40ನೇ ವರ್ಷದ ಉಬಾರ್‌ ಕಂಬಳೋತ್ಸವ : ಕಂಬಳ ರಾಷ್ಟ್ರವನ್ನು ಮುಟ್ಟುವಂತಾಗಲಿ: ಮಹೇಶ್ ಕಜೆ

0

ಕ್ಯಾಮಾರಾದವರ ಬಗ್ಗೆ ಅವಹೇಳನಕಾರಿಯಾಗಿ ಮಾತಾಡಿಲ್ಲʼ ರಾಜೀವ ಶೆಟ್ಟಿ ಎಡ್ತೂರು
ಕಂಬಳದಲ್ಲಿ ಚರ್ಚೆಗೆ ಬಂದ ಯಕ್ಷಗಾನ…ಶಿಳ್ಳೆ…ತರಾಟೆ
ನೀರಿಗೆ ಎಳೆದೊಯ್ದ ಕೋಣ: ಯುವಕನ ರಕ್ಷಣೆ


ಉಪ್ಪಿನಂಗಡಿ: ಕಂಬಳವೆನ್ನುವುದು ನಮ್ಮ ಸಂಸ್ಕೃತಿ, ಹೆಮ್ಮೆ ಮತ್ತು ಗೌರವವಾಗಿದೆ. ಹಳ್ಳಿಗೆ ಸೀಮಿತವಾಗಿದ್ದ ಕಂಬಳವನ್ನು ರಾಜ್ಯದಲ್ಲಿ ಈಗಾಗಲೇ ಆಯೋಜನೆ ಮಾಡಲಾಗಿದ್ದು, ಇದು ಮುಂದಕ್ಕೆ ರಾಷ್ಟ್ರವನ್ನು ಮುಟ್ಟುವಂತಾಗಲಿ ಎಂದು ನ್ಯಾಯವಾದಿ ಮಹೇಶ್ ಕಜೆ ಹೇಳಿದರು.


ಉಪ್ಪಿನಂಗಡಿಯ ವಿಜಯ- ವಿಕ್ರಮ ಜೋಡುಕರೆ ಕಂಬಳ ಸಮಿತಿಯಿಂದ ಆಯೋಜನೆಗೊಂಡ ಉಬಾರ್ ಕಂಬಳೋತ್ಸವದಲ್ಲಿ ಮಾ.29 ರಂದು ನಡೆದ ಬಹುಮಾನ ವಿತರಣಾ ಕಾರ್ಯಕ್ರಮದಲ್ಲಿ ಭಾಗವಹಿಸಿ ಅವರು ಮಾತನಾಡಿದರು.


ಬೆಂಗಳೂರಿನಲ್ಲಿಯೂ ಕಂಬಳವನ್ನು ನಡೆಸಿದ ಕೀರ್ತಿ ಶಾಸಕ ಅಶೋಕ್ ಕುಮಾರ್ ರೈಯವರದ್ದು. ಅವರು ಪರುಷಮಣಿಯಂತೆ ಮುಟ್ಟಿದ್ದೆಲ್ಲಾ ಚಿನ್ನವಾಗುತ್ತದೆ. ಕಂಬಳಕ್ಕೆ ಈಗ ಸ್ಟಾರ್ ವ್ಯಾಲ್ಯೂ ಬಂದಿದ್ದು, ಯುವ ಜನತೆಯೂ ಇದರತ್ತ ಆಕರ್ಷಿತರಾಗುತ್ತಿದ್ದಾರೆ. ಕಂಬಳದಲ್ಲಿ ತುಳು ಭಾಷಾ ಸಂಸ್ಕೃತಿಯು ಅರಳಲು ಸಾಧ್ಯವಾಗಿದೆ. ನಮ್ಮ ಜನಪದ ಕ್ರೀಡೆಯಾದ ಕಂಬಳವನ್ನು ಸಂಸ್ಕೃತಿಯ ಮೌಲ್ಯಗಳನ್ನು ಉಳಿಸಿಕೊಂಡು ಹೆಮ್ಮೆ, ಗೌರವದೊಂದಿಗೆ ಮುಂದುವರಿಸಿಕೊಂಡು ಹೋದಾಗ ಕಂಬಳವು ಅಳಿಯಲು ಸಾಧ್ಯವಿಲ್ಲ ಎಂದರು.


ಅಧ್ಯಕ್ಷತೆ ವಹಿಸಿ ಮಾತನಾಡಿದ ಶಾಸಕ, ಕಂಬಳ ಸಮಿತಿಯ ಅಧ್ಯಕ್ಷ ಅಶೋಕ್ ಕುಮಾರ್ ರೈ, ರಾಜ್ಯ ಸರಕಾರ ಈಗಾಗಲೇ ಕಂಬಳಕ್ಕೆ ಅನುದಾನ ಮಂಜೂರು ಮಾಡಿದ್ದು, ಈ ಭಾಗದ 13 ಜನ ಶಾಸಕರು ರಾಜಕೀಯ ಬಿಟ್ಟು ಒಮ್ಮತಿನಿಂದ ಕಂಬಳಕ್ಕಾಗಿ ಧ್ವನಿಯೆತ್ತಿದಾಗ ಕಂಬಳಕ್ಕೆ ಎಷ್ಟು ಬೇಕಾದರೂ ಅನುದಾನ ತರಿಸಬಹುದು. ಸರಕಾರಿ ಜಾಗ ಇರುವ ಪ್ರತಿ ಊರಿನಲ್ಲಿಯೂ ಕಂಬಳದ ಕರೆಗಳನ್ನು ನಿರ್ಮಿಸಿ ಕಂಬಳ ನಡೆಸಬಹುದು. ಉಪ್ಪಿನಂಗಡಿಯ ಶ್ರೀ ಸಹಸ್ರಲಿಂಗೇಶ್ವರ- ಮಹಾಕಾಳಿ ದೇವಾಲಯದ ಅಭಿವೃದ್ಧಿಗೆ 352 ಕೋ.ರೂ.ನ ಯೋಜನೆ ರೂಪಿಸಲಾಗಿದ್ದು, ಅದು ಸರಕಾರದ ಹಂತದಲ್ಲಿದೆ. ಅದಕ್ಕೆ ಅನುದಾನ ದೊರೆತ್ತಲ್ಲಿ ಮುಂದೆ ಇಲ್ಲಿ ಕಂಬಳ ನಡೆಸಲು ಸಾಧ್ಯವಾಗಲ್ಲ. ಆದರೆ ಹಣಕ್ಕೆ ಜಾಗ ಖರೀದಿಸಿಯಾದರೂ ಉಪ್ಪಿನಂಗಡಿ ವಿಜಯ- ವಿಕ್ರಮ ಜೋಡುಕರೆ ಕಂಬಳವನ್ನು ದೇವರು ಶಕ್ತಿ ಕೊಟ್ಟಲ್ಲಿಯವರೆಗೆ ನಡೆಸುತ್ತೇನೆ ಎಂದರಲ್ಲದೆ, ಮುಂದಿನ ದಿನಗಳಲ್ಲಿ ಮೈಸೂರು, ಶಿವಮೊಗ್ಗ ಹಾಗೂ ಬೆಂಗಳೂರಿನಲ್ಲಿ ಕಂಬಳ ನಡೆಸುವ ಕನಸು ಇದೆ. ಕೇಂದ್ರ ಅನುಮತಿ ನೀಡಿದರೆ ದೆಹಲಿಯಲ್ಲಿ ನಡೆಯುವ ಗಣರಾಜ್ಯೋತ್ಸವ ಪೆರೇಡ್‌ನಲ್ಲಿ ಎರಡು ಜೋಡಿ ಕಂಬಳ ಕೋಣಗಳು ಭಾಗವಹಿಸುವಂತೆ ಮಾಡುವ ಯೋಜನೆಯಿದೆ ಎಂದರು.


ವೇದಿಕೆಯಲ್ಲಿ ಪುತ್ತೂರು ಶ್ರೀ ಮಹಾಲಿಂಗೇಶ್ವರ ದೇವಾಲಯದ ವ್ಯವಸ್ಥಾಪನಾ ಸಮಿತಿ ಸದಸ್ಯೆ ಶ್ರೀಮತಿ ನಳಿನಿ ಪಿ. ಶೆಟ್ಟಿ, ವಿಟ್ಲ- ಉಪ್ಪಿನಂಗಡಿ ಬ್ಲಾಕ್ ಕಾಂಗ್ರೆಸ್ ಮಾಜಿ ಅಧ್ಯಕ್ಷ ಪ್ರವೀಣ್ ಚಂದ್ರ ಆಳ್ವ, ಜಿಲ್ಲಾ ರಾಜ್ಯೋತ್ಸವ ಪ್ರಶಸ್ತಿ ಪುರಸ್ಕೃತ ಸುದರ್ಶನ ನಾೖಕ್‌ ಕಂಪ, ಪುತ್ತೂರು ನಗರ ಕಾಂಗ್ರೆಸ್ ಅಧ್ಯಕ್ಷ ಕೃಷ್ಣಪ್ರಸಾದ್ ಆಳ್ವ, ನೋಟರಿ ವಕೀಲೆ ಅರುಣಾ ದಿನಕರ್ ರೈ, ಪುಡಾ ಸದಸ್ಯ ನಿಹಾಲ್ ಶೆಟ್ಟಿ, ಸುಮಾ ಅಶೋಕ್ ಕುಮಾರ್ ರೈ, ಪ್ರಮುಖರಾದ ಜಗನ್ನೀವಾಸ್ ರೈ, ಪ್ರವೀಣ್ ರೈ, ಕೋರ್ಮಂಡ ಆನಂದ ರೈ, ದ.ಕ. ಜಿಲ್ಲಾ ಕಾಂಗ್ರೆಸ್ ಪ್ರಧಾನ ಕಾರ್ಯದರ್ಶಿ ಮುರಳೀಧರ ರೈ ಮಠಂತಬೆಟ್ಟು, ದ.ಕ. ಜಿಲ್ಲಾ ಮಹಿಳಾ ಕಾಂಗ್ರೆಸ್ ಪ್ರಧಾನ ಕಾರ್ಯದರ್ಶಿ ಅನಿ ಮಿನೇಜಸ್, ಕಂಬಳ ಸಮಿತಿಯ ಗೌರವಾಧ್ಯಕ್ಷ ಉಮೇಶ್ ಶೆಣೈ, ಪ್ರಧಾನ ಕಾರ್ಯದರ್ಶಿ ಕೇಶವ ಭಂಡಾರಿ ಬೆಳ್ಳಿಪ್ಪಾಡಿ ಕೈಪ, ಕೋಶಾಧಿಕಾರಿ ಸೀತಾರಾಮ ಶೆಟ್ಟಿ ಹೆಗ್ಡೆಹಿತ್ಲು, ಉಪಾಧ್ಯಕ್ಷರಾದ ವಿದ್ಯಾಧರ ಜೈನ್, ರಾಮಚಂದ್ರ ಮಣಿಯಾಣಿ, ಸುದೇಶ್ ಶೆಟ್ಟಿ ಶಾಂತಿನಗರ, ಶಿವಪ್ರಸಾದ್ ರೈ ಮಠಂತಬೆಟ್ಟು, ಜಗನ್ನಾಥ ಶೆಟ್ಟಿ ನಡುಮನೆ, ವಿಕ್ರಂ ಶೆಟ್ಟಿ ಅಂತರ, ಸಂಘಟನಾ ಕಾರ್ಯದರ್ಶಿಗಳಾದ ಯೋಗೀಶ್ ಸಾಮಾನಿ ಸಂಪಿಗೆದಡಿ ಮಠಂತಬೆಟ್ಟು, ಕೃಷ್ಣಪ್ರಸಾದ್ ಬೊಳ್ಳಾವು, ದಿಲೀಪ್ ಶೆಟ್ಟಿ ಕರಾಯ, ಸಹ ಸಂಚಾಲಕ ಜಯಪ್ರಕಾಶ್ ಬದಿನಾರು ಮತ್ತಿತರರು ಉಪಸ್ಥಿತರಿದ್ದರು.
ಕಂಬಳ ಸಮಿತಿಯ ಕಾರ್ಯಾಧ್ಯಕ್ಷ ಅಶೋಕ್ ಕುಮಾರ್ ರೈ ಅರ್ಪಿಣಿಗುತ್ತು ಸ್ವಾಗತಿಸಿದರು. ಗೌರವ ಸಲಹೆಗಾರ ನಿರಂಜನ್ ರೈ ಮಠಂತಬೆಟ್ಟು ಕಾರ್ಯಕ್ರಮ ನಿರೂಪಿಸಿದರು.

ಪೋಟೋಗ್ರಾಫರ್‌ಗಳಿಗೆ ಅವಮಾನ ಆರೋಪ ರಾಜೀವ ಶೆಟ್ಟಿ ಎಡ್ತೂರು ಅವರಿಂದ ಸ್ಪಷ್ಟನೆ
ಕಂಬಳದ ನಿರೂಪಕ ರಾಜೀವ್ ಶೆಟ್ಟಿ ಎಡ್ತೂರು ಅವರು ಕಂಬಳದ ನಿರೂಪಣೆ ವೇಳೆ ಮಾತನಾಡಿ, ಇತ್ತೀಚೆಗೆ ಕಂಬಳವೊಂದರಲ್ಲಿ ನಿರೂಪಣೆಯ ವೇಳೆ ನಾನು ಕ್ಯಾಮರಾದವರಿಗೆ ಅವಹೇಳನಕಾರಿಯಾಗಿ ಮಾತನಾಡಿದ್ದೇನೆ ಎಂಬ ಆರೋಪ ನನ್ನ ಮೇಲೆ ಕೇಳಿ ಬಂದಿತ್ತು. ಆದರೆ ನಾನು ಅವರ ಬಗ್ಗೆ ಅವಹೇಳನಕಾರಿಯಾಗಿ ಮಾತನಾಡಿಲ್ಲ. ಅವರನ್ನು ನಿಂದಿಸಿಲ್ಲ. ನಾನು ಹೇಳಿದ್ದು ಇಷ್ಟೇ ಮದುವೆ ನಡೆಯುತ್ತಿರುವಾಗ ಕ್ಯಾಮರಾದವರು ಸ್ಟೇಜ್‌ನಲ್ಲಿ ಅಡ್ಡ ನಿಂತಿರುತ್ತಾರೆ. ಎದುರಿನಲ್ಲಿ ಕುಳಿತುಕೊಂಡವರು ಅವರ ಬೆನ್ನು ನೋಡಬೇಕಷ್ಟೇ ಎಂದು. ಒಂದು ವ್ಯವಸ್ಥೆಗೆ ತೊಂದರೆಯಾದಾಗ ಅದರ ವಿರುದ್ಧ ಮಾತನಾಡುವುದು ಧರ್ಮ. ಮದುವೆಯ ಸಂಪ್ರದಾಯ, ವಿಧಿ- ವಿಧಾನಗಳನ್ನು ಯುವ ಜನತೆ ಕೂಡಾ ಕಲಿತುಕೊಳ್ಳಬೇಕು. ಆಗ ಕ್ಯಾಮರಾದವರು ಹೀಗೆ ನಿಂತರೆ ಅವರಿಗೇನು ಕಾಣೋದಿಲ್ಲ. ಅಷ್ಟೇನು ಆರೋಗ್ಯವಂತರಲ್ಲದ ಅಜ್ಜ- ಅಜ್ಜಿಗೆ ತನ್ನ ಮೊಮ್ಮಕ್ಕಳ ಮದುವೆ ನೋಡಬೇಕೆಂಬ ಆಸೆ ಇರುತ್ತದೆ. ಅವರು ಅದಕ್ಕಾಗಿ ಎದುರು ಬಂದು ಕುರ್ಚಿಯಲ್ಲಿ ಕೂತಾಗ ಅವರಿಗೆ ವಧೂ-ವರರ ಮುಖ ಕೂಡಾ ಕಾಣದಂತೆ ಅಡ್ಡಲಾಗಿ ನಿಂತರೆ ಅವರೇನು ನೋಡೋಕೆ ಸಾಧ್ಯ. ಇದರಿಂದ ಸಂಪ್ರದಾಯಕ್ಕೆ ತೊಂದರೆಯಾಗುತ್ತದೆ ಅಂತ ಅನಿಸಿದ್ದರಿಂದ ಈ ರೀತಿ ಮಾತನಾಡಿದ್ದೇನೆ. ಇನ್ನು ಕರಿಮಣಿ ಕಟ್ಟುವಾಗಲೂ ಹಾಗೆ ಕೆಲವರು ವಾಪಸ್ ಕರಿಮಣಿಯನ್ನು ತೆಗಿಸಿ ಕಟ್ಟಿಸುವುದು ಇದೆ. ಇದು ಪೋಟೋ ಚೆನ್ನಾಗಿ ಬರಬೇಕೆಂದು ಕೆಲವರ ಅನಿವಾರ್ಯತೆ ಇರಬಹುದು. ಆದರೆ ಸಂಪ್ರದಾಯದ ಪ್ರಕಾರ ಇದು ತಪ್ಪು. ಅದನ್ನು ನಾನು ಹೇಳಿದ್ದೇನೆಯೇ ಹೊರತು ಕ್ಯಾಮರಾಮೆನಗಳ ಬಗ್ಗೆ ನನಗೆ ಯಾವ ವಿರೋಧವೂ ಇಲ್ಲ. ಈ ಹಿಂದೆ ನಾನು ಅವರನ್ನು ಹೊಗಳಿ ಮಾತನಾಡಿದ್ದು ಇದೆ. ಆದರೆ ಅದು ಎಲ್ಲಿಯೂ ಪ್ರಚಾರಕ್ಕೆ ಬರಲಿಲ್ಲ. ಆದರೆ ಇದು ಮಾತ್ರ ಪ್ರಚಾರಕ್ಕೆ ಬಂತು. ಈ ಬಗ್ಗೆ ವೇಣೂರು ಕಂಬಳದಲ್ಲಿಯೇ ಸ್ಪಷ್ಟನೆ ನೀಡಿದ್ದೇನೆ. ಇಲ್ಲಿಯೂ ನೀಡುತ್ತಿದ್ದೇನೆ. ನನಗೆ ಕ್ಯಾಮರಾಮೆನ್‌ಗಳ ಮೇಲೆ ಯಾವ ದ್ವೇಷವೂ ಇಲ್ಲ. ಅವರ ಮೇಲೆ ಗೌರವವಿದೆ. ನಾವು ಪರಸ್ಪರ ವಿರೋಧ ಕಟ್ಟಿಕೊಳ್ಳುವುದು ಬೇಡ. ಸ್ನೇಹಿತರಾಗಿಯೇ ಇರೋಣ ಎಂದರು.

ಕಂಬಳದಲ್ಲಿ ಚರ್ಚೆಗೆ ಬಂದ ಯಕ್ಷಗಾನ…ಶಿಳ್ಳೆ…ತರಾಟೆ :
ಇತ್ತೀಚೆಗೆ ಯಕ್ಷಗಾನವೊಂದು ನಡೆಯುತ್ತಿರುವಾಗ ಪ್ರೇಕ್ಷಕರು ಸಿಳ್ಳೆ ಹಾಕಿದ್ದಕ್ಕೆ ಕಲಾವಿದ ಸಿಳ್ಳೆ ಹಾಕಿದವರನ್ನು ತರಾಟೆಗೆ ತೆಗೆದುಕೊಂಡ ವಿಚಾರವನ್ನು ಮುಂದಿಟ್ಟುಕೊಂಡು ಈ ಬಗ್ಗೆ ಉಪ್ಪಿನಂಗಡಿಯ ಕಂಬಳದಲ್ಲಿ ನಿರೂಪಣೆಗಾರರು ತುಳುವಿನಲ್ಲಿ ಪರಸ್ಪರ ಚರ್ಚಿಸಿದ ಘಟನೆಯು ನಡೆಯಿತು. ಗಂತ್ ಬಳಿಯಿದ್ದ ಕಂಬಳ ನಿರೂಪಕರೋರ್ವರು, “ಈಗ ಶಿಳ್ಳೆ ಹಾಕಲು ಕೂಡಾ ಇಲ್ಲವಲ್ಲ” ಎಂದರು. ಅದಕ್ಕೆ ಮಂಜೊಟ್ಟಿ ಬಳಿಯ ನಿರೂಪಕರು, “ಕಂಬಳದಲ್ಲಿ ಹಾಕಬಹುದಂತೆ” ಎಂದರು. ಆಗ ಗಂತ್‌ಬಳಿಯಿದ್ದ ನಿರೂಪಕರು, “ಕಂಬಳದಲ್ಲಿ ಹಾಕಬಹುದಾ? ಅಲ್ಲ. ಬಾಕಿ ಕಡೆ ಹಾಕಿದರೆ ಭಯಂಕರ ಮಾತನಾಡುತ್ತಾರೆ ಮಾರ್ರೆ” ಎಂದರು. ಆಗ ಮಂಜೊಟ್ಟಿ ಬಳಿಯ ನಿರೂಪಕರು, “ಕಂಬಳದಲ್ಲಿ ಮತ್ತು ಕೋಳಿ ಅಂಕದಲ್ಲಿ ಹಾಕಬಹುದು ಅಂತ ಆಗಿದೆ” ಎಂದು ನಗುತ್ತಲೇ ಉತ್ತರಿಸಿದರು. ಅದಕ್ಕೆ ಗಂತ್‌ನಲ್ಲಿದ್ದ ನಿರೂಪಕರು, “ಕಂಬಳನಾ ? ಕೋಳಿ ಅಂಕನಾ ಎಂದು. ವಿಷಿಲ್ ಹಾಕುವುದು ಒಬ್ಬನಿಗೆ ಮಾತನಾಡುವುದು ಇನ್ನೊಬ್ಬ” ಎಂದಾಗ ಆ ಕಡೆಯಿಂದ ‘ಎಂತ ಮಾಡುವುದು’ ಎಂಬ ಉತ್ತರ ಬಂತು. ಆಗ ಗಂತ್‌ನಲ್ಲಿದ್ದ ನಿರೂಪಕರು, “ಎಂತಾ ಕಥೆ” ಎಂದಾಗ ಈ ಕಡೆಯಿಂದ “ಕಥೆಯನ್ನು ಯಾರಲ್ಲಿ ಹೇಳುವುದು? ಖುಷಿಯ ಒಂದು ಪ್ರತಿಪಾದನೆ ಎಂದು ನಾವು ತಿಳಿಯುದು” ಎಂದಾಗ ಗಂತ್‌ನಲ್ಲಿದ್ದ ನಿರೂಪಕರು, ‘ಕಲಾವಿದ ಕಲಾವಿದನಾಗಿಯೇ ಉಳಿಯಬೇಕು’ ಎನ್ನುವುದರೊಂದಿಗೆ ಈ ಸಂಭಾಷಣೆ ಮುಕ್ತಾಯಗೊಂಡಿತು.

ನೀರಿಗೆ ಎಳೆದೊಯ್ದ ಕೋಣ: ಯುವಕನ ರಕ್ಷಣೆ
ಗಂತ್ ಬಳಿಯಿದ್ದ ಕೋಣವೊಂದು ನದಿ ನೀರಿಗೆ ಇಳಿದಿದ್ದು ಅದರೊಂದಿಗೆ ಅದರ ಪರಿಚಾರಕ ಯುವಕನೂ ಅದರೊಂದಿಗೆ ಇಳಿದಿದ್ದ. ಆದರೆ ಕೋಣ ಏಕಾಏಕಿ ಮುಳುಗಿಕೊಂಡು ನೀರಿನಾಳಕ್ಕೆ ನದಿಯಲ್ಲಿ ತೆರಳಿತು. ಆಗ ಯುವಕ ಕೋಣದ ಹಗ್ಗ ಕೈಬಿಡದಿದ್ದರಿಂದ ಆತನೂ ನೀರಿನಲ್ಲಿ ಮುಳುಗಿದ್ದ. ಕೂಡಲೇ ವಿಷಯ ತಿಳಿದ ಕಂಬಳ ನಿರೂಪಕರು, ಧ್ವನಿವರ್ಧಕದಲ್ಲಿ ಯುವಕನೋರ್ವ ನೀರಿನಲ್ಲಿ ಮುಳುಗಿದ್ದಾನೆ. ಈಜಲು ಬರುವವರು ತಕ್ಷಣವೇ ಆತನ ರಕ್ಷಣೆಗೆ ಧಾವಿಸಿ ಎಂದು ಸೂಚಿಸಿದರು. ರಕ್ಷಣೆಗಾಗಿ ಹಲವರು ಧಾವಿಸಿ ಬಂದರಾದರೂ, ಅಷ್ಟರಲ್ಲಾಗಲೇ ಕಂಬಳ ಕೋಣಗಳ ಬೇರೆ ತಂಡದೊಂದಿಗೆ ಬಂದಿದ್ದ ರಕ್ಷಿತ್ ಮತ್ತು ಸಂತೋಷ್ ಎಂಬ ಯುವಕರು ನದಿಗೆ ಹಾರಿ ಆತನನ್ನು ರಕ್ಷಿಸಿ ದಡಕ್ಕೆ ತಂದಿದ್ದರು. ಇವರಿಬ್ಬರನ್ನೂ ಕಂಬಳ ಸಮಿತಿಯ ವತಿಯಿಂದ ಶಾಲು ಹಾಕಿ ಗೌರವಿಸಲಾಯಿತು. ಆದರೆ ನೀರಿಗೆ ಇಳಿದಿದ್ದ ಕೋಣ ನದಿಯಲ್ಲಿ ಬಹುದೂರ ಈಜಿಕೊಂಡು ಹೋಗಿ ದ್ವೀಪದಂತಹ ಪ್ರದೇಶವೊಂದರಲ್ಲಿ ನಿಂತುಕೊಂಡಿತು. ಆದರೆ ಆ ಪ್ರದೇಶದಲ್ಲಿ ನದಿ ಆಳವಾಗಿದ್ದರಿಂದ ಅಷ್ಟು ಸುಲಭದಲ್ಲಿ ಕೋಣವನ್ನು ಹಿಡಿದು ಕೊಂಡು ಬರಲು ಸಾಧ್ಯವಾಗುತ್ತಿರಲಿಲ್ಲ. ಇದನ್ನು ಅರಿತ ಶಾಸಕ ಅಶೋಕ್ ಕುಮಾರ್ ರೈಯವರು, ನದಿಯಲ್ಲಿ ಈಜಿಕೊಂಡು ಹೋಗಿ ಕೋಣವನ್ನು ಹಿಡಿಯುವ ಪ್ರಯತ್ನ ಬೇಡ. 10 ನಿಮಿಷದಲ್ಲಿ ಬೋಟಿನ ವ್ಯವಸ್ಥೆಯನ್ನು ಮಾಡುತ್ತೇನೆ ಎಂದು ಘೋಷಿಸಿದರು. ಆದರೆ ಸ್ವಲ್ಪ ಹೊತ್ತಿನಲ್ಲಿ ಕೋಣವೇ ನದಿಯಲ್ಲಿ ಈಜಾಡುತ್ತ ಕಂಬಳದ ಗಂತಿನತ್ತ ಬಂತು.

ಕಂಬಳದ ಫಲಿತಾಂಶ
ಹಗ್ಗ ಹಿರಿಯ ವಿಭಾಗದಲ್ಲಿ 13 ಜೊತೆ ಕೋಣಗಳು ಭಾಗವಹಿಸಿದ್ದು, ಇದರಲ್ಲಿ ನಂದಳಿಕೆ ಶ್ರೀಕಾಂತ್ ಭಟ್‌ರ ಎ ಹಾಗೂ ಬಿ ವಿಭಾಗದ ಕೋಣಗಳೇ ಫೈನಲ್ ಪ್ರವೇಶಿದ್ದವು. ಇದರಲ್ಲಿ ನಂದಳಿಕೆ ಶ್ರೀಕಾಂತ್ ಭಟ್ ಅವರ ಬಿ ವಿಭಾಗದ ಕೋಣಗಳು ಪ್ರಥಮ ಹಾಗೂ ಎ ವಿಭಾಗದ ಕೋಣಗಳು ದ್ವಿತೀಯ ಬಹುಮಾನ ಪಡೆದವು. ಬಂಬ್ರಾಣ ಬೈಲು ವಂದಿತ್ ಶೆಟ್ಟಿ ಕೋಣಗಳನ್ನು ಓಡಿಸಿದರು.

ಹಗ್ಗ ಕಿರಿಯ ವಿಭಾಗದಲ್ಲಿ 18 ಜೊತೆ ಕೋಣಗಳು ಭಾಗವಹಿಸಿದ್ದು, ಬೆಳುವಾಯಿ ಪೆರೋಡಿ ಪುತ್ತಿಗೆಗುತ್ತು ನರಸಿಂಹ ಕೆ. ಶೆಟ್ಟಿಯವರ ಎ ಹಾಗೂ ಬಿ ವಿಭಾಗದ ಕೋಣಗಳು ಫೈನಲ್ ಪ್ರವೇಶಿಸಿದ್ದವು. ಇಲ್ಲಿ ಪ್ರಥಮ ಬಹುಮಾನವನ್ನು ಬಿ ವಿಭಾಗದ ಕೋಣಗಳು (ಕೋಣ ಓಡಿಸಿದವರು: ಮಾಳ ಆದಿಶ್ ಪೂಜಾರಿ) ತಮ್ಮದಾಗಿಸಿಕೊಂಡವು. ದ್ವಿತೀಯ ಬಹುಮಾನವನ್ನು ಅವರ ಎ ವಿಭಾಗದ ಕೋಣಗಳು (ಕೋಣ ಓಡಿಸಿದವರು: ಕಾವೂರು ದೋಟ ಸುದರ್ಶನ್) ಪಡೆದವು.

ಅಡ್ಡ ಹಲಗೆಯಲ್ಲಿ 8 ಜೊತೆ ಕೋಣಗಳು ಭಾಗವಹಿಸಿದ್ದು, ಇರುವೈಲು ದೊಡ್ಡಗುತ್ತು ಜಗದೀಶ್ ಎಂ. ಶೆಟ್ಟಿ ಅವರ ಕೋಣಗಳು (ಕೋಣ ಓಡಿಸಿದವರು: ತೆಕ್ಕಟ್ಟೆ ಸುಧೀರ್ ದೇವಾಡಿಗ) ಪ್ರಥಮ ಹಾಗೂ ದ್ವಿತೀಯ ಬಹುಮಾನವನ್ನು ನಾರಾವಿ ರಕ್ಷಿತ್ ಜೈನ್ ಅವರ ಕೋಣಗಳು (ಕೋಣ ಓಡಿಸಿದವರು: ಭಟ್ಕಳ ಹರೀಶ್) ಪಡೆದವು.

ನೇಗಿಲು ಹಿರಿಯ ವಿಭಾಗದಲ್ಲಿ 18 ಜೊತೆ ಕೋಣಗಳು ಭಾಗವಹಿಸಿದ್ದು, ಬೆಳುವಾಯಿ ದರೆಗುಡ್ಡೆ ಕಮಲ ನಿವಾಸ ಮನನ್ ಕಾರ್ತಿಕ್ ಪೂಜಾರಿಯವರ ಎ ವಿಭಾಗದ ಕೋಣಗಳು (ಕೋಣ ಓಡಿಸಿದವರು: ಕುಂದಬಾರಂದಡಿ ಮಾಸ್ತಿಕಟ್ಟೆ ಸ್ವರೂಪ ) ಪ್ರಥಮ ಬಹುಮಾನವನ್ನು ಪಡೆದವು. ದ್ವಿತೀಯ ಬಹುಮಾನವನ್ನು ಜೈ ತುಳುನಾಡ್ ಕಕ್ಯಪದವು ಪುಣ್ಕೆದಡಿ ರೆಹಾನ್ಸ್ ಭಂಡಾರಿ ಅವರ ಕೋಣಗಳು (ಕೋಣ ಓಡಿಸಿದವರು: ಭಟ್ಕಳ ಶಂಕರ) ಪಡೆದವು.

ನೇಗಿಲು ಹಿರಿಯ ವಿಭಾಗದಲ್ಲಿ 61 ಜೊತೆ ಕೋಣಗಳು ಭಾಗವಹಿಸಿದ್ದು, ಫೈನಲ್‌ನಲ್ಲಿ ಎರ್ಮಾಳ್ ಪುಚ್ಟೊಟ್ಟುಬೀಡು ಬಾಲಚಂದ್ರ ಲೋಕಯ್ಯ ಶೆಟ್ಟಿ ಅವರ ಎ ವಿಭಾಗದ ಕೋಣಗಳು (ಕೋಣ ಓಡಿಸಿದವರು: ಕುಂದಬಾರಂದಡಿ ಮಾಸ್ತಿಕಟ್ಟೆ ಸ್ವರೂಪ್) ಹಾಗೂ ಶ್ರೀ ಪಂಚಲಿಂಗೇಶ್ವರ ಉರುವಾಲು ನೇಕಾಳುಗುತ್ತು ಸದಾನಂದ ಗೌಡ ಅವರ ಕೋಣಗಳು (ಕೋಣ ಓಡಿಸಿದವರು: ಬೈಂದೂರು ವಿಶ್ವನಾಥ ದೇವಾಡಿಗ) ಸ್ಪರ್ಧಿಸಿದ್ದವು. ಆದರೆ ಇಲ್ಲಿ ಎರಡು ಕೋಣಗಳು ಸಮಾನವಾಗಿ ಮಂಜೊಟ್ಟಿ ತಲುಪಿದವು. ಕಂಬಳ ಸಮಿತಿಯ ತೀರ್ಮಾನದಂತೆ ಇಲ್ಲಿ ಎರಡು ಜೊತೆ ಕೋಣಗಳಿಗೂ ಪ್ರಥಮ ಬಹುಮಾನವಾದ ಒಂದು ಪವನ್ ಚಿನ್ನವನ್ನು ನೀಡಿ ಗೌರವಿಸಲಾಯಿತು.

ಕನಹಲಗೆ ವಿಭಾಗದಲ್ಲಿ 10 ಜೊತೆ ಕೋಣಗಳು ಭಾಗವಹಿಸಿದ್ದು, ಇಲ್ಲಿ ಯಾವ ಕೋಣಗಳು ನಿಶಾನೆಗೆ ನೀರು ಹಾಯಿಸದ ಕಾರಣ 10 ಜೊತೆ ಕೋಣಗಳ ಯಜಮಾನರಿಗೆ ಟ್ರೋಫಿ ನೀಡಿ ಗೌರವಿಸಲಾಯಿತು.

ಕಾರ್ಯಕ್ರಮಕ್ಕೆ ವಿಧಾನ ಸಭಾ ಸ್ಪೀಕರ್ ಯು.ಟಿ. ಖಾದರ್ ಆಗಮಿಸಿ ಶುಭ ಹಾರೈಸಿದರು. ಈ ಬಾರಿ ವಿಜಯ- ವಿಕ್ರಮ ಜೋಡುಕರೆ ಕಂಬಳದ ಫೈನಲ್ ಸ್ಪರ್ಧೆ ಮುಗಿದಾಗ ಸಂಜೆ 6.30 ಕಳೆದಿತ್ತು.

LEAVE A REPLY

Please enter your comment!
Please enter your name here