ಆನೆಮಜಲು ನ್ಯಾಯಾಲಯ ಸಂಕೀರ್ಣ ವ್ಯಾಪ್ತಿಯ ರಸ್ತೆ ಸಮಸ್ಯೆ

0

ಸ್ಥಳೀಯರ ಮನವಿ : ಸ್ಥಳಕ್ಕೆ ಶಾಸಕರ ಭೇಟಿ-ಪರಿಶೀಲನೆ

ಪುತ್ತೂರು: ನಗರಸಭಾ ವ್ಯಾಪ್ತಿಯ ಆನೆಮಜಲು ಎಂಬಲ್ಲಿ ನಿರ್ಮಾಣಗೊಳ್ಳುತ್ತಿರುವ ನ್ಯಾಯಾಲಯ ಸಂಕೀರ್ಣದಿಂದ ಮುಂದಕ್ಕೆ ರಸ್ತೆ ಸಂಪರ್ಕ ಮತ್ತು ರಸ್ತೆಯ ನಕಾಶೆ ತಯಾರಿಸಿಕೊಡಲು ಆಗ್ರಹಿಸಿ ಲೋಕೇಶ್ ಅಲುಂಬುಡ ಹಾಗೂ ಅಲ್ಲಿನ ನಿವಾಸಿಗಳು ಮನವಿ ನೀಡಿದ ಹಿನ್ನಲೆಯಲ್ಲಿ ಶಾಸಕ ಅಶೋಕ್ ಕುಮಾರ್ ರೈ ಅವರು ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದರು.


ಬನ್ನೂರಿನಿಂದ ಆನೆಮಜಲು ಸಂಪರ್ಕ ರಸ್ತೆಯು ನ್ಯಾಯಾಲಯ ಸಂಕೀರ್ಣದ ಮೂಲಕ ಹೋಗುತ್ತಿದೆ. ಇದೀಗ ಸಂಪರ್ಕ ರಸ್ತೆ ನ್ಯಾಯಾಲಯಕ್ಕೆ ಒದಗಿಸಿದ ಭೂಮಿಯವರೆಗೆ ಸರಿಯಾಗಿ ಇದ್ದು ಮುಂದುವರೆದ ರಸ್ತೆ ಕಚ್ಚಾ ರಸ್ತೆಯಾಗಿದೆ. ಇಲ್ಲಿ ಮಣ್ಣಿನ ರಾಶಿ ಹಾಕಲಾಗಿದ್ದು ಸಮರ್ಪಕವಲ್ಲದ ಕಚ್ಚಾ ರಸ್ತೆಯನ್ನು ಬಳಸುತ್ತಾ ಬರಲಾಗಿದೆ. ಈ ರಸ್ತೆಯ ಎರಡೂ ಬದಿಗಳಲ್ಲಿ ಸುಮಾರು 50ಕ್ಕೂ ಹೆಚ್ಚು ಮನೆಗಳಿದ್ದು ದೈವಸ್ಥಾನ ಮತ್ತು ಕ್ರೈಸ್ತ ದಫನ ಭೂಮಿಗೂ ಸಂಪರ್ಕಿಸುವ ರಸ್ತೆಯಾಗಿದೆ. ಇಲ್ಲಿ ರಸ್ತೆಯ ಅಗತ್ಯತೆ ಇದೆ.ಇಲ್ಲಿ ಎರಡೂ ಬದಿಗಳಲ್ಲಿ ರಸ್ತೆ ಮೀಸಲಿಟ್ಟು ನಕಾಶೆ ತಯಾರಿಸಿಕೊಡಲು ಕ್ರಮಕೈಗೊಳ್ಳುವಂತೆ ಮನವಿ ಮಾಡಲಾಗಿತ್ತು.


ಮನವಿಗೆ ಸ್ಪಂದನೆ
ಮನವಿಗೆ ಸ್ಪಂದಿಸಿದ ಶಾಸಕರು ಲೋಕೋಪಯೋಗಿ ಇಲಾಖೆ, ಗುತ್ತಿಗೆದಾರರು, ಕಂದಾಯ ಇಲಾಖೆ ಹಾಗೂ ನಗರಸಭಾ ಅಽಕಾರಿಗಳೊಂದಿಗೆ ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದರು. ನ್ಯಾಯಾಲಯ ಸಂಕೀರ್ಣದಿಂದ ಮುಂದಕ್ಕೆ ಎರಡೂ ಬದಿಗಳಲ್ಲಿ 20 ಫೀಟ್‌ನಷ್ಟು ಅಗಲದಲ್ಲಿ ರಸ್ತೆ ನಿರ್ಮಾಣ ಹಾಗೂ ಚರಂಡಿ ವ್ಯವಸ್ಥೆ ಮಾಡಬೇಕೆಂದು ಅಧಿಕಾರಿಗಳಿಗೆ ಶಾಸಕರು ಸೂಚಿಸಿದರು. ಸಂಕೀರ್ಣದವರೆಗಿನ ಒಂದು ಬದಿಯಲ್ಲಿ ಸಾಗುವ ರಸ್ತೆಯನ್ನು ಕಾಂಕ್ರಿಟೀಕರಣಗೊಳಿಸುವಂತೆಯೂ ತಿಳಿಸಿದರು. ಸಂಕೀರ್ಣದ ಇನ್ನೊಂದು ಬದಿಯಲ್ಲಿ ದೈವಸ್ಥಾನ ನಿರ್ಮಿಸಲಾಗಿದ್ದು, ದೈವಸ್ಥಾನ ಇರುವ ಜಾಗದಲ್ಲಿ ರಸ್ತೆ ಸಂಪರ್ಕಕ್ಕೆ ಜಾಗದ ಕೊರತೆಯಿಂದ ರಸ್ತೆ ಬಂದ್ ಮಾಡಲಾಗಿರುವ ವಿಚಾರವನ್ನು ಶಾಸಕರ ಗಮನಕ್ಕೆ ತಂದ ಸ್ಥಳೀಯರು ಅಲ್ಲಿ ರಸ್ತೆ ಸಂಪರ್ಕದ ಬೇಡಿಕೆ ತಿಳಿಸಿದರು.

ದೈವಸ್ಥಾನಕ್ಕೆ ಸಂಬಂಧಪಟ್ಟ ಸಮಿತಿ ಪದಾಧಿಕಾರಿಗಳೊಂದಿಗೆ ಶಾಸಕರು ಫೋನ್ ಮುಖಾಂತರ ಮಾತನಾಡಿದರು. ದೈವಸ್ಥಾನದ ಆವರಣದಲ್ಲಿರುವ ಪಂಜುರ್ಲಿ ದೈವದ ಕಟ್ಟೆಯನ್ನು ಪ್ರಶ್ನಾ ಚಿಂತನೆ ಮೂಲಕ ಸ್ಥಳಾಂತರಿಸಿ ಅಲ್ಲಿ ರಸ್ತೆ ಸಂಪರ್ಕ ಮಾಡುವಂತೆ ತಿಳಿಸಿದರು. ನ್ಯಾಯಾಲಯ ಸಂಕೀರ್ಣದ ಕಾಮಗಾರಿ ಹಂತ ಹಂತವಾಗಿ ನಡೆಯುತ್ತಿದ್ದು, ಅಂತಿಮ ಹಂತದಲ್ಲಿದೆ. ಇಲ್ಲಿರುವ ಮಣ್ಣಿನ ರಾಶಿಯನ್ನು ತೆಗೆದು 20 ಫೀಟ್ ಅಗಲದ ರಸ್ತೆ, ಚರಂಡಿ ವ್ಯವಸ್ಥೆ ಮಾಡಲಾಗುತ್ತಿದೆ. ಈ ಯೋಜನೆಗೆ ಕೋರ್ಟ್ ಅನುದಾನ ಅಥವಾ ನಗರಸಭಾ ಅನುದಾನವನ್ನು ಬಳಸಿಕೊಳ್ಳುತ್ತೇವೆ. ಒಂದು ಬದಿ ರಸ್ತೆಗೆ ಕಾಂಕ್ರಿಟೀಕರಣ ಹಾಗೂ ಇನ್ನೊಂದು ಬದಿಯಲ್ಲಿ ಕಟ್ಟೆಯ ಬದಿಯಲ್ಲಿ ರಸ್ತೆ ನಿರ್ಮಾಣ ಮಾಡುತ್ತೇವೆ. ಮುಂದಿನ ಐದಾರು ತಿಂಗಳಿನಲ್ಲಿ ಎಲ್ಲಾ ಕೆಲಸ ಮಾಡುತ್ತೇವೆ ಎಂದರು.


ಲೋಕೋಪಯೋಗಿ ಇಲಾಖೆಯ ಸಹಾಯಕ ಕಾರ್ಯನಿರ್ವಾಹಕ ಅಭಿಯಂತರ ರಾಜೇಶ್ ರೈ, ಸಹಾಯಕ ಇಂಜಿನಿಯರ್ ಕನಿಷ್ಕಚಂದ್ರ, ನಗರಸಭಾ ಪೌರಾಯುಕ್ತೆ ವಿದ್ಯಾ ಎಸ್.ಕಾಳೆ ಹಾಗೂ ಅಧಿಕಾರಿಗಳು, ಆನೆಮಜಲು ನಿವಾಸಿಗಳು ಉಪಸ್ಥಿತರಿದ್ದರು. ಸ್ಥಳೀಯರು ಶಾಸಕರಿಗೆ ವಿವಿಧ ಬೇಡಿಕೆಗಳ ಮನವಿ ನೀಡಿದರು.

ತಿಂಗಳೊಳಗೆ ಕೋರ್ಟ್ ಉದ್ಘಾಟನೆ
ಮುಂದಿನ ಒಂದು ತಿಂಗಳಿನೊಳಗೆ ನ್ಯಾಯಾಲಯ ಸಂಕೀರ್ಣ ಉದ್ಘಾಟನೆ ಮಾಡಲು ಯೋಚನೆ ಮಾಡಿದ್ದೇವೆ. ಮಳೆ ಕಡಿಮೆಯಾದ ಕೂಡಲೇ ಮುಖ್ಯಮಂತ್ರಿ ಸಿದ್ಧರಾಮಯ್ಯ, ನ್ಯಾಯಾಂಗ ಇಲಾಖೆಯ ಅಧಿಕಾರಿಗಳು, ನ್ಯಾಯಾಧೀಶರುಗಳನ್ನು ಕರೆದು ಉದ್ಘಾಟನಾ ಕಾರ್ಯಕ್ರಮ ಮಾಡಲಿದ್ದೇವೆ ಎಂದು ಶಾಸಕರು ಮಾಹಿತಿ ನೀಡಿದರು.

LEAVE A REPLY

Please enter your comment!
Please enter your name here