ಗ್ರಾಮೀಣ ವಿದ್ಯಾರ್ಥಿಗಳ ಕಲಿಕೆಗೆ ಗೆಟಿಕ್ಸ್ ಹೆಲ್ತ್ ಆಸರೆ : 8 ಗ್ರಾಮೀಣ ಶಾಲಾ 1,100 ಮಕ್ಕಳಿಗೆ ಶಾಲಾ ಕಿಟ್ ವಿತರಣೆ

0

ಪುತ್ತೂರು: ಗ್ರಾಮೀಣ ಭಾಗದ ವಿದ್ಯಾರ್ಥಿಗಳ ಶೈಕ್ಷಣಿಕ ಪ್ರಗತಿಗೆ ಉತ್ತೇಜನ ನೀಡುವ ನಿಟ್ಟಿನಲ್ಲಿ ಇಲ್ಲಿನ ಆಕಾಂಕ್ಷಾ ಟ್ರಸ್ಟ್ ಹಾಗೂ `ಗೆಟಿಕ್ಸ್ ಹೆಲ್ತ್ ಇಂಡಿಯಾ (Getixhealth India Pvt Ltd) ಸಂಸ್ಥೆಯ ಜಂಟಿ ಆಶ್ರಯದಲ್ಲಿ ವಿನೂತನ ಶೈಕ್ಷಣಿಕ ಸೇವಾ ಯೋಜನೆ ಹಮ್ಮಿಕೊಳ್ಳಲಾಗಿದೆ. ತಾಲೂಕಿನ 8 ಗ್ರಾಮೀಣ ಶಾಲೆಗಳ ಒಟ್ಟು 1,100 ವಿದ್ಯಾರ್ಥಿಗಳಿಗೆ ಉಚಿತವಾಗಿ ಶಾಲಾ ಕಿಟ್‌ಗಳನ್ನು ವಿತರಿಸುವ ಮೂಲಕ ಮಕ್ಕಳ ಕಲಿಕೆಗೆ ಪ್ರೇರಣೆ ನೀಡಲಾಗಿದೆ. ಗೆಟಿಕ್ಸ್ ಹೆಲ್ತ್ ಸಂಸ್ಥೆಯ ಸಿ.ಎಸ್.ಆರ್ (CSR) ಯೋಜನೆಯ ಆರ್ಥಿಕ ನೆರವಿನೊಂದಿಗೆ ವಿತರಣಾ ಕಾರ್ಯಕ್ರಮ ಜರುಗಿದೆ.

ಗ್ರಾಮೀಣ ಭಾಗದ ಮಕ್ಕಳ ಶೈಕ್ಷಣಿಕ ಅಗತ್ಯಗಳನ್ನು ಮನಗಂಡು, ಪ್ರತಿ ವಿದ್ಯಾರ್ಥಿಗೂ ಅವರ ತರಗತಿ ಹಾಗೂ ಅಗತ್ಯಕ್ಕೆ ಅನುಗುಣವಾಗಿ ಉತ್ತಮ ಗುಣಮಟ್ಟದ ಶಾಲಾ ಬ್ಯಾಗ್, ನೋಟ್ ಪುಸ್ತಕಗಳು (Notebooks) ಹಾಗೂ ಪೆನ್, ಪೆನ್ಸಿಲ್ ಸೇರಿದಂತೆ ಅಗತ್ಯ ಬರಹ ಸಾಮಗ್ರಿಗಳನ್ನು ಒಳಗೊಂಡ ಕಿಟ್‌ಗಳನ್ನು ಸಿದ್ಧಪಡಿಸಿ ವಿತರಿಸಲಾಗಿದೆ. ಶೈಕ್ಷಣಿಕ ವರ್ಷದ ಆರಂಭದಲ್ಲೇ ಈ ಕಿಟ್‌ಗಳನ್ನು ತಲುಪಿಸಿರುವುದರಿಂದ ಮಕ್ಕಳ ಕಲಿಕೆಗೆ ಸಕಾಲಿಕ ನೆರವು ಸಿಕ್ಕಂತಾಗಿದೆ. ಗ್ರಾಮೀಣ ಪ್ರದೇಶದ ಬೆಟ್ಟಂಪಾಡಿ ನವೋದಯ ಪ್ರೌಢಶಾಲೆ, ನೆಹರೂನಗರದ ಮಂಜಲ್ಪಡ್ಪು ಬಿಇಎಮ್ ಹಿ.ಪ್ರಾ.ಶಾಲೆ, ಈಶ್ವರಮಂಗಲ ಶ್ರೀಪಂಚಲಿಂಗೇಶ್ವರ ಪ್ರೌಢಶಾಲೆ, ನೆಲ್ಯಾಡಿ ಶ್ರೀರಾಮ ವಿದ್ಯಾಲಯ(ಕನ್ನಡ ಮಾಧ್ಯಮ), ಪಾಣೆಮಂಗಳೂರು ಶ್ರೀಶಾರದಾ ಪ್ರೌಢಶಾಲೆ, ಕಡಂದಲೆ ಶ್ರೀಸುಬ್ರಹ್ಮಣ್ಯಸ್ವಾಮಿ ಪ್ರೌಢಶಾಲೆ, ಉರುವಾಲು ಅನುದಾನಿತ ಹಿ.ಪ್ರಾ.ಶಾಲೆ, ಪೆರ್ಲಂಪಾಡಿ ಶ್ರೀಷಣ್ಮುಖದೇವ ಪ್ರೌಢಶಾಲೆಗಳ 1,100 ವಿದ್ಯಾರ್ಥಿಗಳಿಗೆ ಕಿಟ್ ವಿತರಿಸಲಾಗಿದೆ.

ಶಿಕ್ಷಣ ರಂಗದಲ್ಲಿ ಆಕಾಂಕ್ಷಾ ಟ್ರಸ್ಟ್ ಅಪ್ರತಿಮ ಸೇವೆ
ಕಳೆದ 12 ವರ್ಷಗಳಿಂದ ಗ್ರಾಮೀಣ ಭಾಗದ ಮಕ್ಕಳ ಶಿಕ್ಷಣ ಹಾಗೂ ಯುವಜನರ ಕೌಶಲ್ಯಾಭಿವೃದ್ಧಿಗಾಗಿ ನಿರಂತರವಾಗಿ ಶ್ರಮಿಸುತ್ತಿರುವ ಆಕಾಂಕ್ಷಾ ಟ್ರಸ್ಟ್, ಈವರೆಗೆ 160ಕ್ಕೂ ಅಧಿಕ ಸಾಮಾಜಿಕ ಮತ್ತು ಶೈಕ್ಷಣಿಕ ಕಾರ್ಯಕ್ರಮಗಳನ್ನು ಯಶಸ್ವಿಯಾಗಿ ಆಯೋಜಿಸಿ ಮುನ್ನಡೆಯುತ್ತಿದೆ. ಸಂಸ್ಥೆಯು ಗ್ರಾಮೀಣ ವಿದ್ಯಾರ್ಥಿಗಳಿಗಾಗಿ ನಡೆಸುತ್ತಿರುವ ಗ್ರಂಥ ಮಿತ್ರ FLN ತರಗತಿಗಳು'',NMMS ಪರೀಕ್ಷಾ ತರಬೇತಿ” ಹಾಗೂ ಮಾನಸಿಕ ಆರೋಗ್ಯ ವೃದ್ಧಿಸುವ `ಮೈಂಡ್ ಸ್ಪೇಸ್ ಆಪ್ತ ಸಮಾಲೋಚನೆ”ಯಂತಹ ಉತ್ಕೃಷ್ಟ ಸೇವಾ ಕಾರ್ಯಗಳು ಸಾರ್ವಜನಿಕ ವಲಯದಲ್ಲಿ ವ್ಯಾಪಕ ಶ್ಲಾಘನೆಗೆ ಪಾತ್ರವಾಗಿವೆ.

ಸರ್ಕಾರದ ಪುರಸ್ಕಾರದ ಗರಿ:
ಆಕಾಂಕ್ಷಾ ಟ್ರಸ್ಟ್‌ನ ಈ ಗಮನಾರ್ಹ ಸಾಮಾಜಿಕ ಕೊಡುಗೆಯನ್ನು ಗುರುತಿಸಿ, ಕರ್ನಾಟಕ ಸರ್ಕಾರದ ಗ್ರಾಮೀಣ ಅಭಿವೃದ್ಧಿ ಮತ್ತು ಪಂಚಾಯತ್ ರಾಜ್ ಇಲಾಖೆಯು ಈ ಹಿಂದೆ ಸಂಸ್ಥೆಯನ್ನು ಅಧಿಕೃತವಾಗಿ ಪುರಸ್ಕರಿಸಿ ಸನ್ಮಾನಿಸಿದೆ.

ಮಕ್ಕಳ ಶೈಕ್ಷಣಿಕ ಬೆಳವಣಿಗೆಗೆ ಈ ಕಿಟ್‌ಗಳು ಅತ್ಯಂತ ಸಹಕಾರಿ
ನಾವು ಈಗಾಗಲೇ ಆಯ್ದ ಗ್ರಾಮೀಣ ಶಾಲೆಗಳಲ್ಲಿ ಶೈಕ್ಷಣಿಕ ಸುಧಾರಣೆ ಹಾಗೂ ಗುಣಮಟ್ಟದ ಕಲಿಕೆಗೆ ನಿರಂತರ ಬೆಂಬಲ ನೀಡುತ್ತಾ ಬಂದಿದ್ದೇವೆ. ಈ ನಿರಂತರ ಪ್ರಯತ್ನಗಳ ಭಾಗವಾಗಿ, ಮಕ್ಕಳ ಶೈಕ್ಷಣಿಕ ಬೆಳವಣಿಗೆಗೆ ಮತ್ತಷ್ಟು ವೇಗ ನೀಡಲು ಈ ಶಾಲಾ ಕಿಟ್‌ಗಳು ಅತ್ಯಂತ ಸಹಕಾರಿಯಾಗಲಿವೆ. ನಮ್ಮ ಈ ಸಾಮಾಜಿಕ ಕಳಕಳಿಗೆ ಹೆಗಲು ಕೊಟ್ಟು, ಸಿ.ಎಸ್.ಆರ್ ನಿಧಿಯ ಮೂಲಕ ಬೆಂಬಲವಾಗಿ ನಿಂತ ಗೆಟಿಕ್ಸ್ ಹೆಲ್ತ್ ಇಂಡಿಯಾ ಸಂಸ್ಥೆಗೆ ನಾವು ಆಭಾರಿಯಾಗಿದ್ದೇವೆ.
ಡಾ| ಶ್ರೀಶ ಭಟ್, ಸಂಸ್ಥಾಪಕರು, ಆಕಾಂಕ್ಷಾ ಟ್ರಸ್ಟ್

LEAVE A REPLY

Please enter your comment!
Please enter your name here