ಪುತ್ತೂರು: ಟಿಕೆಟ್ ಪಡೆದು ಸೂಚಿಸಿದ ಸ್ಥಳದಲ್ಲಿ ಬಸ್ಸು ನಿಲ್ಲಿಸದೆ ಪ್ರಯಾಣಿಕರೋರ್ವರಿಗೆ ತೊಂದರೆ ನೀಡಿದ ಹಿನ್ನೆಲೆಯಲ್ಲಿ ಪ್ರಯಾಣಿಕರು ಪುತ್ತೂರು ಕೆಎಸ್‌ಆರ್‌ಟಿಸಿ ವಿಭಾಗ ನಿಯಂತ್ರಣಾಧಿಕಾರಿಯವರಿಗೆ ದೂರು ನೀಡಿದ ಘಟನೆ ಸೆ.2ರಂದು ನಡೆದಿದೆ. ಆರ್ಯಾಪು ಗ್ರಾಮದ ನಾಸಿರ್ ಎನ್.ಎ ಕಲ್ಲರ್ಪೆ ಎಂಬವರು ಕಾರ್ಯ ನಿಮಿತ್ತ ಸುಳ್ಯಕ್ಕೆ ತೆರಳಿದ್ದು, ಅವರು ಸುಳ್ಯದ ಪೈಚಾರು ಎಂಬಲ್ಲಿಂದ ಪುತ್ತೂರು ಕಡೆಗೆ ಬರುತ್ತಿದ್ದ ಕೆಎಸ್‌ಆರ್‌ಟಿಸಿ ಬಸ್ಸಿಗೆ( ಕೆಎ.21ಎಫ್0013) ಕೈ ಹಿಡಿದಿದ್ದರು.
ಈ ವೇಳೆ ಚಾಲಕ ಬಸ್ಸು ನಿಲ್ಲಿಸಿದ್ದರು. ಬಸ್ಸು ಹತ್ತಿದ ನಾಸಿರ್ ಎನ್.ಎರವರು ಕಾವು ಎಂಬಲ್ಲಿಗೆ ಟಿಕೆಟ್ ಕೊಡುವಂತೆ ಕೇಳಿಕೊಂಡಿದ್ದರು. ಅದರಂತೆ ಬಸ್ಸು ನಿರ್ವಾಹಕ ಸುಳ್ಯ-ಕಾವುಗೆ ರೂ.33 ಪಡೆದುಕೊಂಡು ಟಿಕೆಟ್ ನೀಡಿದ್ದರು. ಪ್ರಯಾಣಿಕ ಸೂಚಿಸಿದ ಸ್ಥಳ ಕಾವು ತಲುಪುತ್ತಿದ್ದಂತೆ ನಾಸಿರ್‌ರವರು ತಾನು ಇಳಿಯುತ್ತೇನೆ ಎಂದು ನಿರ್ವಾಹಕರಿಗೆ ತಿಳಿಸಿದ್ದರು. ಅದರಂತೆ ನಿರ್ವಾಹಕ ವಿಸಿಲ್ ಹೊಡೆದಿದ್ದರು. ಆದರೆ ಬಸ್ಸು ಚಾಲಕ ಬಸ್ಸನ್ನು ನಿಲ್ಲಿಸದೆ ಮುಂದೆ ಕೊಂಡೋಗಿದ್ದರು. ಈ ವೇಳೆ ನಾಸಿರ್‌ರವರು ನಿರ್ವಾಹಕ ಹಾಗೂ ಬಸ್ಸು ಚಾಲಕರಲ್ಲಿ ಬಸ್ಸು ನಿಲ್ಲಿಸುವಂತೆ ಕೇಳಿಕೊಂಡರು ನಿಲ್ಲಿಸದೆ ನಾಸಿರ್‌ರವನ್ನು ಪ್ರಶ್ನಿಸಿ ‘ನೀವು ಹೇಳಿದ ಕಡೆಗಳಲ್ಲಿ ನಿಲ್ಲಿಸಲು ಇದೇನು ನಿಮ್ಮ ಮನೆಯ ಬಸ್ಸು ಅಲ್ಲ’ ಎಂಬಿತ್ಯಾದಿ ಅವಾಚ್ಯ ಶಬ್ದಗಳಿಂದ ನಿಂದಿಸಿ ಬಸ್ಸುನಲ್ಲಿದ್ದ ಪ್ರಯಾಣಿಕರ ಎದುರಲ್ಲೆ ಅಮಾನಿಸಿದ್ದಾರೆ. ನಾನು ಎಷ್ಟೇ ಕೇಳಿಕೊಂಡರು ಬಸ್ಸು ನಿಲ್ಲಿಸದೆ ನನಗೆ ಅವಾಚ್ಯ ಶಬ್ದಗಳಿಂದ ನಿಂದಿಸಿ, ನನ್ನನ್ನು ನಾನು ಇಳಿಯುವ ಸ್ಥಳದಿಂದ ಸುಮಾರು 2 ಕಿ.ಮೀ ದೂರದ ನಿರ್ಜನ ಪ್ರದೇಶದಲ್ಲಿ ಇಳಿಸಿದ್ದಾರೆ. ಇದರಿಂದ ನನಗೆ ನನ್ನ ಮುಖ್ಯ ಕೆಲಸಕ್ಕೆ ಕೂಡ ತೊಂದರೆಯಾಗಿದೆ. ಟಿಕೆಟ್ ಕೊಟ್ಟ ಮೇಲೆ ಆ ಸ್ಥಳದಲ್ಲಿ ಬಸ್ಸು ನಿಲ್ಲಿಸುವುದು ಅವರ ಕರ್ತವ್ಯವಲ್ಲದೆ ಈ ರೀತಿಯಾಗಿ ಸಾರ್ವಜನಿಕರೊಂದಿಗೆ ವರ್ತಿಸುವುದು ಎಷ್ಟು ಸರಿ?. ಆದ್ದರಿಂದ ಬಸ್ಸು ನಿರ್ವಾಹಕ ಹಾಗೂ ಚಾಲಕರ ಮೇಲೆ ಸೂಕ್ತ ಕಾನೂನು ಕ್ರಮ ಕೈಗೊಳ್ಳುವಂತೆ ಅವರು ಪುತ್ತೂರು ಕೆಎಸ್‌ಆರ್‌ಟಿಸಿ ವಿಭಾಗ ನಿಯಂತ್ರಣಾಧಿಕಾರಿಯವರಿಗೆ ನೀಡಿದ ದೂರಿನಲ್ಲಿ ತಿಳಿಸಿದ್ದಾರೆ. ದೂರು ಸ್ವೀಕರಿಸಿದ ನಿಯಂತ್ರಣಾಧಿಕಾರಿಯವರು ಈ ಬಗ್ಗೆ ಪರಿಶೀಲನೆ ಮಾಡುತ್ತೇನೆ ಎಂದು ತಿಳಿಸಿದ್ದಾರೆ. ಇದಲ್ಲದೆ ನಾಸಿರ್ ಎನ್.ಎರವರು ಕೆಎಸ್‌ಆರ್‌ಟಿಸಿ ಡಿ.ಸಿ ಗೂ ಈ ಬಗ್ಗೆ ದೂರವಾಣಿ ಮುಖಾಂತರ ದೂರು ನೀಡಿದ್ದಾರೆ.