







ಪುತ್ತೂರು: ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ತಮ್ಮ 17ನೇ ಬಜೆಟ್ ಅನ್ನು ಇಂದು (ಮಾ.6) ಮಂಡಿಸಿದ್ದು, 2026-27ನೇ ಸಾಲಿನ ಬಜೆಟ್ ಮಂಡನೆ ವಿವರ ಈ ಕೆಳಗಿನಂತಿವೆ.


ಸಮಗ್ರ ಕರಾವಳಿ ಪ್ರವಾಸೋದ್ಯಮ ಅಭಿವೃದ್ಧಿ ಯೋಜನೆ
ಸಮಗ್ರ ಕರಾವಳಿ ಪ್ರವಾಸೋದ್ಯಮ ಅಭಿವೃದ್ಧಿ ಯೋಜನೆ ಜಾರಿಗೆ ತರಲಾಗುವುದು, ವಾಯುಯಾನ ಹಾಗೂ ಜಲಸಾಹಸ ಯೋಜನೆ ಅನುಷ್ಠಾನಗೊಳಿಸಲಾಗುವುದು. ಸೀ ಪ್ಲೇನ್, ಹೆಲಿಟ್ಯಾಕ್ಸಿ, ಜಾಯ್ ರೈಡ್, ರಿವರ್ ಕ್ರೂಸ್ಗೆ ಪ್ರೋತ್ಸಾಹ ನೀಡಲಾಗುತ್ತದೆ. ಟ್ಯಾಕ್ಸಿ ಹಾಗೂ ಆಟೋ ಚಾಲಕರಿಗೆ, ಪೊಲೀಸರಿಗೆ ಕೌಶಲ್ಯ ತರಬೇತಿ ನೀಡಲಾಗುವುದು. ಗದಗ-ಕಪ್ಪತ್ತಗುಂಡ-ಲಕ್ಕುಂಡಿ ಪ್ರವಾಸೋದ್ಯಮ ಸರ್ಕ್ಯೂಟ್ ಅಭಿವೃದ್ಧಿಗೊಳಿಸಲಾಗುವುದು, ಮುಳ್ಳಯ್ಯನಗಿರಿ-ಸೀತಾಳಯ್ಯನಗಿರಿ ಕೈಮರದವರೆಗೆ ರೋಪ್ ವೇ ನಿರ್ಮಿಸಲಾಗುವುದು ಎಂದು ಸಿಎಂ ಸಿದ್ದರಾಮಯ್ಯ ಘೋಷಿಸಿದ್ದಾರೆ.



ಹೊಸ ಕೈಗಾರಿಕಾ ನೀತಿ 2025-30ರಡಿ ಹೆಚ್ಚುವರಿ ಪ್ರೋತ್ಸಾಹ ಧನ
ಹೊಸ ಕೈಗಾರಿಕಾ ನೀತಿ 2025-30ರಡಿ ಹೆಚ್ಚುವರಿ ಪ್ರೋತ್ಸಾಹ ಧನ ನೀಡಲಾಗುತ್ತದೆ. ಅತಿ ಹಿಂದುಳಿದ ಪ್ರದೇಶಗಳಿಗೆ ಶೇ.5ರಷ್ಟು ಹೆಚ್ಚುವರಿ ಪ್ರೋತ್ಸಾಹ ಧನ ನೀಡಲಾಗುವುದು, ಹಿಂದುಳಿದ ಪ್ರದೇಶಗಳಿಗೆ ಶೇ.3ರಷ್ಟು ಹೆಚ್ಚುವರಿ ಪ್ರೋತ್ಸಾಹ ಧನ ನೀಡಲಾಗುವುದು, ಬೆಂಗಳೂರಿನಿಂದಾಚೆಯೂ ಕೈಗಾರಿಕಾಭಿವೃದ್ಧಿಯನ್ನ ಉತ್ತೇಜಿಸುವ ಗುರಿ ಹೊಂದಲಾಗಿದೆ.
ಎಲ್ಲಾ ಜಿಲ್ಲೆಗಳಲ್ಲಿ ಅಕ್ಕ ಪಡೆ ಯೋಜನೆ ಜಾರಿಗೆ ನಿರ್ಧಾರ
ಎಲ್ಲಾ ಜಿಲ್ಲೆಗಳಲ್ಲಿ ‘ಅಕ್ಕ ಪಡೆ’ ಯೋಜನೆ ಜಾರಿಗೆ ನಿರ್ಧಾರ ಮಾಡಲಾಗಿದೆ, ಅಂಗನವಾಡಿ ಕಾರ್ಯಕರ್ತೆಯರಿಗೆ ಹೆಚ್ಚುವರಿ ಸಮವಸ್ತ್ರ ವಿತರಿಸಲಾಗುವುದು. ಧನಶ್ರೀ ಯೋಜನೆ ಫಲಾನುಭವಿಗಳಿಗೆ ಪ್ರೋತ್ಸಾಹ ಧನ ಹೆಚ್ಚಳ ಮಾಡಲಾಗುವುದು. 30 ಸಾವಿರ ರೂಪಾಯಿಯಿಂದ 45 ಸಾವಿರ ರೂ.ಗೆ ಹೆಚ್ಚಳ ಮಾಡಲಾಗುವುದು.18 ವರ್ಷದ ಮಕ್ಕಳಿಗಾಗಿ ಮಾದಕ ವ್ಯಸನಿ ಪುನರ್ವಸತಿ ಕೇಂದ್ರ ನಿರ್ಮಿಸಲಾಗುವುದು. ಅಂಗನವಾಡಿ ಕಟ್ಟಡ ನಿರ್ಮಾಣಕ್ಕೆ 200 ಕೋಟಿ ರೂ. ಅನುದಾನ ನೀಡಲಾಗುವುದು ಎಂದು ಸಿದ್ದರಾಮಯ್ಯ ಘೋಷಿಸಿದ್ದಾರೆ.
ಮಹಿಳಾ ಅತಿಥಿ ಉಪನ್ಯಾಸಕರಿಗೆ 90 ದಿನಗಳ ಮಾತೃತ್ವ ರಜೆ
ಸರ್ಕಾರಿ ಪ್ರಥಮ ದರ್ಜೆ ಕಾಲೇಜು, ಪಾಲಿಟೆಕ್ನಿಕ್ ಹಾಗೂ ಇಂಜಿನಿಯರಿಂಗ್ ಕಾಲೇಜುಗಳಲ್ಲಿ ಕಾರ್ಯನಿರ್ವಹಿಸುತ್ತಿರುವ ಮಹಿಳಾ ಅತಿಥಿ ಉಪನ್ಯಾಸಕರುಗಳಿಗೆ 90 ದಿನಗಳ ಮಾತೃತ್ವ ರಜೆಯ ಸೌಲಭ್ಯವನ್ನು ಮುಂದಿನ ಶೈಕ್ಷಣಿಕ ಸಾಲಿನಿಂದ ಜಾರಿಗೊಳಿಸಲಾಗುವುದು ಎಂದು ಸಿದ್ದರಾಮಯ್ಯ ಘೋಷಿಸಿದ್ದಾರೆ.
ಇನ್ಮುಂದೆ ರಾಜ್ಯದಲ್ಲಿ ಹೊಸ ಅಬಕಾರಿ ನೀತಿ ಜಾರಿ: ಸಿದ್ದರಾಮಯ್ಯ
ಇನ್ಮುಂದೆ ರಾಜ್ಯದಲ್ಲಿ ಹೊಸ ಅಬಕಾರಿ ನೀತಿ ಜಾರಿಯಾಗಲಿದೆ, ಬೆಲೆ ನಿಗದಿ ಮಾಡುವ ಜವಾಬ್ದಾರಿ ಉತ್ಪಾದಕರ ಹೆಗಲಿಗೆ ಬಿದ್ದಿದೆ, ಮದ್ಯದ ಉತ್ಪಾದಕರಿಗೆ ಹೊಸ ಜವಾಬ್ದಾರಿಯನ್ನು ಸರ್ಕಾರ ಕೊಟ್ಟಿದೆ. ಸರ್ಕಾರದಿಂದ ಮದ್ಯದ ಬೆಲೆ ನಿರ್ಧಾರ ಆಗುವುದಿಲ್ಲ, ಇನ್ಮುಂದೆ ಮದ್ಯದ ಬೆಲೆ ಏರಿಕೆ ಉತ್ಪಾದಕರೇ ಮಾಡ್ಬೇಕು ಎಂದು ಸಿದ್ದರಾಮಯ್ಯ ಹೇಳಿದ್ದಾರೆ.
ಮನೆ ಇಲ್ಲದವರಿಗೆ ಮನೆ, ಕೆಲಸ ಇಲ್ಲದವರಿಗೆ ಕೆಲಸ
ವಸತಿರಹಿತರಿಗೆ ಮನೆಗಳು, ನಿರುದ್ಯೋಗಿ ಯುವಜನರಿಗೆ ಸ್ವಯಂ ಉದ್ಯೋಗಗಳನ್ನು ಕಲ್ಪಿಸಿಕೊಡಲು ಹೆಚ್ಚಿನ ಪ್ರಾಮುಖ್ಯತೆ ನೀಡುತ್ತಿದ್ದೇವೆ. ಹವಾಮಾನ ಬದಲಾವಣೆಯಿಂದ ಉಂಟಾಗುತ್ತಿರುವ ತಲ್ಲಣಗಳನ್ನು ನಿಭಾಯಿಸಲು ಸೂಕ್ತ ಕಾರ್ಯತಂತ್ರಗಳನ್ನು ರೂಪಿಸುತ್ತಿದ್ದೇವೆ ಎಂದು ಸಿದ್ದರಾಮಯ್ಯ ಹೇಳಿದ್ದಾರೆ.
ಮೀನುಗಾರಿಕೆಗಾಗಿ ಪ್ರೋತ್ಸಾಹ ಧನ 20 ಸಾವಿರ ರೂ.ಗೆ ಏರಿಕೆ
ಮೀನುಗಾರಿಕೆಗಾಗಿ ಪ್ರೋತ್ಸಾಹ ಧನ 20 ಸಾವಿರ ರೂ.ಗೆ ಏರಿಕೆ ಮಾಡಲಾಗಿದೆ. ಮಂಗಳೂರು ಮೀನುಗಾರಿಕಾ ವಿವಿಯಲ್ಲಿ ಸೆಂಟರ್ ಆಫ್ ಎಕ್ಸ್ಲೆನ್ಸ್,ಮೀನು ಮಾರಾಟ ಮಾಡಲು ಮೀನು ಮಾರುಕಟ್ಟೆ ಸ್ಥಾಪನೆ ಮಾಡಲಾಗುವುದು.ಉತ್ತರ ಕನ್ನಡ, ದಕ್ಷಿಣ ಕನ್ನಡ, ಉಡುಪಿ, ಬಾಗಲಕೋಟೆಯಲ್ಲಿ ಸ್ಥಾಪನೆ ಮಾಡಲಾಗುವುದು. 38 ಲಕ್ಷ ರೈತರಿಗೆ ಶೂನ್ಯ ಬಡ್ಡಿ ದರದಲ್ಲಿ 30 ಸಾವಿರ ಕೋಟಿ ಕೃಷಿ ಸಾಲ ನೀಡಲಾಗುವುದು ಎಂದು ಸಿದ್ದರಾಮಯ್ಯ ಘೋಷಿಸಿದ್ದಾರೆ.
ಮಲೆನಾಡು, ಕರಾವಳಿಯಲ್ಲಿ ಕಾಲು ಸಂಕ ನಿರ್ಮಾಣ
ರಾಜ್ಯದ ಮಲೆನಾಡು ಹಾಗೂ ಕರಾವಳಿ ಪ್ರದೇಶಗಳಲ್ಲಿ ಸಂಪರ್ಕ ರಹಿತ ಹಾಗೂ ಜನವಸತಿ ಪ್ರದೇಶಗಳಿಗೆ ಸಾರ್ವಜನಿಕರ ಹಾಗೂ ವಿದ್ಯಾರ್ಥಿಗಳ ಸುರಕ್ಷತೆಗಾಗಿ 300 ಕಾಲುಸಂಕಗಳನ್ನು ನಿರ್ಮಾಣ ಮಾಡಲಾಗುವುದು ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಬಜೆಟ್ನಲ್ಲಿ ಘೋಷಿಸಿದ್ದಾರೆ.
16 ವರ್ಷದೊಳಗಿನ ಮಕ್ಕಳಿಗೆ ಸಾಮಾಜಿಕ ಜಾಲತಾಣ ಬಳಕೆ ನಿಷೇಧ
ಹದಿನಾರು ವರ್ಷದೊಳಗಿನ ಮಕ್ಕಳಿಗೆ ಸಾಮಾಜಿಕ ಜಾಲತಾಣ ಬಳಕೆ ನಿಷೇಧ, ಹೆಚ್ಚುತ್ತಿರುವ ಮೊಬೈಲ್ ಬಳಕೆ ಮಕ್ಕಳ ಮೇಲೆ ಪರಿಣಾಮ ಬೀರುತ್ತಿರುವ ಹಿನ್ನಲೆಯಲ್ಲಿ ಹಾಗೂ ಅಡ್ಡಪರಿಣಾಮ ತಡೆಗಟ್ಟುವ ಹಿನ್ನೆಲೆಯಲ್ಲಿ 16 ವಯಸ್ಸಿನ ಮಕ್ಕಳಿಗೆ ಸಾಮಾಜಿಕ ಜಾಲತಾಣದ ಬಳಕೆಯನ್ನು ನಿಷೇಧ ಮಾಡಲಾಗಿದೆ. ವಿದ್ಯಾರ್ಥಿಗಳಲ್ಲಿ ಒತ್ತಡ ನಿವಾರಿಸಿ ಮಾನಸಿಕ ಆರೋಗ್ಯವನ್ನು ಸುಧಾರಿಸಲು 204 ಬಿ ಆರ್ ಸಿ ಕೇಂದ್ರಗಳಲ್ಲಿ ಓರ್ವ ಅರ್ಹ ಮಾನಸಿಕ ಆರೋಗ್ಯ ಸಲಹೆಗಾರ ನೇಮಕ ಮಾಡಲಾಗುವುದು ಎಂದು ಬಜೆಟ್ನಲ್ಲಿ ಸಿಎಂ ಘೋಷಿಸಿದ್ದಾರೆ.
ಅಡಿಕೆ ಬೆಳೆಗಾರರು, ತೆಂಗು ಬೆಳೆಗಾರರ ಸಮಸ್ಯೆ ನಿವಾರಣೆಗೆ 10 ಕೋಟಿ ರೂ. ಮೀಸಲು
ಅಡಿಗೆ ಬೆಳೆಗಾರರು ಅನುಭವಿಸುತ್ತಿರುವ ಎಲೆಚುಕ್ಕಿ, ಹಳದಿ ಚುಕ್ಕಿ ರೋಗ ನಿವಾರಣೆ ಹಾಗೂ ತೆಂಗು ಬೆಳೆಗಾರರ ಸಮಸ್ಯೆಯನ್ನು ನಿವಾರಿಸಲು 10 ಕೋಟಿ ರೂ. ಮೀಸಲಿಡಲಾಗಿದೆ ಎಂದು ಸಿದ್ದರಾಮಯ್ಯ ಹೇಳಿದ್ದಾರೆ.
ಗೃಹಲಕ್ಷ್ಮೀ ಯೋಜನೆಗೆ 28,608 ಕೋಟಿ ರೂ. ಹಣ ಮೀಸಲು
ಈ ವರ್ಷ ಗೃಹಲಕ್ಷ್ಮೀ ಯೋಜನೆಗೆ 28,608 ಕೋಟಿ ರೂ. ಹಣ ಮೀಸಲಿಡಲಾಗುವುದು ಎಂದು ಸಿದ್ದರಾಮಯ್ಯ ಬಜೆಟ್ನಲ್ಲಿ ಘೋಷಿಸಿದ್ದಾರೆ.
ಸಾರಿಗೆ ಇಲಾಖೆಗೆ 15,500 ಕೋಟಿ ರೂ. ತೆರಿಗೆ ಸಂಗ್ರಹಣೆ ಗುರಿ
ಸಾರಿಗೆ ಇಲಾಖೆಗೆ 15,500 ಕೋಟಿ ರೂ. ತೆರಿಗೆ ಸಂಗ್ರಹಣೆ ಗುರಿ ನೀಡಲಾಗಿದೆ. ನೊಂದಣಿ ಹಾಗೂ ಮುದ್ರಾಂಕ ಇಲಾಖೆಗೆ 29 ಸಾವಿರ ಕೋಟಿ ರಾಜಸ್ವ ಗುರಿ, ಅಬಕಾರಿ ಇಲಾಖೆ ಇಲಾಖೆಯಲ್ಲಿ 45,000 ಕೋಟಿ ರೂ. ಆದಾಯ ಗುರಿ ನೀಡಲಾಗಿದೆ.
56,432 ಉದ್ಯೋಗ ಭರ್ತಿ
ಈ ವರ್ಷ 56,432 ಉದ್ಯೋಗ ಭರ್ತಿಗೆ ಚಾಲನೆ ನೀಡಲಾಗುತ್ತಿದೆ. ನೇಮಕಾತಿಗೆ ವಯೋಮಿತಿ 5 ವರ್ಷಗಳ ಸಡಿಲಿಕೆ ನೀಡಿದ್ದೇವೆ . ಕರ್ನಾಟಕ 45 ಉತ್ಪನ್ನಗಳಿಗೆ GI ಮಾನ್ಯತೆ ದೊರೆತಿದೆ.ಮುಜರಾಯಿ ಇಲಾಖೆ ವ್ಯಾಪ್ತಿಯ 259 ಕಲ್ಯಾಣಿಗಳ ಪುನರುಜ್ಜೀವನ ಮಾಡಲಾಗುತ್ತದೆ. ಮುಖ್ಯಮಂತ್ರಿ ಕೃಷಿ ವಿಸ್ತಾರ ಯೋಜನೆಗೆ 100 ಕೋಟಿ ರೂ. ಅನುದಾನ ನೀಡಲಾಗುತ್ತದೆ.
- ಕುಕ್ಕೆ ಶ್ರೀ ಸುಬ್ರಹ್ಮಣ್ಯ ದೇವಾಲಯ ಮತ್ತು ಕೊಲ್ಲೂರು ಶ್ರೀ ಮೂಕಾಂಬಿಕಾ ದೇವಾಲಯಗಳಿಗೆ ಮೂಲಭೂತ ಸೌಲಭ್ಯ ಹಾಗೂ ಕ್ಷೇತ್ರದ ಸಮಗ್ರ ಅಭಿವೃದ್ಧಿ ಕೈಗೊಳ್ಳಲು ಅಭಿವೃದ್ಧಿ ಪ್ರಾಧಿಕಾರಗಳನ್ನು ರಚನೆ.
- ಅನ್ನಭಾಗ್ಯ ಯೋಜನೆಯಡಿ ಹೆಚ್ಚುವರಿ 5 ಕೆ.ಜಿ ಅಕ್ಕಿಯ ಬದಲಾಗಿ ಇಂದಿರಾ ಆಹಾರ ಕಿಟ್ ವಿತರಿಸುವುದಾಗಿ ಸಿಎಂ ಘೋಷಣೆ.
- ಈ ಬಾರಿ ಬಜೆಟ್ನಲ್ಲಿ ಕಾಲೇಜು ಹಾಗೂ ವಿಶ್ವವಿದ್ಯಾಲಯಗಳಲ್ಲಿ ವಿದ್ಯಾರ್ಥಿ ಸಂಘಗಳ ಚುನಾವಣೆ ನಡೆಸಲು ಸರ್ಕಾರ ನಿರ್ಧಾರ ಮಾಡಿದೆ. ಕಾಲೇಜುಗಳಲ್ಲಿ ವಿದ್ಯಾರ್ಥಿ ಸಂಘಗಳ ಚುನಾವಣೆ ಮುಖ್ಯ ಎಂದು ಸರ್ಕಾರ ಹೇಳಿದೆ.
- ಉದ್ಯೋಗಸ್ಥ ಎಸ್ಸಿ-ಎಸ್ಟಿ ಮಹಿಳೆಯರಿಗೆ ಹಾಸ್ಟೆಲ್. ಮೈಸೂರು, ಬೆಂಗಳೂರು, ಮಂಗಳೂರು ಬೆಳಗಾವಿಯಲ್ಲಿ ಹಾಸ್ಟೆಲ್. ರಾಜ್ಯದ 9 ಜಿಲ್ಲೆಗಳಲ್ಲಿ 50 ಒಬಿಸಿ ಹಾಸ್ಟೆಲ್ ನಿರ್ಮಾಣ ಘೋಷಣೆ
ರಾಜ್ಯ ಬಜೆಟ್ 2026-27: ಯಾವ ಇಲಾಖೆಗೆ ಎಷ್ಟು ಅನುದಾನ?
ಶಿಕ್ಷಣ: 47,224 ಕೋಟಿ ರೂ.
ಮಹಿಳಾ ಮತ್ತು ಮಕ್ಕಳ ಕಲ್ಯಾಣ: 34,929 ಕೋಟಿ ರೂ.
ಇಂಧನ: 29,947 ಕೋಟಿ ರೂ.
ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್ ರಾಜ್: 26,559 ಕೋಟಿ ರೂ.
ಲೋಕೋಪಯೋಗಿ ಮತ್ತು ಸಾರಿಗೆ: 23,100 ಕೋಟಿ ರೂ.
ನೀರಾವರಿ: 22,436 ಕೋಟಿ ರೂ.
ನಗರಾಭಿವೃದ್ಧಿ ಮತ್ತು ವಸತಿ: 22,203 ಕೋಟಿ ರೂ.
ಕಂದಾಯ: 19,843 ಕೋಟಿ ರೂ.
ಸಮಾಜ ಕಲ್ಯಾಣ: 18,612 ಕೋಟಿ ರೂ.
ಆರೋಗ್ಯ ಮತ್ತು ಕುಟುಂಬ ಕಲ್ಯಾಣ: 17,817 ಕೋಟಿ ರೂ.
ಒಳಾಡಳಿತ (ಗೃಹ): 11,424 ಕೋಟಿ ರೂ.
ಕೃಷಿ ಮತ್ತು ತೋಟಗಾರಿಕೆ: 8,373 ಕೋಟಿ ರೂ.
ಆಹಾರ ಮತ್ತು ನಾಗರಿಕ ಸರಬರಾಜು: 7,942 ಕೋಟಿ ರೂ.
ಪಶುಸಂಗೋಪನೆ ಮತ್ತು ಮೀನುಗಾರಿಕೆ: 4,084 ಕೋಟಿ ರೂ.
ಇತರೆ ವಲಯಗಳು: 1,72,757 ಕೋಟಿ ರೂ.










