ಹಸಿರು ಕ್ರಾಂತಿಯ ಹರಿಕಾರ, ಮಾಜಿ ಉಪಪ್ರದಾನಿ ಡಾ|ಬಾಬು ಜಗಜೀವನ್ ರಾಮ್ ಅವರು 119ನೇ ಜನ್ಮದಿನಾಚರಣೆ

0

ಪುತ್ತೂರು: ತಾಲೂಕು ಆಡಳಿತ, ತಾಲೂಕು ಪಂಚಾಯತ್, ಸಮಾಜ ಕಲ್ಯಾಣ ಇಲಾಖೆ, ನಗರ ಸಭೆ ಇವುಗಳ ಸಂಯುಕ್ತ ಆಶ್ರಯದಲ್ಲಿ ಹಸಿರು ಕ್ರಾಂತಿಯ ಹರಿಕಾರ ಮಾಜಿ ಉಪ ಪ್ರಧಾನಿ ಡಾ|ಬಾಬು ಜಗಜೀವನ್ ರಾಂ ಅವರು 119ನೇ ಜನ್ಮದಿನಾಚರಣೆಯು ಎ.5ರಂದು ತಾಲೂಕು ಆಡಳಿತ ಸೌಧದಲ್ಲಿರುವ ತಾಲೂಕು ಕಚೇರಿ ಸಭಾಂಗಣದಲ್ಲಿ ನಡೆಯಿತು.


ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದ ತಾಲೂಕು ರಾಷ್ಟ್ರೀಯ ಹಬ್ಬಗಳ ಆಚರಣಾ ಸಮಿತಿ ಅಧ್ಯಕ್ಷರಾಗಿರುವ ತಹಶೀಲ್ದಾರ್ ಎಸ್.ಬಿ ಕೂಡಲಗಿ ಮಾತನಾಡಿ, ಸಂವಿಧಾನ ಶಿಲ್ಪಿ ಡಾ. ಬಿ.ಆರ್ ಅಂಬೇಡ್ಕರ್ ಮತ್ತು ಮಾಜಿ ಉಪಪ್ರದಾನಿ ಬಾಬು ಜಗಜೀವನ್ ರಾಮ್ ಅವರುಗಳು ದೇಶದ ಎರಡು ಕಣ್ಮನಿಗಳು. ಸಮಾಜದ ಅಭಿವೃದ್ಧಿಗಾಗಿ ಜೀವನದುದ್ದಕ್ಕೂ ಹೋರಾಟ ಮಾಡಿದವರು. ವಿದ್ಯಾರ್ಥಿಗಳು ಜೀವನದಿಂದಲೇ ನೊಂದುಬೆಂದು ಉನ್ನತ ಸ್ಥಾನಕ್ಕೇರಿದವರು. ಬಾಬು ಜಗಜೀವನ್ ರಾಮ್ ಅವರು ತನ್ನ ರಾಜಕೀಯ ಜೀವನದಲ್ಲಿ ದೀನ ದಲಿತರ ಅಭಿವೃದ್ಧಿ ಕೊಡುಗೆ ನೀಡಿದವವರು. ಸಮಾಜದ ಸುಧಾರಣೆಗಾಗಿ ಹಗಲು ರಾತ್ರಿ ದುಡಿದವರು. ವಿವಿಧ ಇಲಾಖಾ ಸಚಿವರಾಗಿ ದೇಶದ ಅಭಿವೃದ್ಧಿಗೆ ಕೊಡುಗೆ ನೀಡಿದವರು ಎಂದರು.


ಸಂಸ್ಮರಣಾ ಉಪನ್ಯಾಸ ನೀಡಿದ ಬಂಟ್ವಾಳ ಶ್ರೀವೆಂಕಟರಮಣ ಸ್ವಾಮಿ ಕಾಲೇಜಿನ ಪ್ರಾಂಶುಪಾಲ ಪ್ರೋ.ಎಂ.ಡಿ ಮಂಚಿ ಮಾತನಾಡಿ, ಬಾಬು ಜಗಜೀವನ್ ರಾಮ್ ಅವರು ಮಹಾತ್ಮ ಗಾಂಧೀಯಷ್ಟೇ ಪವಿತ್ರ ಸ್ಥಾನ ಪಡೆದವರು. ಆದರ್ಶ ರಾಜಕಾರಣಿಯಾಗಿ ಸುಧೀರ್ಘ 33 ವರ್ಷಗಳ ಕಾಲ ಕ್ಯಾಬಿನೆಟ್ ಸಚಿವರಾಗಿದ್ದರು. ಕೃಷಿ, ರೈಲ್ವೇ, ರಕ್ಷಣಾ ಸಚಿವರಾಗಿ ದೇಶದ ಭದ್ರತೆಗೆ ಅಡಿಪಾಯ ಹಾಕಿದವರು. ಶೋಷಿತ ವರ್ಗಕ್ಕೆ ಸ್ಥಾನಮಾನ ನೀಡಿದವರು. ಅವರು ನೀಡಿದ ಯೋಚನೆ, ಯೋಜನೆಗಳು ಇಂದಿಗೂ ಸ್ಮರಿಸುವಂತಾಗಿದ್ದು ಅವರು ಸತ್ತಿದ್ದರೂ ಬದುಕಿದ್ದಾರೆ ಎಂದರು.


ಸೇಸಪ್ಪ ನೆಕ್ಕಿಲು ಮಾತನಾಡಿ, ಉತ್ತಮ ರಾಜಕಾರಣಿಯಾಗಿ ಬಾಬು ಜಗಜೀವನ್ ರಾಮ್ ರಾಜಕೀಯ ವ್ಯವಸ್ಥೆಯ ದೂರದೃಷ್ಟಿತ್ವ ಅವರಲ್ಲಿತ್ತು. ಅವರ ಆದರ್ಶ ಮುಂದಿಟ್ಟುಕೊಂಡು ರಾಜಕಾರಣ ಮಾಡಬೇಕು. ಯುವ ಪೀಳಿಗೆ ದಾರಿ ತಪ್ಪುತ್ತಿದ್ದಾರೆ. ಅಧಿವೇಶನದಲ್ಲಿ ನಡೆಯುವುದನ್ನು ನಾವು ಗಮನಿಸುತ್ತಿದ್ದೇವೆ. ರಾಜಕೀಯ ವ್ಯವಸ್ಥೆ ಅವ್ಯವಸ್ಥೆ ಅಗುತ್ತಿದೆ. ಮಹಾತ್ಮರ ಆದರ್ಶಗಳನ್ನು ಅಳವಡಿಸಿಕೊಂಡು ಭವಿಷ್ಯ ಭಾರತ ನಿರ್ಮಾನವಾಗಲು ಸಾಧ್ಯ ಎಂದರು.


ಅಕ್ರಮ ಸಕ್ರಮ ಸಮಿತಿ ಸದಸ್ಯ ರಾಮಣ್ಣ ಪಿಲಿಂಜ ಅಂಬೇಡ್ಕರ್ ತತ್ವರಕ್ಷಣಾ ವೇದಿಕೆಯ ರಾಜ್ಯಾಧ್ಯಕ್ಷ ಗಿರಿಧರ ನಾಯ್ಕ್, ತಾಲೂಕು ರಾಷ್ಟ್ರೀಯ ಹಬ್ಬಗಳ ಆಚರಣಾ ಸಮಿತಿ ಕಾರ್ಯದರ್ಶಿಯಾಗಿರುವ ಪ್ರಭಾರ ಕ್ಷೇತ್ರ ಶಿಕ್ಷಣಾಧಿಕಾರಿ ವಿಷ್ಣುಪ್ರಸಾದ್ ಸಿ., ಶಿಶು ಅಭಿವೃದ್ಧಿ ಯೋಜನಾಧಿಕಾರಿ ಹರೀಶ್, ವಿವಿಧ ಇಲಾಖಾಧಿಕಾರಿಗಳು ಮತ್ತು ಸಿಬ್ಬಂದಿಗಳು ಕಾರ್ಯಕ್ರಮದಲ್ಲಿ ಭಾಗವಹಿಸಿದ್ದರು. ಸಮಾಜ ಕಲ್ಯಾಣ ಇಲಾಖೆಯ ಸಹಾಯಕ ನಿರ್ದೇಶಕಿ ಸುನಿತಾ ಕುಮಾರಿ ಸ್ವಾಗತಿಸಿದರು. ಕೊಂಬೆಟ್ಟು ವಸತಿ ನಿಲಯದ ಮೇಲ್ವಿಚಾರಕಿ ಸವಿತಾ ಕಾರ್ಯಕ್ರಮ ನಿರೂಪಿಸಿ, ಕಚೇರಿ ಸಿಬ್ಬಂದಿ ಪ್ರೇಮಲತಾ ವಂದಿಸಿದರು.

LEAVE A REPLY

Please enter your comment!
Please enter your name here