






ಬೆಳ್ಳಾರೆ, ಮಾ.18: ಸ್ವಂತಕ್ಕೆ ಸ್ವಲ್ಪ, ಸಮಾಜಕ್ಕೆ ಸರ್ವಸ್ವ ಎನ್ನುವ ನುಡಿಯಂತೆ ಬದುಕಿದ ಕೋಟೆ ವಸಂತ ಕುಮಾರ್ ಅವರು ಸಮಾನತೆಯನ್ನು ನಿಜಾರ್ಥದಲ್ಲಿ ಪ್ರತಿಪಾದಿಸಿದವರು. ಅವರ ಸಂಸ್ಮರಣೆಯಾಗಿ ಸ್ಥಾಪಿಸಿದ ಕೋಟೆ ಪೌಂಡೇಷನ್ ಮೂಲಕ ಮುಕ್ಕೂರಿನ ಅಂಗನವಾಡಿಯ ಅಭಿವೃದ್ಧಿಗೆ ಕೊಡುಗೆ ನೀಡುತ್ತಿರುವುದು ಅತ್ಯಂತ ಅರ್ಥಪೂರ್ಣ ಕಾರ್ಯ ಎಂದು ಪ್ರಗತಿಪರ ಕೃಷಿಕ ಕೆ.ಗಣಪಯ್ಯ ವನಶ್ರೀ ಹೇಳಿದರು.



ಕೋಟೆ ಫೌಂಡೇಷನ್ ಇದರ ಪ್ರಾಯೋಜಕತ್ವದಲ್ಲಿ ಹಾಗೂ ಮುಕ್ಕೂರು ನೇಸರ ಯುವಕ ಮಂಡಲ, ನೇಸರ ಯುವತಿ ಮಂಡಲ, ನೇಸರ ದಶಪ್ರಣತಿ ಸಮಿತಿ-2026 ಸಹಕಾರದೊಂದಿಗೆ 1.28 ಲಕ್ಷ ರೂ.ವೆಚ್ಚದಲ್ಲಿ ಮುಕ್ಕೂರು ಅಂಗನವಾಡಿ ಕೇಂದ್ರದ ಎರಡನೆ ಹಂತದ ಅಭಿವೃದ್ಧಿ ಕಾಮಗಾರಿಗೆ ಮಾ.17 ರಂದು ಶಿಲಾನ್ಯಾಸ ನೆರವೇರಿಸಿ ಅವರು ಮಾತನಾಡಿದರು. ಕೋಟೆ ವಸಂತ ಕುಮಾರ್ ಅವರು ಪೆರುವಾಜೆ ಸೇತುವೆ ನಿರ್ಮಾಣದ ಹೋರಾಟಕ್ಕೆ ಸಂಪೂರ್ಣ ಸಹಕಾರ ನೀಡಿದವರು. ಸಮಾಜದ ಅಗತ್ಯತೆಗಳಿಗೆ ಸ್ಪಂದಿಸುವ ಸಂದರ್ಭದಲ್ಲಿ ಜಾತಿ, ಮತ, ಧರ್ಮ, ಪಕ್ಷದ ಬೇಧ ಇಲ್ಲದೆ ಸ್ಪಂದನೆ ನೀಡುತ್ತಿದ್ದರು ಎಂದರು.



ಸಭಾ ಕಾರ್ಯಕ್ರಮ ಉದ್ಘಾಟಿಸಿದ ಮುಕ್ಕೂರು ನೇಸರ ದಶಪ್ರಣತಿ ಸಮಿತಿ ಸಂಚಾಲಕ ಕುಂಬ್ರ ದಯಾಕರ ಆಳ್ವ ಮಾತನಾಡಿ, ಮುಕ್ಕೂರು ಅಂಗನವಾಡಿ ಕೇಂದ್ರಕ್ಕೆ ಅನುದಾನ ತರುವಲ್ಲಿ ಪ್ರಧಾನ ಪಾತ್ರ ವಹಿಸಿದ ನರಸಿಂಹ ತೇಜಸ್ವಿ ಕಾನಾವು ಅವರ ಪ್ರಯತ್ನವು ಶ್ಲಾಘನೀಯವಾದದು. ಜತೆಗೆ ನೇಸರದಂತ ಸಮಾಜಪರ ಸಂಘಟನೆಯ ಕಾರ್ಯವು ಒಟ್ಟು ವ್ಯವಸ್ಥೆಯನ್ನು ಅರ್ಥಪೂರ್ಣಗೊಳಿಸಿದೆ ಎಂದರು.
ಮುಕ್ಕೂರು ನೇಸರ ದಶಪ್ರಣತಿ ಸಮಿತಿ ಉಪಾಧ್ಯಕ್ಷ ನರಸಿಂಹ ತೇಜಸ್ವಿ ಕಾನಾವು ಮಾತನಾಡಿ, ನೇಸರ ದಶಪ್ರಣತಿ ಕಾರ್ಯಕ್ರಮ ಸಂದರ್ಭದಲ್ಲಿ ಮುಕ್ಕೂರು ಅಂಗನವಾಡಿಯ ಎರಡನೇ ಹಂತದ ಅಭಿವೃದ್ಧಿ ಕಾರ್ಯದ ಬಗ್ಗೆ ಚರ್ಚಿಸಿದೆವು. ಈ ಬಗ್ಗೆ ಕೋಟೆ ಪೌಂಡೇಷನ್ ನ ರಘುರಾಮ ಕೋಟೆ ಅವರ ಜತೆ ಚರ್ಚಿಸಿದಾಗ ಪೂರ್ಣ ಬೆಂಬಲ ನೀಡಿದರು ಎಂದರು.
ನೇಸರ ಯುವಕ ಮಂಡಲದ ಗೌರವಾಧ್ಯಕ್ಷ ಜಗನ್ನಾಥ ಪೂಜಾರಿ ಮುಕ್ಕೂರು ಸಭಾಧ್ಯಕ್ಷತೆ ವಹಿಸಿದ್ದರು. ಮುಕ್ಕೂರು ಶ್ರೀ ವೈಷ್ಣವಿ ಮಹಿಳಾ ಮಂಡಲದ ಅಧ್ಯಕ್ಷೆ ಸುಮಿತ್ರಾ ಬೀರುಸಾಗು, ಮಹಿಳಾ ಮತ್ತು ಮಕ್ಕಳ ಇಲಾಖೆಯ ಬೆಳ್ಳಾರೆ ವಲಯ ಮಹಿಳಾ ಮೇಲ್ವಿಚಾರಕಿ ಉಷಾ ಪ್ರಸಾದ್ ರೈ,
ನೇಸರ ದಶಪ್ರಣತಿ ಸಮಿತಿ ಸದಸ್ಯ ಜೈನುದ್ದೀನ್ ತೋಟದಮೂಲೆ ಮೂಲೆ ಶುಭಹಾರೈಸಿದರು. ವೇದಿಕೆಯಲ್ಲಿ ಮುಕ್ಕೂರು ಶಾಲಾ ಎಸ್ ಡಿಎಂಸಿ ಅಧ್ಯಕ್ಷ ಜಯಂತ ಕುಂಡಡ್ಕ, ಮುಕ್ಕೂರು ಅಂಗನವಾಡಿ ಕೇಂದ್ರದ ಬಾಲವಿಕಾಸ ಸಮಿತಿ ಅಧ್ಯಕ್ಷೆ ಸುನೀತಾ ಕಂರ್ಬುತ್ತೋಡಿ, ಮುಕ್ಕೂರು ಶ್ರೀ ಸಾರ್ವಜನಿಕ ಗಣೇಶೋತ್ಸವ ಸಮಿತಿ ಅಧ್ಯಕ್ಷ ರವೀಂದ್ರ ಕೆ, ಮುಕ್ಕೂರು ನೇಸರ ಯುವಕ ಮಂಡಲದ ಅಧ್ಯಕ್ಷ ರಮೇಶ್ ಕಾನಾವು ಉಪಸ್ಥಿತರಿದ್ದರು.
ಶಿಲಾನ್ಯಾಸ
ಕಾರ್ಯಕ್ರಮದ ಆರಂಭದಲ್ಲಿ ಪ್ರಗತಿಪರ ಕೃಷಿಕರಾದ ಕೆ ಗಣಪಯ್ಯ ವನಶ್ರೀ, ಸುಬ್ರಾಯ ಭಟ್ ನೀರ್ಕಜೆ ಶಿಲಾನ್ಯಾಸ ನೆರವೇರಿಸಿದರು. ಪ್ರಗತಿಪರ ಕೃಷಿಕರಾದ ಮೋಹನ ಬೈಪಡಿತ್ತಾಯ, ಉಮೇಶ್ ಕೆಎಂಬಿ, ಸತ್ಯಪ್ರಸಾದ್ ಕಂಡಿಪ್ಪಾಡಿ, ಹೊನ್ನಪ್ಪ ಗೌಡ ಚಾಮುಂಡಿಮೂಲೆ, ಗ್ರಾ.ಪಂ.ಮಾಜಿ ಸದಸ್ಯೆ ಗುಲಾಬಿ ಬೊಮ್ಮೆಮಾರು, ಮುಕ್ಕೂರು ಶಾಲಾ ಮುಖ್ಯಗುರು ಲತಾಕುಮಾರಿ ಮೊದಲಾದವರು ಉಪಸ್ಥಿತರಿದ್ದರು. ಅಂಗನವಾಡಿ ಪುಟಾಣಿಗಳು ಪ್ರಾರ್ಥಿಸಿದರು. ಕಾರ್ಯಕರ್ತೆ ರೂಪಾ ಸ್ವಾಗತಿಸಿದರು. ನೇಸರ ಯುವತಿ ಮಂಡಲದ ಅಧ್ಯಕ್ಷೆ ಬೃಂದಾ ಪಿ ಮುಕ್ಕೂರು ವಂದಿಸಿದರು. ನೇಸರ ಯುವತಿ ಮಂಡಲದ ಸದಸ್ಯೆ ದೀಕ್ಷಾ ನೀರ್ಕಜೆ ನಿರೂಪಿಸಿದರು.
ನೇಸರ ಸಂಸ್ಥೆ ಶ್ಲಾಘನೀಯ ಕಾರ್ಯ
ತನ್ನ ಭಾಷಣದಲ್ಲಿ ನೇಸರ ಯುವಕ ಮಂಡಲದ ಕಾರ್ಯಚಟುವಟಿಕೆಗಳನ್ನು ಉಲ್ಲೇಖಿಸಿದ ಗಣಪಯ್ಯ ವನಶ್ರೀ ಅವರು, ನಾನು ನೇಸರ ವಾಟ್ಸಪ್ ಗ್ರೂಪ್ ಸದಸ್ಯ. ಅದರಲ್ಲಿ ಸಂಘಟನೆಯ ಕಾರ್ಯ ಚಟುವಟಿಕೆ ಗಮನಿಸಿದ್ದೇನೆ. ಬಡ ಕುಟುಂಬಕ್ಕೆ ನೇಸರ ಮನೆ ನಿರ್ಮಾಣದಂತಹ ಕಾರ್ಯ ಶ್ರೇಷ್ಠವಾದದು. ಅಂಗನವಾಡಿ ಅಭಿವೃದ್ಧಿ ವಿಚಾರದಲ್ಲಿಯು ಕೋಟೆ ಪೌಂಡೇಷನ್ ಜತೆಗೂಡಿ ಅವರು ಸಹಕಾರ ನೀಡುತ್ತಿರುವುದು ಪ್ರಶಂಸನೀಯ ಎಂದರು.









