







ಪ್ರತಿ ವರ್ಷ ಅ.15 ಬಂತೆಂದರೆ ಸಾಕು, ಪ್ರತಿಯೊಬ್ಬ ಭಾರತೀಯನ ಎದೆಯಲ್ಲಿ ದೇಶಪ್ರೇಮದ ರಕ್ತ ಚುರುಕಾಗುತ್ತದೆ. ಮುಂಜಾನೆಯ ತಂಗಾಳಿಯಲ್ಲಿ ತ್ರಿವರ್ಣ ಧ್ವಜವು ಆಗಸದಲ್ಲಿ ರಾರಾಜಿಸುವಾಗ, ನಮ್ಮ ಕಣ್ಣುಗಳು ಅರಿಯದಂತೆಯೇ ತೇವಗೊಳ್ಳುತ್ತವೆ. ಈ ಹಾರಾಡುವ ಬಾವುಟದ ಕೆಂಪು, ಬಿಳಿ, ಹಸಿರು ಬಣ್ಣಗಳ ಹಿಂದೆ ಕೋಟ್ಯಂತರ ದೇಶಪ್ರೇಮಿಗಳ ಬೆವರು, ನೆತ್ತರು ಮತ್ತು ಅಪಾರ ತ್ಯಾಗದ ಕಥೆ ಅಡಗಿದೆ. ತ್ಯಾಗದ ತಳಹದಿಯ ಮೇಲೆ ಎದ್ದಿರುವ ಈ ಉಸಿರು, ಬರೀ ಗಾಳಿಯಲ್ಲ… ಸಾವಿರಾರು ವೀರರ ಕೊನೆಯ ಕನಸು.


ಗುಲಾಮಗಿರಿಯ ಕತ್ತಲೆ ಮತ್ತು ಜಾಗೃತಿಯ ಕಿಡಿ – ಬ್ರಿಟಿಷರು ವ್ಯಾಪಾರದ ನೆಪದಲ್ಲಿ ಭಾರತಕ್ಕೆ ಬಂದು, ಭಾರತೀಯರಲ್ಲಿದ್ದ ಒಗ್ಗಟ್ಟಿನ ಕೊರತೆಯ ದುರ್ಲಾಭ ಪಡೆದು ಇಡೀ ದೇಶವನ್ನೇ ಗುಲಾಮಗಿರಿಯ ಸಂಕೋಲೆಗೆ ತಳ್ಳಿದರು. ನಮ್ಮ ನಾಡಿನ ಸಿರಿವಂತಿಕೆ, ಸಂಸ್ಕೃತಿಯನ್ನು ಸೂರೆಗೈದರು. ಆದರೆ, ಭಾರತೀಯರ ಸ್ವಾಭಿಮಾನದ ಜ್ವಾಲೆಯನ್ನು ನಂದಿಸಲು ಅವರಿಂದ ಸಾಧ್ಯವಾಗಲಿಲ್ಲ. 1857 ರ ಪ್ರಥಮ ಸ್ವಾತಂತ್ರ್ಯ ಸಂಗ್ರಾಮದಿಂದ ಆರಂಭವಾದ ದಂಗೆ, ಮುಂದೆ ಪ್ರತಿಯೊಂದು ಬೀದಿ-ಬೀದಿಗಳಲ್ಲೂ ಸ್ವಾತಂತ್ರ್ಯದ ಕಿಡಿಯನ್ನು ಹೊತ್ತಿಸಿತು. ನೆತ್ತರ ಹಾದಿ ನೆನಪಿಸಿಕೊಂಡರೆ ಕಣ್ಣಂಚು ತೇವಗೊಳ್ಳುವ ತ್ಯಾಗಗಳು. ಸ್ವಾತಂತ್ರ್ಯ ಎನ್ನುವುದು ನಮಗೆ ಸುಲಭವಾಗಿ ಸಿಕ್ಕ ಉಡುಗೊರೆಯಲ್ಲ. ಅದು ಲಕ್ಷಾಂತರ ವೀರರ ಪ್ರಾಣತ್ಯಾಗದ ಫಲ.



ಜಲಿಯನ್ ವಾಲಾಬಾಗ್ ನಲ್ಲಿ ನಿರಾಯುಧರಾಗಿ ಸಭೆ ಸೇರಿದ್ದ ಸಾವಿರಾರು ಮುಗ್ಧ ಜನರ ಮೇಲೆ ಜನರಲ್ ಡೈಯರ್ ಗುಂಡಿನ ಮಳೆ ಹರಿಸಿದಾಗ, ಆ ರಕ್ತಸಿಕ್ತ ನೆಲದಲ್ಲಿ ಬಿದ್ದ ಹೆಣಗಳ ರಾಶಿ ಮತ್ತು ಆರ್ತನಾದ ಇಂದಿಗೂ ಎದೆ ನಡುಗಿಸುತ್ತದೆ. “ಇನ್ಕಿಲಾಬ್ ಜಿಂದಾಬಾದ್” ಎಂದು ಕುತ್ತಿಗೆಗೆ ನೇಣಿನ ಹಗ್ಗವನ್ನು ಮಲ್ಲಿಗೆ ಹೂವಿನಂತೆ ಧರಿಸಿದ ಭಗತ್ ಸಿಂಗ್, ರಾಜ್‌ಗುರು, ಸುಖ್‌ದೇವ್ ಅವರ ಬಲಿದಾನ ದೇಶದ ಯುವಜನತೆಯಲ್ಲಿ ಧೈರ್ಯದ ಪ್ರವಾಹವನ್ನೇ ಹರಿಸಿತು.
ನಮ್ಮ ಕನ್ನಡ ಮಣ್ಣಿನ ಗಂಡುಗಲಿ ಕಿತ್ತೂರು ರಾಣಿ ಚೆನ್ನಮ್ಮ ಮತ್ತು ಆಕೆಯ ನಂಬಿಕಸ್ಥ ದಳಪತಿ ಕ್ರಾಂತಿವೀರ ಸಂಗೊಳ್ಳಿ ರಾಯಣ್ಣ ಬ್ರಿಟಿಷರ ವಿರುದ್ಧ ತೋರಿದ ಶೌರ್ಯ ಮತ್ತು ರಾಯಣ್ಣ ನೇಣುಗಂಬಕ್ಕೇರಿದ ರೋಮಾಂಚಕ ಇತಿಹಾಸ ಕನ್ನಡಿಗರ ರಕ್ತನಾಳಗಳಲ್ಲಿ ಇಂದಿಗೂ ಕಿಚ್ಚು ಹೊತ್ತಿಸುತ್ತದೆ. “ನೀವು ನನಗೆ ರಕ್ತ ಕೊಡಿ, ನಾನು ನಿಮಗೆ ಸ್ವಾತಂತ್ರ್ಯ ತಂದುಕೊಡುತ್ತೇನೆ” ಎಂದು ಸಿಂಹದಂತೆ ಗರ್ಜಿಸಿದ ನೇತಾಜಿ ಸುಭಾಷ್ ಚಂದ್ರ ಬೋಸ್ ಅವರ ಸಾಹಸ ಅಪ್ರತಿಮವಾದದ್ದು. ಮಹಾತ್ಮಾ ಗಾಂಧೀಜಿಯವರ ಸತ್ಯಾಗ್ರಹ, ಅಹಿಂಸೆ ಮತ್ತು ‘ಮಾಡು ಇಲ್ಲವೇ ಮಡಿ’ ಚಳವಳಿ ಇಡೀ ದೇಶವನ್ನು ಒಂದೇ ಸೂರಿನಡಿ ತಂದು ನಿಲ್ಲಿಸಿತು.
ಆಗಸ್ಟ್ 15 ನವೋದಯದ ಪವಿತ್ರ ಮುಂಜಾವು -1947 ರ ಆಗಸ್ಟ್ 15 ರ ಮಧ್ಯರಾತ್ರಿ, ಪ್ರಪಂಚವೇ ನಿದ್ರಿಸುತ್ತಿದ್ದಾಗ ಭಾರತವು ಹೊಸ ಬೆಳಕಿನೊಂದಿಗೆ ಎಚ್ಚರಗೊಂಡಿತು. ಬ್ರಿಟಿಷರ ಯೂನಿಯನ್ ಜ್ಯಾಕ್ ಧ್ವಜ ಕೆಳಗಿಳಿದು, ನಮ್ಮ ಹೆಮ್ಮೆಯ ತ್ರಿವರ್ಣ ಧ್ವಜ ದೆಹಲಿಯ ಕೆಂಪುಕೋಟೆಯ ಮೇಲೆ ಗಾಂಭೀರ್ಯದಿಂದ ಹಾರಾಡಿತು. ಅದು ಕೇವಲ ಒಂದು ಧ್ವಜದ ಆರೋಹಣವಾಗಿರಲಿಲ್ಲ. ನೂರಾರು ವರ್ಷಗಳ ದಾಸ್ಯದ ಸಂಕೋಲೆಗಳು ಕಳಚಿಬಿದ್ದ ಕ್ಷಣವಾಗಿತ್ತು.
ಇಂದು ನಾವು ಅನುಭವಿಸುತ್ತಿರುವ ಈ ಸ್ವತಂತ್ರ ಗಾಳಿ, ಹಸುಗೂಸಿನಂತೆ ಸ್ವಚ್ಛವಾಗಿ ಬದುಕುತ್ತಿರುವ ಪ್ರತಿಯೊಂದು ಕ್ಷಣವೂ ಆ ಮಹಾತ್ಮರ ತ್ಯಾಗದ ಭಿಕ್ಷೆ. ಸ್ವಾತಂತ್ರ್ಯವನ್ನು ಪಡೆಯುವುದು ಎಷ್ಟು ಕಷ್ಟವೋ, ಅದನ್ನು ಉಳಿಸಿಕೊಂಡು ಹೋಗುವುದು ಅಷ್ಟೇ ದೊಡ್ಡ ಜವಾಬ್ದಾರಿ. ದೇಶಪ್ರೇಮವೆಂದರೆ ಬರೀ ಆಗಸ್ಟ್ 15 ಮತ್ತು ಜನವರಿ 26 ರಂದು ವಾಟ್ಸಾಪ್ ಸ್ಟೇಟಸ್ ಹಾಕುವುದು ಮಾತ್ರವಲ್ಲ. ದೇಶದ ಕಾನೂನು ಮತ್ತು ಸಂವಿಧಾನಕ್ಕೆ ಗೌರವ ನೀಡುವುದು. ಜಾತಿ, ಧರ್ಮಗಳ ಹೆಸರಿನಲ್ಲಿ ಕಚ್ಚಾಡದೆ ‘ಭಾರತೀಯ’ರೆಂಬ ಭಾವನೆಯಿಂದ ಬಾಳುವುದು. ನಮ್ಮ ಸೈನಿಕರ ತ್ಯಾಗವನ್ನು ಸದಾ ಸ್ಮರಿಸುವುದು ಮತ್ತು ನಾಡಿನ ಪ್ರಕೃತಿ, ಸಾರ್ವಜನಿಕ ಆಸ್ತಿಯನ್ನು ರಕ್ಷಿಸುವುದು ನಿಜವಾದ ದೇಶಪ್ರೇಮ.
ಸ್ವಾತಂತ್ರ್ಯ ದಿನಾಚರಣೆಯು ಕೇವಲ ಒಂದು ರಜಾದಿನವಲ್ಲ. ಅದು ನಮ್ಮ ಅಸ್ಮಿತೆಯ ಹಬ್ಬ. ಬನ್ನಿ, ನಮ್ಮ ಧಮನಿಧಮನಿಗಳಲ್ಲೂ ದೇಶಪ್ರೇಮದ ರಕ್ತ ಹರಿಯಲಿ. ನಮಗಾಗಿ ಪ್ರಾಣ ತೆತ್ತ ಪ್ರತಿಯೊಬ್ಬ ವೀರ ಹುತಾತ್ಮರಿಗೂ ನಮಿಸೋಣ.
“ಜೈ ಹಿಂದ್”
✍🏻 ಹಮೀದ್ ಪುತ್ತೂರು










