






ಉಪ್ಪಿನಂಗಡಿ: ಪೆರಿಯಡ್ಕ ಸರ್ವೋದಯ ಪ್ರೌಢಶಾಲೆಯಲ್ಲಿ ಪ್ರಾಣಿಜನ್ಯ ಹರಡುವ ರೋಗಗಳು ಹಾಗೂ ಅವುಗಳ ಮುಂಜಾಗ್ರತಾ ಕ್ರಮಗಳ ಕುರಿತು ಜಾಗೃತಿ ಕಾರ್ಯಾಗಾರ ನಡೆಯಿತು.


ಕೊಯಿಲ ಪಶುವೈದಕೀಯ ಮಹಾವಿದ್ಯಾಲಯದ ಪಶು ವೈದ್ಯಾಧಿಕಾರಿ ಡಾ.ತೇಜಸ್ವಿನಿ ಅವರು ಸಂಪನ್ಮೂಲ ವ್ಯಕ್ತಿಯಾಗಿ ಭಾಗವಹಿಸಿ, ರೇಬೀಸ್, ಮಂಗನ ಕಾಯಿಲೆ, ಹಕ್ಕಿಜ್ವರ ಸೇರಿದಂತೆ ಪ್ರಾಣಿಗಳಿಂದ ಮನುಷ್ಯರಿಗೆ ಹರಡುವ ವಿವಿಧ ರೋಗಗಳ ಬಗ್ಗೆ ಮಾಹಿತಿ ನೀಡಿದರು. ಈ ರೋಗಗಳಿಂದ ರಕ್ಷಿಸಿಕೊಳ್ಳಲು ಸೂಕ್ತ ಮುನ್ನೆಚ್ಚರಿಕೆ ವಹಿಸುವುದು, ರೋಗಲಕ್ಷಣಗಳು ಕಂಡುಬಂದ ತಕ್ಷಣ ವೈದ್ಯಕೀಯ ಚಿಕಿತ್ಸೆ ಪಡೆಯುವುದು ಹಾಗೂ ಸಾಕು ಪ್ರಾಣಿಗಳಿಗೆ ನಿಯಮಿತವಾಗಿ ಲಸಿಕೆ ಹಾಕಿಸುವುದು ಅತ್ಯಗತ್ಯ ಎಂದು ತಿಳಿಸಿದರು.



ಸಂಸ್ಥೆಯ ಪರಿವೀಕ್ಷಕರಾದ ಬಾಲಕೃಷ್ಣ ಬಿ.ಟಿ. ಮಾತನಾಡಿ, ಇಂತಹ ಜಾಗೃತಿ ಕಾರ್ಯಕ್ರಮಗಳು ವಿದ್ಯಾರ್ಥಿಗಳಲ್ಲಿ ಆರೋಗ್ಯ ಮತ್ತು ಪ್ರಾಣಿ ಸಂರಕ್ಷಣೆಯ ಬಗ್ಗೆ ಅರಿವು ಮೂಡಿಸಲು ಸಹಕಾರಿಯಾಗುತ್ತವೆ. ಮಕ್ಕಳು ಸಾಕು ಪ್ರಾಣಿಗಳನ್ನು ಪ್ರೀತಿಸುವುದರೊಂದಿಗೆ ವೈದ್ಯರು ಸೂಚಿಸುವ ಮುಂಜಾಗ್ರತಾ ಕ್ರಮಗಳನ್ನು ಕಟ್ಟುನಿಟ್ಟಾಗಿ ಪಾಲಿಸಬೇಕು ಎಂದು ತಿಳಿಸಿದರು. ಕಾರ್ಯಕ್ರಮದಲ್ಲಿ ಡಾ. ರಶ್ಮಿ ಕೆ.ಎಂ., ಡಾ. ಹರಿಣಿ ಕೆ.ಆರ್., ಡಾ. ಸಾಗರ್ ಎಂ. ಹಾಗೂ ಕುಶಿಲ್ ಉಪಸ್ಥಿತರಿದ್ದರು.
ಸಂಸ್ಥೆಯ ಮುಖ್ಯೋಪಾಧ್ಯಾಯಿನಿ ಲಕ್ಷ್ಮಿ ಪಿ. ಪ್ರಾಸ್ತಾವಿಕವಾಗಿ ಮಾತನಾಡಿ ಸ್ವಾಗತಿಸಿದರು. ಶಿಕ್ಷಕಿ ಶಕುಂತಲಾ ಕೆ. ವಂದಿಸಿದರು. ವಿಜ್ಞಾನ ಶಿಕ್ಷಕಿ ಸವಿತಾ ಪಿ.ಸಿ. ಕಾರ್ಯಕ್ರಮ ನಿರೂಪಿಸಿದರು. ಶಿಕ್ಷಕರು ಸಹಕರಿಸಿದರು.










