






ಪುತ್ತೂರು: ಹೊಸಮಠ ಪ್ರಾಥಮಿಕ ಕೃಷಿಪತ್ತಿನ ಸಹಕಾರಿ ಸಂಘ, ನಿಯಮಿತ ಇದರ ಸಹಯೋಗದೊಂದಿಗೆ ಹೊಸಮಠದ “ಸಮೃದ್ಧಿ ಸಹಕಾರ ಸೌಧ” ದಲ್ಲಿ ಮಾಸ್ ಲಿಮಿಟೆಡ್ನ ಖರೀದಿ ಕೇಂದ್ರ ಫೆ.16ರಂದು ಬೆಳಿಗ್ಗೆ 10.೦೦ ಕ್ಕೆ ಉದ್ಘಾಟನೆಗೊಳ್ಳಲಿದೆ. ಸುಳ್ಯ ಶಾಸಕಿ ಕು| ಭಾಗೀರಥಿ ಮುರುಳ್ಯ ರವರು ಅಡಿಕೆ ಖರೀದಿ ಕೇಂದ್ರವನ್ನು ಉದ್ಘಾಟಿಸುವರು. ಮಾಸ್ ಲಿಮಿಟೆಡ್ನ ಅಧ್ಯಕ್ಷರಾದ ಸಹಕಾರ ರತ್ನ ರೋ| ಕೆ. ಸೀತಾರಾಮ ರೈ ಸವಣೂರು ಇವರು ಸಭಾಧ್ಯಕ್ಷತೆ ವಹಿಸಲಿದ್ದಾರೆ. ಮುಖ್ಯ ಅತಿಥಿಗಳಾಗಿ ದ.ಕ ಜಿಲ್ಲಾ ಕೇಂದ್ರ ಸಹಕಾರಿ ಬ್ಯಾಂಕ್ ನಿರ್ದೇಶಕ ಶಶಿಕುಮಾರ ರೈ, ಬಾಲ್ಯೊಟ್ಟುಹೊಸಮಠ ಪ್ರಾ.ಕೃ.ಪ.ಸ.ಸಂಘದ ಅಧ್ಯಕ್ಷ ಕೃಷ್ಣಪ್ಪ ದೇವಾಡಿಗ ಸನಿಲ, ಸಹಕಾರ ಸಂಘಗಳ ಸಹಾಯಕ ನಿಬಂಧಕರಾದ ರಘು ಎಸ್. ಎಂ. ಸ ಮತ್ತು ಶ್ರೀಮತಿ ಸುಮನ, ಅಧ್ಯಕ್ಷರು, ಕುಟ್ರುಪಾಡಿ ಗ್ರಾಮ ಪಂಚಾಯತ್, ಇವರು ಕಾರ್ಯಕ್ರಮದಲ್ಲಿ ಪಾಲ್ಗೊಳ್ಳಲಿದ್ದಾರೆ ಎಂದು ಮಾಸ್ ಲಿಮಿಟೆಡ್ನ ಅಧ್ಯಕ್ಷರಾದ ಸಹಕಾರ ರತ್ನ ರೋ| ಕೆ. ಸೀತಾರಾಮ ರೈ ಸವಣೂರು ಮತ್ತು ಹೊಸಮಠ ಪ್ರಾಥಮಿಕ ಕೃಷಿ ಪತ್ತಿನ ಸಹಕಾರಿ ಸಂಘ, ನಿಯಮಿತದ ಅಧ್ಯಕ್ಷರಾದ ಶ್ರೀ ಕೃಷ್ಣಪ್ಪ ದೇವಾಡಿಗ ಸನಿಲ ತಿಳಿಸಿರುತ್ತಾರೆ.





ಮಾಸ್ ಲಿಮಿಟೆಡ್, 2001ರಲ್ಲಿ ಸ್ಥಾಪನೆ
ಅವಿಭಜಿತ ದಕ್ಷಿಣಕನ್ನಡ ಮತ್ತು ಉಡುಪಿ ಜಿಲ್ಲೆಗಳ ಪ್ರಧಾನ ಬೆಳೆ ಅಡಿಕೆಯಾಗಿದ್ದು, ಅಡಿಕೆ ಕೃಷಿಕರ ಹಿತರಕ್ಷಣೆಗಾಗಿ, ಅಡಿಕೆ ದರ ಕೆ.ಜಿಗೆ ರೂ. ೩೦ ರವರೆಗೆ ಕುಸಿದಿದ್ದ ಸಂದರ್ಭದಲ್ಲಿ ಉಭಯ ಜಿಲ್ಲೆಗಳ ಸಹಕಾರಿಗಳು ಮತ್ತು ಅಡಿಕೆ ಬೆಳೆಗಾರರು ಸೇರಿ, “ಸಹಕಾರ ರತ್ನ” ದಿವಂಗತ ಶ್ರೀ ವಾರಣಾಸಿ ಸುಬ್ರಾಯ ಭಟ್ಟರ ಹಾಗೂ “ಸಹಕಾರ ರತ್ನ” ಡಾ| ಎಂ. ಎನ್. ರಾಜೇಂದ್ರ ಕುಮಾರ್ ಅಧ್ಯಕ್ಷರು ದ.ಕ. ಜಿಲ್ಲಾ ಕೇಂದ್ರ ಸಹಕಾರಿ ಬ್ಯಾಂಕ್ ನಿಯಮಿತ, ಇವರ ಮಾರ್ಗದರ್ಶನದೊಂದಿಗೆ “ಮಂಗಳೂರು ಕೃಷಿಕರ ಸಹಕಾರಿ ಸಂಘ, ನಿಯಮಿತ – ಮಾಸ್ ಲಿಮಿಟೆಡ್, 2001ರಲ್ಲಿ ಸ್ಥಾಪನೆಯಾಯಿತು. ಮಾರುಕಟ್ಟೆಯಲ್ಲಿ ಅಡಿಕೆ ಧಾರಣೆಯ ಸ್ಥಿರತೆಗಾಗಿ, ಕೃಷಿಕರ ಹಿತರಕ್ಷಣೆಗಾಗಿ ಇಂದಿನವರೆಗೂ ತನ್ನ ಸಾಧನೆಗಳನ್ನು ಮಾಡುತ್ತಾ ಬಂದಿದೆ.
ಸಂಘವು ಪ್ರಕೃತ ರೂ.2.16 ಕೋಟಿ ಪಾಲುಬಂಡವಾಳವನ್ನೂ, 5815 ಸದಸ್ಯರನ್ನೂ ಹೊಂದಿದ್ದು, ಪಡೀಲಿನಲ್ಲಿ ಬಾಡಿಗೆ ಕಟ್ಟಡದಲ್ಲಿ ಪ್ರಾರಂಭವಾದ ಸಂಸ್ಥೆಯು, ಬೈಕಂಪಾಡಿಯಲ್ಲಿ ಸ್ವಂತ ಕೇಂದ್ರ ಕಛೇರಿಯನ್ನೂ ಸುಸಜ್ಜಿತವಾದ ಅಡಿಕೆ ಸಂಸ್ಕರಣೆಯ ಗೋದಾಮನ್ನೂ ಹೊಂದಿದೆ. ಸ್ಥಾಪಕಾಧ್ಯಕ್ಷರಾಗಿ ಟಿ.ಜಿ ರಾಜಾರಾಮ ಭಟ್, ತದನಂತರ ಶ್ರೀಧರ ಜಿ ಭಿಡೆ, ಶ್ರೀ ಭಾಸ್ಕರ ಎಸ್ ಕೋಟ್ಯಾನ್ ರವರು ಅಧ್ಯಕ್ಷರಾಗಿ ಮುನ್ನಡೆಸಿರುತ್ತಾರೆ. ತದನಂತರ 13-03-2024 ರಿಂದ “ಸಹಕಾರ ರತ್ನ” ರೋ| ಕೆ. ಸೀತಾರಾಮ ರೈ ಸವಣೂರು, ಇವರು ಕೃಷಿಕ ಸದಸ್ಯರ ಹಿತರಕ್ಷಣೆಗೆ ಪಣ ತೊಟ್ಟು, ಸಂಸ್ಥೆಯ ಪ್ರಗತಿಗೂ ದೃಢ ಸಂಕಲ್ಪ ಮಾಡಿ, ಅಧ್ಯಕ್ಷರಾಗಿ ಸಂಸ್ಥೆಯ ಜವಾಬ್ದಾರಿಯನ್ನು ವಹಿಸಿಕೊಂಡರು.

ಕೆ. ಸೀತಾರಾಮ ರೈ ಯವರು ಅಧ್ಯಕ್ಷತೆ ವಹಿಸಿದ ನಂತರದ ಎರಡು ವರ್ಷಗಳ ಅವಧಿಯಲ್ಲೇ, ವ್ಯವಹಾರವನ್ನು ಹೆಚ್ಚಿಸುವುದರ ಮೂಲಕ ಮೊದಲೇ ಸಂಕಲ್ಪಸಿದಂತೆ ಸುಳ್ಯದಲ್ಲಿ ಅಡಿಕೆ ಸಂಸ್ಕರಣಾ ಕೇಂದ್ರವನ್ನು ಪ್ರಾರಂಭಿಸಿದರು. ಅಲ್ಲದೇ ಕಾವು, ನಿಂತಿಕಲ್ ಮತ್ತು ಉಬರಡ್ಕ ಮಿತ್ತೂರು ಈ ಸ್ಥಳಗಳಲ್ಲಿ ಹೊಸತಾಗಿ ಅಡಿಕೆ ಖರೀದಿ ಶಾಖೆಗಳನ್ನೂ ಪ್ರಾರಂಭಿಸಿ ಕೃಷಿಕರಿಗೆ ಸ್ಥಳೀಯವಾಗಿ ಮಾರುಕಟ್ಟೆಯನ್ನು ಒದಗಿಸುತ್ತಾ ವ್ಯವಹಾರ ವೃದ್ಧಿಗೆ ತನ್ನ ಸಂಕಲ್ಪದಂತೆ ಕಾರ್ಯಪ್ರವೃತ್ತರಾದರು. ಈಗ ಒಟ್ಟು 12 ಶಾಖೆಗಳಿವೆ.
ಅಡಿಕೆ ಖರೀದಿಗೆ ಅಧಿಕಾರಿಗಳನ್ನು ಮಾಡುವ ಬಗ್ಗೆ ಕೃಷಿಕ ಕುಟುಂಬ ಹಿನ್ನಲೆಯ ಪದವೀಧರ ಅಭ್ಯರ್ಥಿಗಳನ್ನು ಟ್ರೈನೀಗಳಾಗಿ ಸೇರಿಸಿಕೊಂಡು ಈಗಾಗಲೇ ಅವರಿಗೆ ತರಬೇತಿ ನೀಡಿ ಖರೀದಿ ಅಧಿಕಾರಿಗಳನ್ನಾಗಿಸಿದೆ. ಮುಂದಿನ ದಿನಗಳಲ್ಲಿ ಸಂಘದ ವಿಸ್ತರಣೆಗೋಸ್ಕರ, ಹೆಚ್ಚಿನ ಶಾಖೆಗಳನ್ನು ಪ್ರಾರಂಭಿಸುವ ಬಗ್ಗೆ ಇನ್ನೂ ಕೆಲವು ಪದವೀಧರ ಅಭ್ಯರ್ಥಿಗಳನ್ನು ಸ್ಟೈಪೆಂಡ್ ಸಹಿತ ಟ್ರೈನೀಗಳಾಗಿ ಸೇರಿಸಿ ಅಡಿಕೆಯಲ್ಲಿ ತರಬೇತಿ ನೀಡಿ ಅಧಿಕಾರಿಗಳನ್ನಾಗಿಸುವ ಯೋಜನೆ ಇದ್ದು ಪ್ರಕ್ರಿಯೆಗಳು ಪ್ರಾರಂಭಗೊಂಡಿವೆ.
ಸಂಸ್ಥೆಯು ಕೃಷಿಕರ ಅಡಿಕೆಯನ್ನು ಉತ್ತಮ ಬೆಲೆಗೆ ಖರೀದಿಸಿ, ಅಡಿಕೆಯನ್ನು ಸಂಸ್ಕರಿಸಿ, ಉತ್ತರಭಾರತಕ್ಕೆ ಮಾರಾಟ ಮಾಡುವ ಮೂಲಕ ಅಡಿಕೆ ಬೆಲೆಯಲ್ಲಿ ಸ್ಥಿರತೆ ಹಾಗೂ ವರ್ಷವಿಡೀ ಕೃಷಿಕರ ಅಡಿಕೆ ಖರೀದಿಗೆ ಸ್ಥಳೀಯವಾಗಿ ಮಾರುಕಟ್ಟೆಯನ್ನು ಒದಗಿಸುತ್ತಾ ಇದೆ. ಸಂಸ್ಥೆಯು ಮಾರಾಟ ಮಾಡುವ ಅಡಿಕೆಯ ಗುಣಮಟ್ಟಕ್ಕೋಸ್ಕರ ಪ್ರತ್ಯೇಕ ಮಾರ್ಕ್ (MARK) ಹೊಂದಿದ್ದು, ತನ್ನ ಅಡಿಕೆಯ ಗುಣಮಟ್ಟದಿಂದ ಜನಪ್ರಿಯತೆ ಗಳಿಸಿಕೊಂಡಿದೆ. ಗ್ರಾಹಕರ ಅನುಕೂಲತೆಗೋಸ್ಕರ ಅಡಿಕೆಯನ್ನು 1 ಕೆ.ಜಿ ಪ್ಯಾಕೆಟ್ ಮೂಲಕವೂ ಮಾರಾಟ ಮಾಡುತ್ತಿದ್ದು, ಈ ಪ್ಯಾಕೆಟ್ ಗಳಿಗೆ ಹೆಚ್ಚಿನ ಬೇಡಿಕೆ ಇದೆ ಎಂದು ಮಾಸ್ ಸಂಸ್ಥೆಯ ಅಧ್ಯಕ್ಷ ಸಹಕಾರರತ್ನ ಸವಣೂರು ಕೆ.ಸೀತಾರಾಮ ರೈಯವರು ತಿಳಿಸಿರುತ್ತಾರೆ.









