ಮಹಿಳಾ ಪೊಲೀಸ್ ಠಾಣೆಯ ಬಳಿ ಬಸ್ ಪ್ರಯಾಣಿಕರ ತಂಗುದಾಣ ಉದ್ಘಾಟನೆ

0

7 ವರ್ಷಗಳಿಂದ ನಗರಸಭೆ ಆಡಳಿತದಿಂದ ಮೂಲಭೂತ ಸೌಕರ್ಯಕ್ಕೆ ಅದ್ಯತೆ- ಸಂಜೀವ ಮಠಂದೂರು

ಪುತ್ತೂರು: ಪುತ್ತೂರು ನಗರಸಭೆ ನೇತೃತ್ವದಲ್ಲಿ ಕೌಶಲ್ ಮೀಡಿಯಾದ ಸಹಕಾರದೊಂದಿಗೆ ಪುತ್ತೂರು ಮಹಿಳಾ ಪೊಲೀಸ್ ಠಾಣೆಯ ಬಳಿ ಹೈಟೆಕ್ ಮಾದರಿಯಲ್ಲಿ ನಗರಸಭೆ ಸ್ಥಾಯಿ ಸಮಿತಿ ಅಧ್ಯಕ್ಷ ಸುಂದರ ಪೂಜಾರಿ ಮುತುವರ್ಜಿಯಲ್ಲಿ ನಿರ್ಮಾಣಗೊಂಡ ಬಸ್ ಪ್ರಯಾಣಿಕರ ಎರಡು ತಂಗುದಾಣವನ್ನು ಮಾ.20ರಂದು ಸಂಜೆ ಉದ್ಘಾಟಿಸಲಾಯಿತು.

ನಗರಸಭೆ ಅಧ್ಯಕ್ಷೆ ಲೀಲಾವತಿ ಅಣ್ಣು ನಾಯ್ಕ, ಮಾಜಿ ಶಾಸಕ ಸಂಜೀವ ಮಠಂದೂರು, ನಗರಸಭೆ ಮಾಜಿ ಅಧ್ಯಕ್ಷ ಕೆ.ಜೀವಂಧರ್ ಜೈನ್ ಅವರು ಎರಡು ತಂಗುದಾಣವನ್ನು ಉದ್ಘಾಟಿಸಿದರು.


7 ವರ್ಷಗಳಿಂದ ನಗರಸಭೆ ಆಡಳಿತದಿಂದ ಮೂಲಭೂತ ಸೌಕರ್ಯಕ್ಕೆ ಅದ್ಯತೆ:
ಮಾಜಿ ಶಾಸಕ ಸಂಜೀವ ಮಠಂದೂರು ಅವರು ಮಾತನಾಡಿ ಪುತ್ತೂರು ನಗರ ವ್ಯಾಪಕವಾಗಿ ಬೆಳೆಯುತ್ತಿದೆ. ಅದಕ್ಕೆ ಪೂರಕವಾಗಿ ಮೂಲಭೂತ ಸೌಕರ್ಯವನ್ನು ಹಂತ ಹಂತವಾಗಿ ಪುತ್ತೂರು ನಗರಸಭೆ ಆಡಳಿತ ಕಳೆದ 7 ವರ್ಷಗಳಿಂದ ಮಾಡುತ್ತಾ ಬಂದಿದೆ. ಪುತ್ತೂರು ನಗರದ ಸುಂದರೀಕರಣಕ್ಕೆ ಒತ್ತು ಕೊಟ್ಟಿದ್ದೇವೆ ಎಂಬುದಕ್ಕೆ ಈ ಬಸ್ ತಂಗುದಾಣವೇ ಮಾದರಿಯಾಗಿದೆ ಎಂದರು. ನಗರಸಭೆ ಅಧ್ಯಕ್ಷೆ ಲೀಲಾವತಿ ಅಣ್ಣು ನಾಯ್ಕ, ಉಪಾಧ್ಯಕ್ಷ ಬಾಲಚಂದ್ರ, ಸಂಪ್ಯ ಶ್ರೀ ಮಹಾವಿಷ್ಣುಮೂರ್ತಿ ದೇವಸ್ಥಾನದ ವ್ಯವಸ್ಥಾಪನಾ ಸಮಿತಿ ಅಧ್ಯಕ್ಷ ಡಾ. ಸುರೇಶ್ ಪುತ್ತೂರಾಯ ಮಾತನಾಡಿದರು. ಬಿಜೆಪಿ ನಗರ ಮಂಡಲದ ಪ್ರಧಾನ ಕಾರ್ಯದರ್ಶಿ ನಾಗೇಶ್ ಪ್ರಭು, ಯುವರಾಜ್ ಪೆರಿಯತ್ತೋಡಿ, ನಗರಸಭೆ ಸದಸ್ಯರಾದ ಗೌರಿ ಬನ್ನೂರು, ಪ್ರೇಮಲತಾ ಜಿ, ಮೋಹಿನಿ ವಿಶ್ವನಾಥ ಗೌಡ, ದೀಕ್ಷಾ ಪೈ, ಶಶಿಕಲಾ ಸಿ ಎಸ್,ಸಂತೋಷ್ ಕುಮಾರ್, ಮನೋಹರ್ ಕಲ್ಲಾರೆ, ಬಿಜೆಪಿ ಮಹಿಳಾ ಮೋರ್ಚಾದ ಅಧ್ಯಕ್ಷೆ ಸ್ವರ್ಣಲತಾ ಹೆಗ್ಡೆ, ಕುಸುಮಾ ಚಂದಪ್ಪ, ಬಿಜೆಪಿ ಮುಖಂಡ ಮುರಳಿಕೃಷ್ಣ ಹಸಂತಡ್ಕ, ಸುರೇಶ್ ಆಳ್ವ, ಬನ್ನೂರು ಪಂಚಾಯತ್ ಉಪಾಧ್ಯಕ್ಷ ತಿಮ್ಮಪ್ಪ, ಲಕ್ಷ್ಮಣ ಬೈಲಾಡಿ, ಚಂದ್ರಶೇಖರ ಕೊಡಿಪ್ಪಾಡಿ, ವಿಶ್ವನಾಥ ಕುಲಾಲ್, ಮಾಜಿ ಪುರಸಭೆ ಅಧ್ಯಕ್ಷ ಲೋಕೇಶ್ ಹೆಗ್ಡೆ, ವರ್ತಕ ಸಂಘದ ಮಾಜಿ ಅಧ್ಯಕ್ಷ ಕೇಶವ ಪೈ, ನಾಗೇಂದ್ರ ಬಾಳಿಗ, ಶಶಿಧರ್ ನಾಯಕ್, ನಿರಂಜನ್, ನೀಲಂತ್, ಕೌಶಲ್ ಮೀಡಿಯಾದ ಮಾದವ ಮಾವೆ ಮತ್ತಿತರರು ಉಪಸ್ಥಿತರಿದ್ದರು. ಮಾಜಿ ಪುರಸಭೆ ಅಧ್ಯಕ್ಷ ರಾಜೇಶ್ ಬನ್ನೂರು ಕಾರ್ಯಕ್ರಮ ನಿರೂಪಿಸಿದರು.


ಕಮೀಷನ್ ಕೇಳದ ಸದಸ್ಯರು!
ಪುತ್ತೂರಿನಲ್ಲಿ ಬಸ್ ಪ್ರಯಾಣಿಕರ ತಂಗುದಾಣ ಆರಂಭಿಸಿದ ಸಂಜೀವ ಮಠಂದೂರು ಅವರ ಕೈಗುಣ ತುಂಬಾ ಚೆನ್ನಾಗಿದೆ. ಇಂತಹ ಬಸ್ ಪ್ರಯಾಣಿಕರ ತಂಗುದಾಣ ಮಂಗಳೂರು ಬಿಟ್ಟರೆ ಮತ್ತೆ ಇರುವುದು ಪುತ್ತೂರಿನಲ್ಲಿ. ಮೈಸೂರಿನಲ್ಲೂ ಕೂಡಾ ಇಂತಹ ತಂಗುದಾಣವಿಲ್ಲ. ಅದರಲ್ಲೂ ಮುಖ್ಯವಾಗಿ ನಾವು ಬೇರೆ ಬೇರೆ ಕಡೆ ಕೆಲಸ ಮಾಡಿದ್ದೇವೆ. ಬೆಂಗಳೂರಿನಲ್ಲೂ ಕಮೀಷನ್ ಕೇಳುವವರಿದ್ದಾರೆ. ಅದರೆ ಪುತ್ತೂರಿನಲ್ಲಿ ಮಾಡಿದ ಬಸ್ ಪ್ರಯಾಣಿಕರ ತಂಗುದಾಣದ ಕಾಮಗಾರಿಯಲ್ಲಿ ನಗರಸಭೆ ಸದಸ್ಯರು ಒಂದೇ ಒಂದು ಕಮೀಷನ್ ಕೇಳಿಲ್ಲ. ಅದಕ್ಕಾಗಿ ನಾನು ಅವರಿಗೆ ವಿಶೇಷ ಅಭಿನಂದನೆ ಸಲ್ಲಿಸುತ್ತೇನೆ. ಇಲ್ಲಿನ ಸದಸ್ಯರು ಜಾಣತನದಲ್ಲಿ ಅಭಿವೃದ್ಧಿ ಮಾಡುವುದು ಹೇಗೆಂದು ತೋರಿಸಿದ್ದಾರೆ.
ಮಾದವ ಮಾವೆ, ಅಧ್ಯಕ್ಷರು ಕೌಶಲ್ ಮಿಡಿಯಾ


ತಂಗುದಾಣದಲ್ಲಿ ಏನೆಲ್ಲ ಇರಲಿದೆ
ನೂತನ ಬಸ್ ಪ್ರಯಾಣಿಕರ ತಂಗುದಾಣದಲ್ಲಿ ತುರ್ತು ಸೇವೆಯ ನಂಬರ್, ಪೊಲೀಸ್, ಆರೋಗ್ಯಕ್ಕೆ ಸಂಬಂಧಿಸಿದ ಎಲ್ಲಾ ಮೊಬೈಲ್ ಸಂಖ್ಯೆಗಳು. ಎಫ್.ಎಮ್.ರೇಡಿಯೋ, ಮೊಬೈಲ್ ಚಾರ್ಜರ್ ಪಾಯಿಂಟ್ ಇರಲಿದೆ.
ಮಾದವ ಮಾವೆ ಕೌಶಲ್ ಮೀಡಿಯಾ

LEAVE A REPLY

Please enter your comment!
Please enter your name here