ಪೋಸ್ಟರ್‌ಗಳಿಂದಲೇ ಸದ್ದು ಮಾಡಿರುವ ‘ಬನ’; ಟ್ರೇಲರ್‌ಗಾಗಿ ಸಿನಿಪ್ರಿಯರ ಕಾತರ

0

✍️ ಶರತ್ ಆಳ್ವ ಚನಿಲ

ಕನ್ನಡ–ತುಳು ದ್ವಿಭಾಷಾ ಚಿತ್ರ ‘ಬನ’ ತನ್ನ ವಿಭಿನ್ನ ಪೋಸ್ಟರ್‌ಗಳ ಮೂಲಕವೇ ಸಿನಿಪ್ರಿಯರ ಗಮನ ಸೆಳೆಯುವಲ್ಲಿ ಯಶಸ್ವಿಯಾಗಿದೆ. ಒಂದರ ಹಿಂದೆ ಒಂದರಂತೆ ಬಿಡುಗಡೆಯಾಗುತ್ತಿರುವ ಪೋಸ್ಟರ್‌ಗಳು ಚಿತ್ರದ ಮೇಲಿನ ನಿರೀಕ್ಷೆಯನ್ನು ಮತ್ತಷ್ಟು ಹೆಚ್ಚಿಸುತ್ತಿದ್ದು, ಸಾಮಾಜಿಕ ಜಾಲತಾಣಗಳಲ್ಲೂ ಉತ್ತಮ ಪ್ರತಿಕ್ರಿಯೆ ವ್ಯಕ್ತವಾಗುತ್ತಿದೆ.


ಇತ್ತೀಚೆಗೆ ಬಿಡುಗಡೆಯಾದ ಹೊಸ ಪೋಸ್ಟರ್ ಚಿತ್ರದ ಕಥೆಯ ಗಂಭೀರತೆ, ಪಾತ್ರಗಳ ನೈಜತೆ ಹಾಗೂ ದೃಶ್ಯ ವೈಭವದ ಸುಳಿವನ್ನು ನೀಡಿದೆ. ಕಲಾತ್ಮಕ ವಿನ್ಯಾಸ, ಪಾತ್ರಗಳ ಅಭಿವ್ಯಕ್ತಿ ಮತ್ತು ಪೋಸ್ಟರ್‌ನಲ್ಲಿನ ನೈಜತೆಯ ನಿರೂಪಣೆ ಸಿನಿಮಾ ವಿಭಿನ್ನ ಕಥಾಹಂದರದೊಂದಿಗೆ ತೆರೆಗೆ ಬರಲಿದೆ ಎಂಬ ಭರವಸೆಯನ್ನು ಮೂಡಿಸಿದೆ.


ಈ ಚಿತ್ರದ ಮೂಲಕ ಯುವ ಪ್ರತಿಭೆಗಳಾದ ಶರತ್ ಆಳ್ವ ಹಾಗೂ ನಿಹಾಲ್ ರೈ ಮೊದಲ ಬಾರಿಗೆ ನಾಯಕ ಪಾತ್ರಗಳಲ್ಲಿ ಬೆಳ್ಳಿತೆರೆಗೆ ಪರಿಚಯವಾಗುತ್ತಿದ್ದಾರೆ. ತಮ್ಮ ಹೊಸ ಲುಕ್ ಮತ್ತು ಅಭಿನಯದ ಛಾಯೆಯಿಂದಲೇ ಇಬ್ಬರೂ ಸಿನಿಪ್ರಿಯರ ಕುತೂಹಲ ಕೆರಳಿಸಿದ್ದಾರೆ. ಅದೇ ರೀತಿ, ತಮ್ಮ ವಿಶಿಷ್ಟ ಧ್ವನಿಯಿಂದ ಮನೆಮಾತಾಗಿರುವ ಖ್ಯಾತ ವಾರ್ತಾ ವಾಚಕ ಜಯಪ್ರಕಾಶ್ ಶೆಟ್ಟಿ ಅವರ ಅಭಿನಯವೂ ಚಿತ್ರದ ಪ್ರಮುಖ ಆಕರ್ಷಣೆಯಾಗಿದೆ.


ಈಶಿ ಪ್ರೊಡಕ್ಷನ್ ಬ್ಯಾನರ್‌ನಲ್ಲಿ ಮನೋಹರ್ ರೈ ವೈಪಾಲ ನಿರ್ಮಿಸುತ್ತಿರುವ ಈ ಚಿತ್ರಕ್ಕೆ ನಿತಿನ್ ರೈ ಕುಕ್ಕುವಳ್ಳಿ (ನುಳಿಯಾಲು) ನಿರ್ದೇಶನ ನೀಡಿದ್ದಾರೆ. ಜಯ ಕಾರ್ತಿ ಅವರ ಸಂಗೀತ, ಅರುಣ್ ರೈ ಪುತ್ತೂರು ಅವರ ಛಾಯಾಗ್ರಹಣ ಹಾಗೂ ನವೀನ್ ನೇರೋಳ್ತಡಿ ಅವರ ಸಂಕಲನ ಚಿತ್ರದ ತಾಂತ್ರಿಕ ಗುಣಮಟ್ಟಕ್ಕೆ ಇನ್ನಷ್ಟು ಮೆರುಗು ನೀಡಿವೆ.
ಈಗಾಗಲೇ ಸಾಕಷ್ಟು ನಿರೀಕ್ಷೆ ಹುಟ್ಟುಹಾಕಿರುವ ‘ಬನ’ ಚಿತ್ರದ ಟ್ರೇಲರ್ ಶೀಘ್ರದಲ್ಲೇ ಬಿಡುಗಡೆಯಾಗಲಿದ್ದು, ಅದರ ಮೂಲಕ ಚಿತ್ರದ ಕಥೆಯ ಮತ್ತಷ್ಟು ಅಂಶಗಳು ಅನಾವರಣಗೊಳ್ಳಲಿವೆ. ಕನ್ನಡ ಹಾಗೂ ತುಳು ಭಾಷೆಗಳಲ್ಲಿ ನಿರ್ಮಾಣಗೊಂಡಿರುವ ಈ ಚಿತ್ರವು ಅಕ್ಟೋಬರ್ 23ರಂದು ವಿಶ್ವದಾದ್ಯಂತ ಬಿಡುಗಡೆಯಾಗಲಿದೆ.
ಪೋಸ್ಟರ್‌ಗಳಿಂದಲೇ ಸಕಾರಾತ್ಮಕ ನಿರೀಕ್ಷೆ ಮೂಡಿಸಿರುವ ‘ಬನ’, ಟ್ರೇಲರ್ ಮೂಲಕ ಇನ್ನಷ್ಟು ಸದ್ದು ಮಾಡುವ ವಿಶ್ವಾಸ ಮೂಡಿಸಿದೆ. ಟ್ರೇಲರ್ ಬಿಡುಗಡೆ ಹಾಗೂ ಅಕ್ಟೋಬರ್ 23ರಂದು ಚಿತ್ರಮಂದಿರಗಳಲ್ಲಿ ಸಿನಿಮಾ ವೀಕ್ಷಿಸಲು ಸಿನಿಪ್ರಿಯರು ಕಾತರದಿಂದ ಕಾಯುತ್ತಿದ್ದಾರೆ.

LEAVE A REPLY

Please enter your comment!
Please enter your name here