






ಪುತ್ತೂರು: ಕುಂಬ್ರದ ಕರ್ನಾಟಕ ಪಬ್ಲಿಕ್ ಸ್ಕೂಲ್ನ ಪದವಿ ಪೂರ್ವ ವಿಭಾಗದ 2026-27ನೇ ಸಾಲಿನ ನೂತನ ವಿದ್ಯಾರ್ಥಿ ಸಂಘದ ಉದ್ಘಾಟನಾ ಸಮಾರಂಭವು ಜೂ.29 ರಂದು ಕಾಲೇಜಿನ ಸಭಾಂಗಣದಲ್ಲಿ ನೆರವೇರಿತು.


ಕಾರ್ಯಕ್ರಮವನ್ನು ಉಪ್ಪಿನಂಗಡಿ ಸರಕಾರಿ ಪದವಿಪೂರ್ವ ಕಾಲೇಜಿನ ಪ್ರಾಂಶುಪಾಲರಾದ ಇಬ್ರಾಹಿಂ ಅವರು ಉದ್ಘಾಟಿಸಿದರು. ಈ ಸಂದರ್ಭದಲ್ಲಿ ಮಾತನಾಡಿದ ಅವರು, “ವಿದ್ಯಾರ್ಥಿಗಳಲ್ಲಿ ನಾಯಕತ್ವದ ಗುಣಗಳು ಅಡಗಿರುತ್ತವೆ. ಅವುಗಳನ್ನು ಗುರುತಿಸಿ ಬೆಳೆಸಿಕೊಳ್ಳುವುದು ಇಂದಿನ ಅವಶ್ಯಕತೆ,” ಎಂದು ಕರೆ ನೀಡಿದರು. ಅಲ್ಲದೆ, ಪೋಷಕರು ತಮ್ಮ ಮಕ್ಕಳಿಗಾಗಿ ಪಡುವ ಶ್ರಮ ಮತ್ತು ಅವರ ಮೇಲಿರುವ ಪ್ರೀತಿಯ ಮೌಲ್ಯವನ್ನು ಉದಾಹರಣೆಗಳ ಮೂಲಕ ವಿವರಿಸಿ, ವಿದ್ಯಾರ್ಥಿಗಳಿಗೆ ಸ್ಪೂರ್ತಿದಾಯಕ ಭಾಷಣ ಮಾಡಿದರು. ಇದೇ ವೇಳೆ, ದ್ವಿತೀಯ ಪಿಯುಸಿ ವಾರ್ಷಿಕ ಪರೀಕ್ಷೆಯಲ್ಲಿ ಅತ್ಯಧಿಕ ಅಂಕಗಳನ್ನು ಗಳಿಸಿ ಸಾಧನೆ ಮಾಡಿದ ಪ್ರತಿಭಾವಂತ ವಿದ್ಯಾರ್ಥಿಗಳನ್ನು ಸನ್ಮಾನಿಸಲಾಯಿತು.



ಕಾಲೇಜು ಅಭಿವೃದ್ಧಿ ಸಮಿತಿಯ ಕಾರ್ಯಾಧ್ಯಕ್ಷರಾದ ರಕ್ಷಿತ್ ರೈ ಕಾರ್ಯಕ್ರಮದ ಅಧ್ಯಕ್ಷತೆಯನ್ನು ವಹಿಸಿದ್ದರು. ನೂತನ ವಿದ್ಯಾರ್ಥಿ ಸಂಘದ ಪದಾಧಿಕಾರಿಗಳಾದ ಮೊಹಮ್ಮದ್ ರಾಫಿ, ಕೃತಿಕಾ, ದೇವಿಪ್ರಸಾದ್, ಶಿಲ್ಪ, ವರ್ಷ, ಪಂಚಮಿ, ತರುಣ್ ಕುಮಾರ್, ಮೊಹಮ್ಮದ್ ಬಿಷ್, ನಮಿತಾ, ಮೊಹಮ್ಮದ್ ಹುನೈಸ್, ದೀಕ್ಷಾ ಮತ್ತು ಮೊಹಮ್ಮದ್ ಆದಿಲ್ ಅವರು ಅಧಿಕೃತವಾಗಿ ಪ್ರಮಾಣವಚನ ಸ್ವೀಕರಿಸಿದರು. ಭೌತಶಾಸ್ತ್ರ ಉಪನ್ಯಾಸಕ ನಿವಾಸ್ ಬಡಕಿಲ್ಲಾಯ ಅವರು ವಿದ್ಯಾರ್ಥಿಗಳಿಗೆ ಪ್ರಮಾಣವಚನ ಬೋಧಿಸಿದರು.
ಕಾರ್ಯಕ್ರಮದಲ್ಲಿ ಗಣಿತಶಾಸ್ತ್ರ ಉಪನ್ಯಾಸಕಿ ಅರುಣ ಕೆ. ಮತ್ತು ಸಮಾಜಶಾಸ್ತ್ರ ಉಪನ್ಯಾಸಕಿ ವಿಜಯ ಡಿ.ಎಸ್. ಅವರು ವಿವಿಧ ಸ್ಪರ್ಧೆಗಳಲ್ಲಿ ವಿಜೇತರಾದ ವಿದ್ಯಾರ್ಥಿಗಳ ಪಟ್ಟಿಯನ್ನು ವಾಚಿಸಿದರು. ಕಾಲೇಜಿನ ಪ್ರಾಂಶುಪಾಲರಾದ ಹೇಮಲತಾ ಅವರು ಸ್ವಾಗತಿಸಿ, ಪ್ರಾಸ್ತಾವಿಕ ನುಡಿಗಳನ್ನಾಡಿದರು. ಶಾಂಭವಿ ಕಾರ್ಯಕ್ರಮ ನಿರೂಪಿಸಿದರು, ಶಿಲ್ಪ ವಂದಿಸಿದರು.










