






ಬೆಟ್ಟಂಪಾಡಿ: ಇತ್ತೀಚೆಗೆ ನಿಧನರಾದ ಬೆಟ್ಟಂಪಾಡಿ ಗ್ರಾ.ಪಂ. ಮಾಜಿ ಅಧ್ಯಕ್ಷ, ಹವ್ಯಾಸಿ ಯಕ್ಷಗಾನ ಕಲಾವಿದರಾಗಿದ್ದ ಬಿ. ವೆಂಕಟ್ರಾವ್ ರವರ ವೈಕುಂಠ ಸಮಾರಾಧನೆ ಹಾಗೂ ಶ್ರದ್ಧಾಂಜಲಿ ಸಭೆಯು ಮಾ. 14 ರಂದು ಬೆಟ್ಟಂಪಾಡಿ ದೇವಿಕೃಪಾ ದಲ್ಲಿ ಜರಗಿತು.


ಸಮುದ್ರದ ನೀರನ್ನು ಅಳೆಯುವುದು ಒಂದೇ ವೆಂಕಟ್ರಾಯರ ಗುಣ ಅಳೆಯುವುದೂ ಒಂದೇ – ಲಕ್ಷ್ಮೀನಾರಾಯಣ ರಾವ್
ನಿವೃತ್ತ ಶಿಕ್ಷಕ ಲಕ್ಷ್ಮೀನಾರಾಯಣ ರಾವ್ ರವರು ಮಾತನಾಡಿ ʻವೆಂಕಟ್ರಾಯರು ಓರ್ವ ಸರ್ವಗುಣ ಸಂಪನ್ನ ವ್ಯಕ್ತಿಯಾಗಿದ್ದರು. ಸಮುದ್ರದ ನೀರನ್ನು ಅಳೆಯಲಾಗದಂತೆ ವೆಂಕಟ್ರಾಯರ ಗುಣವನ್ನೂ ಅಳೆಯಲಾಗದು ಎಂದು ಬಣ್ಣಿಸಿದ ನುಡಿನಮನ ಸಲ್ಲಿಸಿದರು.



ಮಾನವೀಯ ಮೌಲ್ಯಗಳಿಗೆ ತೋರಿಸಬಹುದಾದ ವ್ಯಕ್ತಿ – ಡಾ. ವರದರಾಜ ಚಂದ್ರಗಿರಿ
ಬೆಟ್ಟಂಪಾಡಿ ಸರಕಾರಿ ಪ್ರಥಮ ದರ್ಜೆ ಕಾಲೇಜಿನ ನಿವೃತ್ತ ಪ್ರಾಂಶುಪಾಲ ಡಾ. ವರದರಾಜ ಚಂದ್ರಗಿರಿಯವರು ಮಾತನಾಡಿ ʻಕೂಡುಕುಟುಂಬ ಹೇಗಿರಬೇಕು ಎಂಬುದಕ್ಕೆ ಬೆಟ್ಟಂಪಾಡಿ ದೇವಿಕೃಪಾ ಮನೆ ಉತ್ತಮ ಉದಾಹರಣೆ. ಈ ಮನೆಯ ಜೊತೆ ಬಹಳ ಹಿಂದಿನ ಸಂಬಂಧ. ನನ್ನ ಕಾಲೇಜಿನ ಅವಧಿಯಲ್ಲೂ ವೆಂಕಟ್ರಾಯರ ಮಾರ್ಗದರ್ಶನ, ಸಹಕಾರ ಇತ್ತು. ಇಡೀ ಹಳ್ಳಿಗೆ ಪುತ್ತೂರಿನಿಂದ ಏಕೈಕ ಬಸ್ ಆಗಿದ್ದ ಶಂಕರ ವಿಠಲ ಬಸ್ನಲ್ಲಿ ಕಂಡಕ್ಟರ್ ವೃತ್ತಿ ನಡೆಸುತ್ತಿದ್ದರೂ, 25 ವರ್ಷಗಳ ಕಾಲ ಕೇವಲ ಕಂಡಕ್ಟರ್ ಆಗಿರದೆ ಅದರ ಹಿಂದೆ ಸಾಂಸ್ಕೃತಿಕತೆಗೆ ಕಾರಣವಾಗಿದ್ದರು. ಸಾಹಿತ್ಯ ಕ್ಷೇತ್ರದಲ್ಲಿ ಬೆಟ್ಟಂಪಾಡಿಯ ಕ್ಷೇತ್ರ ಮಹಾತ್ಮೆಗಾಗಿ ಚರಿತ್ರೆಯನ್ನು ಕೊಟ್ಟವರು. ಮಾನವೀಯ ಮೌಲ್ಯಗಳಿಗೆ ವ್ಯಕ್ತಿಯನ್ನು ತೋರಿಸಬಹುದಾದರೆ ಅದು ವೆಂಕಟ್ರಾವ್ ರವರು. ಈ ಮನೆಯ ಊಟದ ನಂಟು ಇಲ್ಲದವರು ಈ ಊರಿನಲ್ಲಿ ಇರಲಿಕ್ಕಿಲ್ಲ. ಅವರಿಗೆ ಸದ್ಗತಿಗಾಗಿ ನಾವೂ ಏನು ಮಾಡುವ ಅವಶ್ಯಕತೆಯಿಲ್ಲ. ಅವರು ಸಾಗಿಸಿದ ಬದುಕೇ ಅವರ ಸದ್ಗತಿಗಾಗಿ ಕೊಂಡೊಯ್ಯುವುದರಲ್ಲಿ ಸಂಶಯವಿಲ್ಲʼ ಎಂದರು.
ಕೌಟುಂಬಿಕವಾಗಿ ಅತ್ಯುತ್ತಮ ನಿರ್ವಾಹಕ – ಅರುಣಾ ಸೋಮಶೇಖರ್
ಕಾರ್ಯಕ್ರಮ ನಿರೂಪಿಸಿದ ಅರುಣಾ ಸೋಮಶೇಖರ್ ರವರು ʻಧಾರ್ಮಿಕ ಕಾರ್ಯಕ್ರಮಗಳಲ್ಲಿ ಬೆಟ್ಟಂಪಾಡಿ ದೇವಿಕೃಪಾ ಮನೆಯವರ ಕೆಲಸ ಬಹಳ ಹೆಚ್ಚು. ಪ್ರತೀ ತಿಂಗಳು ಬೇರೆ ಬೇರೆ ಕಾರ್ಯಕ್ರಮಗಳ ಮೂಲಕ ಅನ್ನದಾನ ಮಾಡುತ್ತಿದ್ದರು. ಆರ್ಥಿಕ ಮುಗ್ಗಟ್ಟನ್ನು ನಿಭಾಯಿಸಿಕೊಂಡು ಹೋಗಿ ಕುಟುಂಬಿಕರಿಗೆ ಯಾವುದೇ ಕೊರತೆ ಲೋಪ ದೋಷಗಳು ಬಾರದಂತೆ ಚಿಕ್ಕಪ್ಪ ನಿಭಾಯಿಸುತ್ತಿದ್ದರುʼ ಎಂದರು.
ಮನಸ್ಸಿನ ಒಳಗೆ ಬೆಳಕು ನೀಡಿದವರು – ನಾರಾಯಣ ರೈ ಕುಕ್ಕುವಳ್ಳಿ
ನಿವೃತ್ತ ಮುಖ್ಯಶಿಕ್ಷಕ, ಸಾಹಿತಿ ನಾರಾಯಣ ರೈ ಕುಕ್ಕುವಳ್ಳಿಯವರು ಮಾತನಾಡಿ ʻಬೆಟ್ಟಂಪಾಡಿ ವೆಂಕಟ್ರಾಯರ ಕುಟುಂಬ ನಮ್ಮನ್ನು ನೋಡಿದ ರೀತಿ ಅದ್ಭುತವಾಗಿತ್ತು. ಬೆಟ್ಟಂಪಾಡಿ ಶಾಲೆಯಲ್ಲಿ ನಾನು ಶಿಕ್ಷಕನಾಗಿದ್ದಾಗ ವೆಂಕಟ್ರಾಯರು ಬಹಳ ಹತ್ತಿರವಾಗಿದ್ದರು. ಸಮಾಜದ ಮಕ್ಕಳಿಗಾಗಿ ಅವರು ತನ್ನ ಸಹಾಯ, ಸಹಕಾರ ನೀಡಿದವರು. ಮನಸ್ಸಿನ ಒಳಗೆ ಬೆಳಕನ್ನು ನೀಡಿದವರು ವೆಂಕಟ್ರಾಯರು. ದೇವರು ಅವರಿಗೆ ಉನ್ನತ ಸ್ಥಾನ ನೀಡಲಿ ಎಂದು ನಾವೆಲ್ಲರೂ ಪ್ರಾರ್ಥಿಸೋಣʼ ಎಂದರು.
ಸಮಾಜದ ಕಷ್ಟಕ್ಕೆ ಸ್ಪಂದಿಸಿದವರು – ಎನ್. ಸಂಜೀವ ರೈ
ವೆಂಕಟ್ರಾಯರ ಯಕ್ಷಗಾನ ರಂಗದ ನಿಕಟವರ್ತಿ, ನಿವೃತ್ತ ದೈಹಿಕ ಶಿಕ್ಷಣ ಶಿಕ್ಷಕ ಎನ್. ಸಂಜೀವ ರೈ ಯವರು ಮಾತನಾಡಿ ʻಬಾಲ್ಯದಿಂದಲೇ ಯಕ್ಷಗಾನ ನಾಟಕ, ಶಿಕ್ಷಣದಲ್ಲಿ ಅತ್ಯಂತ ನಿಕಟ ಬಂಧುಗಳಾಗಿ ಬೆಳೆದವರು. ಆತ್ಮೀಯತೆ ಮತ್ತು ಸರಳತೆಗೆ ಇನ್ನೊಂದು ಹೆಸರು ವೆಂಕಟ್ರಾಯರು. ತನ್ನ ಕಷ್ಟವನ್ನು ಮರೆತು ಸಮಾಜದ ಕಷ್ಟಕ್ಕೆ ಸ್ಪಂದಿಸಿದ ಮನೋಭಾವ ಅವರದ್ದಾಗಿತ್ತು. ಇಂದು ಅವರ ನೆನಪು ಮಾತ್ರ. ಇಲ್ಲಿ ಮೌನ ಶಾಶ್ವತವಾಗಿ ಉಳಿದಿದೆ ಎಂದು ಭಾಸವಾಗುತ್ತಿದೆʼ ಎಂದು ಹೇಳಿ ಯಕ್ಷಗಾನ ರಂಗ ಮತ್ತು ಸಾಮಾಜಿಕವಾಗಿ ವೆಂಕಟ್ರಾಯರ ಬದುಕಿದ ರೀತಿಯನ್ನು ಸಭೆಯ ಮುಂದಿಟ್ಟರು.
ಹಿರಿಯ ಧರ್ಮರಾಯರಾಗಿ ಬಾಳಿದವರು – ಮಹಮ್ಮದ್ ಬಡಗನ್ನೂರು
ವೆಂಕಟ್ರಾಯರ ಇನ್ನೋರ್ವ ಸ್ನೇಹಿತ, ಮಹಮ್ಮದ್ ಬಡಗನ್ನೂರು ರವರು ಮಾತನಾಡಿ ʻಹಿರಿಯ ಧರ್ಮರಾಯನಾಗಿ ಸಹೋದರರು ಮತ್ತು ಕುಟುಂಬವನ್ನು ಮುನ್ನಡೆಸಿದವರು. ಇಲ್ಲಿನ ಆದರಾತಿಥ್ಯವನ್ನು ಮಾತಿನಲ್ಲಿ ಹೇಳಲು ಸಾಧ್ಯವಿಲ್ಲʼ ಎಂದರು.
ಧಾರ್ಮಿಕ ಪರಿಷತ್ ಮಾಜಿ ಸದಸ್ಯ, ನ್ಯಾಯವಾದಿ ಎನ್. ಕೆ. ಜಗನ್ನೀವಾಸ ರಾವ್, ಫಿಲೋಮಿನಾ ನಿವೃತ್ತ ಉಪನ್ಯಾಸಕಿ ವತ್ಸಲಾ, ಸುಬ್ರಹ್ಮಣ್ಯ ಉಪಾಧ್ಯಾಯ ಪಾವಂಜೆ, ಸೂರ್ಯನಾರಾಯಣ ಭಟ್ ಕೊಡಿಪ್ಪಾಡಿ ಹಾಗೂ ಗಂಗಾಧರ ರಾವ್ ರವರು ವೆಂಕಟ್ರಯರ ಕುರಿತು ನುಡಿನಮನ ಸಲ್ಲಿಸಿದರು.

ವೆಂಕಟ್ರಾವ್ ರವರ ಪುತ್ರಿ, ವಿವೇಕಾನಂದ ಆಂಗ್ಲಮಾಧ್ಯಮ ಶಾಲಾ ಶಿಕ್ಷಕಿ ವೀಣಾ ರಾವ್ ಅಪ್ಪನ ಕುರಿತಾದ ಕವನ ವಾಚಿಸಿದರು.ಪುತ್ರ ಡಾ. ಸತೀಶ್ ರಾವ್, ಸೊಸೆ ದಿವ್ಯಾ ಎಸ್. ರಾವ್, ಪತ್ನಿ ಶಾರದಾ ವಿ. ರಾವ್, ಪುತ್ರಿ ವೀಣಾ ಕುಮಾರ್, ಅಳಿಯ ವಿನಯ ಕುಮಾರ್, ಮೊಮ್ಮಕ್ಕಳಾದ ದಿಶಾ, ಸುಧೀಶ್, ಪ್ರಿಯಾ, ಸಹೋದರರಾದ ಬಿ. ವಿಷ್ಣುರಾವ್, ಬಿ. ಜನಾರ್ಧನ ರಾವ್, ಬಿ. ಅಶೋಕ್ ಕುಮಾರ್ ರಾವ್, ಹರೀಶ್ ರಾವ್ ಸುಬ್ರಹ್ಮಣ್ಯ, ಕೃಷ್ಣವೇಣಿ ಮೈಸೂರು ಮತ್ತು ಕುಟುಂಬಿಕರು ಅತಿಥಿಗಳನ್ನು ಸತ್ಕರಿಸಿದರು.
ಎಸ್ಸಿಡಿಸಿಸಿ ಬ್ಯಾಂಕ್ ನಿರ್ದೇಶಕ ಶಶಿಕುಮಾರ್ ರೈ ಬಾಲ್ಯೊಟ್ಟು, ಪ್ರಿಯದರ್ಶಿನಿ ಆಂಗ್ಲಮಾಧ್ಯಮ ಶಾಲೆಯ ಆಡಳಿತ ಮಂಡಳಿ ಅಧ್ಯಕ್ಷ ರಂಗನಾಥ ರೈ ಗುತ್ತು, ಇರ್ದೆ ಶ್ರೀ ವಿಷ್ಣುಮೂರ್ತಿ ದೇವಸ್ಥಾನದ ವ್ಯವಸ್ಥಾಪನಾ ಸಮಿತಿ ಅಧ್ಯಕ್ಷ ವಿಠಲ ರೈ ಬೈಲಾಡಿ, ನಿವೃತ್ತ ಮುಖ್ಯಶಿಕ್ಷಕ ಮನೋಹರ ರೈ ಬಾಜುವಳ್ಳಿ, ಬೆಟ್ಟಂಪಾಡಿ ಶ್ರೀ ಮಹಾಲಿಂಗೇಶ್ವರ ಯಕ್ಷಗಾನ ಕಲಾಸಂಘದ ಅಧ್ಯಕ್ಷ ಐ. ಗೋಪಾಲಕೃಷ್ಣ ರಾವ್ ಸೇರಿದಂತೆ ಹಲವು ಸಂಘ ಸಂಸ್ಥೆಗಳ ಮುಖ್ಯಸ್ಥರು, ಗಣ್ಯರು ಪಾಲ್ಗೊಂಡು ಮೃತರ ಭಾವಚಿತ್ರಕ್ಕೆ ಪುಷ್ಪನಮನ ಸಲ್ಲಿಸಿದರು.










