ಪುತ್ತೂರು: ಇತಿಹಾಸ ಪ್ರಸಿದ್ಧ ಪುತ್ತೂರು ಮಹತೋಭಾರ ಶ್ರೀ ಮಹಾಲಿಂಗೇಶ್ವರ ದೇವಸ್ಥಾನದ ಕೆರೆಯ ಬಳಿಯಿರುವ ಮಹಿಳಾ ಪೊಲೀಸ್ ಠಾಣೆಯನ್ನು ಸ್ಥಳಾಂತರಿಸುವ ನಿಟ್ಟಿನಲ್ಲಿ, ಪುತ್ತೂರು ಕೆಎಸ್‌ಆರ್‌ಟಿಸಿ ಬಸ್ ನಿಲ್ದಾಣದ ಬಳಿಯಲ್ಲಿ ಹೊಸದಾಗಿ ಮಹಿಳಾ ಪೊಲೀಸ್ ಠಾಣೆಗೆ 8 ಸೆಂಟ್ಸ್ ಜಾಗ ಮಂಜೂರುಗೊಂಡಿದೆ ಎಂದು ಶಾಸಕ ಅಶೋಕ್ ಕುಮಾರ್ ರೈ ತಿಳಿಸಿದ್ದಾರೆ.
ಮಹಿಳಾ ಪೊಲೀಸ್ ಠಾಣೆಗೆ ಮಂಜೂರುಗೊಂಡ ಜಾಗದ ಆರ್‌ಟಿಸಿಯನ್ನು ಜೂ.9ರಂದು ಶಾಸಕರ ಕಚೇರಿಯಲ್ಲಿ ಪ್ರಭಾರ ತಹಶೀಲ್ದಾರ್ ನಾಗರಾಜ್ ಅವರು ಶಾಸಕರ ಮೂಲಕ ಡಿವೈಎಸ್ಪಿ ಅರುಣ್ ನಾಗೇಗೌಡ ಮತ್ತು ಮಹಿಳಾ ಪೊಲೀಸ್ ಠಾಣೆ ಇನ್‌ಸ್ಪೆಕ್ಟರ್ ಸುನಿಲ್ ಅವರಿಗೆ ಹಸ್ತಾಂತರಿಸಿದರು.
ಮಹಿಳಾ ಪೊಲೀಸ್ ಠಾಣೆಗೆ ಸರಕಾರದ ಮೂಲಕ ಜಾಗ ಮಂಜೂರುಗೊಂಡಿದೆ. ಮಹಾಲಿಂಗೇಶ್ವರ ದೇವಸ್ಥಾನದ ಅಭಿವೃದ್ದಿಯ ಹಿನ್ನೆಲೆಯಲ್ಲಿ ಠಾಣೆಯನ್ನು ಸ್ಥಳಾಂತರಿಸುವ ಕುರಿತು ಈ ಹಿಂದೆ ಗೃಹಮಂತ್ರಿಯವರಲ್ಲಿ ವಿನಂತಿ ಮಾಡಿದ್ದೆವು. ಆಗ ಅವರು ಜಾಗ ಕಾದಿರಿಸುವಂತೆ ತಿಳಿಸಿದ್ದರು. ಅದರಂತೆ ಇದೀಗ ಜಾಗ ಮಂಜೂರುಗೊಂಡಿದೆ. ಠಾಣೆ ನಿರ್ಮಾಣಕ್ಕೆ ಸರಕಾರದಿಂದ ರೂ.1 ಕೋಟಿ ಅನುದಾನವೂ ಮಂಜೂರುಗೊಂಡಿದೆ. ಮುಂದಿನ ದಿನ ಟೆಂಡರ್ ಕರೆದು ಶೀಘ್ರ ಕಾಮಗಾರಿಯನ್ನು ಆರಂಭಿಸಲಾಗುವುದು ಎಂದು ಶಾಸಕ ಅಶೋಕ್ ಕುಮಾರ್ ರೈ ತಿಳಿಸಿದ್ದಾರೆ.