ಪುತ್ತೂರು: ಹೆಚ್ಚುವರಿ ವರದಕ್ಷಿಣೆ ತರುವಂತೆ ಒತ್ತಾಯಿಸಿ ಮಹಿಳೆಯೋರ್ವರಿಗೆ ಆಕೆಯ ಪತಿ ಮತ್ತು ಅತ್ತೆ ಸೇರಿಕೊಂಡು ದೊಣ್ಣೆಯಿಂದ ಹಲ್ಲೆನಡೆಸಿದ್ದಲ್ಲದೆ ಪತಿ ಆಕೆಗೆ ತ್ರಿವಳಿ ತಲಾಕ್ ಹೇಳಿ ಮನೆಯಿಂದ ಹೊರಗೆ ಹಾಕಿದ ಪ್ರಕರಣಕ್ಕೆ ಸಂಬಂಧಿಸಿದಂತೆ ಆರೋಪಿಗಳಿಬ್ಬರಿಗೆ ಪುತ್ತೂರಿನ ಜಿಲ್ಲಾ ಐದನೇ ಸತ್ರ ನ್ಯಾಯಾಲಯವು ನಿರೀಕ್ಷಣಾ ಜಾಮೀನು ಮಂಜೂರು ಮಾಡಿದೆ.
ದಿನಾಂಕ 8.1.2025ರಂದು ಈಶ್ವರ ಮಂಗಲ ನಿವಾಸಿ ಅಸುರಾ ಬಿಬಿ ರವರಿಗೆ ಆಕೆಯ ಪತಿ ಇಸ್ಮಾಯಿಲ್ ಕೆ.ಮತ್ತು ಆಕೆಯ ಅತ್ತೆ ನೇಬಿಸಾ ರವರು ಸೇರಿಕೊಂಡು ಹೆಚ್ಚುವರಿ ವರದಕ್ಷಿಣೆ ತರುವಂತೆ ಒತ್ತಾಯಿಸಿ ದೊಣ್ಣೆಯಿಂದ ಹಲ್ಲೆ ನಡೆಸಿದ್ದಲ್ಲದೇ ಪತಿ ನನಗೆ ತ್ರಿವಳಿ ತಲಾಕ್ ಹೇಳಿ ಮನೆಯಿಂದ ಹೊರಗೆ ಹಾಕಿದ್ದಾಗಿ ಆರೋಪಿಸಲಾಗಿತ್ತು. ಪುತ್ತೂರು ಸರಕಾರಿ ಆಸ್ಪತ್ರೆಯಲ್ಲಿ ದಾಖಲಾದ ಅಸುರ ಬಿಬಿ ರವರು ಪುತ್ತೂರು ಮಹಿಳಾ ಠಾಣೆಗೆ ಈ ಕುರಿತು ದೂರು ನೀಡಿದ್ದರು.
ಮೂರು ವರ್ಷದ ಹಿಂದೆ ಈಶ್ವರಮಂಗಲ ಮೀನಾವು ನಿವಾಸಿ ಇಸ್ಮಾಯಿಲ್ ರವರೊಂದಿಗೆ ನನ್ನ ವಿವಾಹ ನಡೆದಿದ್ದು ಮದುವೆ ಸಮಯದಲ್ಲಿ 30 ಪವನ್ ಚಿನ್ನಾಭರಣವನ್ನು ಅವರಿಗೆ ಉಡುಗೊರೆಯಾಗಿ ನೀಡಲಾಗಿತ್ತು. ಆ ಚಿನ್ನವನ್ನು ನನಗೆ ನೀಡದೆ ನನ್ನ ಅತ್ತೆಯವರು ಅದನ್ನು ತನ್ನ ವಶದಲ್ಲಿ ಇಟ್ಟುಕೊಂಡಿದ್ದು ಮಾತ್ರವಲ್ಲದೆ ಮದುವೆ ಸಂದರ್ಭದಲ್ಲಿ ಇಸ್ಮಾಯಿಲ್‌ರವರು 2.50ಲಕ್ಷ ರೂಪಾಯಿಗಳನ್ನು ಸಾಲದ ರೂಪದಲ್ಲಿ ಪಡೆದುಕೊಂಡಿದ್ದು ಅದನ್ನು ಕೂಡ ಹಿಂದಿರುಗಿಸಲಿಲ್ಲ ಹೀಗಿದ್ದರೂ ಪತಿ ಇಸ್ಮಾಯಿಲ್ ಮತ್ತು ಅವರ ತಾಯಿ ನನಗೆ ನಿರಂತರ ದೈಹಿಕ ಹಾಗೂ ಮಾನಸಿಕ ಕಿರುಕುಳ ನೀಡುತ್ತಿದ್ದ ಕುರಿತು ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆಗೆ ನಾನು ದೂರು ನೀಡಿದ್ದು, ಇಲಾಖೆಯಲ್ಲಿ ಕೌನ್ಸಿಲಿಂಗ್ ಮಾಡಿ ಪರಸ್ಪರ ಹೇಳಿಕೆಯನ್ನು ಪಡೆದುಕೊಂಡಿರುತ್ತಾರೆ ಎಂದು ದೂರಿನಲ್ಲಿ ಅಸುರಾ ಬಿ.ಬಿ. ತಿಳಿಸಿದ್ದರು.
ದೂರನ್ನು ದಾಖಲಿಸಿಕೊಂಡ ಪುತ್ತೂರು ಮಹಿಳಾ ಪೊಲೀಸರು ಆರೋಪಿಗಳ ಮೇಲೆ ಭಾರತೀಯ ನ್ಯಾಯ ಸಂಹಿತ 2023 ಕಾಯ್ದೆ ಕಲಂ 118(1) 85, 3(5) ಹಾಗೂ ವರದಕ್ಷಿಣೆ ಕಾಯ್ದೆ, ಸೆಕ್ಷನ್ 4ರಡಿ ಪ್ರಕರಣ ದಾಖಲಿಸಿಕೊಂಡಿದ್ದರು. ಇದೀಗ ಆರೋಪಿಗಳಿಬ್ಬರಿಗೂ ಪುತ್ತೂರಿನ ಐದನೇ ಹೆಚ್ಚುವರಿ ಜಿಲ್ಲಾ ಸತ್ರ ನ್ಯಾಯಾಲಯವು ನಿರೀಕ್ಷಣಾ ಜಾಮೀನು ಮಂಜೂರು ಮಾಡಿದೆ. ಆರೋಪಿಗಳ ಪರವಾಗಿ ನ್ಯಾಯವಾದಿ ರಮ್ಲತ್ ಎಂ ಶಾಂತಿನಗರ ವಾದಿಸಿದ್ದರು.