






ಪುತ್ತೂರು: ಅಂತರ್ರಾಷ್ಟ್ರೀಯ ರೋಟರಿ ಜಿಲ್ಲೆ 3181, ವಲಯ ನಾಲ್ಕರ ರೋಟರಿ ಕ್ಲಬ್ ಪುತ್ತೂರು ಸಿಟಿ ಇದರ 2026-27ನೇ ಸಾಲಿನ ನೂತನ ಪದಾಧಿಕಾರಿಗಳ ಆಯ್ಕೆ ಪ್ರಕ್ರಿಯೆ ನಡೆದಿದ್ದು ನೂತನ ಅಧ್ಯಕ್ಷರಾಗಿ ಉಮೇಶ್ಚಂದ್ರ, ಕಾರ್ಯದರ್ಶಿಯಾಗಿ ಕಿರಣ್ ಬಿ.ವಿ, ಕೋಶಾಧಿಕಾರಿಯಾಗಿ ಕಾರ್ತಿಕ್ ರೈ, ವಲಯ ಸೇನಾನಿಯಾಗಿ ಜ್ಯೋ ಡಿ’ಸೋಜರವರು ಆಯ್ಕೆಯಾಗಿದ್ದಾರೆ.


ಉಳಿದಂತೆ ನಿಕಟಪೂರ್ವ ಅಧ್ಯಕ್ಷ ಉಲ್ಲಾಸ್ ಪೈ, ಸಾರ್ಜಂಟ್ ಎಟ್ ಆರ್ಮ್ಸ್ ಜೋನ್ ರೆಬೆಲ್ಲೋ, ನಿಯೋಜಿತ ಅಧ್ಯಕ್ಷ ಉಪಾಧ್ಯಕ್ಷೆ ಸ್ವಾತಿ ಮಲ್ಲಾರ, ಜೊತೆ ಕಾರ್ಯದರ್ಶಿ ಗುರುರಾಜ್, ಕ್ಲಬ್ ಸರ್ವಿಸ್ ನಿರ್ದೇಶಕರಾಗಿ ಗ್ರೇಸಿ ಗೊನ್ಸಾಲ್ವಿಸ್, ವೊಕೇಶನಲ್ ಸರ್ವಿಸ್ ನಿರ್ದೇಶಕರಾಗಿ ಶ್ಯಾಮಲಾ ಶೆಟ್ಟಿ, ಕಮ್ಯೂನಿಟಿ ಸರ್ವಿಸ್ ನಿರ್ದೇಶಕರಾಗಿ ರಾಮಚಂದ್ರ, ಇಂಟರ್ನ್ಯಾಷನಲ್ ಸರ್ವಿಸ್ ನಿರ್ದೇಶಕರಾಗಿ ಮೋಹನ್ ಮುತ್ಲಾಜೆ, ಯೂತ್ ಸರ್ವಿಸ್ ನಿರ್ದೇಶಕರಾಗಿ ಪದ್ಮನಾಭ ಶೆಟ್ಟಿ, ಬುಲೆಟಿನ್ ಎಡಿಟರ್ ಮನೋಹರ್ ಕೆ, ಚೇರ್ಮ್ಯಾನ್ಗಳಾಗಿ ಜೋನ್ ಕುಟಿನ್ಹಾ(ರೋಟರಿ ಫೌಂಡೇಶನ್), ಡಾ.ಹರಿಕೃಷ್ಣ ಪಾಣಾಜೆ(ಪೋಲಿಯೋ ಪ್ಲಸ್), ಪ್ರಕಾಶ್ ವಿ.ಕೆ(ಸಿಎಲ್ಸಿಸಿ), ವಿಕ್ಟರ್ ಮಾರ್ಟಿಸ್(ವಿನ್ಸ್), ಪ್ರಮೋದ್ ಮಲ್ಲಾರ(ಮೆಂಬರ್ಶಿಪ್ ಡೆವಲಪ್ಮೆಂಟ್/ವೆಬ್ಸೈಟ್), ಕೃಷ್ಣವೇಣಿ ರೈ/ಪ್ರೇಮ್ ಕುಮಾರ್(ಸಾಂಸ್ಕೃತಿಕ), ಕವನ್ ನಾಕ್(ಕ್ರೀಡೆ), ಜಯಕುಮಾರ್ ರೈ ಎಂ.ಆರ್(ಡಿಸ್ಟ್ರಿಕ್ಟ್ ಪ್ರಾಜೆಕ್ಟ್), ಲೀನಾ ಪಾಸ್(ಟೀಚ್), ಮೊಹಮದ್ ಸಾಹೇಬ್(ಎಥಿಕ್ಸ್), ಲಾರೆನ್ಸ್ ಗೊನ್ಸಾಲ್ವಿಸ್(ಪಬ್ಲಿಕ್ ರಿಲೇಶನ್ಶಿಪ್), ಸುರೇಂದ್ರ ಕಿಣಿ(ಫೆಲೋಶಿಪ್), ಪ್ರಜ್ವಲ್ ರೈ(ಸೋಶಿಯಲ್ ಮೀಡಿಯಾ), ಧರ್ಣಪ್ಪ ಗೌಡ(ರೋಟರ್ಯಾಕ್ಟ್), ಜೆರೋಮಿಯಸ್ ಪಾಸ್(ಇಂಟರ್ಯಾಕ್ಟ್), ಕೃಷ್ಣಮೋಹನ್ ಪಿ.ಎಸ್(ಕರಿಯರ್ ಗೈಡೆನ್ಸ್)ರವರು ಆಯ್ಕೆಯಾಗಿದ್ದಾರೆ.



ನೂತನ ಅಧ್ಯಕ್ಷರ ಪರಿಚಯ:
ನೂತನ ಅಧ್ಯಕ್ಷರಾಗಿ ಆಯ್ಕೆಯಾದ ಉಮೇಶ್ಚಂದ್ರರವರು ಪುತ್ತೂರು ಬೆಳ್ಳಿಪ್ಪಾಡಿ ಗ್ರಾಮದ ದೇವಸ್ಯ ಪಾರ್ವತಿ ಕೆ.ವಿ. ಮತ್ತು ವೆಂಕಪ್ಪ ಗೌಡ ಡಿ.ರವರ ಪುತ್ರನಾಗಿ ಜನಿಸಿದ್ದು ತನ್ನ ಪ್ರಾಥಮಿಕ ಶಿಕ್ಷಣವನ್ನು ಬೆಳ್ಳಿಪ್ಪಾಡಿ ಹಿರಿಯ ಪ್ರಾಥಮಿಕ ಶಾಲೆಯಲ್ಲಿ, ಪ್ರೌಢ ಶಿಕ್ಷಣವನ್ನು ಕೊಂಬೆಟ್ಟು ಜೂನಿಯರ್ ಕಾಲೇಜಿನಲ್ಲಿ ಹಾಗೂ ಐಟಿಐ ತಾಂತ್ರಿಕ ಶಿಕ್ಷಣವನ್ನು ಕೊಂಬೆಟ್ಟು ಮಹಾಲಿಂಗೇಶ್ವರ ಐಟಿಯಲ್ಲಿ, ಪದವಿ ಶಿಕ್ಷಣವನ್ನು ಬೆಂಗಳೂರಿನಲ್ಲಿ ಪಡೆದಿರುತ್ತಾರೆ. ಹಲವು ವರ್ಷಗಳ ಕಾಲ ಬೆಂಗಳೂರಿನಲ್ಲಿ ಪ್ರಮುಖ ಕಂಪೆನಿಯಲ್ಲಿ ಕಾರ್ಯನಿರ್ವಹಿಸಿ ಪ್ರಸ್ತುತ ಬೊಳ್ವಾರಿನಲ್ಲಿ ತೂಕದ ಯಂತ್ರಗಳ ಮಾರಾಟ ಮತ್ತು ಸರ್ವಿಸ್ ಸಂಸ್ಥೆ ಸಾನ್ವಿ ಎಂಟರ್ಪ್ರೈಸಸ್ನ್ನು ನಡೆಸುತ್ತಿದ್ದು ಪ್ರಗತಿಪರ ಕೃಷಿಕರಾಗಿದ್ದಾರೆ. ೨೦೨೨ರಲ್ಲಿ ರೋಟರಿ ಸಂಸ್ಥೆಗೆ ಸೇರಿದ ಇವರು ಕ್ಲಬ್ನಲ್ಲಿ ವಿವಿಧ ಹುದ್ದೆಗಳನ್ನು ನಿರ್ವಹಿಸಿರುತ್ತಾರೆ.
ನೂತನ ಕಾರ್ಯದರ್ಶಿ ಪರಿಚಯ:
ನೂತನ ಕಾರ್ಯದರ್ಶಿಯಾಗಿ ಆಯ್ಕೆಯಾದ ಕಿರಣ್ ಬಿ.ವಿರವರು ನಿವೃತ್ತ ಖಜಾನಾಧಿಕಾರಿ ಬಿ.ವಿಠಲಾಚಾರಿ ಮತ್ತು ಶ್ರೀಮತಿ ರೂಪ ದಂಪತಿಗಳ ಪುತ್ರನಾಗಿ ಜನಿಸಿದ್ದು, ಡಿಪ್ಲೊಮಾ ಪದವಿಯನ್ನು ವಿವೇಕಾನಂದ ಪಾಲಿಟೆಕ್ನಿಕ್ ಕಾಲೇಜಿನಲ್ಲಿ ಪೂರೈಸಿರುತ್ತಾರೆ. ವಿದ್ಯಾಭ್ಯಾಸದ ಬಳಿಕ ಯುರೇಕಾ ಪೋಬ್ಸ್ನಲ್ಲಿ ಸರ್ವಿಸ್ ಇಂಜಿನಿಯರ್ ಆಗಿ ಕೆಲಸಕ್ಕೆ ಸೇರಿ 4 ವರ್ಷ ಸೇವೆ ಸಲ್ಲಿಸಿದರು. ಬಳಿಕ 1998 ಪ್ರತಿಷ್ಠಿತ ಎಸ್.ಕೆ.ಜಿ. ಗೋಲ್ಡ್ಸ್ಮಿತ್ಸ್ ಇಂಡಸ್ಟ್ರೀಯಲ್ ಕೊ-ಅಪರೇಟಿವ್ ಸೊಸೈಟಿಗೆ ಸೇರ್ಪಡೆಗೊಂಡು ಪ್ರಸ್ತುತ ಪುತ್ತೂರು ಶಾಖೆಯಲ್ಲಿ ಕಾರ್ಯನಿರ್ವಹಿಸುತ್ತಿದ್ದಾರೆ. 1992ರಲ್ಲಿ ರೋಟರ್ಯಾಕ್ಟ್ ಸದಸ್ಯರಾಗಿ ಸೇರಿದ ಇವರು ಕ್ಲಬ್ನ ಕ್ರೀಡಾ ಕಾರ್ಯದರ್ಶಿ ಹಾಗೂ ಝೋನಲ್ ಖಜಾಂಜಿಯಾಗಿ ಸೇವೆ ಸಲ್ಲಿಸಿರುತ್ತಾರೆ. ರೋಟರಿ ಪುತ್ತೂರು ಸಿಟಿಯ ಸದಸ್ಯರಾಗಿ ಸೇರ್ಪಡೆಗೊಂಡ ಇವರು ಕ್ರೀಡಾ ಕಾರ್ಯದರ್ಶಿಯಾಗಿ, ನಿರ್ದೇಶಕರಾಗಿ, ಖಜಾಂಜಿಯಾಗಿ ಸೇವೆ ಸಲ್ಲಿಸಿದ್ದು, 2024ರಲ್ಲಿ ಪಿಎಚ್ಎಫ್ ಮನ್ನಣೆ ಪಡೆದಿರುತ್ತಾರೆ. ಪ್ರತಿಭಾನ್ವಿತ ಕ್ರೀಡಾಪಟುವಾಗಿರುವ ಇವರು ರೋಟರಿ ಸಿಟಿಯ ಸ್ಪೋರ್ಟ್ಸ್ ಟೀಮ್ನ ಸಕ್ರಿಯ ಸದಸ್ಯ. ಕ್ರಿಕೆಟ್ ತಂಡದ ಆರಂಭಿಕ ಬ್ಯಾಟರ್ ಹಾಗೂ ಶಟಲ್ಬ್ಯಾಡ್ಮಿಂಟನ್ನಲ್ಲಿ ಕ್ಲಬ್ಗೆ ಹಲವಾರು ಪ್ರಶಸ್ತಿಗಳನ್ನು ಗಳಸಿಕೊಟ್ಟಿರುತ್ತಾರೆ.
ನೂತನ ಕೋಶಾಧಿಕಾರಿ ಪರಿಚಯ:
ನೂತನ ಕೋಶಾಧಿಕಾರಿಯಾಗಿ ಆಯ್ಕೆಯಾದ ಕಾರ್ತೀಕ್ ರೈರವರು ಪುತ್ತೂರು ಸಿಟಿ ರೋಟರಿ ಕ್ಲಬ್ ಪ್ರಾಯೋಜಿಸಿದ ರೋಟರ್ಯಾಕ್ಟ್ ಕ್ಲಬ್ ಆಫ್ ಪುತ್ತೂರು ಪಟ್ಟಣದ ಚಾರ್ಟರ್ ಅಧ್ಯಕ್ಷರಾಗಿದ್ದಾರೆ. ಅವರು ಲಿಶಿ ಪವರ್ ಸೊಲ್ಯೂಶನ್ ಇದರ ಸ್ಥಾಪಕಾರಾಗಿದ್ದು, ಟಾಟಾ ಪವರ್ ಸೋಲಾರ್ ರೂಫ್ಟಾಪ್ ಸೊಲ್ಯೂಷನ್ಸ್ನ ಡೀಲರ್ ಆಗಿರುತ್ತಾರೆ. ಜೊತೆಗೆ ಆಟೋಮೊಬೈಲ್ ಉದ್ಯಮದಲ್ಲಿ 17 ವರ್ಷಗಳ ಪ್ರಭಾವಶಾಲಿ ವೃತ್ತಿಜೀವನದೊಂದಿಗೆ ಟಾಟಾ ಮೋಟಾರ್ಸ್, ಹುಂಡೈ, ಟೊಯೋಟಾ ಮತ್ತು ಹೋಂಡಾ ಸೇರಿದಂತೆ ಪ್ರಸಿದ್ಧ ಬ್ರ್ಯಾಂಡ್ಗಳೊಂದಿಗೆ ನಾಯಕತ್ವ ಮತ್ತು ನಿರ್ವಹಣಾ ಪಾತ್ರಗಳಲ್ಲಿ ಅವರು ಸೇವೆ ಸಲ್ಲಿಸಿರುತ್ತಾರೆ. ಉತ್ಸಾಹಿ ಕ್ರಿಕೆಟಿಗರಾಗಿರುವ ಕಾರ್ತಿಕ್, ಪುತ್ತೂರು ತಾಲೂಕು ಯುವ ಬಂಟ್ಸ್ ಸಂಘದ ಕ್ರಿಕೆಟ್ ಸಂಯೋಜಕರಾಗಿಯೂ ಸೇವೆ ಸಲ್ಲಿಸುತ್ತಿದ್ದಾರೆ.
ನೂತನ ವಲಯ ಸೇನಾನಿ ಪರಿಚಯ:
ನೂತನ ವಲಯ ಸೇನಾನಿಯಾಗಿ ಆಯ್ಕೆಯದ ಚಿಕ್ಕಪುತ್ತೂರು ನಿವಾಸಿ ಜ್ಯೋ ಡಿ’ಸೋಜರವರು 1963ರಲ್ಲಿ ಭಾರತೀಯ ಸೇನೆಗೆ ಸೇರ್ಪಡೆಯಾಗಿ ಕೇರಳ ರಾಜ್ಯದ ತಿರುವನಂತಪುರದ ಪಾಂಗೋಡ್ ಎಂಬಲ್ಲಿದ್ದ ನಂ.೪ ಆಡ್ವಾನ್ಸ್ ಬೇಸ್ ಇನಿಶಿಯಾ ಗ್ರೂಪ್ ಟ್ರೈನಿಂಗ್ ಸೆಂಟರ್ ಇಲ್ಲಿ 15 ತಿಂಗಳ ಕಾಲ ಕಠಿಣ ಮಿಲಿಟರಿ ತರಬೇತಿಯನ್ನು ಪಡೆದು, ಚೀನಾ ಗಡಿಪ್ರದೇಶದ ಅಸ್ಸಾಮ್ ರಾಜ್ಯದ ತಿನ್ಸುಕಿಯಾ ಸೇನಾ ಕ್ಯಾಂಪಿಗೆ ವರ್ಗಾವಣೆ. ದಿಬ್ರುಗಡ್, ಲಿಕಾವಾನಿ ಮತ್ತು ಡಿಗ್ಬೊ ಹಾಗೂ ಗುವಾಹಟಿ, ಸಿಲ್ದಾರ್ ಮತ್ತು ತೇಜ್ಪುರದಲ್ಲಿ ಸೇವೆ ಸಲ್ಲಿಸಿ, ಔರಂಗಬಾದ್ ಮತ್ತು ದಕ್ಷಿಣ ಕಮಾಂಡಿನ ಪುಣೆಯಲ್ಲಿ ಮುಂದಿನ ಸೇನಾ ಕರ್ತವ್ಯವನ್ನು ಪೂರ್ಣಗೊಳಿಸಿ, ಭಾರತದ ಉತ್ತರಗಡಿ ಪ್ರದೇಶಗಳಾದ ಜಮ್ಮು ಕಾಶ್ಮೀರದಲ್ಲಿ ಸೇನಾ ಕರ್ತವ್ಯ ಮುಂದುವರಿಸಿರುತ್ತಾರೆ. ಇವರು 1965ರ ಇಂಡಿಯಾ ಪಾಕಿಸ್ತಾನ ಯುದ್ಧ ಮತ್ತು 1971ರ ಲಿಬರೇಷನ್ ಆಫ್ ಬಾಂಗ್ಲಾದೇಶ ಯುದ್ಧ ಕಾಲದಲ್ಲಿ ಮಿಲಿಟರಿ ಸೇವೆಯಲ್ಲಿದ್ದು ಯುದ್ಧ ಕಾಲದ ಪಶ್ಚಿಮ್ ಸ್ಟಾರ್ ಮೆಡಲ್ ಹಾಗೂ ದೇಶದ ವಿವಿಧ ಗಡಿ ಪ್ರದೇಶದಲ್ಲಿ ಸೇವೆ ಸಲ್ಲಿಸಿದ ಬಾಬು 6 ಮಿಲಿಟರಿ ಸರ್ವಿಸ್ ಮೆಡಲ್ಗಳನ್ನು ಪಡೆದುಕೊಂಡಿರುತ್ತಾರೆ. ಸೇನೆಯಲ್ಲಿ ಸುದೀರ್ಘ 17 ವರ್ಷಗಳ ಸೇವೆಯನ್ನು ಪೂರ್ಣಗೊಳಿಸಿ ಬಿಡುಗಡೆಗೊಂಡು 1980ರಲ್ಲಿ ಭಾರತೀಯ ದೂರವಾಣಿ ಇಲಾಖೆಯಲ್ಲಿ ಈಗಿನ ಬಿ.ಎಸ್.ಎನ್.ಎಲ್. ಸೇವೆಗೆ ಸೇರ್ಪಡೆಗೊಂಡು, 22 ವರುಷಗಳ ಸೇವೆ ಸಲ್ಲಿಸಿ ನಿವೃತ್ತರಾಗಿರುತ್ತಾರೆ. ಪುತ್ತೂರು ಮಾಯಿದೆ ದೇವುಸ್ ಚರ್ಚ್ ಪಾಲನಾ ಸಮಿತಿಯಲ್ಲಿ 2 ಬಾರಿ ಉಪಾಧ್ಯಕ್ಷರಾಗಿ, ಮಾಜಿ ಸೈನಿಕ ಭವನ ಟ್ರಸ್ಟಿನ ಟ್ರಸ್ಟಿಯಾಗಿ, ರೋಟರಿ ಸಿಟಿಯಲ್ಲಿ ಕಳೆದ 20 ವರ್ಷಗಳಿಂದ ಸದಸ್ಯರಾಗಿದ್ದು ಕ್ಲಬ್ನ ವಿವಿಧ ಹುದ್ದೆಗಳನ್ನು ನಿಭಾಯಿಸಿರುತ್ತಾರೆ. 2011-12 ಕ್ಲಬ್ನಲ್ಲಿ ಅಧ್ಯಕ್ಷರಾಗಿ ಥಾಯ್ಲ್ಯಾಂಡ್ನ ಬ್ಯಾಂಕಾಕ್ನಲ್ಲಿ ನಡೆದ ಇಂಟರ್ನ್ಯಾಷನಲ್ ರೋಟರಿ ಕಾನ್ಫರೆನ್ಸ್ನಲ್ಲಿ ಭಾಗವಹಿಸಿರುತ್ತಾರೆ.
ಜು.14:ಪದ ಪ್ರದಾನ
ಜು.1ರಂದು ಸಂಜೆ ಪಡೀಲು ಎಂಡಿಎಸ್ ಟ್ರಿನಿಟಿ ಸಭಾಂಗಣದಲ್ಲಿ ನೂತನ ಪದಾಧಿಕಾರಿಗಳ ಪದ ಪ್ರದಾನ ಸಮಾರಂಭವು ಜರಗಲಿದ್ದು, ಅಂತರ್ರಾಷ್ಟ್ರೀಯ ರೋಟರಿ ಜಿಲ್ಲೆ 3181 ಇದರ ನಿಯೋಜಿತ ಜಿಲ್ಲಾ ಗವರ್ನರ್ ಯಶಸ್ವಿ ಸೋಮಶೇಖರ್ರವರು ನೂತನ ಪದಾಧಿಕಾರಿಗಳಿಗೆ ಪದ ಪ್ರದಾನವನ್ನು ನೆರವೇರಿಸಲಿದ್ದಾರೆ. ರೋಟರಿ ಅಸಿಸ್ಟೆಂಟ್ ಗವರ್ನರ್ ಶ್ರುತಿ ಮಾಡ್ತಾ, ವಲಯ ಸೇನಾನಿ ಜ್ಯೋ ಡಿ’ಸೋಜರವರು ಈ ಸಂದರ್ಭದಲ್ಲಿ ಭಾಗವಹಿಸಲಿದ್ದಾರೆ ಎಂದು ಕ್ಲಬ್ ಪ್ರಕಟಣೆ ತಿಳಿಸಿದೆ.










