ಮುಕ್ಕೂರು: ದಿ.ಕುಂಬ್ರ ಲಲಿತಾ ಎಸ್ ಆಳ್ವರಿಗೆ ಸಾರ್ವಜನಿಕ ಶ್ರದ್ಧಾಂಜಲಿ ಸಭೆ

0

ದಿ.ಕುಂಬ್ರ ಲಲಿತಾ ಎಸ್ ಆಳ್ವ ಇಡೀ ಊರಿಗೆ ತಾಯಿ ಪ್ರೀತಿ ಉಣ ಬಡಿಸಿದ್ದರು – ಉಮೇಶ್ ಕೆಎಂಬಿ
ಮಾತೃ ಹೃದಯದ ಶ್ರೇಷ್ಟ ವ್ಯಕ್ತಿತ್ವ ಅವರಲ್ಲಿತ್ತು – ಡಾ. ನರಸಿಂಹ ಶರ್ಮ ಕಾನಾವು

ಪುತ್ತೂರು: ವ್ಯಕ್ತಿ ಸಮಾಜದಲ್ಲಿ ಆದರ್ಶನಾಗಿ ಗುರುತಿಸಿಕೊಳ್ಳಲು ಸಾರ್ವಜನಿಕ ಜೀವನದಲ್ಲೇ ಇರಬೇಕು ಎಂದೇನಿಲ್ಲ. ಮನೆಯಲ್ಲಿ ಇದ್ದುಕೊಂಡೇ ತನ್ನ ಸಂಸ್ಕಾರ, ಮಾನವೀಯ ಗುಣ, ಅತಿಥಿ ಸತ್ಕಾರದ ಗುಣದೊಂದಿಗೆ ಎಲ್ಲರಿಗೂ ಆದರ್ಶ ವ್ಯಕ್ತಿಯಾಗಿರಲು ಸಾಧ್ಯವಿದೆ. ಇದಕ್ಕೂಂದು ಅತ್ಯುತ್ತಮ ಉದಾಹರಣೆ ದಿ.ಕುಂಬ್ರ ಲಲಿತಾ ಎಸ್ ಆಳ್ವರು ಎಂದು ಪೆರುವಾಜೆ ಶ್ರೀ ಜಲದುರ್ಗಾದೇವಿ ದೇವಾಲಯದ ವ್ಯವಸ್ಥಾಪನ ಸಮಿತಿ ಮಾಜಿ ಅಧ್ಯಕ್ಷ ಉಮೇಶ್ ಕೆಎಂಬಿ ಹೇಳಿದರು.

ಮುಕ್ಕೂರು ಊರ ಅಭಿಮಾನಿಗಳ ನೇತೃತ್ವದಲ್ಲಿ ಬೋಳಕುಮೇರು ಆಳ್ವಫಾರ್ಮ್ಸ್ ನ ಹಿರಿಯರಾದ ದಿ.ಕುಂಬ್ರ ಲಲಿತಾ ಎಸ್ ಆಳ್ವ ಅವರಿಗೆ ಸವಣೂರು ಸಮೀಪದ ಮುಕ್ಕೂರು ಶಾಲಾ ವಠಾರದಲ್ಲಿಅ.12 ರಂದು ನಡೆದ ಸಾರ್ವಜನಿಕ ಶ್ರದ್ಧಾಂಜಲಿ ಸಭೆಯಲ್ಲಿ ಅವರು ನುಡಿನಮನ ಸಲ್ಲಿಸಿದರು. ಲಲಿತಾ ಎಸ್ ಆಳ್ವ ಅವರು ಮನೆ ಮಂದಿಗೆ ಮಾತ್ರ ತಾಯಿ ಪ್ರೀತಿ ತೋರಿದ್ದಲ್ಲ. ಇಡೀ ಊರಿಗೆ ತಾಯಿ ಪ್ರೀತಿ ಉಣ ಬಡಿಸಿದ್ದರು. ತನ್ನ ಸಂಸ್ಕಾರದ ಗುಣಗಳನ್ನು ಮಕ್ಕಳಲ್ಲಿಯು ಬೆಳೆಸಿದರು.ಜೀವನದೊದ್ದಕ್ಕೂ ಆದರ್ಶ ಮಹಿಳೆಯಾಗಿ ಸಮಾಜಕ್ಕೆ ಮಾದರಿಯಾದರು. ಅವರ ವ್ಯಕ್ತಿತ್ವ, ಆದರ್ಶ ಗುಣಗಳನ್ನು ನಾವು ಕೂಡ ಜೀವನದಲ್ಲಿ ಅಳವಡಿಸಿಕೊಂಡರೆ ಅವರಿಗೆ ನೀಡುವ ದೊಡ್ಡ ಗೌರವ ಅದು ಎಂದರು.

ಪೆರುವಾಜೆ ಗ್ರಾ.ಪಂ.ಅಧ್ಯಕ್ಷ ಜಗನ್ನಾಥ ಪೂಜಾರಿ ಮುಕ್ಕೂರು ಅಧ್ಯಕ್ಷತೆ ವಹಿಸಿ, ಮಾತನಾಡಿ,ಆಳ್ವ ಫಾರ್ಮ್ಸ್ ಗೆ ಹೋಗುವ ಪ್ರತಿ ವ್ಯಕ್ತಿಗೂ ಅಮ್ಮನಂತೆ ಪ್ರೀತಿ ತೋರುತ್ತಿದ್ದ ಲಲಿತಾ ಎಸ್ ಆಳ್ವ ಅವರ ಅಗಲುವಿಕೆ ಇಡೀ ಊರಿಗೆ ದುಃಖ ತಂದಿದೆ. ತನ್ನ ಮೃದು ಮಾತು, ಅತಿಥಿ ಸತ್ಕಾರಗಳಿಂದ ಎಲ್ಲರ ಪ್ರೀತಿಯನ್ನು ಗಳಿಸಿದ ಮಾತೃ ಹೃದಯಿಯ ಸ್ಮರಣೆ ಅರ್ಥಪೂರ್ಣ. ಅವರ ನೆನಪು ಸದಾಕಾಲ ಎಂದರು.

ಜೇಸಿ ಮಲ್ಲಿಕಾ ಎಲ್ ಶೆಟ್ಟಿ ಕುಂಜಾಡಿ ಮಾತನಾಡಿ ಲಲಿತಾ ಎಸ್ ಆಳ್ವ ಅವರದ್ದು ಸಹಜತೆಯ ಬದುಕು. ಅದರಲ್ಲಿ ಉತ್ಪ್ರೇಕೆಯ ಅಂಶಗಳು ಇರಲಿಲ್ಲ. ತಾನು ಇದ್ದಂತೆ ಬದುಕಿ ಇತರರಿಗೆ ಆದರ್ಶರಾದರು ಎಂದರು.ನೋಟರಿ ನ್ಯಾಯವಾದಿ ಬಾಬು ಗೌಡ ಅಡ್ಯತಕಂಡ ಮಾತನಾಡಿ ವ್ಯಕ್ತಿ ತನ್ನ ವ್ಯಕ್ತಿತ್ವದ ಮೂಲಕ ಸಮಾಜಕ್ಕೆ ಏನನ್ನು ಕೊಡಬಹುದು ಅನ್ನುವುದಕ್ಕೆ ಲಲಿತಾ ಎಸ್ ಆಳ್ವ ಒಳ್ಳೆಯ ನಿದರ್ಶನ ಎಂದರು.

ಅಧ್ಯಕ್ಷತೆ ವಹಿಸಿದ್ದ ಕಾನಾವು ಕ್ಲಿನಿಕ್ ನ ಡಾ. ನರಸಿಂಹ ಶರ್ಮ ಕಾನಾವು ಮಾತನಾಡಿ ಮಾತೃಶ್ರೀ ಸ್ವರೂಪದ ಲಲಿತಾ ಎಸ್ ಆಳ್ವ ಅವರ ಅಗಲುವಿಕೆಗೆ ಇಡೀ ಊರೇ ಕಂಬನಿ ಮಿಡಿದಿದೆ. ಅವರ ಮತ್ಸರ ಇಲ್ಲದ ಹೃದಯ, ಆತ್ಮೀಯತೆ, ಪ್ರೀತಿ, ಮಾನವೀಯ ಗುಣಗಳು ಅವರ ಶ್ರೇಷ್ಟ ವ್ಯಕ್ತಿತ್ವಕ್ಕೆ ಹಿಡಿದ ಕೈಗನ್ನಡಿಯಾಗಿದೆ ಎಂದರು.

ವಿಜಯ ಬ್ಯಾಂಕ್ ನ ನಿವೃತ್ತ ಎಜಿಎಂ ಅಗ್ರಾಳ ಮನೋಹರ ಆಳ್ವ, ಕುಂಬ್ರ ದಯಾಕರ ಆಳ್ವ ಅವರು ಮನೆಯವರ ಪರವಾಗಿ ಊರವರಿಗೆ ಕೃತಜತೆ ಸಲ್ಲಿಸಿದರು. ಪ್ರಗತಿಪರ ಕೃಷಿಕ ಮೋಹನ ಬೈಪಾಡಿತ್ತಾಯ ದೀಪ ಪ್ರಜ್ವಲಿಸಿದರು. ಆ ಬಳಿಕ ಪುಷ್ಪನಮನ, ಮೌನ ಪ್ರಾರ್ಥನೆ ಮೂಲಕ ಲಲಿತಾ ಎಸ್ ಆಳ್ವ ಅವರಿಗೆ ಗೌರವ ಸಲ್ಲಿಸಲಾಯಿತು.

ಸಭಿಕರ ಪರವಾಗಿ ಮುಕ್ಕೂರು ಹಾಲು ಉತ್ಪಾದಕರ ಸಹಕಾರ ಸಂಘದ ಉಪಾಧ್ಯಕ್ಷ ಗಣೇಶ್ ಶೆಟ್ಟಿ ಕುಂಜಾಡಿ, ಬೆಳ್ಳಾರೆ ಸಿಎ ಬ್ಯಾಂಕ್ ನಿರ್ದೇಶಕ ನಾರಾಯಣ ಗೌಡ ಕೊಂಡೆಪ್ಪಾಡಿ, ನಿವೃತ್ತ ಕಂದಾಯ ನಿರೀಕ್ಷಕ ದಾಮೋದರ ಗೌಡ ಕಂಡಿಪ್ಪಾಡಿ, ಮುಕ್ಕೂರು ಹಾಲು ಉತ್ಪಾದಕರ ಸಹಕಾರ ಸಂಘದ ನಿರ್ದೇಶಕ ಸುಬ್ರಾಯ ಭಟ್ ನೀರ್ಕಜೆ, ನ್ಯಾಯವಾದಿ ಗಣಪತಿ ಭಟ್ ನೀರ್ಕಜೆ ನುಡಿ ನಮನ ಸಲ್ಲಿಸಿದರು. ಮುಕ್ಕೂರು ಶಾಲಾ ಹಳೆ ವಿದ್ಯಾರ್ಥಿ ಸಂಘದ ಕೋಶಾಧಿಕಾರಿ ಜೈನುದ್ದೀನ್ ತೋಟದಮೂಲೆ ವಂದಿಸಿದರು.

LEAVE A REPLY

Please enter your comment!
Please enter your name here