ಪುತ್ತೂರು: ಹಿಂದಿನ ಕಾಲದ ಸೌಹಾರ್ದತೆ ಇಂದು ಕ್ಷೀಣಿಸುತ್ತಿದ್ದು ರಾಜಕೀಯ ಹಾಗೂ ಇನ್ನಿತರ ಸ್ವಾರ್ಥ ಹಿಸಾಸಕ್ತಿಗಳಿಗಾಗಿ ಸೌಹಾರ್ದತೆ ಹಾಳಾಗುತ್ತಿದೆ ಎಂದು ಶಾಸಕ ಅಶೋಕ್ ಕುಮಾರ್ ರೈ ಹೇಳಿದರು.
ಎ.26ರಂದು ರಾತ್ರಿ ಇರ್ದೆ-ಪಳ್ಳಿತ್ತಡ್ಕ ದರ್ಗಾ ಶರೀಫ್ ಉರೂಸ್ ಸಮಾರೋಪ ಪ್ರಯುಕ್ತ ಹಮ್ಮಿಕೊಂಡಿದ್ದ ಸೌಹಾರ್ದ ಸಂಗಮ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.
ಇರ್ದೆ-ಪಳ್ಳಿತ್ತಡ್ಕ ದರ್ಗಾ ಬಹಳ ಇತಿಹಾಸ ಇರುವ ಫೇಮಸ್ ದರ್ಗಾ ಎಂದು ನಾನು ತಿಳಿದುಕೊಂಡಿದ್ದೇನೆ, ಇಲ್ಲಿನ ದರ್ಗಾ ಇರುವ ಜಾಗ ಹಿಂದೂ ಕುಟುಂಬಕ್ಕೆ ಸೇರಿದವರದ್ದು ಎನ್ನುವಾಗ ನಮಗೆಲ್ಲಾ ಹೆಮ್ಮೆಯಾಗುತ್ತಿದೆ, ಇದು ಸೌಹಾರ್ದತೆಗೆ ಸಾಕ್ಷಿಯಾಗಿದೆ, ಇದೇ ರೀತಿ ನಾವೆಲ್ಲಾ ಒಗ್ಗಟ್ಟಾಗಿ ಜೀವನ ನಡೆಸೋಣ ಎಂದು ಅವರು ಹೇಳಿದರು.

ಸೌಹಾರ್ದತೆ ಈ ನೆಲದ ಉಸಿರು-ಯಾಸಿರ್ ಕೌಸರಿ
ದಿಕ್ಸೂಚಿ ಭಾಷಣ ಮಾಡಿದ ಯಾಸಿರ್ ಅರಾಫತ್ ಕೌಸರಿ ಮಾತನಾಡಿ ಸೌಹಾರ್ದತೆ ಈ ನೆಲದ ಉಸಿರಾಗಿದ್ದು ಸೌಹಾರ್ದತೆಯನ್ನು ಕೆಡಿಸಲು ಪ್ರಯತ್ನಿಸುವವರನ್ನು ಪ್ರಜ್ಞಾವಂತ ನಾಗರಿಕರೆಲ್ಲ ಒಟ್ಟು ಸೇರಿ ಬಹಿಷ್ಕರಿಸಬೇಕು, ರಾಜಕೀಯ ಲಾಭಕ್ಕಾಗಿ ನಡೆಯುವ ದ್ವೇಷ ಬಿತ್ತುವ ಕಾರ್ಯಗಳ ಜನತೆ ಜಾಗೃತವಾಗಬೇಕು, ಪರಸ್ಪರ ಧರ್ಮಗಳನ್ನು ಗೌರವಿಸಿಕೊಂಡು ಅನ್ಯೋನ್ಯತೆಯಿಂದ ಎಲ್ಲರೂ ಜೀವನ ನಡೆಸಬೇಕು ಎಂದು ಅವರು ಹೇಳಿದರು.
ಸೌಹಾರ್ದತೆಯನ್ನು ತೋರ್ಪಡಿಸಬೇಕಾಗಿರುವುದು ವಿಪರ್ಯಾಸ-ಅಮಳ
ಪುಡಾ ಅಧ್ಯಕ್ಷ ಅಮಳ ರಾಮಚಂದ್ರ ಮಾತನಾಡಿ ಸೌಹಾರ್ದತೆ ಈ ದೇಶದಲ್ಲಿ ಹಿಂದಿನಿಂದಲೂ ಇದೆ, ಆದರೆ ಅದು ವಿವಿಧ ಕಾರಣಗಳಿಗೆ ಬೇಕಾಗಿ ಇಂದು ಕ್ಷೀಣಿಸುತ್ತಿದೆ, ಸೌಹಾರ್ದತೆಯನ್ನು ಕಾರ್ಯಕ್ರಮಗಳ ಮೂಲಕ ತೋರ್ಪಡಿಸಬೇಕಾಗಿ ಬಂದಿರುವುದು ವಿಪರ್ಯಾಸ ಎಂದು ಅವರು ಹೇಳಿದರು.

ಧರ್ಮ ರಕ್ಷಣೆಯ ಹಿಂದೆ ರಾಜಕೀಯವಿದೆ-ಬಡಗನ್ನೂರು
ಅಕ್ರಮ-ಸಕ್ರಮ ಸಮಿತಿ ಸದಸ್ಯ ಮಹಮ್ಮದ್ ಬಡಗನ್ನೂರು ಮಾತನಾಡಿ ಧರ್ಮವನ್ನು ರಕ್ಷಿಸುತ್ತೇವೆ ಎಂದು ಯಾರು ಹೇಳುವುದಕ್ಕೂ ಅರ್ಥವಿಲ್ಲ, ಧರ್ಮವನ್ನು ರಕ್ಷಿಸಲು ಯಾರಾದರೂ ಇಳಿದಿದ್ದಾರೆ ಎಂದರೆ ಅದರ ಹಿಂದೆ ರಾಜಕೀಯ ಇದೆ ಎಂದು ಅರ್ಥ ಮಾಡಿಕೊಳ್ಳಬೇಕು ಎಂದು ಹೇಳಿದರು.
ಸೌಹಾರ್ದತೆ ನಿರಂತರವಾಗಿ ನೆಲೆನಿಲ್ಲಲಿ-ಬಾಲ್ಯೊಟ್ಟು
ದ.ಕ ಜಿಲ್ಲಾ ಸಹಕಾರಿ ಯೂನಿಯನ್ ಮಂಗಳೂರು ಇದರ ಅಧ್ಯಕ್ಷ ಶಶಿಕುಮಾರ್ ರೈ ಬಾಲ್ಯೊಟ್ಟು ಮಾತನಾಡಿ ಇರ್ದೆ-ಪಳ್ಳಿತ್ತಡ್ಕ ಊರು ಹಿಂದಿನಿಂದಲೂ ಶಾಂತಿ, ಸೌಹಾರ್ದತೆಗೆ ಹೆಸರು ಪಡೆದ ಊರು. ಇಲ್ಲಿ ಸಹೋದರತೆ, ಸೌಹಾರ್ದತೆ ಇದೆ, ಅದು ಮುಂದಕ್ಕೂ ಹೀಗೇ ಮುಂದುವರಿಯಲಿ ಎಂದು ಆಶಿಸಿದರು.
ರಾಜಕೀಯ ಲಾಭಕ್ಕಾಗಿ ಧರ್ಮಗಳ ನಡುವೆ ಸಂಘರ್ಷ-ಹೇಮನಾಥ ಶೆಟ್ಟಿ
ಕೊಂಬೆಟ್ಟು ರಾಮಕೃಷ್ಣ ಪ್ರೌಢಶಾಲೆಯ ಸಂಚಾಲಕ ಕಾವು ಹೇಮನಾಥ ಶೆಟ್ಟಿ ಮಾತನಾಡಿ ಎಲ್ಲ ಧರ್ಮಗಳು ಶಾಂತಿ, ಸೌಹಾರ್ದತೆಯನ್ನು ಬೋಧಿಸಿದ್ದು ಯಾರದೋ ರಾಜಕೀಯ ಲಾಭಕ್ಕಾಗಿ ಧರ್ಮಗಳ ನಡುವೆ ಸಂಘರ್ಷ ಏರ್ಪಡುತ್ತಿದೆ, ಇದರ ಬಗ್ಗೆ ಪ್ರತಿಯೊಬ್ಬರೂ ತಿಳಿದುಕೊಳ್ಳುವ ಮೂಲಕ ಸೌಹಾರ್ದ ಸಮಾಜ ಕಟ್ಟಲು ಪ್ರಯತ್ನಿಸಬೇಕು ಎಂದು ಹೇಳಿದರು.
ಧರ್ಮವನ್ನು ಮೋಕ್ಷಕ್ಕಾಗಿ ಬಳಸಬೇಕು-ಹರಿಪ್ರಕಾಶ್
ಬೆಳಿಯೂರುಕಟ್ಟೆ ಸ.ಪ.ಪೂ ಕಾಲೇಜಿನ ಪ್ರಾಂಶುಪಾಲ ಹರಿಪ್ರಕಾಶ್ ಬೈಲಾಡಿ ಮಾತನಾಡಿ ಧರ್ಮವನ್ನು ನಮ್ಮ ಮೋಕ್ಷಕ್ಕಾಗಿ ಬಳಸಿಕೊಳ್ಳಬೇಕು, ರಾಜಕೀಯಕ್ಕೆ ಬಳಸಿಕೊಳ್ಳಬಾರದು, ಆಗ ಸಮಾಜ ನೆಮ್ಮದಿ ಕಾಣುತ್ತದೆ ಎಂದು ಹೇಳಿದರು.
ದ್ವೇಷ ಬಿಟ್ಟು ಪ್ರೀತಿ ಹಂಚುವ-ಸಿದ್ದೀಕ್ ಕೆ.ಎ
ಎಸ್.ಡಿ.ಪಿ.ಐ ಮಂಗಳೂರು ಗ್ರಾಮಾಂತರ ಜಿಲ್ಲಾ ಪ್ರ.ಕಾರ್ಯದರ್ಶಿ ಸಿದ್ದೀಕ್ ಕೆ.ಎ ಮಾತನಾಡಿ ನಾವು ಬದಲಾದರೆ ಸಮಾಜವನ್ನು ಪರಿವರ್ತಿಸಲು ಸಾಧ್ಯವಿದೆ, ದ್ವೇಷ ಬಿಟ್ಟು ಪ್ರೀತಿ ಹಂಚುವ ಕಾರ್ಯವನ್ನು ಪ್ರತಿಯೋರ್ವರೂ ಮಾಡಬೇಕು, ಅದಕ್ಕಿಂತ ದೊಡ್ಡ ನೆಮ್ಮದಿ, ಸಂತೋಷ ಇನ್ನೊಂದಿಲ್ಲ ಎಂದು ಹೇಳಿದರು.
ಧರ್ಮ ನೋಡಿ ಪ್ರತಿಭಟಿಸುವ ಕಾಲವಿದು-ನವೀನ್ ರೈ ಚೆಲ್ಯಡ್ಕ
ಬೆಟ್ಟಂಪಾಡಿ ಗ್ರಾ.ಪಂ ಸದಸ್ಯ ನವೀನ್ ರೈ ಚೆಲ್ಯಡ್ಕ ಮಾತನಾಡಿ ಕೊಲೆ, ಅತ್ಯಾಚಾರವನ್ನು ಧರ್ಮ ನೋಡಿ ಪ್ರತಿಭಟಿಸುವ ಕಾಲಘಟ್ಟ ಇದಾಗಿದ್ದು ಹಾಗಾಗಿ ಸೌಹಾರ್ದತೆ ಹಾಳಾಗುತ್ತಿದೆ ಎಂದು ಹೇಳಿದರು. ಮಾಧ್ಯಮಗಳು ಕೂಡಾ ಸಮಾಜವನ್ನು ವಿಭಜಿಸುತ್ತಿದ್ದು ಇದರ ಬಗ್ಗೆ ಜಾಗೃತಿ ಮೂಡಿಸಬೇಕಾಗಿದೆ ಎಂದು ಅವರು ಹೇಳಿದರು.
ಕೋಮುವಾದಿಗಳನ್ನು ಶಾಂತಿಪ್ರಿಯರು ತಿರಸ್ಕರಿಸಬೇಕು-ಎಂ.ಎಸ್
ಕೆಪಿಸಿಸಿ ಪ್ರ.ಕಾರ್ಯದರ್ಶಿ ಎಂ.ಎಸ್ ಮುಹಮ್ಮದ್ ಮಾತನಾಡಿ ಸೌಹಾರ್ದತೆ ಕಾಲದ ಬೇಡಿಕೆಯಾಗಿದ್ದು ಸೌಹಾರ್ದ ಸಮಾಜ ನಿರ್ಮಾಣ ಆದರೆ ಎಲ್ಲರೂ ನೆಮ್ಮದಿ ಕಾಣುತ್ತಾರೆ, ಸಂಕುಚಿತ ಮನೋಸ್ಥಿತಿಯ ಕೋಮುವಾದಿಗಳನ್ನು ಶಾಂತಿಪ್ರಿಯ ಜನತೆ ತಿರಸ್ಕರಿಸುವ ಮೂಲಕ ಸೌಹಾರ್ದತೆಯನ್ನು ಗಟ್ಟಿಗೊಳಿಸುವ ಕಾರ್ಯ ಇಲ್ಲಿ ಆಗಬೇಕು ಎಂದು ಅವರು ಹೇಳಿದರು.
ಪರಸ್ಪರ ಅರಿತು ಜೀವಿಸಬೇಕು-ಹಾಶಿಂ ಬಾಅಲವಿ ತಂಙಳ್
ಉದ್ಘಾಟಿಸಿದ ಸಯ್ಯಿದ್ ಹಾಶಿಂ ಬಾಅಲವಿ ತಂಙಳ್ ಕೊರಿಂಗಿಲ ಮಾತನಾಡಿ ಹಿಂದೂಗಳು, ಮುಸಲ್ಮಾನರು, ಕ್ರೈಸ್ತರು ಒಗ್ಗಟ್ಟಿನಿಂದ ಇದ್ದರೆ ಅದುವೇ ಈ ದೇಶದ ಸೌಂದರ್ಯ, ಧರ್ಮದ ವಿಚಾರದಲ್ಲಿ ಅಪನಂಬಿಕೆಗಳು ದೂರವಾಗಿ ಪರಸ್ಪರ ಒಬ್ಬರನ್ನೊಬ್ಬರು ಪ್ರೀತಿಸುವ ಹಾಗೆ ಆದಲ್ಲಿ ಇಲ್ಲಿ ಯಾವುದೇ ಸಮಸ್ಯೆ ಉಂಟಾಗಲು ಸಾಧ್ಯವಿಲ್ಲ, ಇರ್ದೆ-ಪಳ್ಳಿತ್ತಡ್ಕ ಉರೂಸ್ ಸಮಾರಂಭದಲ್ಲಿ ಪ್ರತಿವರ್ಷ ಸೌಹಾರ್ದ ಕಾರ್ಯಕ್ರಮ ಹಮ್ಮಿಕೊಳ್ಳುತ್ತಿದ್ದು ಇದು ಸೌಹಾರ್ದ ಸಮಾಜ ನಿರ್ಮಾಣಕ್ಕೆ ಕೊಡುಗೆ ನೀಡುತ್ತಿದೆ ಎಂದು ಹೇಳಿದರು.
ಕೊರಿಂಗಿಲ ಜುಮಾ ಮಸೀದಿ ಅಧ್ಯಕ್ಷ ಮಹಮ್ಮದ್ ಕುಂಞಿ ಹಾಜಿ ಅಧ್ಯಕ್ಷತೆ ವಹಿಸಿದ್ದರು.
ವೇದಿಕೆಯಲ್ಲಿ ಪುತ್ತೂರು ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಕೃಷ್ಣಪ್ರಸಾದ್ ಆಳ್ವ, ಕೆಯ್ಯೂರು ಗ್ರಾ.ಪಂ ಸದಸ್ಯ ಅಬ್ದುಲ್ ಖಾದರ್ ಮೇರ್ಲ, ಸಾರ್ಯ ಅಲ್ ಅಮಲ್ ಜುಮಾ ಮಸೀದಿ ಅಧ್ಯಕ್ಷ ಯೂಸುಫ್ ಗೌಸಿಯಾ ಸಾಜ, ಉದ್ಯಮಿ ಯೂಸುಫ್ ಹಾಜಿ ಕೈಕಾರ, ಜೆ.ಎಸ್ ಅಬ್ದುಲ್ಲ ಕುಂಞಿ ಆರ್ಲಪದವು, ಕಾಂಗ್ರೆಸ್ ಮುಖಂಡರಾದ ಐತ್ತಪ್ಪ ಪೇರಳ್ತಡ್ಕ, ಅರ್ಷದ್ ದರ್ಬೆ, ಬೆಟ್ಟಂಪಾಡಿ ಗ್ರಾ.ಪಂ ಸದಸ್ಯ ಮೊದುಕುಂಞಿ ಕೋನಡ್ಕ, ಎಜುಕೇಷನಲ್ ಎಕ್ಸಲೆನ್ಸ್ ಫೌಂಡೇಶನ್‌ನ ಅಧ್ಯಕ್ಷ ಅಮ್ಜದ್ ಖಾನ್ ಪೋಳ್ಯ, ಇಸ್ಮಾಯಿಲ್ ದಾರಿಮಿ, ಉದ್ಯಮಿಗಳಾದ ಮಹಮ್ಮದ್ ಒಮೇಗಾ, ಹಮೀದ್ ಕುತ್ತಮೊಟ್ಟೆ, ಕೊರಿಂಗಿಲ ಜುಮಾ ಮಸೀದಿಯ ಪ್ರ.ಕಾರ್ಯದರ್ಶಿ ಮೂಸಕುಂಞಿ ಬೆಟ್ಟಂಪಾಡಿ, ಕೊಶಾಧಿಕಾರಿ ಮಹಮ್ಮದ್ ಹಾಜಿ ಶಾಲಾಬಳಿ, ಎಂಪೆಕಲ್ಲು ಮಸೀದಿಯ ಮುಅಲ್ಲಿಂ ಸ್ವಾದಿಕ್ ಮುಸ್ಲಿಯಾರ್, ಉರೂಸ್ ಕಮಿಟಿ ಅಧ್ಯಕ್ಷ ಅಬೂಬಕ್ಕರ್ ಟಿ.ಎಂ, ಕಾರ್ಯದರ್ಶಿ ಕೆ.ಎಂ ಹಮೀದ್ ಕೊಮ್ಮೆಮ್ಮಾರ್, ಉಪಾಧ್ಯಕ್ಷ ಶಾಫಿ ಕೇಕನಾಜೆ, ಜೊತೆ ಕಾರ್ಯದರ್ಶಿ ಅಬ್ದುಲ್ ಅಝೀಝ್, ಶಾಹುಲ್ ಹಮೀದ್ ಕೀಲಂಪಾಡಿ, ಅಬ್ದುಲ್ಲ ಮೌಲವಿ ಬೆಂಗತ್ತಡ್ಕ, ಶಾಹುಲ್ ಹಮೀದ್ ಕೊರಿಂಗಿಲ, ಅಶ್ರಫ್ ಬೆಳಿಯೂರುಕಟ್ಟೆ, ಅಬೂಬಕ್ಕರ್ ಕೊರಿಂಗಿಲ ಉಪಸ್ಥಿತರಿದ್ದರು.
ಸ್ವದಕತುಲ್ಲಾ ತಂಙಳ್ ಖಿರಾಅತ್ ಪಠಿಸಿದರು. ಕೊರಿಂಗಿಲ ಜುಮಾ ಮಸೀದಿ ಉಪಾಧ್ಯಕ್ಷ ಆಲಿಕುಂಞಿ ಹಾಜಿ ಕೊರಿಂಗಿಲ ಸ್ವಾಗತಿಸಿದರು. ನೌಫಲ್ ವಿಟ್ಲ ಕಾರ್ಯಕ್ರಮ ನಿರೂಪಿಸಿದರು.
ಮತಪ್ರಭಾಷಣ ಸಮಾರೋಪ:
ಉರೂಸ್ ಪ್ರಯುಕ್ತ ಮತಪ್ರಭಾಷಣ ಸಮಾರೋಪ ಕಾರ್ಯಕ್ರಮದಲ್ಲಿ ಸಯ್ಯದ್ ಮುಖ್ತಾರ್ ತಂಙಳ್ ಕುಂಬೋಳ್ ಅಧ್ಯಕ್ಷತೆ ವಹಿಸಿ ದುವಾಶೀರ್ವಚನ ನೀಡಿದರು. ಕೊರಿಂಗಿಲ ಜುಮಾ ಮಸೀದಿ ಖತೀಬ್ ಜಿ.ಎಚ್ ಅಯ್ಯೂಬ್ ವಹಬಿ ಉದ್ಘಾಟಿಸಿದರು. ಮುಖ್ಯ ಪ್ರಭಾಷಣ ನಡೆಸಿದ ಶಫೀಕ್ ಬದ್ರಿ ಬಾಖವಿ ಕಡಕ್ಕಲ್ ಮಾತನಾಡಿ ಕೆಡುಕನ್ನು ವಿರೋಧಿಸಿ ಒಳಿತನ್ನು ಮೈಗೂಡಿಸಿಕೊಂಡರೆ ಮಾತ್ರ ಅಲ್ಲಾಹನ ಸ್ವರ್ಗ ಸಂಪಾದಿಸಲು ಸಾಧ್ಯ, ಭೂಮಿಯ ಮೇಲಿನ ಕ್ಷಣಿಕ ಜೀವನವನ್ನು ಅಲ್ಲಾಹನು ಇಷ್ಟಪಡುವ ರೀತಿಯಲ್ಲಿ ನಡೆಸುವ ಮೂಲಕ ನೈಜ ಸತ್ಯ ವಿಶ್ವಾಸಿಯಾಗಿ ಜೀವನ ನಡೆಸಲೆ ಎಲ್ಲರೂ ಶ್ರಮಿಸಬೇಕು ಎಂದು ಅವರು ಹೇಳಿದರು.
ವೇದಿಕೆಯಲ್ಲಿ ಸಯ್ಯದ್ ಸವಾದ್ ತಂಙಳ್ ಪಾನೂರು, ಕೊರಿಂಗಿಲ ಜುಮಾ ಮಸೀದಿ ಅಧ್ಯಕ್ಷ ಮಹಮ್ಮದ್ ಕುಂಞಿ ಹಾಜಿ, ಉರೂಸ್ ಕಮಿಟಿ ಅಧ್ಯಕ್ಷ ಅಬೂಬಕ್ಕರ್ ಟಿ.ಎಂ, ಕಾರ್ಯದರ್ಶಿ ಕೆ.ಎಂ ಹಮೀದ್ ಕೊಮ್ಮೆಮ್ಮಾರ್ ಉಪಸ್ಥಿತರಿದ್ದರು.
ಸಂಜೆ ಜಿ.ಎಚ್ ಅಯ್ಯೂಬ್ ವಹಬಿ ನೇತೃತ್ವದಲ್ಲಿ ಮೌಲೂದ್ ಪಾರಾಯಣ ನಡೆಯಿತು.
ಸಾವಿರಾರು ಮಂದಿ ಭಾಗಿ:
ಉರೂಸ್ ಸಮಾರೋಪದಲ್ಲಿ ನಾನಾ ಭಾಗಗಳಿಂದ ಸುಮಾರು ಹತ್ತು ಸಾವಿರಕ್ಕೂ ಅಧಿಕ ಮಂದಿ ಭಾಗವಹಿಸಿದ್ದರು. ಮಹಿಳೆಯರು, ಮಕ್ಕಳು ಸೇರಿದಂತೆ ಸಾವಿರಾರು ಸಂಖ್ಯೆಯಲ್ಲಿ ಆಗಮಿಸಿದದವರು ಮಖಾಂ ಝಿಯಾರತ್ ನಡೆಸಿದರು. ಪ್ರತಿದಿನ ಆಗಮಸಿದವರು ಬೆಲ್ಲದ ಗಂಜಿ ಸ್ವೀಕರಿಸಿದರು. ಮತಪ್ರಭಾಷಣದ ಕೊನೆಯಲ್ಲಿ ಅನ್ನದಾನ ನಡೆಯಿತು. ಉರೂಸ್ ಕಮಿಟಿಯವರು, ಜಮಾಅತರು, ಸ್ವಯಂ ಸೇವಕರು ಎಲ್ಲ ಕಾರ್ಯಗಳನ್ನು ಅಚ್ಚುಕಟ್ಟಾಗಿ ನಿರ್ವಹಿಸಿದರು.