






ನೆಲ್ಯಾಡಿ: ನಿವೃತ್ತ ಮುಖ್ಯಶಿಕ್ಷಕ ದಂಪತಿಗಳಾದ ಸಂಜೀವ ಪೂಜಾರಿ ಬಟ್ಲಡ್ಕ ಹಾಗೂ ಸುಗಂಧಿ ಅವರ 45ನೇ ವರ್ಷದ ವೈವಾಹಿಕ ಜೀವನದ ಸಂಭ್ರಮ ಹಾಗೂ ಸಂಜೀವ ಪೂಜಾರಿಯವರ 75ನೇ ಹುಟ್ಟುಹಬ್ಬದ ಸಂಭ್ರಮಾಚರಣೆ ಜು.19ರಂದು ಬೆಳಗ್ಗೆ 11 ಗಂಟೆಗೆ ಆಲಂತಾಯ ಬಟ್ಲಡ್ಕ-ಶ್ರೀ ಸದ್ಗುರು ಮನೆಯಲ್ಲಿ ನಡೆಯಲಿದೆ.





ದಿ.ಮೋನಪ್ಪ ಪೂಜಾರಿ ಮತ್ತು ಮುತ್ತಕ್ಕ ದಂಪತಿಯ ಹಿರಿಯ ಪುತ್ರರಾದ ಸಂಜೀವ ಪೂಜಾರಿಯವರು ಪ.ಪೂ.ಶಿಕ್ಷಣದ ಬಳಿಕ ಮಡಿಕೇರಿಯಲ್ಲಿ ಶಿಕ್ಷಕ ತರಬೇತಿ ಪಡೆದು 1980ರಲ್ಲಿ ಕಾಂಚನ ಶ್ರೀ ಲಕ್ಷ್ಮೀನಾರಾಯಣ ಖಾಸಗಿ ಪ್ರಾಥಮಿಕ ಶಾಲೆಯಲ್ಲಿ ಶಿಕ್ಷಕ ವೃತ್ತಿ ಆರಂಭಿಸಿದ್ದರು. 1985ರಲ್ಲಿ ಸರಕಾರಿ ಶಿಕ್ಷಕರಾಗಿ ಕೆಳಗಿನಕೇರಿ ಕೊಪ್ಪ ಸರಕಾರಿ ಕಿ.ಪ್ರಾ. ಶಾಲೆಗೆ ನೇಮಕಗೊಂಡು ಆ ಬಳಿಕ ಆಲಂತಾಯ, ಹಳೆನೇರೆಂಕಿ ಶಾಲೆಯಲ್ಲಿ ಕರ್ತವ್ಯ ನಿರ್ವಹಿಸಿ, ಮುಖ್ಯಶಿಕ್ಷಕರಾಗಿ ಪದೋನ್ನತಿಗೊಂಡು ದೇರಾಜೆ ಶಾಲೆಗೆ ವರ್ಗಾವಣೆಗೊಂಡು 2010ರಲ್ಲಿ ಸೇವಾ ನಿವೃತ್ತಿ ಹೊಂದಿದ್ದರು. ಸಂಜೀವ ಪೂಜಾರಿಯವರು ನಿವೃತ್ತಿಯ ಬಳಿಕ ಕೃಷಿಯೊಂದಿಗೆ ಸಾರ್ವಜನಿಕ ಕ್ಷೇತ್ರದಲ್ಲಿ ತೊಡಗಿಸಿಕೊಂಡಿದ್ದಾರೆ. ಬ್ರಹ್ಮಶ್ರೀ ನಾರಾಯಣ ಗುರುಸ್ವಾಮಿ ಬಿಲ್ಲವ ಸಂಘ ಗ್ರಾಮ ಸಮಿತಿ ಹಳೆನೇರೆಂಕಿ ಇದರ ಮಾಜಿ ಅಧ್ಯಕ್ಷರಾಗಿದ್ದಾರೆ. ಪುತ್ತೂರು ಬಿಲ್ಲವ ಸಂಘದ ಗೌರವ ಸಲಹೆಗಾರರಾಗಿ, ಹಳೆನೇರೆಂಕಿಯ ಕಾರ್ಣಿಕ ಕ್ಷೇತ್ರ ಕೊಡಮಣಿತ್ತಾಯ ಕೋಟಿ ಚೆನ್ನಯ ಗರಡಿ ಆಡಳಿತ ಮಂಡಳಿಯ ಸದಸ್ಯರಾಗಿ ಸೇವೆ ಸಲ್ಲಿಸುತ್ತಿದ್ದಾರೆ. ಆಲಂಕಾರು ಮೂರ್ತೆದಾರರ ಸೇವಾ ಸಹಕಾರ ಸಂಘದ ಆಡಳಿತ ಸಮಿತಿಯ ಮಾಜಿ ನಿರ್ದೇಶಕರಾಗಿರುವ ಇವರು ಪ್ರಸ್ತುತ ಸಂಘದ ಕೊಯಿಲ ಶಾಖಾ ಸಲಹಾ ಸಮಿತಿ ಸದಸ್ಯರಾಗಿ ದುಡಿಯುತ್ತಿದ್ದಾರೆ. ಹಳೆನೇರೆಂಕಿ ಬಿಲ್ಲವ ಗ್ರಾಮ ಸಮಿತಿಗೆ ಸ್ವಂತ ನಿವೇಶನ ಖರೀದಿ ಮತ್ತು ಕಟ್ಟಡ ನಿರ್ಮಾಣದಲ್ಲಿ ಪ್ರಮುಖ ಪಾತ್ರ ನಿರ್ವಹಿಸಿದ್ದಾರೆ. ಇವರು ತಮ್ಮ ತಂದೆ-ತಾಯಿ ಸ್ಮರಣಾರ್ಥ ಆಲಂಕಾರು ಮೂರ್ತೆದಾರರ ಸೇವಾ ಸಹಕಾರ ಸಂಘದಲ್ಲಿ ನಿರಖು ಠೇವಣಿ ಇರಿಸಿ ಅದರಲ್ಲಿ ವಾರ್ಷಿಕವಾಗಿ ಸಿಗುವ ಬಡ್ಡಿಯ ಹಣವನ್ನು ಆರ್ಥಿಕವಾಗಿ ಹಿಂದುಳಿದ ವಿದ್ಯಾರ್ಥಿಗಳಿಗೆ ಕಲಿಕೆಗಾಗಿ ವಿದ್ಯಾರ್ಥಿ ವೇತನವನ್ನು ಪ್ರತಿವರ್ಷವೂ ನೀಡುತ್ತಿದ್ದಾರೆ.

ಇವರ ಪತ್ನಿ ಸುಗಂಧಿ ಅವರು ಮಡಿಕೇರಿಯಲ್ಲಿ ಶಿಕ್ಷಕ ತರಬೇತಿ ಪಡೆದು 1978ರಲ್ಲಿ ಬೆಳಂದೂರು ಸರಕಾರಿ ಹಿ.ಪ್ರಾ.ಶಾಲೆಯಲ್ಲಿ ಶಿಕ್ಷಕರಾಗಿ ಸೇರ್ಪಡೆಗೊಂಡಿದ್ದರು. ನಂತರ ಆಲಂತಾಯ ಶಾಲೆಯಲ್ಲಿ ಕರ್ತವ್ಯ ನಿರ್ವಹಿಸಿ ಮುಖ್ಯಶಿಕ್ಷಕರಾಗಿ ಪದೋನ್ನತಿಗೊಂಡು ಹಳೆನೇರೆಂಕಿ ಶಾಲೆಯಲ್ಲಿ ಕರ್ತವ್ಯ ನಿರ್ವಹಿಸಿ 2016ರಲ್ಲಿ ಸೇವಾ ನಿವೃತ್ತಿ ಹೊಂದಿದ್ದರು. 15-6-1981ರಂದು ಇವರಿಬ್ಬರ ವಿವಾಹ ನಡೆದಿದ್ದು ಇಬ್ಬರು ಪುತ್ರರು, ಓರ್ವ ಪುತ್ರಿ ಇದ್ದಾರೆ. ಹಿರಿಯ ಪುತ್ರ ಸುನಿಲ್ ಹಿಂದುಳಿದ ವರ್ಗದ ಕಲ್ಯಾಣ ಇಲಾಖೆಯಲ್ಲಿ, ಕಿರಿಯ ಮಗ ಸುಜಿತ್ ಜಲವಿದ್ಯುತ್ ಸ್ಥಾವರ ನೆರಿಯದಲ್ಲಿ ಹಾಗೂ ಅಳಿಯ ಪ್ರದೀಪ್ ಜೆಎಸ್‌ಡಬ್ಲ್ಯು ಕಂಪನಿಯಲ್ಲಿ ಕರ್ತವ್ಯ ನಿರ್ವಹಿಸುತ್ತಿದ್ದಾರೆ. ಮಕ್ಕಳು, ಮೊಮ್ಮಕ್ಕಳೊಂದಿಗೆ ಆಲಂತಾಯ ಗ್ರಾಮದ ಶ್ರೀ ಸದ್ಗುರು-ಬಟ್ಲಡ್ಕದಲ್ಲಿ ಕೃಷಿ ಚಟುವಟಿಕೆಗಳೊಂದಿಗೆ ಸುಖೀ ಸಂಸಾರ ನಡೆಸುತ್ತಿದ್ದಾರೆ. ಸಂಜೀವ ಪೂಜಾರಿಯವರ 75ನೇ ವರ್ಷದ ಹುಟ್ಟುಹಬ್ಬದ ಸಂಭ್ರಮಾಚರಣೆ ಹಾಗೂ ಸಂಜೀವ ಪೂಜಾರಿ- ಸುಗಂಧಿ ಅವರ 45ನೇ ವರ್ಷದ ವೈವಾಹಿಕ ಜೀವನದ ಸಂಭ್ರಮಾಚರಣೆ ಜು.19ರಂದು ಆಲಂತಾಯ ಬಟ್ಲಡ್ಕ-ಶ್ರೀ ಸದ್ಗುರು ಮನೆಯಲ್ಲಿ ನಡೆಯಲಿದೆ ಎಂದು ಅವರ ಮಕ್ಕಳು ತಿಳಿಸಿದ್ದಾರೆ.









