







ಪುತ್ತೂರು :ಪ್ರಗತಿ ಸ್ಟಡಿ ಸೆಂಟರ್ ನಿಂದ ಜುಲೈ 29 ರಂದು ಚಿಕ್ಕಮಗಳೂರು ಜಿಲ್ಲೆಯ ಶೋಲಾ ಅರಣ್ಯ ಪ್ರದೇಶಕ್ಕೆ ಆಯೋಜಿಸಲಾಗಿದ್ದ ಚಾರಣದಲ್ಲಿ ಸಂಸ್ಥೆಯ 60 ವಿದ್ಯಾರ್ಥಿಗಳು ಹಾಗೂ 7 ಶಿಕ್ಷಕರು ಭಾಗವಹಿಸಿದರು. ಈ ಚಾರಣದ ಅನುಭವದ ಕುರಿತು ಸಂಸ್ಢೆಯ ಮಕ್ಕಳು ಬರೆದ ಲೇಖನ ಹೀಗಿದೆ..



ಬೆಳಗಿನ ಜಾವ 5 ಗಂಟೆಗೆ ಉತ್ಸಾಹದಿಂದ ಪ್ರಯಾಣ ಆರಂಭಿಸಿದ ತಂಡ ಹಸಿರು ಬೆಟ್ಟಗಳು ಮತ್ತು ಮೋಡಗಳ ನಡುವೆ ಸಾಗುತ್ತ ಬೆಳಗ್ಗೆ 9 ಗಂಟೆಗೆ ನಂದ ಕಿಶೋರ್ ಮತ್ತು ಚೈತ್ರಾರವರ ಮಾಲಿಕತ್ವದ ಸುದರ್ಶನ್ ಹೋಂ ಸ್ಟೇ ತಲುಪಿ ಉಪಹಾರ ಸೇವಿಸಿದೆವು. ಬಳಿಕ ಜೀಪ್ ಗಳ ಮೂಲಕ ರಾಣಿಜೇರಿ ಕಡೆಗೆ ಪ್ರಯಾಣ ಮುಂದುವರಿಸಿದೆವು. ರಾಣಿಜೇರಿಗೆ ಸಾಗುವ ರಸ್ತೆ ದುರ್ಗಮವಾಗಿದ್ದರೂ ಚಾಲಕರ ನಿಪುಣತೆ ಮತ್ತು ಧೈರ್ಯ ಎಲ್ಲರ ಮೆಚ್ಚುಗೆಗೆ ಪಾತ್ರವಾಯಿತು. ತಿರುವುಗಳಿಂದ ಕೂಡಿದ ರಸ್ತೆಯಲ್ಲಿ ಸುರಕ್ಷಿತವಾಗಿ ವಾಹನ ಚಲಾಯಿಸಿದ ಚಾಲಕರನ್ನು ವಿದ್ಯಾರ್ಥಿಗಳು ಅಭಿನಂದಿಸಿದರು.




ರಾಣಿಜೇರಿ ತಲುಪಿದ ತಕ್ಷಣವೇ ಮಂಜಿನಿಂದ ಆವೃತವಾದ ಬೆಟ್ಟಗಳು, ಹಸಿರಿನಿಂದ ಕಂಗೊಳಿಸುವ ಕಣಿವೆಗಳು, ತಂಪಾದ ಗಾಳಿ ಮತ್ತು ಕಣ್ಣಿಗೆ ಹಬ್ಬವಾಗುವ ದೃಶ್ಯಗಳು ಮನಸ್ಸನ್ನು ಸೆಳೆದವು. ನಂತರ ತಂಡವು ಅರಣ್ಯದ ಮಧ್ಯೆ ನೆಲೆಸಿರುವ ಮಧುಸೂದನ್ ಅವರ ಮಾಲಿಕತ್ವದ ಖಾಸಗಿ ಕೊಡಿಗೆ ಜಲಪಾತಕ್ಕೆ ಭೇಟಿ ನೀಡಿತು.ಜಲಪಾತದ ಸೌಂದರ್ಯ ಮತ್ತು ಅರಣ್ಯದ ನೈಸರ್ಗಿಕ ವಾತಾವರಣ ಎಲ್ಲರ ಮನಸ್ಸಿಗೆ ಹೊಸ ಚೈತನ್ಯವನ್ನು ತುಂಬಿತು.

ಬಳಿಕ ತಂಡವು ಮತ್ತೆ ಸುದರ್ಶನ್ ಹೋಂ ಸ್ಟೇಗೆ ಮರಳಿ ಊಟವನ್ನು ಆಸ್ವಾದಿಸಿದೆವು.ಬಳಿಕ ದೇವರಮನೆ ಬೆಟ್ಟದತ್ತ ಪ್ರಯಾಣ ಬೆಳೆಸಿದೆವು. ಪ್ರಕೃತಿಯ ಸೌಂದರ್ಯದ ಖಜಾನೆಯಂತಿರುವ ದೇವರಮನೆ ಎಲ್ಲರ ಮನಸ್ಸನ್ನು ಮಂತ್ರಮುಗ್ಧಗೊಳಿಸಿತು. ಬೆಟ್ಟದ ಶಿಖರವನ್ನು ಆವರಿಸಿದ್ದ ದಟ್ಟ ಮಂಜು, ಮುಖವನ್ನು ಮುದ್ದಾಡುವ ತಂಪಾದ ಗಾಳಿ ಹಾಗೂ ಸತತವಾಗಿ ಸುರಿಯುತ್ತಿದ್ದ ತುಂತುರು ಮಳೆ ಆ ಪ್ರದೇಶವನ್ನು ಸ್ವರ್ಗದ ತುಣಿಕನಂತೆ ಭಾಸವಾಗುವಂತೆ ಮಾಡಿತ್ತು.

ಮೋಡಗಳ ನಡುವೆ ನಡೆಯುತ್ತಾ, ಹಸಿರು ಬೆಟ್ಟಗಳ ಸೌಂದರ್ಯವನ್ನು ಸವಿಯುತ್ತಾ ವಿದ್ಯಾರ್ಥಿಗಳು ಪ್ರಕೃತಿಯೊಡನೆ ಒಂದಾಗಿದ್ದರು. ಕೆಲವೊಮ್ಮೆ ಮಂಜು ಸಂಪೂರ್ಣ ಪ್ರದೇಶವನ್ನು ಆವರಿಸಿದರೆ ಮತ್ತೆ ಕೆಲವೇ ಕ್ಷಣಗಳಲ್ಲಿ ತೆರಳಿ ದೂರದ ಬೆಟ್ಟಗಳ ನೋಟವನ್ನು ಕಾಣಲು ಅವಕಾಶ ನೀಡುತ್ತಿತ್ತು. ಆ ಕ್ಷಣಗಳು ಪ್ರತಿಯೊಬ್ಬರ ಮನಸ್ಸಿನಲ್ಲಿ ಅಚ್ಚಳಿಯದ ನೆನಪಾಗಿ ಉಳಿದವು. ಸ್ನೇಹಿತರೊಂದಿಗೆ ನಗು, ಸಂಭ್ರಮ, ಛಾಯಾಚಿತ್ರಗಳು ಮತ್ತು ಪ್ರಕೃತಿಯ ನಡುವೆ ಕಳೆದ ಆ ಸಮಯ ವಿದ್ಯಾರ್ಥಿಗಳ ಜೀವನದ ಅತ್ಯಂತ ಅಮೂಲ್ಯ ಅನುಭವಗಳಲ್ಲಿ ಒಂದಾಯಿತು.
ದೇವರ ಮನೆ ಬೆಟ್ಟದ ಪ್ರಕೃತಿ ಸೌಂದರ್ಯವನ್ನು ಸವಿದು, ಮಂಜಿನ ನಡುವೆ ಅಮೂಲ್ಯ ಕ್ಷಣಗಳನ್ನು ಕಳೆದ ನಂತರ ನಾವು ಅಲ್ಲಿಯೇ ಸಮೀಪದಲ್ಲಿರುವ ನಮ್ಮ ಸಂಸ್ಥೆಯ ವಿದ್ಯಾರ್ಥಿಯಾದ ಮೌರ್ಯನ ನಿವಾಸದತ್ತ ತೆರಳಿದೆವು. ಆ ವಿದ್ಯಾರ್ಥಿಯ ಕುಟುಂಬದವರು ಎಲ್ಲಾ ಶಿಕ್ಷಕರಿಗೆ ಮತ್ತು ವಿದ್ಯಾರ್ಥಿಗಳಿಗೆ ವಿಶೇಷವಾಗಿ ಸಂಜೆಯ ಉಪಹಾರದ ವ್ಯವಸ್ಥೆ ಮಾಡಿದ್ದರು. ಅವರ ಮನೆಯಂಗಳಕ್ಕೆ ತಲುಪಿದ ಕ್ಷಣದಿಂದಲೇ ಕುಟುಂಬದ ಸದಸ್ಯರು ಎರನ್ನೂ ಆತ್ಮೀಯವಾಗಿ ಸ್ವಾಗತಿಸಿದರು. ಪ್ರೀತಿಯಿಂದ ನೀಡಿದ ಉಪಹಾರ, ವಿನಯಪೂರ್ವಕ ಮಾತುಗಳು ಮತ್ತು ಗೌರವಯುತ ಆತಿಥ್ಯ ಎಲ್ಲರ ಮನಸ್ಸನ್ನು ಮುಟ್ಟಿತು.



ಅತಿಥಿ ದೇವೋಭವ ಎಂಬ ಭಾರತೀಯ ಸಂಸ್ಕೃತಿಯ ಮೌಲ್ಯವನ್ನು ಅವರು ತಮ್ಮ ನಡುವಳಿಕೆಯ ಮೂಲಕ ಜೀವಂತಗೊಳಿಸಿದರು.ವಿದ್ಯಾರ್ಥಿ ಕುಟುಂಬದವರು ತೋರಿದ ಸರಳತೆ, ಪ್ರೀತಿ ಮತ್ತು ಆತಿಥ್ಯದಿಂದ ಶಿಕ್ಷಕರು ಹಾಗೂ ವಿದ್ಯಾರ್ಥಿಗಳು ಭಾವುಕರಾದರು. ಪ್ರಕೃತಿಯ ಸೌಂದರ್ಯದ ಜೊತೆಗೆ ಮಾನವೀಯತೆಯ ಸೌಂದರ್ಯವನ್ನು ಅನುಭವಿಸುವ ಅವಕಾಶ ಈ ಚಾರಣದಲ್ಲಿ ದೊರಕಿತು. ಅವರ ಆತ್ಮೀಯ ಸ್ವಾಗತ ಮತ್ತು ಉದಾರ ಮನೋಭಾವ ಎಲ್ಲರ ಮನಸ್ಸಿನಲ್ಲಿ ಅಚ್ಚಳಿಯದ ನೆನಪಾಗಿ ಉಳಿಯಿತು.

ಈ ಚಾರಣವು ಪ್ರಕೃತಿಯೊಂದಿಗೆ ಬೆರೆಯುವ, ಪರಿಸರದ ಮಹತ್ವವನ್ನು ಅರಿಯುವ ಹಾಗೂ ತಂಡದ ಸಹಕಾರವನ್ನು ವೃದ್ಧಿಸುವ ಒಂದು ಸುಂದರ ಅನುಭವವಾಗಿ ಪರಿಣಮಿಸಿತು. ಸುಂದರ ನೆನಪುಗಳನ್ನು ಹೃದಯದಲ್ಲಿ ಉಳಿಸಿಕೊಂಡು ನಮ್ಮ ಪ್ರಯಾಣ ಮತ್ತೆ ಪುತ್ತೂರಿಗೆ ಬಂದು ಮುಕ್ತಾಯವಾದಾಗ ರಾತ್ರಿ 10 ಗಂಟೆಯಾಗಿತ್ತು.










