ಪುತ್ತೂರು: ನಗರದ ನಟ್ಟೋಜ ಫೌಂಡೇಶನ್ ಮುನ್ನಡೆಸುತ್ತಿರುವ ಅಂಬಿಕಾ ವಿದ್ಯಾಲಯ ಸಿಬಿಎಸ್‌ಇ ಸಂಸ್ಥೆಯಲ್ಲಿ 2024-25ನೇ ಸಾಲಿನ 10ನೇ ತರಗತಿಯ ವಿದ್ಯಾರ್ಥಿಗಳಿಗೆ ಬೀಳ್ಕೊಡುಗೆ ಸಮಾರಂಭ ’ಸೌಪ್ರಸ್ತಾನಿಕಂ’ ಶನಿವಾರ ನಡೆಯಿತು. ಈ ಸಂದರ್ಭದಲ್ಲಿ ಅಂಬಿಕಾ ಸಮೂಹ ಶಿಕ್ಷಣ ಸಂಸ್ಥೆಗಳ ಅಧ್ಯಕ್ಷ ಸುಬ್ರಮಣ್ಯ ನಟ್ಟೋಜ ಅವರು ಮಾತನಾಡಿ ದೇಶಕ್ಕಾಗಿ ತಮ್ಮನ್ನು ತಾವು ಮುಡಿಪಾಗಿಡುವುದೇ ಜೀವನದ ಉದ್ದೇಶವಾಗಿರಬೇಕು. ನಾವು ದೊಡ್ಡ ದೊಡ್ಡ ಹುದ್ದೆ ಅಲಂಕರಿಸಿದರೂ ದೇಶಕ್ಕೆ ಸಂಕಷ್ಟ ಬಂದಾಗ ಓಗೊಟ್ಟು ದೇಶಸೇವಕರಾಗಿ ಸಹಕರಿಸುವ ಸತ್ಪ್ರಜೆಗಳಾಗಿ ಮೂಡಿಬರಬೇಕು ಎಂದರು.
ಅಂಬಿಕಾ ಸಮೂಹ ಶಿಕ್ಷಣ ಸಂಸ್ಥೆಗಳ ಕಾರ್ಯದರ್ಶಿ ರಾಜಶ್ರೀ ನಟ್ಟೋಜ ಮಾತನಾಡಿ ತ್ರಿಭುಜದ ಮೂರು ಬಾಹುಗಳು ಹೇಗೆ ಒಂದು ನಿರ್ದಿಷ್ಟ ಬಿಂದುವಿನಲ್ಲಿ ಸೇರುತ್ತವೋ, ಹಾಗೆಯೇ ನಮ್ಮ ಬಾಳಿನ ಮೂರು ಬಾಹುಗಳಾದ ಶಾಲಾ ಶಿಕ್ಷಣ, ಧರ್ಮ ಶಿಕ್ಷಣ ಹಾಗೂ ಅಧ್ಯಾತ್ಮ ಶಿಕ್ಷಣ ವ್ಯಕ್ತಿತ್ವದಲ್ಲಿ ಮಿಳಿತವಾಗಬೇಕು ಎಂದರು.
ಶಾಲಾ ಪ್ರಾಂಶುಪಾಲೆ ಮಾಲತಿ ಡಿ, ಉಪಪ್ರಾಂಶುಪಾಲೆ ಸುಜನಿ ಬೋರ್ಕರ್ ಹಾಗೂ ಶಾಲಾ ಶಿಕ್ಷಕರು ವಿದ್ಯಾರ್ಥಿಗಳಿಗೆ ಶುಭ ಹಾರೈಸಿದರು. ಈ ಸಂದರ್ಭದಲ್ಲಿ ವಿದ್ಯಾರ್ಥಿಗಳು ತಮ್ಮ ಹೆತ್ತವರ ಪಾದಪೂಜೆ ಮಾಡಿ ಆಶೀರ್ವಾದ ಪಡೆದುಕೊಂಡರು. ವಿದ್ಯಾರ್ಥಿಗಳಾದ ಜ್ಯೋತಿರಾದಿತ್ಯ ಸ್ವಾಗತಿಸಿ ಚೈತನ್ಯ ಧನ್ಯವಾದ ಸಮರ್ಪಿಸಿದರು. ಮನಸ್ವಿ ಕಾರ್ಯಕ್ರಮ ನಿರೂಪಿಸಿದರು.