







@ ಸಿಶೇ ಕಜೆಮಾರ್


ಪುತ್ತೂರು: ದಕ್ಷಿಣ ಕನ್ನಡ ಜಿಲ್ಲೆಯ ಪ್ರಮುಖ ಶಕ್ತಿ ಕೇಂದ್ರವಾದ ಪುತ್ತೂರು ಇಂದು ಅಭಿವೃದ್ಧಿಯ ಹೊಸ ಯುಗಕ್ಕೆ ಸಾಕ್ಷಿಯಾಗುತ್ತಿದೆ. ಮಾತು ಕಡಿಮೆ, ಕೆಲಸ ಜಾಸ್ತಿ ಎಂಬ ತತ್ವದಡಿ ಸಾಗುತ್ತಿರುವ ಶಾಸಕ ಅಶೋಕ್ ಕುಮಾರ್ ರೈ ಅವರು, ಪುತ್ತೂರು ವಿಧಾನಸಭಾ ಕ್ಷೇತ್ರವನ್ನು ರಾಜ್ಯದಲ್ಲೇ ಮಾದರಿ ಕ್ಷೇತ್ರವನ್ನಾಗಿ ರೂಪಿಸಲು ಪಣತೊಟ್ಟಿದ್ದಾರೆ. ಕೇವಲ ನಗರ ಪ್ರದೇಶಕ್ಕಷ್ಟೇ ಸೀಮಿತವಾಗದೆ, ಹಳ್ಳಿ ಹಳ್ಳಿಗಳ ಅಭಿವೃದ್ಧಿಗೂ ಅವರು ನೀಡುತ್ತಿರುವ ಆದ್ಯತೆ ಜನಮಾನಸದಲ್ಲಿ ಹೊಸ ಭರವಸೆ ಮೂಡಿಸಿದೆ.




ಸಾರಿಗೆ ಸಂಪರ್ಕದ ಕ್ರಾಂತಿ: ಚೆಲ್ಯಡ್ಕ ಸೇತುವೆಗೆ ಮರುಜೀವ
ದಶಕಗಳಿಂದ ಮಳೆಗಾಲದಲ್ಲಿ ಮುಳುಗಿ ಹೋಗಿ ಜನರ ಸಂಪರ್ಕ ಕಡಿತಗೊಳಿಸುತ್ತಿದ್ದ ಚೆಲ್ಯಡ್ಕ ಮುಳುಗು ಸೇತುವೆಯ ಸಮಸ್ಯೆ ಇಂದು ಇತಿಹಾಸ ಪುಟ ಸೇರಲು ಸಜ್ಜಾಗಿದೆ. ನೆನೆಗುದಿಗೆ ಬಿದ್ದಿದ್ದ ಈ ಯೋಜನೆಯ ಗಂಭೀರತೆಯನ್ನು ಅರಿತ ಶಾಸಕರು, ವಿಶೇಷ ಆಸಕ್ತಿ ವಹಿಸಿ ಸುಮಾರು 3 ಕೋಟಿ ರೂಪಾಯಿ ವೆಚ್ಚದಲ್ಲಿ ಹೊಸ ಎತ್ತರದ ಸೇತುವೆ ನಿರ್ಮಾಣವಾಗಿದೆ. ಇದು ಆ ಭಾಗದ ಸಾವಿರಾರು ಜನರ ಮಳೆಗಾಲದ ಆತಂಕವನ್ನು ದೂರ ಮಾಡಿದೆ. ಅಂದಿನಿಂದ ಇಂದಿನವರೇಗೆ ಪುತ್ತೂರಿನಲ್ಲಿ ಅದೆಷ್ಟೋ ಶಾಸಕರು ಕೆಲಸ ಮಾಡಿದ್ದರು ಚೆಲ್ಯಡ್ಕ ಸೇತುವೆ ನಿರ್ಮಾಣ ಮಾತ್ರ ಯಾರಿಂದಲೂ ಸಾಧ್ಯವಾಗಿರಲಿಲ್ಲ ಇದನ್ನು ಅಶೋಕ್ ಕುಮಾರ್ ರೈಯವರು ಮಾಡಿ ತೋರಿಸಿದ್ದಾರೆ.
ಕಾಲುಸಂಕಗಳ ಅಭಿವೃದ್ಧಿ: ಗ್ರಾಮೀಣ ಭಾಗದ ಶಾಲಾ ಮಕ್ಕಳು ಮತ್ತು ಹಿರಿಯರು ತೋಡು-ಹಳ್ಳಗಳನ್ನು ದಾಟಲು ಪಡುತ್ತಿದ್ದ ಕಷ್ಟವನ್ನು ಅರಿತು, ಕ್ಷೇತ್ರದಾದ್ಯಂತ ಅದೆಷ್ಟೋ ಕಾಲುಸಂಕಗಳನ್ನು ಮೇಲ್ದರ್ಜೆಗೇರಿಸಿದ್ದಾರೆ. ಬಹಳಷ್ಟು ವರ್ಷಗಳಿಂದ ನೆನೆಗುದಿಗೆ ಬಿದ್ದಿದ್ದ ಕಾಲು ಸಂಕಗಳನ್ನು ದುರಸ್ತಿ ಮಾಡಿಸುವ ಮೂಲಕ ಅಲ್ಲದೆ ಹೊಸ ಸೇತುವೆಗಳ ನಿರ್ಮಾಣದ ಮೂಲಕ ಗ್ರಾಮೀಣ ಭಾಗದ ಜನರ ಸಮಸ್ಯೆಗಳಿಗೆ ಕಿವಿಯಾಗುವ ಮೂಲಕ ಅವರ ಸಮಸ್ಯೆಗಳನ್ನು ದೂರ ಮಾಡಿದ್ದಾರೆ.
ಗ್ರಾಮ ಸಂಪರ್ಕ: ಪ್ರತಿ ಹಳ್ಳಿಯ ಮೂಲೆ ಮೂಲೆಗೂ ಸುಸಜ್ಜಿತ ಕಾಂಕ್ರೀಟ್ ರಸ್ತೆಗಳ ಜಾಲವನ್ನು ವಿಸ್ತರಿಸುವ ಮೂಲಕ ಕೃಷಿಕರ ಉತ್ಪನ್ನಗಳ ಸಾಗಾಟಕ್ಕೆ ಮತ್ತು ಸಾರ್ವಜನಿಕರ ಸಂಚಾರಕ್ಕೆ ಹೊಸ ವೇಗ ನೀಡಿದ್ದಾರೆ. ಈಗಾಗಲೇ ವಿಧಾನ ಸಭಾ ಕ್ಷೇತ್ರ ವ್ಯಾಪ್ತಿಯಲ್ಲಿ ಬಹಳಷ್ಟು ಕಾಂಕ್ರೀಟ್ ರಸ್ತೆಗಳ ನಿರ್ಮಾಣ ಮಾಡುವ ಮೂಲಕ ಹೊಸ ದಾಖಲೆ ಬರೆದಿದ್ದಾರೆ. ಕೆಯ್ಯೂರು ಗ್ರಾಮದ ದೇರ್ಲ-ಕೌಡಿಚ್ಚಾರ್ ಮಾರ್ಗದಲ್ಲಿ ತಾಲೂಕಿನಲ್ಲೇ ಅತೀ ಉದ್ದದ ಕಾಂಕ್ರೀಟ್ ರಸ್ತೆ ನಿರ್ಮಾಣ ಮಾಡುವ ಮೂಲಕ ಇತಿಹಾಸ ಸೃಷ್ಟಿಸಿದ್ದಾರೆ.
ಆರೋಗ್ಯ ಮತ್ತು ಶಿಕ್ಷಣದ ಭದ್ರ ಬುನಾದಿ
ಪುತ್ತೂರಿನ ಇತಿಹಾಸದಲ್ಲಿ ಸುವರ್ಣಾಕ್ಷರಗಳಲ್ಲಿ ಬರೆದಿಡಬೇಕಾದ ಸಾಧನೆಯೆಂದರೆ ಅದು ಸರ್ಕಾರಿ ಮೆಡಿಕಲ್ ಕಾಲೇಜು. ಶಾಸಕರ ಸತತ ಪ್ರಯತ್ನದ ಫಲವಾಗಿ ಮಂಜೂರಾದ ಈ ಕಾಲೇಜು ಪುತ್ತೂರನ್ನು ದಕ್ಷಿಣ ಕನ್ನಡದ ಎರಡನೇ ಪ್ರಮುಖ ವೈದ್ಯಕೀಯ ಹಬ್ ಆಗಿ ಪರಿವರ್ತಿಸಲಿದೆ. ಮಂಗಳೂರನ್ನು ಕೂಡ ಬಿಟ್ಟು ಪುತ್ತೂರಿನಲ್ಲಿ ಅತ್ಯಂತ ಸುಸಜ್ಜಿತ ಮೆಡಿಕಲ್ ಕಾಲೇಜು ನಿರ್ಮಾಣದ ಹಿಂದೆ ಶಾಸಕ ಅಶೋಕ್ ರೈಯವರ ಶ್ರಮ ಬಹಳಷ್ಟಿದೆ. ತಾನು ಶಾಸಕನಾಗುವ ಮೊದಲೆ ಮೆಡಿಕಲ್ ಕಾಲೇಜಿನ ಕನಸು ಕಂಡಿದ್ದ ರೈಯವರು ಶಾಸಕನಾದ ಆರಂಭದಲ್ಲೇ ಈ ಬಗ್ಗೆ ಮುಖ್ಯಮಂತ್ರಿಗಳ ಜೊತೆ ಸತತ ಮಾತುಕತೆ ನಡೆಸಿ ಕೊನೆಗೂ ಮೆಡಿಕಲ್ ಕಾಲೇಜು ಪುತ್ತೂರಿಗೆ ಬರುವಂತೆ ಮಾಡುವಲ್ಲಿ ಯಶಸ್ಸು ಕಂಡಿದ್ದಾರೆ. ಇದರೊಂದಿಗೆ ಯುವ ಪ್ರತಿಭೆಗಳಿಗಾಗಿ ನಿರ್ಮಾಣವಾಗುತ್ತಿರುವ ಸುಸಜ್ಜಿತ ಕ್ರೀಡಾಂಗಣ ಮತ್ತು ಆಧುನಿಕ ಆರ್.ಟಿ.ಓ ಟ್ರ್ಯಾಕ್ ಪುತ್ತೂರಿನ ಘನತೆಯನ್ನು ಹೆಚ್ಚಿಸಲಿದೆ.
ಧಾರ್ಮಿಕ ಮತ್ತು ಪ್ರವಾಸೋದ್ಯಮದ ಪುನಶ್ಚೇತನ
ಪುತ್ತೂರಿನ ಆರಾಧ್ಯ ದೈವ ಶ್ರೀ ಮಹಾಲಿಂಗೇಶ್ವರ ದೇವಸ್ಥಾನ ಮತ್ತು ದಕ್ಷಿಣ ಕಾಶಿ ಎಂದೇ ಪ್ರಸಿದ್ದಿ ಪಡೆದುಕೊಂಡಿರುವ ಸಂಗಮ ಕ್ಷೇತ್ರ ಉಪ್ಪಿನಂಗಡಿ ಶ್ರೀ ಸಹಸ್ರಲಿಂಗೇಶ್ವರ ದೇವಸ್ಥಾನದ ಅಭಿವೃದ್ಧಿ ಕಾರ್ಯಗಳಿಗೆ ಶಾಸಕರು ಹೆಚ್ಚಿನ ಒತ್ತು ನೀಡಿದ್ದಾರೆ. ಈಗಾಗಲೇ ಸುಮಾರು 3 ಕೋಟಿ ರೂಪಾಯಿ ವೆಚ್ಚದಲ್ಲಿ ಪುತ್ತೂರು ಶ್ರೀ ಕ್ಷೇತ್ರದ ಅಭಿವೃದ್ಧಿಗೆ ಮುನ್ನುಡಿ ಇಟ್ಟಿದ್ದಾರೆ. ದೇವಸ್ಥಾನಕ್ಕೆ ಸೇರಬೇಕಾದ ಜಾಗವನ್ನು ಮರಳಿ ಕ್ಷೇತ್ರ ವ್ಯಾಪ್ತಿಗೆ ತರುವಲ್ಲಿ ರೈಯವರ ಪಾತ್ರ ಹಿರಿದು ಆಗಿದೆ.
ಬೀರಮೇಲೆ ಬೆಟ್ಟ: ಪುತ್ತೂರಿನ ಹಸಿರು ಸಿರಿಯಾದ ಬೀರಮೇಲೆ ಬೆಟ್ಟವನ್ನು ಪ್ರವಾಸಿ ತಾಣವನ್ನಾಗಿ ರೂಪಿಸುವ ಮೂಲಕ ನಗರದ ಜನರಿಗೆ ಉತ್ತಮ ವಿಶ್ರಾಂತಿ ಧಾಮವನ್ನು ಕಲ್ಪಿಸುತ್ತಿದ್ದಾರೆ.ಒಂದು ಕಾಲದಲ್ಲಿ ದೂರದರ್ಶನ ಮರುಪ್ರಸಾರ ಕೇಂದ್ರವಾಗಿದ್ದು ಬಿರುಮಲೆ ಬೆಟ್ಟವು ಇಂದು ಅಭಿವೃದ್ಧಿಯನ್ನು ಕಾಣುತ್ತಿದೆ. ಕೋಟಿ ರೂಪಾಯಿಗಳನ್ನು ಬೆಟ್ಟದ ಅಭಿವೃದ್ಧಿಗೆ ಶಾಸಕರು ಮೀಸಲಿಟ್ಟಿದ್ದಾರೆ.
ಮಾವಿನ ಮಿಡಿ ಸಂರಕ್ಷಣೆ: ಒಂದು ಅನ್ವರ್ಥ ಅಭಿಯಾನ
ಅಭಿವೃದ್ಧಿಯ ನಡುವೆ ಶಾಸಕರ ಪರಿಸರ ಕಾಳಜಿ ದೇಶದ ಗಮನ ಸೆಳೆದಿದೆ. “ಮಾವಿನ ಮಿಡಿಗಳನ್ನು ಕೊಯ್ಯಬಾರದು” ಎಂಬ ಅವರ ಕರೆ ಇಂದು ಪುತ್ತೂರಿನ ಮಾವಿನ ಮರಗಳನ್ನು ಹಣ್ಣುಗಳಿಂದ ಸಮೃದ್ಧಗೊಳಿಸಿದೆ. ಬೀದಿ ಬದಿಯಲ್ಲಿದ್ದ ಮಾವಿನ ಮರಗಳಿಂದ ಹಣ್ಣುಗಳು ಉದುರುತ್ತಿದ್ದು ಮಕ್ಕಳು,ದಾರಿಹೋಕರು ಹಣ್ಣುಗಳನ್ನು ಹೆಕ್ಕಿಕೊಂಡು ತಿನ್ನುತ್ತಿದ್ದಾರೆ. ಇದಲ್ಲದೆ ಹಣ್ಣುಗಳಿಂದ ವಿವಿಧ ಖಾದ್ಯಗಳನ್ನು ತಯಾರಿಸಿ ಸವಿಯುತ್ತಿದ್ದಾರೆ. ಮರದಲ್ಲಿರುವ ಹಣ್ಣುಗಳು ಅದೆಷ್ಟೋ ಪ್ರಾಣಿ, ಪಕ್ಷಿ ಸಂಕುಲಕ್ಕೆ ಆಹಾರವಾಗುತ್ತಿದೆ. ಮಿಡಿಗಳ ಕಳ್ಳತನ ಅಥವಾ ಅಕಾಲಿಕ ಕಟಾವಿಗೆ ಕಡಿವಾಣ ಬಿದ್ದ ಕಾರಣ, ಮರಗಳು ಹಣ್ಣಿನ ಭಾರಕ್ಕೆ ಬಾಗಿವೆ. ಇದು ಕೃಷಿಕನ ಮೊಗದಲ್ಲಿ ನಗು ತಂದಿದೆ ಹಾಗೂ ಪ್ರಕೃತಿಯ ಸಮತೋಲನ ಕಾಯ್ದುಕೊಂಡಿದೆ.
ಹತ್ತು ಹಲವು ಜನಪರ ಯೋಜನೆಗಳು
ಕೇವಲ ಮೂಲಭೂತ ಸೌಕರ್ಯಗಳಷ್ಟೇ ಅಲ್ಲದೆ, ಸಾಮಾಜಿಕವಾಗಿಯೂ 10ಕ್ಕೂ ಹೆಚ್ಚು ಮಹತ್ವದ ಯೋಜನೆಗಳನ್ನು ಜಾರಿಗೆ ತಂದಿದ್ದಾರೆ. ಬಡ ಕುಟುಂಬಗಳಿಗೆ ನೆರವು, ಕೃಷಿ ಉತ್ತೇಜನ ಮತ್ತು ಸಾರ್ವಜನಿಕ ಕುಂದುಕೊರತೆಗಳ ಶೀಘ್ರ ವಿಲೇವಾರಿಯಲ್ಲಿ ಶಾಸಕರು ತೋರುತ್ತಿರುವ ವೇಗವು ಜನಪ್ರಿಯತೆಯನ್ನು ಇಮ್ಮಡಿಗೊಳಿಸಿದೆ.ಅದೆಷ್ಟೋ ವರ್ಷಗಳಿಂದ ಬಾಕಿಯಾಗಿದ್ದ ಅಕ್ರಮ ಸಕ್ರಮ ಕಡತಗಳ ಶೀಘ್ರ ವಿಲೇವಾರಿ ಆಗುತ್ತಿದ್ದು ಯಾವುದೇ ಭ್ರಷ್ಟಾಚಾರವಿಲ್ಲದೆ ಸರಕಾರಿ ಕಛೇರಿಗಳಲ್ಲಿ ಬಡವರ ಕೆಲಸಗಳು ಆಗುತ್ತಿರುವುದು ಅತ್ಯಂತ ಹೆಮ್ಮೆಯ ಸಂಗತಿಯಾಗಿದೆ.
ಆಧುನಿಕ ತಂತ್ರಜ್ಞಾನ ಮತ್ತು ಹಳೆಯ ಸಂಪ್ರದಾಯಗಳ ನಡುವೆ ಸಮತೋಲನ ಸಾಧಿಸುತ್ತಾ, ಪುತ್ತೂರಿನ ಸಮಸ್ತ ಜನರ ಹಿತ ಕಾಯುತ್ತಿರುವ ಶಾಸಕ ಅಶೋಕ್ ಕುಮಾರ್ ರೈ ಅವರು ಪುತ್ತೂರಿನ ಪಾಲಿನ ’ಅಭಿವೃದ್ಧಿಯ ಸಾರಥಿ’ಯಾಗಿದ್ದಾರೆ. ಚೆಲ್ಯಡ್ಕ ಸೇತುವೆಯಿಂದ ಹಿಡಿದು ಮೆಡಿಕಲ್ ಕಾಲೇಜಿನವರೆಗೆ ಅವರ ಸಾಧನೆಗಳ ಪಟ್ಟಿ ಪುತ್ತೂರಿನ ಭವಿಷ್ಯವನ್ನು ಉಜ್ವಲಗೊಳಿಸುತ್ತಿದೆ.
ಪ್ರಮುಖ ಅಭಿವೃದ್ಧಿ ಕಾಮಗಾರಿಗಳ ಪಟ್ಟಿ
1. ಮೆಡಿಕಲ್ ಕಾಲೇಜು, ಈಗಾಗಲೇ ಆಸ್ಪತ್ರೆಯ ಮೇಲ್ದರ್ಜೆಗೆ 180 ಕೋಟಿ ರೂ.ಬಿಡುಗಡೆಗೊಂಡಿರುತ್ತದೆ.
2. ಮುಂಡೂರಿನಲ್ಲಿ ನಿರ್ಮಾಣಗೊಳ್ಳಲಿದೆ ಆರ್ಟಿಓ ಟ್ರ್ಯಾಕ್
3. ಪುತ್ತೂರು ಬಿರುಮಲೆ ಬೆಟ್ಟ ಅಭಿವೃದ್ಧಿ
4. ಮುಂಡೂರಿನಲ್ಲಿ ನಿರ್ಮಾಣಗೊಳ್ಳಲಿದೆ ಸುಸಜ್ಜಿತ ಕ್ರೀಡಾಂಗಣ
5. ಕೆ.ಎಂ.ಎಫ್
6. ಪುತ್ತೂರು ಶ್ರೀ ಮಹಾಲಿಂಗೇಶ್ವರ ದೇವಸ್ಥಾನದ ಅಭಿವೃದ್ಧಿ
7.ಉಪ್ಪಿನಂಗಡಿ ಶ್ರೀ ಸಹಸ್ರಲಿಂಗೇಶ್ವರ ದೇವಸ್ಥಾನದ ಅಭಿವೃದ್ಧಿ
8.ಕುರಿಯದಲ್ಲಿ ಕಾರ್ಮಿಕರ ವಸತಿ ಶಾಲೆ
9.ಪುತ್ತೂರು-ಉಪ್ಪಿನಂಗಡಿ ಚತುಷ್ಪಥ ರಸ್ತೆ
10.ವಿಟ್ಲ-ಕಬಕ ಚತುಷ್ಪಥ ರಸ್ತೆ
11.ರಾಜ್ಯದ ಮೂರನೇ ಅತೀ ದೊಡ್ಡ ರಾಷ್ಟ್ರಧ್ವಜ
ಇದಲ್ಲದೆ ಇನ್ನೂ ಅನೇಕ ಅಭಿವೃದ್ಧಿ ಕಾರ್ಯಗಳು ಪುತ್ತೂರು ವಿಧಾನಸಭಾ ಕ್ಷೇತ್ರ ವ್ಯಾಪ್ತಿಯಲ್ಲಿ ನಡೆಯಲಿದೆ.









