






ಪುತ್ತೂರು: ಹಿರಿಯ ನಾಗರಿಕರ ಮತ್ತು ವಿಶೇಷ ಚೇತನರ ವಸತಿ ನಿಲಯ ಶಿವಸದನ ಮುರದಲ್ಲಿ ಫೆ.18ರಂದು ಇಲ್ಲಿನ ನಿವಾಸಿ ಸರಸ್ವತಿ ಅಮ್ಮ ಇವರ 76ನೇ ಯ ಹುಟ್ಟು ಹಬ್ಬದ ಪ್ರಯುಕ್ತ, ಅಖಿಲ ಕರ್ನಾಟಕ ಹಿರಿಯರ ಸೇವಾ ಪ್ರತಿಷ್ಠಾನ ಪುತ್ತೂರು ಘಟಕದ ವತಿಯಿಂದ ಭಜನೆ, ಹಾಡು, ಹಾಸ್ಯ, ರಸಪ್ರಶ್ನೆ ಇತ್ಯಾದಿ ವೈವಿಧ್ಯಮಯವಾದ ಕಾರ್ಯಕ್ರಮವನ್ನು ಹಮ್ಮಿಕೊಳ್ಳಲಾಯಿತು.



ವೈಷ್ಣವಿ ವೈದೇಹಿ ಭಜನಾ ತಂಡದಿಂದ ನಡೆದ ಭಜನಾ ಕಾರ್ಯಕ್ರಮವು ನಿವಾಸಿಗಳಿಗೆ ಭಕುತಿಯ ಮಾರ್ಗವನ್ನು ತೆರೆದಿಟ್ಟಿತು. ಸದಸ್ಯರಾದ ಪ್ರೊ. ದತ್ತಾತ್ರೇಯ ರಾವ್, ಸುಬ್ರಹ್ಮಣ್ಯ ಶರ್ಮ ಹಾಗೂ ಜಿಲ್ಲಾ ಉಪಾಧ್ಯಕ್ಷರಾದ ಪ್ರೊ. ವೇದವ್ಯಾಸ ರಾಮಕುಂಜ ಇವರು ಸುಶ್ರಾವ್ಯವಾದ ಗಾನಸುಧೆಯನ್ನು ಹರಿಸಿ ಶ್ರೋತೃಗಳ ಮನಗೆದ್ದರು. ಮಹಿಳಾ ಘಟಕದ ಜಿಲ್ಲಾ ಕಾರ್ಯದರ್ಶಿ ಶಂಕರಿ ಶರ್ಮ ಕಾರ್ಯಕ್ರಮ ನಿರ್ವಹಿಸಿ, ರಸಪ್ರಶ್ನೆ ನಡೆಸಿಕೊಟ್ಟರು. ನಿಲಯದ ವಿಶೇಷ ಚೇತನ ಮಕ್ಕಳ ನೃತ್ಯ ರೂಪಕದ ಪ್ರದರ್ಶನವು ಎಲ್ಲರ ಮೆಚ್ಚುಗೆಗೆ ಪಾತ್ರವಾಯಿತು.



ಪ್ರೊ.ವೇದವ್ಯಾಸ ರಾಮಕುಂಜ ವಂದಿಸಿದರು. ಶಿವಸದನ ಚಾರಿಟೇಬಲ್ ಟ್ರಸ್ಟ್ ಅಧ್ಯಕ್ಷೆ ಸುಮಂಗಲಾ ಪ್ರಭಾಕರ್ ಸ್ವಾಗತಿಸಿದರು.
ಹಿರಿಯರ ಸೇವಾ ಪ್ರತಿಷ್ಠಾನದ ಜಿಲ್ಲಾ ಉಪಾಧ್ಯಕ್ಷರಾದ ಲೋಕೇಶ್ ಹೆಗಡೆ, ಈಶ್ವರ ಭಟ್ ಗುಂಡ್ಯಡ್ಕ, ಜಿಲ್ಲಾ ಸಂಚಾಲಕರಾದ ಭಾಸ್ಕರ ಬಾರ್ಯ, ಮಹಿಳಾ ಘಟಕದ ಜಿಲ್ಲಾಧ್ಯಕ್ಷೆ ವತ್ಸಲಾ ರಾಜ್ಞಿ, ಜಿಲ್ಲಾ ಸಂಘಟಕರಾದ ಮಹಾಲಿಂಗ ಭಟ್, ಪುತ್ತೂರು ಘಟಕದ ಅಧ್ಯಕ್ಷರಾದ ಚಂದ್ರಶೇಖರ ಆಳ್ವ, ಸಂಚಾಲಕರಾದ ಭವಾನಿ ಶಂಕರ ಶೆಟ್ಟಿ, ಸದಸ್ಯೆ ಪ್ರೇಮಲತಾ ರಾವ್ ಹಾಗೂ ಶಿವಸದನ ಚಾರಿಟೇಬಲ್ ಟ್ರಸ್ಟ್ ಇದರ ಕಾರ್ಯದರ್ಶಿಗಳಾದ ಕರುಣ್ ಬೆಳ್ಳೆ, ಖಜಾಂಚಿ ದಿನಕರ ರಾವ್, ಟ್ರಸ್ಟಿಗಳಾದ ಸಂತೋಷ್ ರಾವ್ ಉಜ್ಜೋಡಿ, ವನಿತಾ ರಾವ್, ಸದಸ್ಯರಾದ ಕೇದಾರನಾಥ್, ಗೀತಾ ಮುರಳಿ ಮುಂತಾದವರು ಉಪಸ್ಥಿತರಿದ್ದರು. ಸಹಭೋಜನದೊಂದಿಗೆ ಕಾರ್ಯಕ್ರಮವು ಸಂಪನ್ನಗೊಂಡಿತು.









