯೇಶ್ವರ ದೇವಸ್ಥಾನದ ಗೌರಿಶಂಕರ ಸಭಾಭವನದಲ್ಲಿ ನಡೆಯಿತು.
![](https://puttur.suddinews.com/wp-content/uploads/2025/02/mundoor-2.jpg)
ಸಂಸ್ಕಾರ ಮನೆಯಿಂದಲೇ ಜಾಗೃತವಾಗಬೇಕು:
ಪೂಜಾ ಕಾರ್ಯಕ್ರಮದ ಅಂಗವಾಗಿ ನಡೆದ ಸುಧರ್ಮ ಸಭೆಯಲ್ಲಿ ಸಾಮಾಜಿಕ ಕಾರ್ಯಕರ್ತ ಗಣರಾಜ ಭಟ್ ಕೆದಿಲ ಅವರು ಧಾರ್ಮಿಕ ಉಪನ್ಯಾಸ ನೀಡಿದರು. ಇತ್ತೀಚಿನ ದಿನಗಳಲ್ಲಿಸಾರ್ವಜನಿಕ ಕಾರ್ಯಕ್ರಮಗಳು ಎಂದಾಕ್ಷಣ ಪೇಟೆ ಪಟ್ಟಣಗಳು ಮೊಳಗಿಸುವ ಮನೋರಂಜನೆಯ ಶಬ್ದಗಳೇ ಹೆಚ್ಚು. ಧಾರ್ಮಿಕ ಕಾರ್ಯಕ್ರಮಗಳು ಕೇವಲ ಮನೋರಂಜನೆಗಾಗಿ ಸೀಮಿತವಾಗಿದೆ. ಹಿಂದಿನ ದಿನಗಳಲ್ಲಿಕೆಲಸ ಕಾರ್ಯಗಳ ಒತ್ತಡವಿದ್ದರೂ ಸಂಜೆಯಾಗುತ್ತಿದಂತೆಯೇ ಮನೆ ಮನೆಗಳಲ್ಲಿ ದೇವರ ನಾಮಸ್ಮರಣೆಯ ಭಜನೆಯ ತಾಳದ ಶಬ್ದಗಳು ಮನೆ ಮನೆಗಳಲ್ಲಿಮೊಳಗುತ್ತಿತ್ತು. ಇವತ್ತು ಭಾಗ್ಯದಲಕ್ಷ್ಮೀ ಬಾರಮ್ಮ ಹೋಗಿ ಲಕ್ಷ್ಮೀ ಬಾರಮ್ಮ ಸೀರಿಯಲ್ ನೋಡುವ ಕಾತುರ ಹೆಚ್ಚಾಗತೊಡಗಿದೆ. ಈ ಕುರಿತು ಹಿರಿಯರು ಎಚ್ಚರಿಕೆ ವಹಿಸಿ ಮನೆಯಿಂದಲೇ ಸಂಸ್ಕಾರ ಜಾಗೃತಗೊಳಿಸಬೇಕೆಂದ ಅವರು ಹಿಂದುತ್ವಕ್ಕೆ ಒಂದು ಕಡೆಯಿಂದ ನೇರ ದಾಳಿಯಾದರೆ ಇನ್ನೊಂದು ಕಡೆಯಿಂದ ನಮ್ಮವರೇ ಪರೋಕ್ಷವಾಗಿ ದಾಳಿ ಮಾಡುತ್ತಿದ್ದಾರೆ. ಇವೆಲ್ಲವನ್ನು ಹಿಮ್ಮೆಟ್ಟಿಲು ಜಾಗೃತ ಸಮಾಜ ಶಕ್ತಿವಂತಾಗಬೇಕೆಂದ ಅವರು ಕಳೆದ 10 ವರ್ಷಗಳಿಂದ ಮುಂಡೂರಿನಲ್ಲಿ ಉದಯವಾದ ಶ್ರೀರಾಮ ಗೆಳೆಯರ ಬಳಗ ಉತ್ತಮ ಧಾರ್ಮಿಕ, ಸಾಮಾಜಿಕವಾಗಿ ಹಲವು ಸೇವಾ ಕಾರ್ಯ ಮಾಡುತ್ತಿರುವುದು ಎಲ್ಲರಿಗೂ ಮಾದರಿಯಾಗಲಿ ಎಂದರು.
![](https://puttur.suddinews.com/wp-content/uploads/2025/02/mundoor-1-1.jpg)
ಶ್ರೀರಾಮ ಗೆಳೆಯರ ಬಳಗ ದಶಮಾನೋತ್ಸವಕ್ಕೆ ಹಲವು ಕಾರ್ಯಕ್ರಮ:
ಶ್ರೀರಾಮ ಗೆಳೆಯರ ಬಳಗದ ಗೌರವಾಧ್ಯಕ್ಷ ಅರುಣ್ ಕುಮಾರ್ ಪುತ್ತಿಲ ಪ್ರಾಸ್ತಾವಿಕವಾಗಿ ಮಾತನಾಡಿ ಸಂಘಟನೆ ಆರಂಭವಾದ ಸಂದರ್ಭ ಕ್ರೀಡೆಯ ಮೂಲಕ ಶಕ್ತಿ ತುಂಬಿದೆವು. ಬಳಿಕ ಧಾರ್ಮಿಕ ಕಾರ್ಯಕ್ರಮ ಜೋಡಿಸಿಕೊಂಡೆವು. ಮುಂದೆ ಅಶಕ್ತರಿಗೆ ಆರ್ಥಿಕ ನೆರವು ಮಾಡುವ ಮೂಲಕ ಸಮಾಜಮುಖಿ ಕಾರ್ಯ ನಡೆಸಿಕೊಂಡು ಬಂದೆವು. ಸಂಘಟನೆ ಮೂಲಕ ನಿರಾಶ್ರಿತರಿಗೆ ಎರಡು ಮನೆ ನಿರ್ಮಾಣವನ್ನೂ ಮಾಡಿ ಕೊಟ್ಟೆವು. ಇದೀಗ ಸಂಘಟನೆ ದಶಮಾನೋತ್ಸವದ ಸಂಭ್ರಮದಲ್ಲಿದೆ. ಎಲ್ಲರು ಸಹಕಾರ ನೀಡುವಂತೆ ವಿನಂತಿಸಿದರು. ಶ್ರೀರಾಮ ಗೆಳೆಯರ ಬಳಗದ ಅಧ್ಯಕ್ಷ ಅನಿಲ್ ಕುಮಾರ್ ಕಣ್ಣಾರ್ನೂಜಿ ಅಧ್ಯಕ್ಷತೆ ವಹಿಸಿದ್ದರು.
ಪುತ್ತಿಲ ಪರಿವಾರ ಸೇವಾ ಟ್ರಸ್ಟ್‌ನ ಅಧ್ಯಕ್ಷ ಮಹೇಂದ್ರ ವರ್ಮ ಬಜತ್ತೂರು, ಪ್ರಧಾನ ಕಾರ್ಯದರ್ಶಿ ರವಿಕುಮಾರ್ ರೈ ಮಠ, ಪ್ರಧಾನಮಂತ್ರಿ ಗ್ರಾಮ ಸಡಕ್ ಇಂಜಿನಿಯರ್ ಪರಮೇಶ್ವರ ನಾಯ್ಕ ರಂಗತ್ತಮಲೆ, ಮುಂಡೂರು ಗ್ರಾ.ಪಂ ಅದ್ಯಕ್ಷ ಚಂದ್ರಶೇಖರ ಸರ್ವೆ, ಮುಂಡೂರ ಮೃತ್ಯುಂಜಯೇಶ್ವರ ದೇವಸ್ಥಾನದ ವ್ಯವಸ್ಥಾಪನಾ ಸಮಿತಿ ಮಾಜಿ ಅಧ್ಯಕ್ಷ ಬಿ.ಟಿ.ಮಹೇಶ್ಚಂದ್ರ ಸಾಲಿಯಾನ್, ಶ್ರೀರಾಮ ಗೆಳೆಯರ ಬಳಗದ ಕಾರ್ಯಾಧ್ಯಕ್ಷ ನೀಲಪ್ಪ ಪೂಜಾರಿ ಕುರೆಮಜಲು, ಪ್ರಧಾನ ಕಾರ್ಯದರ್ಶಿ ಬಾಲಚಂದ್ರ ಗೌಡ ಕಡ್ಯ, ಕೋಶಾಧಿಕಾರಿ ಅವಿನಾಶ್ ಕೇದಗೆದಡಿ, ಸಂಚಾಲಕ ಸುಂದರ ನಾಯ್ಕ ಬಿ.ಕೆ, ಜೊತೆ ಕಾರ್ಯದರ್ಶಿ ಪ್ರಸಾದ್ ಬಿ.ಕೆ, ವಿನಯ ಪುತ್ತಿಲ ಉಪಸ್ಥಿತರಿದ್ದರು.
ಸನ್ಮಾನ:
135 ಹಸುಗಳನ್ನೊಳಗೊಂಡ ’ಶ್ರೀ ಸಾಯಿ ಭಗವಾನ್’ ಎಂಬ ಹೆಸರಿನ ಡೈರಿ ಫಾರ್ಮ್ಸ್ ನಡೆಸುತ್ತಿದ್ದು, ವಿವಿಧ ಆಧುನಿಕ ತಂತ್ರಜ್ಞಾನಗಳನ್ನು ಉಪಯೋಗಿಸಿಕೊಂಡು ಸಾರ್ವಜನಿಕರಿಗೆ ತನ್ನ ಅನುಭವಗಳನ್ನು ಹಂಚಿಕೊಂಡು ಯಶಸ್ವಿ ಹೈನುಗಾರರಾಗಿ ಸಮಾಜದಲ್ಲಿ ಗುರುತಿಸಿಕೊಂಡ ಜಯಗುರು ಆಚಾರ್ ಹಿಂದಾರು ಮತ್ತು ಹಿರಿಯರ ಕ್ರೀಡಾಕೂಟದಲ್ಲಿ ರಾಷ್ಟ್ರಮಟ್ಟದಲ್ಲಿ ಸಾಧನೆ ಮಾಡಿದ ಭುವನೇಶ್ವರಿ ಅಜ್ಜಿಕಲ್ಲು ಅವರನ್ನು ಶ್ರೀರಾಮ ಗೆಳೆಯರ ಬಳಗ ಮತ್ತು ಪುತ್ತಿಲ ಪರಿವಾರ ಮುಂಡೂರು ಘಟಕದ ವತಿಯಿಂದ ಸನ್ಮಾನಿಸಲಾಯಿತು. ಬಾಲಚಂದ್ರ ಸೊರಕೆ ವಂದಿಸಿದರು. ದೇವದಾಸ್ ಕಾರ್ಯಕ್ರಮ ನಿರೂಪಿಸಿದರು. ಸಮಾರಂಭದ ಬಳಿಕ ಪೂಜಾ ಕಾರ್ಯಕ್ರಮ ನಡೆದು ಪ್ರಸಾದ ವಿತರಣೆ, ಸಾರ್ವಜನಿಕ ಅನ್ನಸಂತರ್ಪಣೆ ನಡೆಯಿತು.