






ಬಡಗನ್ನೂರು: ದರ್ಬೆತ್ತಡ್ಕ ಸ.ಉ.ಹಿ.ಪ್ರಾ. ಶಾಲೆಯಲ್ಲಿ ‘ನೋ ಬ್ಯಾಗ್ ಡೇ’ ಸಂಭ್ರಮ ಶನಿವಾರದ ಮೊದಲ ಕಾರ್ಯಕ್ರಮವನ್ನು ತಿಂಗಳ ಮೂರನೇ ಶನಿವಾರ ವಿಶೇಷ ಅಗತ್ಯವುಳ್ಳ ವ್ಯಕ್ತಿಗಳೊಂದಿಗೆ ಸಂವಹನ ಕಾರ್ಯಕ್ರಮದ ಮೂಲಕ ಆಯೋಜಿಸಲಾಯಿತು.


ಕಾರ್ಯಕ್ರಮದಲ್ಲಿ ಶಾಲೆಯ ಹಿರಿಯ ವಿದ್ಯಾರ್ಥಿ, ರಾಷ್ಟ್ರೀಯ ಮಟ್ಟದ ವೀಲ್ಚೇರ್ ಬಾಸ್ಕೆಟ್‌ಬಾಲ್ ಆಟಗಾರ, ಭಜನಾ ಗುರು ಹಾಗೂ ಬಹುಮುಖ ಪ್ರತಿಭೆ ಮೋಹನ್ ಕೆ ಮುಖ್ಯ ಅತಿಥಿಯಾಗಿ ಭಾಗವಹಿಸಿದ್ದರು. ಯಾವುದೇ ಅಡೆತಡೆಗಳಿದ್ದರೂ ದೃಢ ಸಂಕಲ್ಪ ಮತ್ತು ಪರಿಶ್ರಮದಿಂದ ಯಶಸ್ಸು ಸಾಧಿಸಬಹುದು ಎಂಬ ಸಂದೇಶವನ್ನು ಅವರು ಮಕ್ಕಳಿಗೆ ಮನದಟ್ಟು ಮಾಡಿದರು.



ಅನಿರೀಕ್ಷಿತವಾಗಿ ಉಂಟಾದ ಅಂಗವೈಕಲ್ಯವನ್ನು ಮೀರಿ ವೀಲ್ಚೇರ್ ಬಾಸ್ಕೆಟ್‌ಬಾಲ್ ಕ್ರೀಡೆಯಲ್ಲಿ ರಾಷ್ಟ್ರಮಟ್ಟದಲ್ಲಿ ಸಾಧನೆ ಮಾಡಿದ ತಮ್ಮ ಜೀವನಯಾನವನ್ನು ವಿದ್ಯಾರ್ಥಿಗಳೊಂದಿಗೆ ಹಂಚಿಕೊಂಡರು.ತಾವು ಕಲಿತ ಶಾಲೆಯ ವಿದ್ಯಾರ್ಥಿಗಳೊಂದಿಗೆ ಆತ್ಮೀಯವಾಗಿ ಸಂವಹನ ನಡೆಸಿದ ಮೋಹನ್ ಕೆ ಅವರು ಮಕ್ಕಳ ಪ್ರಶ್ನೆಗಳಿಗೆ ಉತ್ತರಿಸಿ ಅವರನ್ನು ಪ್ರೋತ್ಸಾಹಿಸಿದರು.
ಕಾರ್ಯಕ್ರಮದಲ್ಲಿ ಶಾಲೆಯ ಹಿರಿಯ ವಿದ್ಯಾರ್ಥಿ ರತನ್ ಎಲ್.ಕೆ. ಉಪಸ್ಥಿತರಿದ್ದರು.ಶಿಕ್ಷಕರಾದ ರಮ್ಯಾ ಎಸ್ ಮತ್ತು ಮಂಜನಾಯ್ಕ ಪಿ ಪ್ರಸ್ತಾವಿಕ ಮಾತುಗಳನ್ನಾಡಿದರು. ಶಿಕ್ಷಕರಾದ ಮೋಹಿತ ಕೆ, ಯೋಗಿನಿ ಆರ್, ಧನಲಕ್ಷ್ಮಿ ಹಾಗೂ ಶಿಲ್ಪಾ ರೈ ಜಿ ರವರು ವಿದ್ಯಾರ್ಥಿಗಳು ಮತ್ತು ಅತಿಥಿಗಳ ನಡುವಿನ ಸಂವಹನ ಕಾರ್ಯಕ್ರಮ ನಡೆಸಿಕೊಟ್ಟರು.
ಶಾಲಾ ವಿದ್ಯಾರ್ಥಿಗಳು ಹಾಗೂ ಅಕ್ಷರದಾಸೋಹ ಸಿಬಂದಿಗಳು ಉಪಸ್ಥಿತರಿದ್ದರು.ಉಪ ಸ್ವಚ್ಛತಾ ಮಂತ್ರಿ ತಸ್ವಿನ್ ಆರ್.ಹೆಚ್. ಹಾಗೂ ಉಪ ವಿರೋಧ ಪಕ್ಷದ ನಾಯಕ ಪ್ರಜ್ವಲ್ ಪ್ರಾರ್ಥಿಸಿದರು. ಶಾಲಾ ಉಪ ಸಾಂಸ್ಕೃತಿಕ ಮಂತ್ರಿ ಪೃಥ್ವಿ ಕೆ ಸ್ವಾಗತಿಸಿ, ಶಿಕ್ಷಣ ಮಂತ್ರಿ ಕೃತಿಕಾ ವಂದಿಸಿದರು. ಶಾಲಾ ನಾಯಕಿ ಜಲಜಾಕ್ಷಿ ಕಾರ್ಯಕ್ರಮ ನಿರೂಪಿಸಿದರು.
ಕಾರ್ಯಕ್ರಮದ ಉದ್ದೇಶ: ವಿಶೇಷ ಅಗತ್ಯವುಳ್ಳ ವ್ಯಕ್ತಿಗಳ ಜೀವನ ಹೋರಾಟ, ಸಾಧನೆ ಹಾಗೂ ಅವರೊಂದಿಗೆ ಆತ್ಮೀಯ ಸಂವಹನದ ಮೂಲಕ ವಿದ್ಯಾರ್ಥಿಗಳಲ್ಲಿ ಮಾನವೀಯ ಮೌಲ್ಯಗಳನ್ನು ಬೆಳೆಸುವುದು ‘ನೋ ಬ್ಯಾಗ್ ಡೇ’ ಸಂಭ್ರಮ ಶನಿವಾರ ಕಾರ್ಯಕ್ರಮದ ಮುಖ್ಯ ಉದ್ದೇಶವಾಗಿದೆ.










