ಕಾಣಿಯೂರು ಪ್ರಗತಿ ವಿದ್ಯಾ ಸಂಸ್ಥೆಯ ನರ್ಸರಿ ವಿಭಾಗದಿಂದ “ಮಾತೃವಂದನಾ ಕಾರ್ಯಕ್ರಮ, ಗುರುಪೂರ್ಣಿಮ ಆಚರಣೆ

0

ಕಾಣಿಯೂರು: ಕಾಣಿಯೂರು ಪ್ರಗತಿ ವಿದ್ಯಾಸಂಸ್ಥೆ ನರ್ಸರಿ ವಿಭಾಗದಿಂದ ಮಾತೃವಂದನಾ ಹಾಗೂ ಗುರುಪೂರ್ಣಿಮ ಆಚರಣೆಯನ್ನು ಅತ್ಯಂತ ಭಕ್ತಿ, ಗೌರವ ಹಾಗೂ ಅರ್ಥಪೂರ್ಣವಾಗಿ ಆಚರಿಸಲಾಯಿತು. ಕಾರ್ಯಕ್ರಮದ ಮುಖ್ಯ ಉದ್ದೇಶ ಮಕ್ಕಳಲ್ಲಿ ತಾಯಿಯ ಮೇಲಿನ ಪ್ರೀತಿ, ಗೌರವ, ಕೃತಜ್ಞತೆ ಹಾಗೂ ಕುಟುಂಬದ ಮೌಲ್ಯಗಳ ಅರಿವನ್ನು ಮೂಡಿಸುವುದಾಗಿತ್ತು.

ಕಾರ್ಯಕ್ರಮವನ್ನು ಶಾಲಾ ಸಂಚಾಲಕರಾದ ಜಯಸೂರ್ಯ ರೈ ಮಾದೋಡಿ ದೀಪ ಪ್ರಜ್ವಲನೆಯ ಮೂಲಕ ಉದ್ಘಾಟಿಸಿ “ತಾಯಿಯೇ ಮಗುವಿನ ಮೊದಲ ಗುರು. ಮಗುವಿನ ಜೀವನದ ಪ್ರತಿಯೊಂದು ಹಂತದಲ್ಲಿಯೂ ತಾಯಿ ನೀಡುವ ಪ್ರೀತಿ, ತ್ಯಾಗ, ಮಮತೆ, ಸಹನೆ ಮತ್ತು ಮಾರ್ಗದರ್ಶನ ಅಪಾರವಾದುದು. ಈ ಮೌಲ್ಯಗಳನ್ನು ಮಕ್ಕಳಿಗೆ ತಿಳಿಸಿಕೊಡುವ ಉದ್ದೇಶದಿಂದ ಮಾತೃವಂದನಾ ಕಾರ್ಯಕ್ರಮವನ್ನು ಆಯೋಜಿಸಲಾಗಿದೆ” ಎಂದು ತಿಳಿಸಿದರು.

ಶಾಲಾ ಆಡಳಿತಾಧಿಕಾರಿ ಶ್ರೀ ವಸಂತ ರೈ ಕಾರ್ಕಳ ಮಾತನಾಡಿ “ಮಕ್ಕಳಿಗೆ ವಿದ್ಯೆಯ ಜೊತೆಗೆ ಸಂಸ್ಕಾರ ಮತ್ತು ಮಾನವೀಯ ಮೌಲ್ಯಗಳನ್ನು ಕಲಿಸುವುದು ಅತ್ಯಂತ ಅಗತ್ಯ. ತಾಯಿಯನ್ನು ಗೌರವಿಸುವ ಮನೋಭಾವ ಬಾಲ್ಯದಿಂದಲೇ ಬೆಳೆಸಬೇಕು. ಮಾತೃವಂದನೆಯಂತಹ ಕಾರ್ಯಕ್ರಮಗಳು ಮಕ್ಕಳಲ್ಲಿ ಕೃತಜ್ಞತೆ, ವಿನಯ ಮತ್ತು ಗೌರವದ ಗುಣಗಳನ್ನು ಬೆಳೆಸಲು ಸಹಕಾರಿಯಾಗುತ್ತವೆ” ಎಂದು ಹೇಳಿದರು.

ಈ ಸಂದರ್ಭದಲ್ಲಿ ನರ್ಸರಿ ಪುಟಾಣಿಗಳು ತಮ್ಮ ತಾಯಂದಿರನ್ನು ಗೌರವಪೂರ್ವಕವಾಗಿ ವೇದಿಕೆಗೆ ಆಹ್ವಾನಿಸಿ, ಅವರ ಪಾದಪೂಜೆ ನೆರವೇರಿಸಿದರು. ತಾಯಿಯ ಪಾದಗಳಿಗೆ ನೀರು ಹಾಕಿ, ಹೂವುಗಳಿಂದ ಪೂಜಿಸಿ, ಆರತಿ ಬೆಳಗಿ ಗೌರವ ಸಲ್ಲಿಸಿದ ಕ್ಷಣವು ಹೃದಯಸ್ಪರ್ಶಿಯಾಗಿತ್ತು.

ಗುರು-ಶಿಷ್ಯರ ಸಂಬಂಧವನ್ನು ಮತ್ತು ಮಹತ್ವವನ್ನು ತಿಳಿಸುವ ನಿಟ್ಟಿನಲ್ಲಿ ಗುರುವಿಗೆ (ಧನುಷ್ ಕೆ 7ನೇ) ಶಿಷ್ಯ( ವಿಹಾನ್ ಪೈ 5ನೇ) ಪೂಜೆ ಮಾಡುವ ಮೂಲಕ ನಿಜವಾದ ಗುರು ಶಿಷ್ಯರ ಸಂಬಂಧವನ್ನು ಸಾಕ್ಷಾತ್ಕರಿಸಿದರು.
ವೇದಿಕೆಯಲ್ಲಿ ಶಾಲಾ ಟ್ರಸ್ಟಿ ದೇವಿಕಿರಣ್ ರೈ ಮಾದೋಡಿ, ಶ್ರೀಮತಿಅಕ್ಷತಾ ದೇವಿಕಿರಣ್ ರೈ, ಶಾಲಾ ಸಹ ಆಡಳಿತಾಧಿಕಾರಿ ಹೇಮನಾಗೇಶ್ ರೈ ಮಾಳ, ಆಂಗ್ಲ ಮಾಧ್ಯಮದ ಮುಖ್ಯ ಗುರು ನಾರಾಯಣ ಭಟ್, ಕನ್ನಡ ಮಾಧ್ಯಮದ ಮುಖ್ಯಗುರು ವಿನಯ ವಿ ಶೆಟ್ಟಿ, ಸಹಮುಖ್ಯಗುರು ಅನಿತಾ ಜೆ ರೈ ಉಪಸ್ಥಿತರಿದ್ದರು. ನರ್ಸರಿ ವಿಭಾಗದ ಶಿಕ್ಷಕಿಯರಾದ ಸುಚೇತ, ಕವಿತಾ ಎಚ್ ರೈ, ರಚನಾ, ಸವಿತಾ ಎಸ್ ಕಾರ್ಯಕ್ರಮವನ್ನು ಸಂಘಟಿಸಿದರು. ಶಿಕ್ಷಕಿ ಪ್ರತಿಭಾ ಕಾರ್ಯಕ್ರಮ ನಿರೂಪಿಸಿದರು. ಹಿರಿಯ ಶಿಕ್ಷಕಿಯರಾದ ಸವಿತ ಕೆ ಮತ್ತು ಧನ್ಯ ಎಂ ಕೆ ಮಾರ್ಗದರ್ಶನ ನೀಡಿದರು.
ಕಾರ್ಯಕ್ರಮದ ಅಂತ್ಯದಲ್ಲಿ ತಾಯಂದಿರ ಮುಖದಲ್ಲಿ ಮೂಡಿದ ಸಂತೋಷ ಮತ್ತು ಮಕ್ಕಳಲ್ಲಿ ಕಂಡುಬಂದ ಗೌರವಭಾವ ಕಾರ್ಯಕ್ರಮದ ಯಶಸ್ಸಿಗೆ ಸಾಕ್ಷಿಯಾಯಿತು.

LEAVE A REPLY

Please enter your comment!
Please enter your name here