ಪುಣಚ: ಸಾರ್ವಜನಿಕ ಶ್ರೀಕೃಷ್ಣ ಜನ್ಮಾಷ್ಟಮಿ ಉತ್ಸವ ಆಚರಣೆ ಸಮಿತಿ ಪುಣಚ ಇವರ ಆಶ್ರಯದಲ್ಲಿ ನಡೆದ 24ನೇ ವರ್ಷದ ಸಾರ್ವಜನಿಕ ಮೊಸರು ಕುಡಿಕೆ ಉತ್ಸವ ಆ.15ರಂದು ಪುಣಚ ಶ್ರೀ ಮಹಿಷಮರ್ದಿನಿ ದೇವಸ್ಥಾನದ ಎದುರುಗದ್ದೆಯಲ್ಲಿ ವಿವಿಧ ಕಾರ್ಯಕ್ರಮಗಳೊಂದಿಗೆ ವಿಜೃಂಭಣೆಯಿಂದ ನಡೆಯಿತು.

ಬೆಳಿಗ್ಗೆ ದೇವಿ ಸನ್ನಿಧಿಯಲ್ಲಿ ಕ್ಷೇತ್ರದ ಪ್ರಧಾನ ಅರ್ಚಕರಿಂದ ಪ್ರಾರ್ಥನೆ ನಡೆದು ತೆಂಗಿನಕಾಯಿ ಒಡೆಯವುದರೊಂದಿಗೆ ಚಾಲನೆ ನೀಡಿದರು. ಬಳಿಕ ಸಾಯಂಕಾಲದವರೆಗೆ ಮಕ್ಕಳಿಗೆ, ಮಹಿಳೆಯರಿಗೆ, ಪುರುಷರಿಗೆ ವಿವಿಧ ಸ್ಪರ್ಧೆಗಳು ಆರಂಭಗೊಂಡು, ಮಧ್ಯಾಹ್ನ ಮಹಾಪೂಜೆ ಪ್ರಸಾದ ವಿತರಣೆ ಅನ್ನಸಂತರ್ಪಣೆ ನಡೆಯಿತು.

ಸಾಯಂಕಾಲ ನಡೆದ ಬಹುಮಾನ ವಿತರಣಾ ಸಮಾರಂಭದಲ್ಲಿ ಮಹಿಷಮರ್ದಿನಿ ದೇವಸ್ಥಾನದ ಆಡಳಿತ ಸಮಿತಿ ಅಧ್ಯಕ್ಷ ಮಾರಪ್ಪ ಶೆಟ್ಟಿ ಬೈಲುಗುತ್ತು ಸಭಾಧ್ಯಕ್ಷತೆ ವಹಿಸಿ ಶುಭ ಮಾತುಗಳನ್ನಾಡಿದರು. ಮುಖ್ಯ ಅತಿಥಿಗಳಾಗಿದ್ದ ಶ್ರೀಕೃಷ್ಣ ಜನ್ಮಾಷ್ಟಮಿ ಉತ್ಸವ ಆಚರಣೆ ಸಮಿತಿ ಗೌರವಾಧ್ಯಕ್ಷ ಎಸ್ ಆರ್ ರಂಗಮೂರ್ತಿ, ದೇವಿನಗರ ಶ್ರೀದೇವಿ ಹಿರಿಯ ಪ್ರಾಥಮಿಕ ಶಾಲಾ ಮುಖ್ಯ ಶಿಕ್ಷಕ ಲೋಕೇಶ್ ನಾಯ್ಕ ಸಂಕೇಶ, ಒಡಿಯೂರು ಗ್ರಾಮ ವಿಕಾಸ ಯೋಜನಾ ಮೇಲ್ವಿಚಾರಕಿ ಲೀಲಾ ಕೆ, ಸಂದೋರ್ಬೊಚಿತವಾಗಿ ಮಾತನಾಡಿ ಕಾರ್ಯಕ್ರಮಕ್ಕೆ ಶುಭ ಹಾರೈಸಿದರು. ಪುಣಚ ಪ್ರಾ.ವ್ಯ.ಸೇವಾ ಸಹಕಾರಿ ಸಂಘದ ಲೆಕ್ಕಿಗ ಪದ್ಮನಾಭ ಗೌಡ ಓ, ನಿವೃತ್ತ ಮುಖ್ಯ ಶಿಕ್ಷಕ ಬಾಬು ನಾಯ್ಕ ಅಜ್ಜಿನಡ್ಕ, ಉತ್ಸವ ಆಚರಣೆ ಸಮಿತಿ ಅಧ್ಯಕ್ಷ ಪದ್ಮನಾಭ ನಾಯ್ಕ ಕೆಲ್ಲಾಳಿ ವೇದಿಕೆಯಲ್ಲಿ ಉಪಸ್ಥಿತರಿದ್ದರು. ವಿಶೇಷ ಆಕರ್ಷಣೆಯಾಗಿ ಮಹಿಷಮರ್ದಿನಿ ಸಿಂಗಾರಿ ಮೇಳದ ಚೆಂಡೆವಾದನದೊಂದಿಗೆ ಶ್ರೀಕೃಷ್ಣ ವೇಷ ಧರಿಸಿದ ಪುಟಾಣಿಗಳು ದೇವಸ್ಥಾನದ ಸುತ್ತ ಸಾಗಿ ಬಂದರು. ಶ್ರೀಕೃಷ್ಣ ವೇಷ ಧರಿಸಿದ ಎಲ್ಲಾ ಪುಟಾಣಿಗಳಿಗೆ ಹಾಗೂ ಸ್ಪರ್ಧೆಗಳಲ್ಲಿ ವಿಜೇತರಾದ ಸ್ಪರ್ಧಾಳುಗಳಿಗೆ ಅತಿಥಿಗಳು ಬಹುಮಾನ ವಿತರಿಸಿದರು. ಸಮಿತಿಯ ಸದಸ್ಯರು ಅತಿಥಿಗಳಿಗೆ ಹೂ ನೀಡಿ ಸ್ವಾಗತಿಸಿದರು. ಆಚರಣೆ ಸಮಿತಿ ಕಾರ್ಯದರ್ಶಿ ಅಶ್ವಿನಿ ಕೆಲ್ಲಾಳಿ ಸ್ಪರ್ಧಾ ವಿಜೇತರ ಪಟ್ಟಿ ವಾಚಿಸಿದರು. ಸ್ವಾತಿ ಕೆಲ್ಲಾಳಿ ಸ್ವಾಗತಿಸಿ, ಜಗನ್ನಾಥ ಎಸ್. ಧನ್ಯವಾದ ಸಮರ್ಪಿಸಿದರು. ಸಮಿತಿಯ ಸಂಚಾಲಕ ನಾರಾಯಣ ಬನ್ನಿಂತಾಯ ಕಾರ್ಯಕ್ರಮ ನಿರೂಪಿಸಿದರು.