ಸವಣೂರು: ಮಾಜಿ ಸಚಿವ, ಗಂಗಾವತಿ ಶಾಸಕ ಗಾಲಿ ಜನಾರ್ದನ ರೆಡ್ಡಿ ಜೈಲಿನಿಂದ ಬಿಡುಗಡೆಯಾಗುತ್ತಾರೆ ಎಂದು ಆರೆಲ್ತಡಿಯ ದೈವ ನುಡಿದ ಬೆನ್ನಲ್ಲೇ ರೆಡ್ಡಿ ಅವರು ಜೈಲಿನಿಂದ ಬಿಡುಗಡೆಯಾಗಿರುವ ಹಿನ್ನೆಲೆಯಲ್ಲಿ ದೈವಕ್ಕೆ ಪ್ರಾರ್ಥನೆ ಸಲ್ಲಿಸಲು ಜು.16ನೇ ಸವಣೂರಿನ ಆರೆಲ್ತಡಿ ದೈವಸ್ಥಾನಕ್ಕೆ ಆಗಮಿಸಲಿದ್ದಾರೆ.
ಕಡಬ ತಾಲೂಕಿನ ಸವಣೂರು ಗ್ರಾಮದ ಕಾರಣಿಕ ಕ್ಷೇತ್ರ ಅರೇಲ್ತಡಿ ಶ್ರೀ ಉಳ್ಳಾಕುಲು, ಕೆಡೆಂಜೊಡಿತ್ತಾಯಿ ದೇವಸ್ಥಾನದಲ್ಲಿ ಮೇ.13ರಂದು ದೈವಸ್ಥಾನದ ಬ್ರಹ್ಮಕಲಶೋತ್ಸವ ಸಮಾರಂಭದಲ್ಲಿ ದೈವದ ಬಳಿ ಜನಾರ್ದನ ರೆಡ್ಡಿ ಆಪ್ತರು ಜೈಲಿನಿಂದ ಬಿಡುಗಡೆಗೆ ಮೊರೆ ಇಟ್ಟಿದ್ದರು. ಇದಕ್ಕೆ ಇಂದಿನಿಂದ 1 ತಿಂಗಳ ಒಳಗಡೆ ಜೈಲಿನಿಂದ ಬಿಡುಗಡೆ ಆಗುತ್ತಾರೆ ಎಂದು ದೈವ ಪಾತ್ರಿ ನುಡಿದಿದ್ದರು.
ಅಕ್ರಮ ಗಣಿಗಾರಿಕೆ ಪ್ರಕರಣದಲ್ಲಿ ಸಿಬಿಐ ನಿಂದ ಬಂಧನಕ್ಕೊಳಗಾಗಿದ್ದ ಜನಾರ್ದನ ರೆಡ್ಡಿ ಅವರಿಗೆ ತೆಲಂಗಾಣ ಹೈಕೋರ್ಟ್ ಜಾಮೀನು ನೀಡಿತ್ತು. ಇದರಿಂದ ಚಂಚಲಗೂಡ ಜೈಲಿನಲ್ಲಿದ್ದ ರೆಡ್ಡಿ ಬಿಡುಗಡೆಯಾಗಿದ್ದರು. ದೈವ ನುಡಿದಂತೆ 27 ದಿನಕ್ಕೆ ಅಂದರೆ ಜೂ.11ರಂದು ಜನಾರ್ದನ ರೆಡ್ಡಿಯವರು ಜೈಲಿನಿಂದ ಬಿಡುಗಡೆಯಾಗಿದ್ದಾರೆ. ಇದು ಕಾರ್ಣಿಕ ದೈವ ಕೆಡೆಂಜೊಡಿತ್ತಾಯಿ ದೈವದ ಅನುಗ್ರಹವಾಗಿದೆ. ದೈವದ ಅನುಗ್ರಹದಲ್ಲಿ ಬಿಡುಗೆಯಾಗಿರುವ ಹಿನ್ನೆಲೆಯಲ್ಲಿ ಬಿಡುಗಡೆಯ ಒಂದು ತಿಂಗಳ ಬಳಿಕ ರೆಡ್ಡಿಯವರು ದೈವಸ್ಥಾನಕ್ಕೆ ಆಗಮಿಸಲಿದ್ದಾರೆ. ಜುಲೈ 16 ರಂದು ಸಂಕ್ರಮಣದ ವಿಶೇಷ ಪೂಜೆ ನಡೆಯಲಿದ್ದು, ಈ ಸಂದರ್ಭದಲ್ಲಿ ರೆಡ್ಡಿಯವರು ಪ್ರಾರ್ಥನೆ ಸಲ್ಲಿಸಿ ಹೋಗಲಿದ್ದಾರೆ ಎಂದು ದೈವಸ್ಥಾನದ ಜೀರ್ಣೋದ್ಧಾರ ಸಮಿತಿಯ ಅಧ್ಯಕ್ಷ ದಿನೇಶ್ ಮೆದು ತಿಳಿಸಿದ್ದಾರೆ.