ಕೃಷಿಕರ ಹಿತರಕ್ಷಣೆಗೆ ಮಾಸ್ ಬದ್ಧ: ಸೀತಾರಾಮ ರೈ
ಪುತ್ತೂರು: ಮಾಸ್ ಲಿಮಿಟೆಡ್ ಸಂಸ್ಥೆಯ ಸುಳ್ಯ ಶಾಖೆಯ ಅಡಿಕೆ ಸಂಸ್ಕರಣಾ ಘಟಕವು ಫೆ.28 ರಂದು ಸುಳ್ಯದಲ್ಲಿ ಉದ್ಘಾಟನೆಗೊಳ್ಳಲಿದೆ ಎಂದು ಸಂಸ್ಥೆಯ ಅಧ್ಯಕ್ಷ ಸವಣೂರು ಕೆ. ಸೀತಾರಾಮ ರೈ ಯವರು ಪತ್ರಿಕಾಗೋಷ್ಠಿಯಲ್ಲಿ ತಿಳಿಸಿದ್ದಾರೆ.
ಸಹಕಾರ ರತ್ನ ದಿ. ವಾರಣಾಶಿ ಸುಬ್ರಾಯ ಭಟ್ರವರ ಪ್ರಯತ್ನ ಹಾಗೂ ಸಹಕಾರ ರತ್ನ ಎಂ.ಎನ್. ರಾಜೇಂದ್ರ ಕುಮಾರ್ ಇವರ ಪ್ರೋತ್ಸಾಹದೊಂದಿಗೆ ಪ್ರಾರಂಭಗೊಂಡ ಮಾಸ್ ಸಂಸ್ಥೆ ಕಳೆದ 23 ವರ್ಷಗಳಿಂದ ದಕ್ಷಿಣ ಕನ್ನಡ ಹಾಗೂ ಉಡುಪಿ ಜಿಲ್ಲೆಗಳ ಅಡಿಕೆ ಕೃಷಿಕರ ಹಿತ ಸಂರಕ್ಷಿಸುವ ಸಲುವಾಗಿ ಕಾರ್ಯನಿರ್ವಹಿಸುತ್ತಾ ಬಂದಿದೆ. ಸಂಸ್ಥೆಯು ಉತ್ತರೋತ್ತರ ಪ್ರಗತಿ, ಯಶಸ್ಸು ಸಾಧಿಸುವುದರೊಂದಿಗೆ ಸದಸ್ಯ ಬಾಂಧವರ ಹಿತರಕ್ಷಣೆಗೆ ಪಣತೊಟ್ಟಿದೆ. ಹತ್ತು ತಿಂಗಳ ಹಿಂದೆ ನಾನು ಸಂಸ್ಥೆಯ ಅಧ್ಯಕ್ಷನಾಗಿ ಜವಾಬ್ದಾರಿಯನ್ನು ವಹಿಸಿಕೊಂಡಿದ್ದು ವಹಿವಾಟನ್ನು ವೃದ್ಧಿಗೊಳಿಸುವ ಗುರಿ ಹೊಂದುವುದರೊಂದಿಗೆ ವರ್ಷ ಪೂರೈಸುವುದರೊಳಗೆ ಮೂರರಿಂದ ನಾಲ್ಕು ಶಾಖೆಗಳನ್ನು ತೆರೆಯುವುದು ಹಾಗೂ ಸುಳ್ಯದಲ್ಲಿ ಅಡಿಕೆ ಸಂಸ್ಕರಣಾ ಕಾರ್ಯ ಪುನರಾರಂಭಿಸುವುದು ಎಂಬ ವಾಗ್ದಾನದಂತೆ ಮುನ್ನಡೆಯುತ್ತಿದ್ದೇವೆ. ಈಗಾಗಲೇ ಜುಲೈ 2024ರಲ್ಲಿ ಕಾವು ಶಾಖೆಯನ್ನು ಹಾಗೂ ನವೆಂಬರ್ 2024ರಲ್ಲಿ ನಿಂತಿಕಲ್ಲು ಶಾಖೆಯನ್ನು ತೆರೆಯಲಾಗಿದೆ. ಅಲ್ಲದೇ ಕಳೆದ ಹತ್ತು ತಿಂಗಳ ಅವಧಿಯಲ್ಲಿ ಸಂಸ್ಥೆಯ ವಹಿವಾಟು ಶೇಖಡ 40ರಷ್ಟು ವೃದ್ಧಿಯಾಗಿದೆ ಎಂದರು.
ಫೆ. 28 ರಂದು ಬೆಳಿಗ್ಗೆ 10ಕ್ಕೆ ಮಾಸ್ ಸಂಸ್ಥೆಯ ಸುಳ್ಯ ಶಾಖೆಯಲ್ಲಿ ಅಡಿಕೆ ಸಂಸ್ಕರಣಾ ಘಟಕದ ಉದ್ಘಾಟನೆಯನ್ನು ಸುಳ್ಯ ವಿಧಾನಸಭಾ ಕ್ಷೇತ್ರದ ಶಾಸಕಿ ಭಾಗೀರಥಿ ಮುರುಳ್ಯ ನೇರವೇರಿಸಲಿದ್ದಾರೆ. ಅಧ್ಯಕ್ಷತೆಯನ್ನು ಜಿಲ್ಲಾ ಸಹಕಾರ ಯೂನಿಯನ್ ಅಧ್ಯಕ್ಷ ಹಾಗೂ ಡಿಸಿಸಿ ಬ್ಯಾಂಕ್ ನಿರ್ದೇಶಕ ಶಶಿಕುಮಾರ್ ರೈ ಬಾಲ್ಯೊಟ್ಟುರವರು ವಹಿಸಲಿದ್ದಾರೆ. ಮುಖ್ಯ ಅತಿಥಿಗಳಾಗಿ ಎಸ್ಸಿಡಿಸಿಸಿ ಬ್ಯಾಂಕ್ ನಿರ್ದೇಶಕ ಎಸ್. ಎನ್. ಮನ್ಮಥ , ಸುಳ್ಯ ಎಪಿಎಂಸಿ ಮಾಜಿ ಅಧ್ಯಕ್ಷ ಎನ್. ಜಯಪ್ರಕಾಶ್ ರೈ, ಎಪಿಎಂಸಿ ಕಾರ್ಯದರ್ಶಿ ರವೀಂದ್ರ ಮುಖ್ಯ ಅತಿಥಿಗಳಾಗಿ ಭಾಗವಹಿಸಲಿರುವರು ಎಂದು ಸೀತಾರಾಮ ರೈ ತಿಳಿಸಿದರು.
ಮಾಸ್ ಮುಖ್ಯ ಕಾರ್ಯನಿರ್ವಹಣಾಧಿಕಾರಿ ಟಿ ಮಹಾಬಲೇಶ್ವರ ಭಟ್, ಚೀಫ್ ಮಾರ್ಕೆಟಿಂಗ್ ಆಫೀಸರ್ ಲೋಕೇಶ್ ಕೆ.ಎಂ., ಸುಳ್ಯ ಬ್ರಾಂಚ್ ಮೇನೇಜರ್ ಧನಂಜಯ ಎಂ.ಎನ್ ಪತ್ರಿಕಾಗೋಷ್ಠಿಯಲ್ಲಿ ಉಪಸ್ಥಿತರಿದ್ದರು.