







ಪುತ್ತೂರು: ಕೆಲ ದಿನಗಳ ಹಿಂದೆ ಬೆಂಗಳೂರಿನಲ್ಲಿ ಬಸ್ ಮೂಲಕ ಪ್ರಯಾಣ ಮಾಡುವ ವೇಳೆ ಪುತ್ತೂರಿನ ಮಹಿಳೆಯೋರ್ವರು ಲಗೇಜ್ ಬ್ಯಾಗ್ ಕಳೆದುಹೋಗಿದ್ದು, ನಾಲ್ಕು ದಿನದ ಬಳಿಕ ಬೆಂಗಳೂರು ಉಪ್ಪಾರಪೇಟೆ ಪೊಲೀಸರು ಲಗೇಜ್ ಪತ್ತೆ ಮಾಡಿದ ಬಗ್ಗೆ ವರದಿಯಾಗಿದೆ.


ಏನಿದು ಘಟನೆ?
ಪುತ್ತೂರಿನ ಮಹಿಳೆಯೋರ್ವರ ಲಗೇಜ್ ಕಳೆದುಹೋದ ಬಗ್ಗೆ ಶಾಸಕ ಅಶೋಕ್ ರೈ ಅವರು ಬೆಂಗಳೂರು ಪೊಲೀಸ್ ಕಮಿಷನರ್‌ಗೆ ಮಾಹಿತಿ ನೀಡಿದ್ದರು. ಪುತ್ತೂರು ನಗರದ ತೆಂಕಿಲ ನೂಜಿ ನಿವಾಸಿ ರಕ್ಷಿತಾ ಎಂಬವರು ದುಬೈಯ ಕಂಪೆನಿಯೊಂದರಲ್ಲಿ ಕೆಲಸ ಮಾಡುತ್ತಿದ್ದು, ಮಾ.7ರಂದು ರಾತ್ರಿ 11.30ರ ಸಮಯಕ್ಕೆ ದುಬೈಯಿಂದ ಬಂದು ಬೆಂಗಳೂರು ವಿಮಾನ ನಿಲ್ದಾಣದಲ್ಲಿ ಇಳಿದಿದ್ದರು. ಅಲ್ಲಿಂದ ಖಾಸಗಿ ಬಸ್ ಒಂದರಲ್ಲಿ ಮೆಜೆಸ್ಟಿಕ್ ಬಸ್ ಹತ್ತಿದ್ದರು. ಬಸ್ ಪ್ರಯಾಣದ ವೇಳೆ ಲಗೇಜ್ ಬಸ್ಸಿನ ಲಗೇಜ್ ಬಾಕ್ಸ್‌ನಲ್ಲಿ ಇರಿಸಿದ್ದರು. ಮೆಜೆಸ್ಟಿಕ್ ನಲ್ಲಿ ಪರಿಶೀಲಿಸಿದಾಗ ಲಗೇಜ್ ಇರಲಿಲ್ಲ. ಈ ಬಗ್ಗೆ ಬಸ್ ನವರಲ್ಲಿ ವಿಚಾರಿಸಿದಾಗ ಸರಿಯಾದ ಮಾಹಿತಿ ದೊರೆತಿರಲಿಲ್ಲ. ಮಾ.8 ರಂದು ಈ ಬಗ್ಗೆ ಉಪ್ಪಾರಪೇಟೆ ಪೊಲೀಸ್‌ರಿಗೆ ದೂರು ನೀಡಿದ್ದರು. ಪೊಲೀಸರು ಪ್ರಕರಣ ದಾಖಲಿಸಿದ್ದರು.



ಉಪ್ಪಾರಪೇಟೆ ಪೊಲೀಸರಿಗೆ ದೂರು ನೀಡಿದ ಬಳಿಕ ಪೊಲೀಸರು ಪ್ರಕರಣ ದಾಖಲಿಸಿ ತನಿಖೆ ಮಾಡುತ್ತಿದ್ದರು. ಆದರೆ ಲಗೇಜ್ ಮಾತ್ರ ಪತ್ತೆಯಾಗಿರಲಿಲ್ಲ. ಲಗೇಜ್‌ನಲ್ಲಿ ರಕ್ಷಿತಾ ಅವರ ಮುಖ್ಯವಾದ ದಾಖಲೆಗಳು ಇದ್ದ ಕಾರಣ ಆತಂಕಗೊಂಡ ಅವರು. ಮಾ.9ರಂದು ಶಾಸಕ ಅಶೋಕ್ ರೈ ಗೆ ಕರೆ ಮಾಡಿ ವಿಷಯ ತಿಳಿಸಿದ್ದಾರೆ. ಕೂಡಲೇ ಶಾಸಕರು ಬೆಂಗಳೂರು ಪೊಲೀಸ್ ಕಮಿಷನರ್‌ಗೆ ಕರೆ ಮಾಡಿ ಪುತ್ತೂರಿನ ಮಹಿಳೆಯ ಲಗೇಜ್ ಕಳೆದುಹೋಗಿರುವ ಬಗ್ಗೆ ತಿಳಿಸಿದ್ದರು. ಆ ಬಳಿಕ ಪೊಲೀಸರು ತನಿಖೆಯನ್ನು ಮತ್ತಷ್ಟು ಚುರುಕುಗೊಳಿಸಿದ್ದರು. ಮಾ.10 ರಂದು ಬೆಳಿಗ್ಗೆ ಕಳೆದುಹೋದ ಲಗೇಜ್ ನ್ನು ಪತ್ತೆ ಮಾಡುವಲ್ಲಿ ಪೊಲೀಸರು ಯಶಸ್ವಿಯಾಗಿದ್ದಾರೆ ಎಂದು ತಿಳಿದು ಬಂದಿದೆ.










