ಪುತ್ತೂರು ಸೇರಿದಂತೆ ದ.ಕ.ಜಿಲ್ಲೆಯ 7 ತಾಲೂಕಿನ ಹೊರ ಗುತ್ತಿಗೆ ಕಂಪ್ಯೂಟರ್ ಆಪರೇಟರ್ಗಳು ಭಾಗಿ
ಪುತ್ತೂರು: ಸಮಾನ ಕೆಲಸಕ್ಕೆ ಸಮಾನ ವೇತನ ಸೇರಿದಂತೆ ವಿವಿಧ ಬೇಡಿಕೆಗಳನ್ನು ಈಡೇರಿಸುವಂತೆ ಆಗ್ರಹಿಸಿ, ನೋಂದಣಿ ಹಾಗೂ ಉಪ-ನೋಂದಣಿ ಕಛೇರಿಗಳಲ್ಲಿ ಹೊರಗುತ್ತಿಗೆ ಆಧಾರದ ಮೇಲೆ ಸೇವೆ ಸಲ್ಲಿಸುತ್ತಿರುವ ರಾಜ್ಯ ನೋಂದಣಿ ಮತ್ತು ಮುದ್ರಾಂಕ ಇಲಾಖೆಯ(ಕಾವೇರಿ ಯೋಜನೆ) ಹೊರ ಗುತ್ತಿಗೆ ಕಂಪ್ಯೂಟರ್ ಆಪರೇಟರ್ಗಳ ರಾಜ್ಯ ಸಂಘದಿಂದ ಫೆ.17ರಿಂದ ಮುಷ್ಕರ ಆರಂಭಗೊಳ್ಳಲಿದ್ದು, ದ.ಕ.ಜಿಲ್ಲೆಯ ಎಲ್ಲಾ ತಾಲೂಕುಗಳ ನೋಂದಣಿ ಮತ್ತು ಮುದ್ರಾಂಕ ಇಲಾಖೆಯ ಹೊರ ಗುತ್ತಿಗೆ ಕಂಪ್ಯೂಟರ್ ಆಪರೇಟರ್ಗಳಿಂದ ಜಿಲ್ಲಾ ನೋಂದಣಿ ಕಛೇರಿಯ ಮುಂದೆ ಪ್ರತಿಭಟನೆ ನಡೆಯಲಿದೆ ಎಂದು ರಾಜ್ಯ ಸಂಘದ ಅಧ್ಯಕ್ಷರು ತಿಳಿಸಿದ್ದಾರೆ.
ರಾಜ್ಯಾದ್ಯಂತ ಜಿಲ್ಲಾ ನೋಂದಣಿ ಹಾಗೂ ಉಪ-ನೋಂದಣಿ ಕಛೇರಿಗಳಲ್ಲಿ ಹೊರಗುತ್ತಿಗೆ ಆಧಾರದಲ್ಲಿ ಸೇವೆ ಸಲ್ಲಿಸುತ್ತಿರುವ ಕಂಪ್ಯೂಟರ್ ಆಪರೇಟರ್ಗಳ ವಿವಿಧ ಬೇಡಿಕೆಗಳನ್ನು ಫೆ.15ರೊಳಗೆ ಈಡೇರಿಸದೆ ಇದ್ದಲ್ಲಿ ಆಯಾ ಜಿಲ್ಲೆಯ ಜಿಲ್ಲಾ ನೋಂದಣಿ ಕಚೇರಿಯ ಮುಂದೆ ಅನಿರ್ದಿಷ್ಟಾವಧಿ ಮುಷ್ಕರ ನಡೆಸುವುದಾಗಿ ಸಂಬಂಧಪಟ್ಟ ಇಲಾಖೆ ಮುಖ್ಯಸ್ಥರಿಗೆ, ಗುತ್ತಿಗೆ ಪಡೆದ ಸಿ.ಎಮ್.ಎಸ್ ಕಂಪೆನಿಯವರಿಗೆ, ಸರಕಾರದ ಮುಖ್ಯ ಕಾರ್ಯದರ್ಶಿ ಹಾಗೂ ಕಂದಾಯ ಸಚಿವರಿಗೆ ಈಗಾಗಲೇ ಮನವಿ ಮಾಡಿ ತಿಳಿಸಲಾಗಿದೆ. ಆದರೆ ಇಲ್ಲಿಯವರೆಗೆ ಸರಕಾರದಿಂದ, ಇಲಾಖೆ ಮುಖ್ಯಸ್ಥರಿಂದ ಹಾಗೂ ಗುತ್ತಿಗೆ ಪಡೆದ ಕಂಪೆನಿಯಿಂದ ಯಾವುದೇ ಸ್ಪಂದನೆ ಸಿಗದ ಕಾರಣ ಫೆ.17ರಿಂದ ಆಯಾ ಜಿಲ್ಲೆಯ ಜಿಲ್ಲಾ ನೋಂದಣಿ ಕಛೇರಿಯ ಮುಂದೆ ಹೋರಾಟ ಮಾಡುವುದು ಆನಿವಾರ್ಯವಾಗಿದೆ ಎಂದು ಅವರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
ಬೇಡಿಕೆಗಳು:
ಪೇಮೆಂಟ್ ಆಫ್ ವೇಜಸ್ ಆಕ್ಟ್ 1936ರ ಮೇರೆಗೆ ಗುತ್ತಿಗೆ ನೌಕರರಿಗೆ ಪ್ರತೀ ತಿಂಗಳು 7ನೇ ದಿನಾಂಕದ ಒಳಗಾಗಿ ವೇತನ ವಿತರಿಸಬೇಕು. ಆದರೆ ಗುತ್ತಿಗೆ ಪಡೆದ ಕಂಪೆನಿಯವರು 5 ತಿಂಗಳಾದರೂ ವೇತನ ಬಟವಾಡೆ ಮಾಡಿರುವುದಿಲ್ಲ. ಈ ದುಸ್ಥಿತಿಯನ್ನು ನಿವಾರಿಸಿ ಪ್ರತೀ ತಿಂಗಳು ಸಕಾಲಕ್ಕೆ ಸಂಬಳ ಬಟವಾಡೆ ಮಾಡಬೇಕು. ಗುತ್ತಿಗೆ ನೌಕರರಿಗೆ ಸಮಾನ ಕೆಲಸಕ್ಕೆ ಸಮಾನ ವೇತನವನ್ನು ಪೂರ್ವಾನ್ವಯವಾಗುವಂತೆ ಜಾರಿಗೊಳಿಸಿ ಸರಕಾರ ಆದೇಶ ನೀಡಬೇಕು. ಗುತ್ತಿಗೆ ಡಾಟಾ ಎಂಟ್ರಿ ಆಪರೇಟರ್ಗಳು ಯಾವುದೇ ಕೆಲಸದ ದಿನ ನಿಯಮಿತ 8 ಗಂಟೆಗಳಿಗಿಂತ ಹೆಚ್ಚು ಕಾಲ ಕೆಲಸ ಮಾಡುವುದು ಅನಿವಾರ್ಯವಾಗಿದ್ದು ಹೆಚ್ಚುವರಿ ಸೇವೆಗೆ ಸಿಗುವ ಓವರ್ ಟೈಮ್ ಅಲಯನ್ಸ್ನಿಂದ ವಂಚಿತರಾಗಿರುತ್ತಾರೆ. ಪ್ರತೀ ಕಛೇರಿಯಲ್ಲಿ ಸ್ಥಾಪಿಸಿರುವ ಬಯೋಮೆಟ್ರಿಕ್ ಸಿಸ್ಟಮ್ನಲ್ಲೇ ಗುತ್ತಿಗೆ ನೌಕರರ ಹಾಜರಾತಿ ದಾಖಲಾಗುತ್ತಿರುವುದರಿಂದ ಹೆಚ್ಚುವರಿ ಕೆಲಸಕ್ಕೆ ಓವರ್ ಟೈಮ್ ಅಲಯನ್ಸ್ ಕಾನೂನು ಮೇರೆಗೆ ಲಭಿಸುವಂತೆ ಮಾಡಬೇಕು ಎಂಬ ಬೇಡಿಕೆಗಳನ್ನು ಈಡೇರಿಸುವಂತೆ ಆಗ್ರಹಿಸಿ ಮುಷ್ಕರ ಮಾಡಲಿದ್ದಾರೆ.