ಪುತ್ತೂರು: ಎರಡು ವಾರದೊಳಗೆ ಹಸೆಮಣೆ ಏರಲಿರುವ ಸಂತಸದಲ್ಲಿರುವ ಮಧ್ಯೆಯೇ ದಿಢೀರ್ ನಾಪತ್ತೆಯಾಗಿ ಆತಂಕ ಸೃಷ್ಠಿಸಿದ್ದ ಬಾಳಿಲದ ಯುವಕ ಧರ್ಮಸ್ಥಳದಲ್ಲಿ ಪತ್ತೆಯಾದ ಬಗ್ಗೆ ವರದಿಯಾಗಿದೆ.
ಘಟನೆಯ ವಿವರ:
ಬೆಳ್ಳಾರೆ ಪೊಲೀಸ್ ಠಾಣಾ ವ್ಯಾಪ್ತಿಯ ಬಾಳಿಲದ ದೇರಂಪಾಲು ಆರ್.ಸಿ.ಮನೆ ನಿವಾಸಿ ಶೀನಪ್ಪ ರೈಯವರ ಪುತ್ರ ಹರೀಶ್ ರೈ(38ವ.) ಮಾ.20ರಿಂದ ದಿಢೀರ್ ನಾಪತ್ತೆಯಾಗಿದ್ದರು. ಕಳೆದ ಸುಮಾರು 13 ವರ್ಷಗಳಿಂದ ಪುತ್ತೂರಿನ ಮಹೀಂದ್ರ ಫ್ಯೆನಾನ್ಸ್ ನಲ್ಲಿ ಸೀನಿಯರ್ ಎಕ್ಸಿಕ್ಯೂಟಿವ್ ಆಗಿ ಕೆಲಸ ಮಾಡಿಕೊಂಡಿದ್ದ ಹರೀಶ್ ರೈ ಅವರಿಗೆ ಏ.೬ರಂದು ಮದುವೆ ನಿಗದಿಯಾಗಿದ್ದು ಮದುವೆಗಾಗಿ ಸಿದ್ಧತೆಗಳು ನಡೆಯುತ್ತಿರುವ ನಡುವೆಯೇ ಅವರು ನಾಪತ್ತೆಯಾಗಿದ್ದರು. ದೂರದ ಸಂಬಂಧಿ ಯುವತಿ ಜೊತೆ ಹರೀಶ್ ರೈ ಅವರಿಗೆ ವಿವಾಹ ನಿಶ್ಚಯವಾಗಿತ್ತು. ಮಾ.೨೦ರಂದು ಬೆಳಿಗ್ಗೆ ೭.೩೦ ಗಂಟೆಗೆ ಯುವತಿಯ ಮನೆಗೆ ಹೋಗಿ ಬಳಿಕ ಕೆಲಸಕ್ಕೆ ಹೋಗುವುದಾಗಿ ತನ್ನ ಅಣ್ಣ ವೆಂಕಪ್ಪ ರೈ ಅವರಲ್ಲಿ ತಿಳಿಸಿ ಮನೆಯಿಂದ ಬೈಕ್ ನಲ್ಲಿ ತೆರಳಿದ್ದರು. ಸಂಜೆ ೫ ಗಂಟೆಗೆ ಮನೆಗೆ ವಾಪಸ್ ಬರಬೇಕಾಗಿದ್ದ ಹರೀಶ್ ರೈ ಅವರು ಸಂಜೆ ೬ ಗಂಟೆಯಾದರೂ ಬಾರದೇ ಇದ್ದಾಗ ಆತಂಕಗೊಂಡ ವೆಂಕಪ್ಪ ರೈಯವರು, ತಮ್ಮನಿಗೆ ವಿವಾಹ ನಿಶ್ಚಿತಾರ್ಥ ನಡೆದಿದ್ದ ಯುವತಿಗೆ ದೂರವಾಣಿ ಕರೆ ಮಾಡಿ ವಿಚಾರಿಸಿದ್ದರು. ಯುವತಿಯ ಮನೆಗೆ ಬೆಳಿಗ್ಗೆ ೮ ಗಂಟೆಗೆ ಹೋಗಿದ್ದ ಹರೀಶ್ ಆಕೆಯನ್ನು ತನ್ನ ಬೈಕ್‌ನಲ್ಲಿ ಪುತ್ತೂರಿಗೆ ಕರೆದುಕೊಂಡು ಹೋಗಿದ್ದರು. ಆಕೆಗೆ ವಿಟ್ಲಕ್ಕೆ ಹೋಗಲಿದ್ದ ಕಾರಣಕ್ಕಾಗಿ ಪುತ್ತೂರು ಬಸ್ ನಿಲ್ದಾಣದಲ್ಲಿ ಆಕೆಯನ್ನು ಇಳಿಸಿದ್ದ ಹರೀಶ್ ರೈಯವರು ಬಳಿಕ ಚಿನ್ನಾಭರಣ ಖರೀದಿಗೆ ಮಂಗಳೂರಿಗೆ ಹೋಗುವುದಾಗಿ ಹೇಳಿ ಹೋಗಿದ್ದರು. ೧೨ ಗಂಟೆ ಬಳಿಕ ತಾನು ಹರೀಶ್ ಅವರಿಗೆ ಕಾಲ್ ಮಾಡಿದಾಗ ಮೊಬೈಲ್ ಫೋನ್ ಸ್ವಿಚ್ ಆಫ್ ಆಗಿತ್ತು ಎಂದು ಯುವತಿ ತಿಳಿಸಿದ್ದರು. ಬಳಿಕ ಮಂಗಳೂರಿನಲ್ಲಿರುವ ಅಣ್ಣಂದಿರಿಗೆ, ಹರೀಶ್ ಅವರ ಸಹೋದ್ಯೋಗಿಗಳಿಗೆ ಫೋನ್ ಮಾಡಿ ವಿಚಾರಿಸಿದಾಗ ಯಾವುದೇ ಮಾಹಿತಿ ದೊರಕಿರಲಿಲ್ಲ. ಈ ಬಗ್ಗೆ ಹರೀಶ್ ರೈಯವರ ಅಣ್ಣ ವೆಂಕಪ್ಪ ರೈ ದೇರಂಪಾಲು ಅವರು ಬೆಳ್ಳಾರೆ ಪೊಲೀಸರಿಗೆ ದೂರು ನೀಡಿದ್ದು ಪೊಲೀಸರು ಪ್ರಕರಣ ದಾಖಲಿಸಿಕೊಂಡು ತನಿಖೆ ಆರಂಭಿಸಿದ್ದರು. ನಾಪತ್ತೆಯಾಗಿರುವ ಹರೀಶ್ ರೈ ಅವರ ಮೊಬೈಲ್ ಫೋನ್ ಕಾರ್ಯ ನಿರ್ವಹಣೆ ಆಧಾರದಲ್ಲಿ ಪೊಲೀಸರು ತನಿಖೆ ಕೇಂದ್ರೀಕರಿಸಿದ್ದರು. ಅವರ ಬೈಕ್ ಮಂಗಳೂರು ಪಡೀಲ್ ತನಕ ಹೋಗಿರುವ ಮಾಹಿತಿ ಸಿಸಿ ಕೆಮರಾಗಳ ಮೂಲಕ ಪತ್ತೆಯಾಗಿದ್ದು ಆ ಬಳಿಕದ ವಿವರ ಪೊಲೀಸರಿಗೆ ಲಭಿಸಿರಲಿಲ್ಲ. ಇದೀಗ ಹರೀಶ್ ರೈ ಅವರು ಧರ್ಮಸ್ಥಳದಲ್ಲಿ ಪತ್ತೆಯಾಗಿದ್ದು ಮನೆಗೆ ತೆರಳಿರುವುದಾಗಿ ತಿಳಿದು ಬಂದಿದೆ.