ಗುರುಗಳ ಆಶೀರ್ವಾದದಿಂದ ಮಾತ್ರ ಕರ್ಮ ಬಂಧನದಿಂದ ಮುಕ್ತಿ : ಶ್ರೀಕೃಷ್ಣ ಉಪಾಧ್ಯಾಯ
ಪುತ್ತೂರು: ನಾವು ಮಾಡುವ ಪ್ರತಿ ಕೆಲಸಕ್ಕೆ ಪ್ರತಿಫಲವಿದೆ. ಜನ್ಮಜನ್ಮಾಂತರದ ಕರ್ಮಫಲ ನಮ್ಮ ಬದುಕನ್ನು ರೂಪಿಸುತ್ತದೆ. ಕರ್ಮ ಬಂಧನದಿಂದ ತಪ್ಪಿಸಿಕೊಳ್ಳುವುದು ಅಸಾಧ್ಯ. ಗುರುಗಳ ಆಶೀರ್ವಾದಕ್ಕೆ ಮಾತ್ರ ಕರ್ಮ ಬಂಧನವನ್ನು ತಪ್ಪಿಸುವ ಶಕ್ತಿ ಇದೆ. ಶಿವ ಪಥವರಿಯಲು ಗುರು ಪಥವೇ ಮೊದಲು. ಅಜ್ಞಾನಾಂಧಕಾರವನ್ನು ಹೊಡೆದೋಡಿಸುವವನು ಗುರು ಎಂದು ವೇ.ಮೂ. ಶ್ರೀಕೃಷ್ಣ ಉಪಾಧ್ಯಾಯ ಹೇಳಿದರು.
ಅವರು ನಗರದ ನಟ್ಟೋಜ ಫೌಂಡೇಶನ್ ಟ್ರಸ್ಟ್ ಮುನ್ನಡಸುತ್ತಿರುವ ನೆಲ್ಲಿಕಟ್ಟೆ ಅಂಬಿಕಾ ಪದವಿಪೂರ್ವ ವಿದ್ಯಾಲಯದಲ್ಲಿ ಗುರುವಾರ ನಡೆದ ಗುರುಪೂರ್ಣಿಮೆ ಕಾರ್ಯಕ್ರಮದಲ್ಲಿ ಭಾಗವಹಿಸಿ ಮಾತನಾಡಿದರು.
ವೇದಗಳ ವಿಂಗಡಣೆ ಮಾಡಿದ, ಅಷ್ಟಾದಶ ಪುರಾಣ ಮುಂತಾದ ಕೃತಿಗಳನ್ನು, ಮಹಾಕಾವ್ಯಗಳನ್ನು ರಚಿಸಿದ ವೇದವ್ಯಾಸರು ಹುಟ್ಟಿದ್ದು ಹಾಗೂ ದೇಹ ತ್ಯಜಿಸಿದ್ದು ಆಷಾಢ ಹುಣ್ಣಿಮೆಯಂದು. ಆದುದರಿಂದ ಅಂತಹ ವಿಶೇಷ ದಿನವನ್ನು ಗುರು ಪೂರ್ಣಿಮೆ ಎಂದು ಆಚರಿಸುವುದು ಸಂಪ್ರದಾಯ. ಪ್ರತಿನಿತ್ಯ ಹೆತ್ತ ತಾಯಿ, ತಂದೆ, ಗುರುಗಳ ಆಶೀರ್ವಾದಕ್ಕಾಗಿ ವಿದ್ಯಾರ್ಥಿಗಳು ಹಂಬಲಿಸುತ್ತಿರಬೇಕು. ಆಗ ಭಗವಂತನ ಅನುಗ್ರಹವೂ ದೊರೆಯುತ್ತದೆ ಎಂದು ಹೇಳಿದರು.
ಕಾಲೇಜಿನ ಪ್ರಾಚಾರ್ಯ ಸತ್ಯಜಿತ್ ಉಪಾಧ್ಯಾಯ ವೇದಿಕೆಯಲ್ಲಿ ಉಪಸ್ಥಿತರಿದ್ದರು. ವಿದ್ಯಾರ್ಥಿನಿಯರಾದ ಶ್ರೀದೇವಿ ಸ್ವಾಗತಿಸಿ, ಶ್ರೀಜಲ್ ವಂದಿಸಿದರು. ಜಾನ್ವಿ ಶೆಟ್ಟಿ ಕಾರ್ಯಕ್ರಮ ನಿರೂಪಿಸಿದರು. ಪ್ರಯೋಗಾಲಯ ಸಹಾಯಕ ಮುರಳಿ ಮೋಹನ್ ಸಹಕರಿಸಿದರು.