ಪುತ್ತೂರು: ಮೆಸ್ಕಾಂ ಪವರ್ಮ್ಯಾನ್ಗಳ ನೇಮಕಾತಿ ವೇಳೆ ಜಿಲ್ಲಾವಾರು ಆಯ್ಕೆ ಪ್ರಕ್ರಿಯೆ ನಡೆಸಿ, ಆ ಮೂಲಕ ಅಭ್ಯರ್ಥಿಗಳನ್ನು ನೇಮಕಾತಿ ಮಾಡಬೇಕು ಎಂದು ಪುತ್ತೂರು ಶಾಸಕ ಅಶೋಕ್ ರೈ ಇಂಧನ ಸಚಿವ ಕೆ ಜಾರ್ಜ್ ಅವರಿಗೆ ಮನವಿ ಮಾಡಿದ್ದಾರೆ.
ಸೋಮವಾರ ವಿಧಾನಸೌಧ ಹಾಲ್ನಲ್ಲಿ ನಡೆದ ಮೆಸ್ಕಾಂ ಇಲಾಖಾವಾರು ಸಭೆಯಲ್ಲಿ ಶಾಸಕರು ಮನವಿ ಮಾಡಿದ್ದಾರೆ. ಸಭೆಯು ಇಂಧನ ಸಚಿವ ಕೆ ಜಾರ್ಜ್ ಅವರ ಅಧ್ಯಕ್ಷತೆಯಲ್ಲಿ ನಡೆಯಿತು.
ಸಭೆಯಲ್ಲಿ ವಿಷಯ ಪ್ರಸ್ತಾಪಿಸಿದ ಶಾಸಕರು ಮೆಸ್ಕಾಂ ನಲ್ಲಿ ಪವರ್ಮ್ಯಾನ್ಗಳ ಕೊರತೆ ಇದೆ. ಇದನ್ನು ನೀಗಿಸಲು ಈಗಾಗಲೇ ನೇಮಕಾತಿ ಆದೇಶ ಹೊರಡಿಸಲಾಗಿದೆ. ಅಭ್ಯರ್ಥಿಗಳ ಆಯ್ಕೆ ಪ್ರಕ್ರಿಯೆ ಮಾಡುವ ವೇಳೆ ಜಿಲ್ಲಾವಾರು ಆಯ್ಕೆ ಮಾಡಬೇಕು. ಜಿಲ್ಲಾ ಮಟ್ಟದಲ್ಲಿ ಅಭ್ಯರ್ಥಿಗಳ ಅರ್ಹತಾ ಪಟ್ಟಿಯನ್ನು ತಯಾರಿಸಿ ಆ ಮೂಲಕ ಆಯಾ ಜಿಲ್ಲೆಯಲ್ಲಿ ಆಯಾ ಜಿಲ್ಲೆಯ ಅಭ್ಯರ್ಥಿಗಳಿಗೆ ಅವಕಾಶ ಮಾಡಿಕೊಡಬೇಕು. ರಾಜ್ಯವಾರು ಅರ್ಹತಾ ಪಟ್ಟಿಯನ್ನು ಮಾಡಿದಲ್ಲಿ ಅದರಿಂದ ಜಿಲ್ಲೆಗಳ ಅಭ್ಯರ್ಥಿಗಳಿಗೆ ತೊಂದರೆಯಾಗುತ್ತದೆ ಎಂದು ಸಚಿವರಲ್ಲಿ ಶಾಸಕರು ವಿನಂತಿಸಿದರು.
ಪುತ್ತೂರಿನಲ್ಲಿ ಈಗಾಗಲೇ ಮೆಸ್ಕಾಂ ಪವರ್ಮ್ಯಾನ್ಗಳ ಆಯ್ಕೆ ಮಾಡುವಲ್ಲಿ ತರಬೇತಿಯನ್ನು ಕೂಡಾ ಆಯೋಜನೆ ಮಾಡಲಾಗಿದೆ. ರಾಜ್ಯವಾರು ಆಯ್ಕೆ ಪ್ರಕ್ರಿಯೆ ನಡೆಸಿದರೆ ಅಯ್ಕೆಯಾದ ಅಭ್ಯರ್ಥಿಗಳು ಒಂದೆರಡು ವರ್ಷ ಬೇರೆ ಬೇರೆ ಜಿಲ್ಲೆಗಳಲ್ಲಿ ಕೆಲಸ ಮಾಡಿ ಆ ಬಳಿಕ ತವರು ಜಿಲ್ಲೆಗೆ ವರ್ಗಾವಣೆ ಮಾಡಿಸಿಕೊಳ್ಳುತ್ತಿದ್ದು, ಇದರಿಂದ ಪವರ್ಮ್ಯಾನ್ಗಳ ಕೊರತೆಯುಂಟಾಗುತ್ತದೆ ಎಂದು ಶಾಸಕರು ತಿಳಿಸಿದರು. ಶಾಸಕರ ಪ್ರಸ್ತಾವನೆಗೆ ಸಚಿವರು ಸಕಾರಾತ್ಮಕವಾಗಿ ಸ್ಪಂದಿಸಿದ್ದು ಈ ಬಗ್ಗೆ ಪರಿಸೀಲಿಸುವ ಭರವಸೆಯನ್ನು ನೀಡಿದ್ದಾರೆ.
ಉಡುಪಿ-ಕಾಸರಗೋಡು ಪ್ರಸರಣಾ ಮಾರ್ಗ ಸಮಸ್ಯೆಗಳ ಬಗ್ಗೆ ಚರ್ಚೆ
ಉಡುಪಿಯಿಂದ ಕಾಸರಗೋಡಿಗೆ ವಿದ್ಯುತ್ ಸರಬರಾಜು ಮಾಡುವ ಪ್ರಸರಣಾ ಮಾರ್ಗ ಹಾದುಹೋಗುವಲ್ಲಿ ಉಂಟಾಗುವ ಸಮಸ್ಯೆಗಳ ಬಗ್ಗೆ ಸಭೆಯಲ್ಲಿ ಚರ್ಚೆ ನಡೆಸಲಾಯಿತು. ಶಾಸಕ ಅಶೋಕ್ ರೈ ಈ ವಿಷಯವನ್ನು ಸಭೆಯಲ್ಲಿ ಪ್ರಸ್ತಾಪ ಮಾಡಿದರು. ವಿದ್ಯುತ್ ಲೈನ್ ಹಾದುಹೋಗುವಲ್ಲಿ ಅನೇಕ ಕಡೆಗಳಲ್ಲಿ ಕೃಷಿಗೆ ಹಾನಿಯಾಗುತ್ತಿದೆ. ಲೈನ್ ಬದಲಾವಣೆ ಅಥವಾ ಲೈನ್ ಗೆ ವಿರೋಧ ವ್ಯಕ್ತಪಡಿಸಿ ರೈತರು ಮಂಗಳೂರಿನಲ್ಲಿ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರಿಗೂ ಮನವಿ ಸಲ್ಲಿಸಿದ್ದರು. ಕೃಷಿಕರಿಗೆ ತೊಂದರೆಯಾಗದಂತೆ ಲೈನ್ ಹಾದು ಹೋಗುವ ಅಗತ್ಯವಿದ್ದು, ಈ ವಿಚಾರದಲ್ಲಿ ಸರಕಾರದಿಂದ ಏನು ಕ್ರಮಕೈಗೊಳ್ಳಬಹುದೋ ಅದನ್ನು ಮಾಡಬೇಕಾದ ಅಗತ್ಯವಿದೆ ಎಂದು ಸಚಿವರ ಗಮನಕ್ಕೆ ತಂದರು.
ಮೆಸ್ಕಾಂ ಪವರ್ಮ್ಯಾನ್ಗಳ ನೇಮಕಾತಿ ವೇಳೆ ಜಿಲ್ಲೆಯ ಅಭ್ಯರ್ಥಿಗಳಿಗೆ ಆಯಾ ಜಿಲ್ಲೆಯಲ್ಲೇ ನೇಮಕಾತಿ ಮಾಡಬೇಕು. ದ ಕ ಜಿಲ್ಲೆಯವರಿಗೆ ದ.ಕ ಜಿಲ್ಲೆಯಲ್ಲೇ ನೇಮಕಾತಿ ಮಾಡಬೇಕು, ರಾಜ್ಯವಾರು ಆಯ್ಕೆ ಪ್ರಕ್ರಿಯೆ ಮಾಡಿದರೆ ಜಿಲ್ಲೆಯ ಉದ್ಯೋಗಾಂಕ್ಷಿಗಳಿಗೆ ತೊಂದರೆಯಾಗುತ್ತದೆ ಮತ್ತು ಈ ರೀತಿಯ ಆಯ್ಕೆ ಪ್ರಕ್ರಿಯೆ ನಡೆಸದಂತೆ ಸಚಿವರಿಗೆ ಮನವಿ ಮಾಡಿದ್ದೇನೆ, ಮನವಿಗೆ ಪೂರಕ ಸ್ಪಂದನೆ ದೊರಕಿದೆ. ನಮ್ಮ ಜಿಲ್ಲೆಯಲ್ಲಿ ಸೃಷ್ಟಿಯಾಗುವ ಉದ್ಯೋಗಕ್ಕೆ ನಮ್ಮ ಜಿಲ್ಲೆಯ ಯುವಕರಿಗೇ ಆದ್ಯತೆ ನೀಡಬೇಕೆಂದು ಮನವಿಯನ್ನು ಮಾಡಿದ್ದೇನೆ. ಅದೇ ರೀತಿ ಉಡುಪಿ ಕಾಸರಗೋಡು ಮೆಸ್ಕಾಂ ಪ್ರಸರಣ ರಹದಾರಿಯ ವಿಚಾರದಲ್ಲಿ ಚರ್ಚೆ ನಡೆಸಿ ನಮ್ಮೂರಿನ ಕೃಷಿಕರಿಗೆ ತೊಂದರೆಯಾಗದಂತೆ ಸರಕಾರ ಕ್ರಮಕೈಗೊಳ್ಳಬೇಕೆಂದು ಮನವಿ ಮಾಡಿದ್ದೇನೆ.
ಅಶೋಕ್ ರೈ,
ಶಾಸಕರು, ಪುತ್ತೂರು