ರೋಟರಿ ಕ್ಲಬ್ ಉಪ್ಪಿನಂಗಡಿ ಪದ ಪ್ರದಾನ

0

ಪಾರದರ್ಶಕ ಸೇವೆಯೇ ರೋಟರಿ ಪಬ್ಲಿಕ್ ಇಮೇಜ್-ಸುರೇಂದ್ರ ಕಿಣಿ

ಪುತ್ತೂರು: ರೋಟರಿಯಲ್ಲಿ ಪರಸ್ಪರ ಗುರುತಿಸುವಿಕೆ ಬಹಳ ಮುಖ್ಯ.. ರೋಟರಿ ಜೀವನ ಬದಲಿಸುತ್ತದೆ, ನಾಯಕತ್ವ ಬೆಳೆಸುತ್ತದೆ, ಮೌಲ್ಯಗಳನ್ನು ಹೆಚ್ಚಿಸುತ್ತದೆ. ರೋಟರಿಯ ಮೂಲ ಉದ್ಧೇಶ, ತತ್ವ, ಬಾಂಧವ್ಯ, ಎಥಿಕ್ಸ್ ಅನ್ನು ಮರೆಯಬಾರದು. ಪಾರದರ್ಶಕ ಸೇವೆಯೇ ರೋಟರಿಯ ಪಬ್ಲಿಕ್ ಇಮೇಜ್ ಅನ್ನು ಮೇಳೈಸಿದೆ ಎಂದು ರೋಟರಿ ಜಿಲ್ಲೆ ೩೧೮೧, ವಲಯ ನಾಲ್ಕರ ಅಸಿಸ್ಟೆಂಟ್ ಗವರ್ನರ್ ಎಐಡಿಎ 1 ಮೇಜರ್ ಡೋನರ್ ಸುರೇಂದ್ರ ಕಿಣಿರವರು ಹೇಳಿದರು.


ಜು.೨೧ ರಂದು ಸಂಜೆ ಉಪ್ಪಿನಂಗಡಿ ದೀನರ ಕನ್ಯಾಮಾತಾ ದೇವಾಲಯದ ಸಭಾಂಗಣದಲ್ಲಿ ನಡೆದ ರೋಟರಿ ಕ್ಲಬ್ ಉಪ್ಪಿನಂಗಡಿ ಇದರ ೨೦೨೬-೨೭ರ ನೂತನ ಪದಾಧಿಕಾರಿಗಳ ಪದ ಪ್ರದಾನ ಸಮಾರಂಭದಲ್ಲಿ ಅವರು ನೂತನ ಪದಾಧಿಕಾರಿಗಳಿಗೆ ಪದ ಪ್ರದಾನ ನೆರವೇರಿಸಿ ಮಾತನಾಡಿದರು.


ಸದಸ್ಯತನ ಸೇರ್ಪಡೆ, ಟಿ.ಆರ್.ಎಫ್ ದೇಣಿಗೆ ರೋಟರಿ ಆಕ್ಸಿಜನ್-ಶನ್ಫತ್ ಶರೀಫ್:

ರೋಟರಿ ಅಸಿಸ್ಟೆಂಟ್ ಗವರ್ನರ್ ಶನ್ಫತ್ ಶರೀಫ್ ಮಾತನಾಡಿ, ಹೆಚ್ಚೆಚ್ಚು ಸದಸ್ಯತನ ಸೇರ್ಪಡೆ ಹಾಗೂ ರೋಟರಿ ಫೌಂಡೇಶನ್‌ಗೆ ಟಿ.ಆರ್.ಎಫ್ ದೇಣಿಗೆ ನೀಡುವುದು ರೋಟರಿಯ ಆಕ್ಸಿಜನ್ ಆಗಿದೆ. ಇದೀಗ ಉಪ್ಪಿನಂಗಡಿ ರೋಟರಿ ಕ್ಲಬ್ ಸದಸ್ಯತನ ಸೇರ್ಪಡೆಯಲ್ಲಿ ಅರ್ಧ ಆಕ್ಸಿಜನ್ ಸಿಕ್ಕಂತಾಗಿದೆ. ಇನ್ನು ರೋಟರಿ ಫೌಂಡೇಶನ್‌ಗೆ ದೇಣಿಗೆ ಸಂಗ್ರಹಿಸುವಲ್ಲಿ ಪ್ರಮುಖ ಪಾತ್ರ ವಹಿಸಿದಾಗ ಅಲ್ಲಿ ಶೇ.ನೂರು ಪ್ರತಿಶತ ಆಕ್ಸಿಜನ್ ಸಿಕ್ಕಂತಾಗುತ್ತದೆ. ಸುರೇಂದ್ರ ಕಿಣಿಮಾಮ್ ಪದ ಪ್ರದಾನ ಮಾಡಿದ ಮೇಲೆ ಕ್ಲಬ್ ನಿಜಕ್ಕೂ ಯಶಸ್ವಿಯಾಗುವುದರಲ್ಲಿ ಸಂದೇಹವಿಲ್ಲ ಎಂದರು.


ಮನುಕುಲದ ರೋಟರಿ ಸೇವೆಗೆ ಬೆಲೆ ಕಟ್ಟಲು ಸಾಧ್ಯವಿಲ್ಲ-ಅನುರಾಧಾ ಶೆಟ್ಟಿ:
ರೋಟರಿ ವಲಯ ಸೇನಾನಿ, ರೋಟರಿ ಉಪ್ಪಿನಂಗಡಿ ಪೂರ್ವಾಧ್ಯಕ್ಷೆ ಅನುರಾಧಾ ಆರ್.ಶೆಟ್ಟಿ ಮಾತನಾಡಿ, ಮನುಕುಲದ ಸೇವೆಯನ್ನೇ ಗುರಿಯಾಗಿರಿಸಿಕೊಂಡ ರೋಟರಿಯ ಸೇವೆಗೆ ಬೆಲೆ ಕಟ್ಟಲು ಸಾಧ್ಯವಿಲ್ಲ. ಸಮಾಜದ ಕಟ್ಟಕಡೆಯ ವ್ಯಕ್ತಿಯ ಜೀವನದಲ್ಲಿ ಸ್ಪಂದಿಸಿದಾಗ ಆ ವ್ಯಕ್ತಿಯ ಮುಖದಲ್ಲಿ ಮಂದಹಾಸ ಮೂಡಿದಾಗ ಸಿಗುವ ಖುಶಿಯೇ ಬೇರೆ. ರೋಟರಿಯ ಸೇವೆಯಲ್ಲಿ ನಾವೆಲ್ಲಾ ಒಗ್ಗಟ್ಟಾಗಿ ಪಾಲ್ಗೊಳ್ಳೋಣ, ಉಪ್ಪಿನಂಗಡಿ ರೋಟರಿಗೆ ಪ್ರತಿಷ್ಠಿತ ಪ್ರಶಸ್ತಿ ಸಿಗುವಲ್ಲಿ ನಾವು ದುಡಿಯೋಣ ಎಂದರು.


ಹನಿಗೂಡಿ ಹಳ್ಳ ಎಂಬಂತೆ ಒಟ್ಟಾಗಿ ಸಮಾಜದ ಸೇವೆ ಮಾಡುವುದೇ ಇಂಪ್ಯಾಕ್ಟ್-ಪ್ರೊ|ದತ್ತಾತ್ರೇಯ ರಾವ್:
ಮಾತೃಸಂಸ್ಥೆ, ರೋಟರಿ ಕ್ಲಬ್ ಪುತ್ತೂರು ಅಧ್ಯಕ್ಷ ಪ್ರೊ|ದತ್ತಾತ್ರೇಯ ರಾವ್ ಮಾತನಾಡಿ, ನಾವು ಭೂಮಿಗೆ ಬರುವಾಗ, ಭೂಮಿಯಿಂದ ಹೋಗುವಾಗ ಏನನ್ನೂ ತರುವುದೂ ಇಲ್ಲ, ಕೊಂಡೊಯ್ಯುದೂ ಇಲ್ಲ. ಇದರ ಮಧ್ಯೆ ನಾವು ಮಾಡುವ ಶಾಶ್ವತ ಹೆಸರು, ಕೀರ್ತಿ, ಸಾಧನೆಗಳು ಮಾತ್ರ ಉಳಿಯುತ್ತದೆ. ಹನಿಗೂಡಿ ಹಳ್ಳ ಎಂಬಂತೆ ನಾವೆಲ್ಲಾ ಒಟ್ಟಾಗಿ ಸಮಾಜದ ಸೇವೆ ಮಾಡುವುದೇ ಇಂಪ್ಯಾಕ್ಟ್ ಆಗಿರುತ್ತದೆ. ಒಳ್ಳೆಯ ನಾಯಕನಾಗಲು ರೋಟರಿಯು ವೇದಿಕೆ ಕಲ್ಪಿಸುತ್ತದೆ ಎಂದರು.


ಕ್ಲಬ್ ಸಾಧನೆಗೆ ಜಿಲ್ಲೆಯಿಂದ ಡೈಮಂಡ್ ಅವಾರ್ಡ್ ಹೆಗ್ಗಳಿಕೆ-ಜೋನ್ ಕೆನ್ಯೂಟ್:
ಕ್ಲಬ್ ನಿರ್ಗಮಿತ ಅಧ್ಯಕ್ಷ ಜೋನ್ ಕೆನ್ಯೂಟ್ ಮಸ್ಕರೇನ್ಹಸ್ ಮಾತನಾಡಿ, ಕಳೆದ ವರ್ಷ ಕ್ಲಬ್‌ನ ನಾಯಕತ್ವದ ಜವಾಬ್ದಾರಿಯನ್ನು ನನಗೆ ಸದಸ್ಯರು ಅವಕಾಶ ಮಾಡಿಕೊಟ್ಟು ಯಶಸ್ವಿ ಕಾರ್ಯಕ್ರಮಗಳನ್ನು ಹಮ್ಮಿಕೊಂಡು ನನಗೆ ಸಮಾಜಮುಖಿ ಸೇವೆ ಮಾಡಲು ಕ್ಲಬ್ ಸದಸ್ಯರ ಶ್ರಮ ಕಾರಣವಾಗಿದೆ. ನೆಕ್ಕಿಲಾಡಿ ಸರಕಾರಿ ಶಾಲೆಯಲ್ಲಿ ಎಲ್.ಕೆ.ಜಿ ಹಾಗೂ ಯುಕೆಜಿ ತರಗತಿ ಆರಂಭಿಸಿ ಇಂದು ವಿದ್ಯಾರ್ಥಿಗಳ ಸಂಖ್ಯೆ ಹೆಚ್ಚಳಕ್ಕೆ ಕಾರಣವಾಗಿದ್ದು ಮಾತ್ರವಲ್ಲ ನಮ್ಮೂರಿನ ಶಾಲೆಯನ್ನು ಉಳಿಸಿದ ಸಂತೋಷದ ಜೊತೆಗೆ ಕಿವಿ ಕೇಳದ ಬಾಲಕನಿಗೆ ದಾನಿಗಳ ನೆರವಿನಿಂದ ಶ್ರವಣ ಸಾಧನವನ್ನು ನೀಡಿ ಬಾಲಕನಿಗೆ ಕಿವಿ ಕೇಳುವಂತೆ ಮಾಡಿರುವುದು ವಿಶೇಷತೆಯಾಗಿದೆ. ಕ್ಲಬ್ ಸಾಧನೆಗಳನ್ನು ಪರಿಗಣಿಸಿ ಜಿಲ್ಲೆಯಿಂದ ಡೈಮಂಡ್ ಅವಾರ್ಡ್ ಪಡೆದಿರುವುದು ಕ್ಲಬ್ ಹೆಗ್ಗಳಿಕೆಯಾಗಿದೆ. ಮುಂದಿನ ವರ್ಷದ ಅಧ್ಯಕ್ಷ ಕೇಶವ ಪಿ.ಎಂ ತಂಡಕ್ಕೆ ನನ್ನ ಸಹಕಾರವಿದೆ ಎಂದರು.


ಸದಸ್ಯರ ಸೇರ್ಪಡೆ:
ಕ್ಲಬ್‌ಗೆ ನೂತನ ಸದಸ್ಯರಾಗಿ ನಿವೃತ್ತ ದೈಹಿಕ ಶಿಕ್ಷಣ ಶಿಕ್ಷಕ ಬಾಲಚಂದ್ರ, ಉದ್ಯಮಿ, ಚಿತ್ರನಟ, ಸಾಂಸ್ಕೃತಿಕ ಹಾಗೂ ಸಾಮಾಜಿಕ ರಂಗದಲ್ಲಿ ಕಲಾಸೇವೆ ಮಾಡುತ್ತಿರುವ ಮೋಹನ್ ಕುಮಾರ್, ನಾಟಕಕಾರ, ಪ್ರಗತಿಪರ ಕೃಷಿಕ, ಉದ್ಯಮಿ ಜಯರಾಜ್, ಶ್ರೀ ಮಹಾಲಿಂಗೇಶ್ವರ ಐಟಿಐ ಸಂಸ್ಥೆಯ ನಿವೃತ್ತ ಪ್ರಾಂಶುಪಾಲ ಭವಾನಿ ಗೌಡ ಪಿರವರುಗಳಿಗೆ ಪದ ಪ್ರದಾನ ಅಧಿಕಾರಿ ಸುರೇಂದ್ರ ಕಿಣಿರವರು ರೋಟರಿ ಪಿನ್ ತೊಡಿಸಿ ಕ್ಲಬ್‌ಗೆ ಅಧಿಕೃತವಾಗಿ ಬರಮಾಡಿಕೊಂಡರು.


ಪ್ರತಿಭಾ ಗೌರವ:
ಎಸೆಸ್ಸೆಲ್ಸಿ ಪರೀಕ್ಷೆಯಲ್ಲಿ ಡಿಸ್ಟಿಂಕ್ಷನ್ ಅಂಕ ಗಳಿಸಿದ ಸೈಂಟ್ ಮೇರೀಸ್ ಪ್ರೌಢಶಾಲೆಯ ಸುಭೀಶಾ, ಉಪ್ಪಿನಂಗಡಿ ಸರಕಾರಿ ಪ್ರೌಢಶಾಲೆಯ ನಿಧಿ, ಅರಫಾ ಪ್ರೌಢಶಾಲೆಯ ಆಯಿಶಾ ಶಮತ್, ಜ್ಞಾನಭಾರತಿ ಪ್ರೌಢಶಾಲೆಯ ರೆಹಾನ್ ಅಹಮದ್, ಉಪ್ಪಿನಂಗಡಿ ಸರಕಾರಿ ಪ್ರೌಢಶಾಲೆಯ ಧೀರಜ್ ಎಸ್, ಕ್ಲಬ್ ಸದಸ್ಯರ ಮಕ್ಕಳಾದ ತನ್ವಿ ಕನ್ಯಾನ(ನಾರಾಯಣ/ಭವ್ಯ ದಂಪತಿ ಪುತ್ರಿ), ಸಮೃದ್ಧ್ ರೈ(ಡಾ.ನಿರಂಜನ್ ರೈ/ಡಾ.ಸುಪ್ರೀತಾ), ಡಾ.ಹೃಷಿಕೇಶ್ ಬಿಡಿಎಸ್(ಡಾ.ರಾಜಾರಾಂ ಬಿ.ಕೆ/ ಡಾ.ರಮ್ಯ), ಮಾನ್ಯ ಆರ್.ಶೆಟ್ಟಿ (ರವೀಂದ್ರ ದರ್ಬೆ/ಹರಿಣಿ), ಹೃಷಿಕೇಶ್ (ಹರೀಶ್ ನಟ್ಟಿಬೈಲು/ಸೌಮ್ಯ)ರವರುಗಳನ್ನು ಗೌರವಿಸಲಾಯಿತು.


ಜಿಲ್ಲಾ ಪ್ರತಿನಿಧಿಗಳಿಗೆ ಅಭಿನಂದನೆ:

ಕ್ಲಬ್ ಸದಸ್ಯರಾಗಿದ್ದು ಜಿಲ್ಲೆಯಲ್ಲಿ ಸೇವೆ ಸಲ್ಲಿಸುವ ಪ್ರತಿನಿಧಿಗಳಾದ ಜಗದೀಶ್ ನಾಯಕ್, ರವೀಂದ್ರ ದರ್ಬೆ, ಅಜೀಝ್ ಬಸ್ತಿಕ್ಕಾರ್, ಅಬೂಬಕ್ಕರ್ ಪುತ್ತು, ಡಾ.ರಾಜಾರಾಮ್ ಕೆ.ಬಿ, ಚಂದಪ್ಪ ಮೂಲ್ಯರವರುಗಳನ್ನು ಅಭಿನಂದಿಸಲಾಯಿತು.

ಸಹಾಯಧನ/ಸೀರೆ ವಿತರಣೆ;
ಕ್ಲಬ್ ನೂತನ ಕಾರ್ಯದರ್ಶಿ ರಾಜೇಶ್ ದಿಂಡಿಗಲ್‌ರವರ ಪ್ರಾಯೋಜಕತ್ವದಲ್ಲಿ ಹತ್ತು ಮಹಿಳೆಯರಿಗೆ ಸೀರೆಗಳನ್ನು ವಿತರಿಸಲಿದ್ದು, ಶ್ರೀಮತಿ ಸುಂದರಿ, ಕಮಲ, ಜಯಾ, ಸಾವಿತ್ರಿರವರಿಗೆ ಸಾಂಕೇತಿಕವಾಗಿ ವಿತರಿಸಲಾಯಿತು. ಜೊತೆಗೆ ಕ್ಲಬ್‌ನ ಟ್ರಸ್ಟ್‌ಗೆ ರೂ.೧೦ ಸಾವಿರ ಸಹಾಯಧನವನ್ನು ಈ ಸಂದರ್ಭದಲ್ಲಿ ಹಸ್ತಾಂತರಿಸಲಾಯಿತು.


ಕು.ಶಮಿಕಾ ಎಂ.ಕೆ ಪ್ರಾರ್ಥಿಸಿದರು. ಕಾರ್ಯಕ್ರಮದ ಆರಂಭದಲ್ಲಿ ಅತಿಥಿ ಗಣ್ಯರು ದೀಪ ಬೆಳಗಿಸಿ ಉದ್ಘಾಟಿಸುವ ಮೂಲಕ ಕಾರ್ಯಕ್ರಮಕ್ಕೆ ಚಾಲನೆ ನೀಡಲಾಯಿತು. ೨೦೨೫-೨೬ರ ಸಾಲಿನ ಅಧ್ಯಕ್ಷ ನವೀನ್ ಬ್ರ್ಯಾಗ್ಸ್, ನೂತನ ಅಧ್ಯಕ್ಷ ಕೇಶವ ಪಿ.ಎಂರವರ ಪತ್ನಿ ಗೀತಾಮಣಿ ಕೆ ವೇದಿಕೆಯಲ್ಲಿ ಉಪಸ್ಥಿತರಿದ್ದರು. ಉಪ್ಪಿನಂಗಡಿ ದೀನರ ಕನ್ಯಾಮಾತಾ ದೇವಾಲಯದ ಧರ್ಮಗುರು ವಂ|ಜೆರಾಲ್ಡ್ ಡಿ’ಸೋಜ ಸಹಿತ ವಿವಿಧ ಕ್ಲಬ್‌ಗಳ ಪದಾಧಿಕಾರಿಗಳು ಹಾಗೂ ಸದಸ್ಯರು, ಹಿತೈಷಿಗಳು ಸಭೆಯಲ್ಲಿ ಪಾಲ್ಗೊಂಡಿದ್ದರು. ಕ್ಲಬ್ ನಿರ್ಗಮಿತ ಅಧ್ಯಕ್ಷ ಜೋನ್ ಕೆನ್ಯೂಟ್ ಮಸ್ಕರೇನ್ಹಸ್ ಸ್ವಾಗತಿಸಿ, ನೂತನ ಕಾರ್ಯದರ್ಶಿ ರಾಜೇಶ್ ದಿಂಡಿಗಲ್ ವಂದಿಸಿದರು. ನಿರ್ಗಮಿತ ಕಾರ್ಯದರ್ಶಿ ಶ್ರೀಕಾಂತ್ ಪಟೇಲ್ ವರದಿ ಮಂಡಿಸಿದರು. ಕ್ಲಬ್ ಸದಸ್ಯರಾದ ಚಂದಪ್ಪ ಮೂಲ್ಯ, ಬಿ.ಕೆ ಅರುಣ್, ರಂಜಿತಾ ನೀರಜ್, ಅಝೀಝ್ ಬಸ್ತಿಕ್ಕಾರ್, ಸ್ವರ್ಣೇಶ್ ಗಾಣಿಗರವರು ಅತಿಥಿಗಳಿಗೆ ಹೂಗುಚ್ಛ ನೀಡಿ ಸ್ವಾಗತಿಸಿದರು. ಕ್ಲಬ್ ಪೂರ್ವಾಧ್ಯಕ್ಷ ಡಾ.ರಾಜಾರಾಮ್ ಕೆ.ಬಿ, ಸದಸ್ಯರಾದ ನೀರಜ್ ಕುಮಾರ್ ರೈ, ಹರೀಶ್ ಪೂಜಾರಿ, ಡಾ.ರಮ್ಯ ರಾಜಾರಾಮ್, ಜಗದೀಶ್ ನಾಯಕ್, ಪ್ರಜ್ಙಾ ಶೆಟ್ಟಿ, ಆಶಾಲತಾ, ವೀಣಾ ಮಸ್ಕರೇನ್ಹಸ್‌ರವರು ಪದ ಪ್ರದಾನ ಅಧಿಕಾರಿ, ಅತಿಥಿಗಳ, ನೂತನ ಪದಾಧಿಕಾರಿಗಳ, ಸನ್ಮಾನಿತರ ಪರಿಚಯ ಮಾಡಿದರು. ಸದಸ್ಯೆ ಲವೀನಾ ಪಿಂಟೊ, ಪೂರ್ವಾಧ್ಯಕ್ಷ ನವೀನ್ ಬ್ರ್ಯಾಗ್ಸ್ ಕಾರ್ಯಕ್ರಮ ನಿರೂಪಿಸಿದರು.

ಸಹಕಾರ, ಸೇವೆಯೇ ರೋಟರಿ ಪ್ರತೀಕ…
ಕ್ಲಬ್ ಅಧ್ಯಕ್ಷನಾಗಿ ಆಯ್ಕೆ ಮಾಡಿರುವುದಕ್ಕೆ ಸಂತೋಷ ತಂದಿದೆ, ಸದಸ್ಯರು ನನ್ನ ಮೇಲಿಟ್ಟ ನಿರೀಕ್ಷೆಯನ್ನು ಹುಸಿಗೊಳಿಸದೆ ಸರ್ವರ ಸಹಕಾರದೊಂದಿಗೆ ಯಶಸ್ವಿ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳುವ ಪ್ರಯತ್ನ ಮಾಡಲಿದ್ದೇನೆ. ಹಿಂದಿನ ವರ್ಷದ ಅಧ್ಯಕ್ಷ ಜೋನ್ ಕೆನ್ಯೂಟ್ ರವರ ತಂಡ ಮಾಡಿದ ಸಾಧನೆಯೇ ನಮ್ಮ ತಂಡಕ್ಕೆ ಪ್ರೇರಣೆಯಾಗಲಿದೆ. ನೂತನ ಜಿಲ್ಲಾ ಗವರ್ನರ್ ಸತೀಶ್ ಬೋಳಾರ್ ರವರ ಕನಸಿನ ಯೋಜನೆಗಳನ್ನು ಕ್ಲಬ್‌ನಲ್ಲಿ ಹಮ್ಮಿಕೊಳ್ಳಲಿದ್ದು ಯೋಜನೆಗಳು ಸಮಾಜದ ಕಟ್ಟಕಡೆಯ ವ್ಯಕ್ತಿಗೆ ತಲುಪಲು ಎಲ್ಲರ ಸಹಕಾರ ಬೇಕಾಗಿದೆ. ಸಹಕಾರ ಹಾಗೂ ಸೇವೆಯೇ ರೋಟರಿಯ ಪ್ರತೀಕವೆನಿಸಿದ್ದು ಸೇವೆಯನ್ನು ನಿರ್ವಹಿಸಲು ದೇವರ ಅನುಗ್ರಹದೊಂದಿಗೆ ನಾವೆಲ್ಲರೂ ಜೊತೆಯಾಗಿ ಸೇವೆಯಲ್ಲಿ ಕೈಜೋಡಿಸೋಣ.
-ಕೇಶವ ಪಿ.ಎಂ, ನೂತನ ಅಧ್ಯಕ್ಷರು, ರೋಟರಿ ಕ್ಲಬ್ ಉಪ್ಪಿನಂಗಡಿ

ಲಕ್ಕಿ ಕೂಪನ್ ಡ್ರಾ..
ಟಾಟಾ ಎಐಎ ಲೈಫ್ ಇನ್ಸೂರೆನ್ಸ್‌ರವರಿಂದ ಕಾರ್ಯಕ್ರಮದಲ್ಲಿ ಭಾಗವಹಿಸಿದವರಿಗೆ ಲಕ್ಕಿ ಕೂಪನ್ ಡ್ರಾವನ್ನು ಏರ್ಪಡಿಸಿದ್ದು, ಇದರಲ್ಲಿ ಹೆರಾಲ್ಡ್ ಮಾಡ್ತಾ(ಪ್ರ), ವಿದ್ಯಾಧರ್ ಜೈನ್(ದ್ವಿ), ಚಂದು ಮುಡಿಪು(ತೃ) ಬಹುಮಾನವನ್ನು ಪಡೆದುಕೊಂಡರು. ಟಾಟಾ ಎಐಎ ಲೈಫ್ ಇನ್ಸೂರೆನ್ಸ್ ಸಿಬ್ಬಂದಿ ಉಪಸ್ಥಿತರಿದ್ದರು.

ಸನ್ಮಾನ/ಅಭಿನಂದನೆ..
ಎಸೆಸ್ಸೆಲ್ಸಿ ಪರೀಕ್ಷೆಯಲ್ಲಿ ಡಿಸ್ಟಿಂಕ್ಷನ್ ಗಳಿಸಿದ ಇಂದ್ರಪ್ರಸ್ಥ ವಿದ್ಯಾಲಯದ ಆದ್ಯರವರಿಗೆ ಜ್ಞಾನದೀಪ್ತಿ ಶೈಕ್ಷಣಿಕ ಸಾಧಕಿ ಪ್ರಶಸ್ತಿ, ಗಾಂಧಾರಿ ವಿದ್ಯೆಯ ಮೂಲಕ ಕಣ್ಣಿಗೆ ಬಟ್ಟೆ ಕಟ್ಟಿ ೩೫೦ಕ್ಕೂ ಮಿಕ್ಕಿ ಮರಳು ಚಿತ್ರ ಬಿಡಿಸಿ ಗೋಲ್ಡನ್ ಬುಕ್ ಆಫ್ ವರ್ಲ್ಡ್ ರೆಕಾರ್ಡ್ಸ್‌ಗೆ ಭಾಜನರಾದ ಶಮಿಕ ಕೆ, ಗ್ರಾಮೀಣ ಉದ್ಯೋಗದಾತ, ಸಮಾಜಮುಖಿ ಸಾಧಕ ಸುಂದರ ಗೌಡ, ಯೋಗಿ, ಸಾಧಕ, ಅಧ್ಯಾತ್ಮಿಕ ರತ್ನ ಸತೀಶ್ ಪದ್ಮನಾಭ, ಕಳೆದ ವರ್ಷ ಡೈಮಂಡ್ ಪ್ರಶಸ್ತಿಗೆ ಕಾರಣರಾದ ನಿರ್ಗಮಿತ ಅಧ್ಯಕ್ಷ ಜೋನ್ ಕೆನ್ಯೂಟ್ ಮಸ್ಕರೇನ್ಹಸ್, ಕಾರ್ಯದರ್ಶಿ ಶ್ರೀಕಾಂತ್ ಪಟೇಲ್, ಕಳೆದ ವರ್ಷ ಅಸಿಸ್ಟೆಂಟ್ ಗವರ್ನರ್ ಆಗಿ ಸೇವೆ ಸಲ್ಲಿಸಿದ ಕ್ಲಬ್ಬಿನವರೇ ಆದ ಡಾ.ರಾಜಾರಾಮ್ ಕೆ.ಬಿ ಹಾಗೂ ವಲಯ ಸೇನಾನಿ ಹರೀಶ್ ವಿಟ್ಲರವರುಗಳನ್ನು ಸನ್ಮಾನಿಸಲಾಯಿತು. ೨೦೨೮-೨೯ರ ಅವಧಿಗೆ ಜಿಲ್ಲಾ ಗವರ್ನರ್ ನಾಮಿನಿ ಡಾ.ಸೂರ್ಯನಾರಾಯಣ ಕೆ, ಕಳೆದ ರೋಟರಿ ಉಪ್ಪಿನಂಗಡಿಯಲ್ಲಿ ಜಿಲ್ಲೆಯಿಂದ ಅನ್ಸಂಗ್ ಹೀರೋ ಭಾಜನರಾದ ಕ್ಲಬ್ ಪೂರ್ವಾಧ್ಯಕ್ಷ ಅಬ್ದುಲ್ ರಹಿಮಾನ್ ಯೂನಿಕ್, ರೋಟರಿ ಉಪ್ಪಿನಂಗಡಿ ಟ್ರಸ್ಟ್ ಅಧ್ಯಕ್ಷ ಅಬೂಬಕ್ಕರ್ ಪುತ್ತುರವರುಗಳನ್ನು ಅಭಿನಂದಿಸಲಾಯಿತು.

ಪದ ಪ್ರದಾನ
೨೦೨೬-೨೭ನೇ ಸಾಲಿನ ನೂತನ ಅಧ್ಯಕ್ಷ ಕೇಶವ ಪಿ.ಎಂ, ಕಾರ್ಯದರ್ಶಿ ಆರ್.ರಾಜೇಶ್ ದಿಂಡಿಗಲ್, ಕೋಶಾಧಿಕಾರಿ ಶ್ರೀಕಾಂತ್ ಪಟೇಲ್, ನಿಕಟಪೂರ್ವ ಅಧ್ಯಕ್ಷ ಜೋನ್ ಕೆನ್ಯೂಟ್ ಮಸ್ಕರೇನ್ಹಸ್, ಕ್ಲಬ್ ಸರ್ವಿಸ್ ನಿರ್ದೇಶಕ ರಾಜಶೇಖರ್ ಶೆಟ್ಟಿ, ವೊಕೇಶನಲ್ ಸರ್ವಿಸ್ ನಿರ್ದೇಶಕ ಲವೀನಾ ಪಿಂಟೊ, ಕಮ್ಯೂನಿಟಿ ಸರ್ವಿಸ್ ನಿರ್ದೇಶಕಿ ವಂದನಾ, ಇಂಟರ್‌ನ್ಯಾಷನಲ್ ಸರ್ವಿಸ್ ನಿರ್ದೇಶಕ ಇಸ್ಮಾಯಿಲ್ ಇಕ್ಬಾಲ್, ಯೂತ್ ಸರ್ವಿಸ್ ನಿರ್ದೇಶಕ ಪ್ರದೀಪ್ ಕೆ.ಆರ್, ಸಾರ್ಜಂಟ್ ಎಟ್ ಆರ್ಮ್ಸ್ ಲೋಕೇಶ್ ನೆಕ್ಕರೆ, ಚೇರ್ಮನ್‌ಗಳಾದ ಸ್ವರ್ಣೇಶ್ ಗಾಣಿಗ(ಮೆಂಬರ್‌ಶಿಪ್), ಡಾ.ರಾಜಾರಾಮ್ ಕೆ.ಬಿ(ಟಿಆರ್‌ಎಫ್), ನಾಗೇಶ್ ಪ್ರಭು(ಪಬ್ಲಿಕ್ ಇಮೇಜ್), ಜಗದೀಶ್ ನಾಯಕ್(ಡಿಸ್ಟ್ರಿಕ್ಟ್ ಪ್ರಾಜೆಕ್ಟ್), ಡಾ.ನಿರಂಜನ್ ರೈ(ಪೋಲಿಯೊ ಫ್ಲಸ್)ರವರಿಗೆ ಪದ ಪ್ರದಾನ ಅಧಿಕಾರಿ ಸುರೇಂದ್ರ ಕಿಣಿರವರು ಪದ ಪ್ರದಾನವನ್ನು ನೆರವೇರಿಸಿದರು.

LEAVE A REPLY

Please enter your comment!
Please enter your name here