







“ಅಮ್ಮ” ಎನ್ನುವ ಪದ ಕೇಳಲು ಎಷ್ಟು ಚೆಂದ. ಅಮ್ಮ ಎಂದು ಹೇಳುವಾಗ ಮೈ ರೋಮಾಂಚನ ವಾಗುವುದು. ಪ್ರತಿಯೊಬ್ಬ ವ್ಯಕ್ತಿಯ ಯಶಸ್ಸಿನ ಹಿಂದೆ ಒಬ್ಬಳು ಹೆಣ್ಣುಮಗಳು ಇರುತ್ತಾಳೆ. ಆ ಹೆಣ್ಣು ತಾಯಿಯಾಗಿರಬಹುದು, ಮಡದಿಯಾಗಿರಬಹುದು, ತಂಗಿಯಾಗಿರಬಹುದು, ಅಕ್ಕನಾಗಿರಬಹುದು ಅಥವಾ ಸ್ನೇಹಿತೆಯಾಗಿರಬಹುದು. ಆದರೆ ಅಮ್ಮಾ ಎನ್ನುವಂತಹದು ಬೆಲೆಕಟ್ಟಲಾಗದ ಆಸ್ತಿ ಎಂದು ಹೇಳಬಹುದು.


“ಮಾತೃದೇವೋ ಭವ:”
ಅರ್ಥಾತ್ ತಾಯಿ ದೇವರಿಗೆ ಸಮಾನ ಎನ್ನುವುದು ಸಂಸ್ಕೃತದ ಈ ಶ್ಲೋಕದ ಅರ್ಥ.
ತಾಯಿಯಾದವಳು ಮೊದಲು ತಾನು ಹುಟ್ಟಿದ ಮನೆಗೆ ಹೆಣ್ಣುಮಗುವಾಗಿರುತ್ತಾಳೆ. ಬೆಳೆಯುತ್ತಾ ಬೆಳೆಯುತ್ತಾ ಮನೆಯವರೊಂದಿಗೆ ಸಮಾಜದಲ್ಲಿ ತನ್ನ ಸ್ಥಾನವನ್ನು ಗುರುತಿಸಿಕೊಳ್ಳುತ್ತಾಳೆ. ಕ್ರಮೇಣ ತರುಣಾವಸ್ಥೆಯಲ್ಲಿ ಸಾಧಕಿಯಾಗುತ್ತಾಳೆ. ಹಾಗೆಯೇ ಮದುವೆಯಾದಾಗ ತಾನು ಸೇರಿದ ಮನೆಗೆ ಜೀವನದ ಚುಕ್ಕಾಣಿಯನ್ನು ಹಿಡಿಯುತ್ತಾಳೆ. ಕ್ರಮೇಣವಾಗಿ ಸಂಸಾರದ ಎಲ್ಲಾ ಜವಾಬ್ದಾರಿಗಳನ್ನು ಹೊತ್ತು ತನ್ನವರು ಹಾಗೂ ತನ್ನ ಮಕ್ಕಳ ಭವಿಷ್ಯವನ್ನು ರೂಪಿಸುವಲ್ಲಿ ಸೂತ್ರಧಾರಿ ಆಗಿ ತನ್ನ ಕರ್ತವ್ಯವನ್ನು ನಿರ್ವಹಿಸುತ್ತಾಳೆ. ತಾನು ಎಷ್ಟೇ ಕಷ್ಟದಲ್ಲಿದ್ದರೂ ಅದನ್ನು ಮಕ್ಕಳ ಮುಂದೆ ತೋಡಿಕೊಳ್ಳದಷ್ಟು ಸಹನಶೀಲ ಮೂರ್ತಿಯೇ ಅಮ್ಮಾ. “ಅಮ್ಮ” ಎನ್ನುವ ಅಮೂಲ್ಯ ರತ್ನವು ನಮ್ಮ ಪಾಲಿಗೆ ಸಿಕ್ಕಿದ್ದಾದರೆ ಅದನ್ನು ನಾವು ನಮ್ಮ ಭಾಗ್ಯ ಎಂದು ಪರಿಗಣಿಸಬೇಕು. ಯಾಕೆಂದರೆ ಎಷ್ಟೋ ಜನರಿಗೆ ತಾಯಿಯ ಪ್ರೀತಿ ಸಿಕ್ಕಿರುವುದಿಲ್ಲ. ಇಷ್ಟೆಲ್ಲಾ ಆದರೂ ತಾನು ಹರಕಲು ಸೀರೆ ಉಟ್ಟರೂ ತನ್ನ ಮಗು ಎಲ್ಲರ ಮುಂದೆ ರಾಜನಾಗಿ ಮೆರೆಯಬೇಕು ಎನ್ನುವುದು ಪ್ರತಿಯೊಬ್ಬ ತಾಯಿಯ ಬಯಕೆ ಆಗಿರುತ್ತದೆ. ತಾಯಿ ಎಂಬ ತ್ಯಾಗ ಮೂರ್ತಿಯು ನಮಗೆ ಸಿಕ್ಕಂತಹ ಮಾಣಿಕ್ಯ ಮಣಿ ಎಂದು ಹೇಳಲು ಇಷ್ಟಪಡುತ್ತೇನೆ.
ನಮ್ಮ ಸಮಾಜದ ದೌರ್ಭಾಗ್ಯವೆಂದರೆ ಮಕ್ಕಳು ಇಂತಹ ಸಹನಾ ಮೂರ್ತಿಯನ್ನು ವೃದ್ಧಾಶ್ರಮಕ್ಕೆ ಸೇರಿಸುವುದಾಗಿದೆ. ಹೀಗಿರುವಾಗ ಮಕ್ಕಳು ತ್ಯಾಗಮೂರ್ತಿಯಾದ ಇಂತಹ ತಾಯಿಯನ್ನು ಹೇಗೆ ತಾನೇ ದೂರ ಮಾಡಲು ಸಾಧ್ಯ. . . . . .



ಪ್ರಸ್ತುತ ಜಗತ್ತಿನಲ್ಲಿ ಮಕ್ಕಳು ತಾಯಿಯನ್ನು ನೋಡಿಕೊಳ್ಳುವ ರೀತಿಯು ಸಮಾಜವೇ ತಲೆತಗ್ಗಿಸುವ ಹಾಗೆ ಮಾಡುತ್ತಿದೆ.… ಭೂಮಿ ತಾಯಿಯಷ್ಟೇ ಸಹನೆಯನ್ನು ಹೊಂದಿದಂತಹ ತಾಯಿಯನ್ನು, ಆಕಾಶದಷ್ಟೇ ಪ್ರೀತಿಯನ್ನು ಕೊಟ್ಟಂತಹ ತಂದೆಯನ್ನು, ಅವರಿಗೆ ಕೆಲಸ ಮಾಡಲು ಆಗದಿದ್ದ ಪಕ್ಷದಲ್ಲಿ ಅವರನ್ನು ನೋಡಿಕೊಳ್ಳದೇ ವೃದ್ಧಾಶ್ರಮಕ್ಕೆ ಕಳುಹಿಸುವುದು ಎಷ್ಟು ಸರಿ….. ಅದೇ ಮಗುವು ಸಣ್ಣದಿರುವಾಗ, ತಾಯಿಯಾದವಳು ಅದು ತನಗೆ ಹೊರೆಯೆಂದು ಮಗುವನ್ನು ಅನಾಥಾಶ್ರಮಕ್ಕೆ ಸೇರಿಸುತ್ತಿದ್ದರೆ, ಮಗುವಿನ ಮುಂದಿನ ಭವಿಷ್ಯ ಏನಾಗುತ್ತಿತ್ತು. ತಮ್ಮ ಜೀವನವನ್ನು ಲೆಕ್ಕಿಸದೆ ಮಗುವಿನ ಸರ್ವಾಂಗೀಣ ಬೆಳವಣಿಗೆಗೆ ಶ್ರಮಿಸುವ ತಂದೆ-ತಾಯಿಯವರು ಮಕ್ಕಳಿಗೆ ಹೇಗೆ ಹೊರೆಯಾಗಲು ಸಾಧ್ಯ……. ಮಗುವು ತಾಯಿಯ ಗರ್ಭದಲ್ಲಿರುವಾಗ ಅದನ್ನು ತಾಯಿಯು ಹೊರೆಯೆಂದು ಭಾವಿಸುತ್ತಿದ್ದಳೇ….. ಇವೆಲ್ಲವುಗಳನ್ನು ಪರಾಮರ್ಶಿಸಿದಾಗ ನನ್ನ ಯೋಚನೆಗೆ ಬಂದ ವಿಚಾರವೆಂದರೆ ತಂದೆ-ತಾಯಿ ಇಬ್ಬರೂ ಕೂಡ ಎರಡು ಅಪೂರ್ವ ಮಾಣಿಕ್ಯ ರತ್ನಗಳು. ಅವರನ್ನು ಜೋಪಾನವಾಗಿ ಇಟ್ಟುಕೊಳ್ಳುವುದು ನಮ್ಮ ನಿಮ್ಮೆಲ್ಲರ ಜವಾಬ್ದಾರಿಯಾಗಿರುತ್ತದೆ. ಸಮಾಜಕ್ಕೆ ನನ್ನ ಕಳಕಳಿಯ ವಿನಂತಿ ಏನೆಂದರೆ ಹಿರಿಯರನ್ನು ಗೌರವಿಸಿ, ಹಾಗೆಯೇ ತಂದೆ ತಾಯಿಯವರನ್ನು ಆದರಿಸಿ. ನಮಗೆ ಭೂಮಿಯ ಮೇಲೆ ಜೀವಿಸಲು ಕಾರಣೀಭೂತಳಾಗಿರುವ ಭಾರತಾಂಬೆಯನ್ನು ಪೂಜಿಸಿ ಎಂದು ಹೇಳುತ್ತಾ ನಮ್ಮ ಹಿರಿಯರು ನಮಗೆ ಕಲಿಸಿದ ಸಂಸ್ಕಾರವು ಮುಂದಿನ ಪೀಳಿಗೆಯವರೆಗೂ ಮುಂದುವರೆಯುವಂತಾಗಲಿ ಎನ್ನುವುದು ನನ್ನ ಆಶಯ.
” ತಾಯಿಯೇ ದೇವರು”










