ಪುತ್ತೂರು: ಫ್ರೆಂಡ್ಶಿಪ್ ಫೋರಮ್ ನವದೆಹಲಿ ಇವರು ನೀಡುವ ಪ್ರತಿಷ್ಠಿತ “ಗ್ಲೋಬಲ್ ಅಚೀವರ್ಸ್” ಪ್ರಶಸ್ತಿಗೆ ದಕ್ಷಿಣ ಕನ್ನಡ ಜಿಲ್ಲಾ ಕೇಂದ್ರ ಸಹಕಾರಿ ಬ್ಯಾಂಕ್ ಹಾಗೂ ಕರ್ನಾಟಕ ರಾಜ್ಯ ಸಹಕಾರ ಮಾರಾಟ ಮಹಾಮಂಡಳ ನಿ., ಬೆಂಗಳೂರು ಇದರ ಅಧ್ಯಕ್ಷ ಡಾ| ಎಂ. ಎನ್. ರಾಜೇಂದ್ರ ಕುಮಾರ್ ಆಯ್ಕೆಗೊಂಡಿದ್ದಾರೆ. ಡಾ.ಎಂ.ಎನ್ ರಾಜೇಂದ್ರ ಕುಮಾರ್ ಅವರು ಸಹಕಾರ, ಸಮಾಜಸೇವೆ ಮತ್ತು ಬ್ಯಾಂಕಿಂಗ್ ಕ್ಷೇತ್ರದಲ್ಲಿ ಈ ನಾಡಿಗೆ ಸಲ್ಲಿಸಿರುವ ಅನುಪಮ ಸೇವೆಯನ್ನು ಗುರುತಿಸಿ ನವದೆಹಲಿಯ ಫ್ರೆಂಡ್ಶಿಪ್ ಫೋರಮ್ ಸಂಸ್ಥೆ ಆವರನ್ನು ಈ ಪ್ರಶಸ್ತಿಗೆ ಆಯ್ಕೆ ಮಾಡಿದೆ.
ಕಳೆದ ೩೧ ವರ್ಷಗಳಿಂದ ಎಸ್ಸಿಡಿಸಿಸಿ ಬ್ಯಾಂಕಿನ ಅಧ್ಯಕ್ಷರಾಗಿ ಸಾರ್ಥಕ, ಪ್ರಾಮಾಣಿಕ ಸೇವೆಯನ್ನು ಸಹಕಾರ ಕ್ಷೇತ್ರದಲ್ಲಿ ಮಾಡುತ್ತಿರುವ ಡಾ| ಎಂ.ಎನ್ ರಾಜೇಂದ್ರ ಕುಮಾರ್ ಅವರು ಈ ಬ್ಯಾಂಕ್ನ್ನು ಅತ್ಯುನ್ನತ ಮಟ್ಟಕ್ಕೇರಿಸಿದ್ದಾರೆ. ಇವರ ಜನಸ್ಪಂದನೆಯ ಕಾರ್ಯವೈಖರಿಯಿಂದಲೇ ಎಸ್ಸಿಡಿಸಿಸಿ ಬ್ಯಾಂಕ್ ರಾಜ್ಯ, ರಾಷ್ಟ್ರಮಟ್ಟದಲ್ಲಿ ಗುರುತಿಸುವಂತಾಗಿದೆ. ನವೋದಯ ಸ್ವ ಸಹಾಯ ಸಂಘಗಳ ಹರಿಕಾರರಾಗಿ ಅಪೂರ್ವ ಪರಂಪರೆಯನ್ನು ರೂಪಿಸಿರುವ ರಾಜೇಂದ್ರ ಕುಮಾರ್ ರಾಜ್ಯದ ಧೀಮಂತ ಸಹಕಾರಿ ನಾಯಕರಲ್ಲಿ ಒಬ್ಬರಾಗಿದ್ದಾರೆ. ಮುಖ್ಯವಾಗಿ ಮಹಿಳಾ ಸಬಲೀಕರಣಕ್ಕೆ ಹೆಚ್ಚಿನ ಪ್ರಾಶಸ್ತ್ಯವನ್ನು ನವೋದಯ ಸ್ವಸಹಾಯ ಸಂಘಗಳ ಮೂಲಕ ನೀಡಿ, ಆರ್ಥಿಕ ಚೈತನ್ಯವನ್ನು ತುಂಬಿದ್ದಾರೆ. ಇತ್ತೀಚೆಗೆ ನಡೆದ ನವೋದಯ ರಜತ ಸಂಭ್ರಮ ಕಾರ್ಯಕ್ರಮ ಸಹಕಾರ ಕ್ರೇತ್ರದಲ್ಲೇ ನೂತನ ಮೈಲಿಗಲ್ಲನ್ನು ಸ್ಥಾಪಿಸಿದೆ.
ರಾಜೇಂದ್ರಕುಮಾರ್ ಅವರು ಸಹಕಾರಿ ಬ್ಯಾಂಕಿಂಗ್ ಹಾಗೂ ಸಾಮಾಜಿಕ ರಂಗದಲ್ಲಿ ಸಲ್ಲಿಸಿದ ಗಣನೀಯ ಸೇವೆಯನ್ನು ಪರಿಗಣಿಸಿ ಇವರಿಗೆ ಹಲವಾರು ರಾಷ್ಟ್ರೀಯ – ಅಂತರರಾಷ್ಟ್ರೀಯ ಪ್ರಶಸ್ತಿಗಳು ಲಭಿಸಿವೆ. ಶ್ರೀಲಂಕಾದ ಕೊಲಂಬೊ ಮುಕ್ತ ವಿಶ್ವವಿದ್ಯಾಲಯದಿಂದ ಹಾಗೂ ಮಂಗಳೂರು ವಿಶ್ವವಿದ್ಯಾಲಯದಿಂದ “ಗೌರವ ಡಾಕ್ಟರೇಟ್” ಪಡೆದ ರಾಜ್ಯದ ಮೊದಲ ಸಹಕಾರಿ ನಾಯಕ. ಕರ್ನಾಟಕ ಸರಕಾರದಿಂದ “ಸಹಕಾರ ರತ್ನ” ಪ್ರಶಸ್ತಿ ಸೇರಿದಂತೆ “ಸಹಕಾರ ವಿಶ್ವ ಬಂಧುಶ್ರೀ”, “ಮದರ್ ತೆರೆಸಾ ಸದ್ಭಾವನಾ ಪ್ರಶಸ್ತಿ”, “ಮಹಾತ್ಮಾ ಗಾಂಧಿ ಸಮ್ಮಾನ್ ಪ್ರಶಸ್ತಿ”, “ಬೆಸ್ಟ್ ಚೇರ್ ಮೆನ್ ನ್ಯಾಷನಲ್ ಎವಾರ್ಡ್”, “ನ್ಯಾಷನಲ್ ಎಕ್ಸ್ ಲೆನ್ಸ್ ಎವಾರ್ಡ್”, “ಔಟ್ ಸ್ಟೆಂಡಿಂಗ್ ಗ್ಲೋಬಲ್ ಲೀಡರ್ ಶಿಪ್ ಎವಾರ್ಡ್” ಇವರ ಕಾರ್ಯದಕ್ಷತೆಗೆ ಲಭಿಸಿದೆ. ಇವರು ಜನೋಪಯೋಗಿ ಕಾರ್ಯನಿರ್ವಹಣೆಯ ಮೂಲಕ ಎಸ್ಸಿಡಿಸಿಸಿ ಬ್ಯಾಂಕಿನ ಪ್ರಗತಿಗೆ ಕಾರಣರಾಗಿದ್ದಾರೆ.