ಉಪ್ಪಿನಂಗಡಿ: ಕಳೆದೆರಡು ದಿನಗಳಿಂದ ಸತತವಾಗಿ ಸುರಿಯುತ್ತಿರುವ ಮಳೆಯಿಂದಾಗಿ ಜಿಲ್ಲೆಯ ಜೀವ ನದಿಗಳಾದ ನೇತ್ರಾವತಿ ಮತ್ತು ಕುಮಾರಾಧಾರ ನದಿಗಳ ನೀರಿನ ಹರಿಯುವಿಕೆಯಲ್ಲಿ ಹೆಚ್ಚಳ ಕಂಡು ಬಂದಿದ್ದು, ಶನಿವಾರದಂದು ನದಿಯ ಒಡಲನ್ನಾವರಿಸಿ ನೀರು ಹರಿಯತೊಡಗಿದೆ.
ನಿನ್ನೆ ಸಾಯಂಕಾಲದ ವೇಳೆ ನದಿಯ ನೀರಿನ ಮಟ್ಟ ಸಮುದ್ರಮಟ್ಟಕ್ಕಿಂತ 25 ಮೀಟರ್ ಸನಿಹದಲ್ಲಿ ಹರಿಯುತ್ತಿತ್ತು. ಶುಕ್ರವಾರವಷ್ಟೇ ಅಣೆಕಟ್ಟಿನ ಗೇಟು ತೆರೆಯಲ್ಪಟ್ಟು ನದಿಯ ಒಡಲು ಅರ್ಧಾಂಶ ಖಾಲಿಯಾಗಿದ್ದ ದೃಶ್ಯ ಕಂಡು ಬಂದಿದ್ದರೆ, ಶನಿವಾರ ಮತ್ತೆ ನದಿಯ ಒಡಲು ಜಲಾವೃತವಾಗಿದೆ.