ರಾಮಕುಂಜ: ಅನಾರೋಗ್ಯದ ಹಿನ್ನೆಲೆಯಲ್ಲಿ ಮಂಗಳೂರಿನ ಖಾಸಗಿ ಆಸ್ಪತ್ರೆಗೆ ದಾಖಲಾಗಿದ್ದ ಆತೂರಿನ ರಿಕ್ಷಾ ಚಾಲಕ ಪೂವಪ್ಪ ಗೌಡ(53ವ.)ರವರು ಮಾ.10ರಂದು ಸಂಜೆ ನಿಧನರಾಗಿದ್ದಾರೆ.
ಬಜತ್ತೂರು ಗ್ರಾಮದ ಒಡ್ಯಮೆ ಕೊಳೆಮಾನ್ ನಿವಾಸಿಯಾಗಿದ್ದ ಪೂವಪ್ಪ ಗೌಡ ಅವರು ಸ್ವಂತ ರಿಕ್ಷಾ ಹೊಂದಿದ್ದು 10ಕ್ಕೂ ಹೆಚ್ಚು ವರ್ಷಗಳಿಂದ ಆತೂರಿನಲ್ಲಿ ರಿಕ್ಷಾ ಬಾಡಿಗೆಗೆ ಓಡಿಸುತ್ತಿದ್ದರು. ಮಾ.2ರಂದು ಉಪ್ಪಿನಂಗಡಿಗೆ ಹೋಗಿದ್ದ ಅವರು ಹಿಂತಿರುಗಿ ಬರುವ ವೇಳೆ ಕೂಟೇಲು ಸಮೀಪ ರಿಕ್ಷಾ ಒಂದು ಬದಿಗೆ ವಾಲಿ ರಿಕ್ಷಾದ ಹ್ಯಾಂಡಲ್ ಪೂವಪ್ಪ ಗೌಡ ಅವರ ಎದೆಭಾಗಕ್ಕೆ ಬಡಿದಿತ್ತು ಎನ್ನಲಾಗಿದೆ. ಈ ಘಟನೆಯಿಂದ ಸುಧಾರಿಸಿಕೊಂಡ ಅವರು ಮನೆಗೆ ಬಂದಿದ್ದರು. ನೋವು ಇದ್ದ ಹಿನ್ನೆಲೆಯಲ್ಲಿ ಮಾ.4ರಂದು ಅವರು ಉಪ್ಪಿನಂಗಡಿಯ ಖಾಸಗಿ ಆಸ್ಪತ್ರೆಯೊಂದರಲ್ಲಿ ಎಕ್ಸ್‌ರೇ ಮಾಡಿಸಿ ಚಿಕಿತ್ಸೆ ಪಡೆದುಕೊಂಡಿದ್ದರು. ಮಾ.8ರಂದು ಸಂಜೆ ಉಪ್ಪಿನಂಗಡಿಗೆ ಬಾಡಿಗೆಗೆ ಹೋಗಿ ಮನೆಗೆ ಬಂದಿದ್ದ ಅವರಿಗೆ ತುಸು ಅನಾರೋಗ್ಯ ಕಾಣಿಸಿಕೊಂಡಿತ್ತು. ಮಾ.9ರಂದು ಆರೋಗ್ಯದಲ್ಲಿ ಏರುಪೇರು ಕಾಣಿಸಿಕೊಂಡ ಹಿನ್ನೆಲೆಯಲ್ಲಿ ಪುತ್ತೂರು ಮಹಾವೀರ ಆಸ್ಪತ್ರೆಗೆ ಕರೆತಂದು ಬಳಿಕ ಹೆಚ್ಚಿನ ಚಿಕಿತ್ಸೆಗಾಗಿ ಮಂಗಳೂರಿನ ಕೆಎಂಸಿ ಆಸ್ಪತ್ರೆಗೆ ದಾಖಲಿಸಲಾಗಿತ್ತು. ಅಲ್ಲಿ ಚಿಕಿತ್ಸೆಯಲ್ಲಿದ್ದವರು ಮಾ.10ರಂದು ಸಂಜೆ ವೇಳೆಗೆ ನಿಧನರಾದರು ಎಂದು ವರದಿಯಾಗಿದೆ.
ಮೃತ ಪೂವಪ್ಪ ಗೌಡ ಅವರು ಬಿ.ಎಂ.ಎಸ್. ರಾಮಕುಂಜ ಘಟಕದ ಮಾಜಿ ಅಧ್ಯಕ್ಷರಾಗಿ, ಗೌರವ ಮಾರ್ಗದರ್ಶಕರಾಗಿದ್ದರು. ಮೃತರು ತಾಯಿ, ಪತ್ನಿ ವಿಜಯ, ಪುತ್ರ ತರುಣ್, ಪುತ್ರಿಯರಾದ ಪೂಜಾಶ್ರೀ, ತನುಶ್ರೀ, ಸಹೋದರರು ಹಾಗೂ ಸಹೋದರಿಯರನ್ನು ಅಗಲಿದ್ದಾರೆ. ಮೃತರ ಮನೆಗೆ ರಿಕ್ಷಾ ಚಾಲಕರ ಸಹಿತ ಹಲವು ಗಣ್ಯರು ಭೇಟಿ ನೀಡಿ ಸಂತಾಪ ಸೂಚಿಸಿದ್ದಾರೆ.