ಸಂಪ್ಯ ಹಾಲು ಉತ್ಪಾದಕರ ಸಹಕಾರ ಸಂಘದ ಸಾಮಾನ್ಯ ಸಭೆ

0

ರೂ.3,75ಲಕ್ಷ ಲಾಭ, ಶೇ.20 ಡಿವಿಡೆಂಡ್, ರೂ.1.38 ಬೋನಸ್

ಪುತ್ತೂರು: ಸಂಪ್ಯ ಹಾಲು ಉತ್ಪಾದಕರ ಸಹಕಾರ ಸಂಘವು 2025-26ನೇ ಸಾಲಿನಲ್ಲಿ ರೂ.3,75,543.72ನಿವ್ವಳ ಲಾಭಗಳಿಸಿ ಸದಸ್ಯರಿಗೆ ಶೇ.20 ಡಿವಿಡೆಂಡ್ ಹಾಗೂ ಹಾಲು ಉತ್ಪಾದಕರಿಗೆ ಪ್ರತಿ ಲೀಟರ್ ಹಾಲಿಗೆ ರೂ.1.38 ಬೋನಸ್ ನೀಡಲಾಗುವುದು ಎಂದು ಸಂಘದ ಅಧ್ಯಕ್ಷ ರಮಾನಂದ ಬಲ್ಯಾಯ ಅವರು ವಾರ್ಷಿಕ ಸಾಮಾನ್ಯ ಸಭೆಯಲ್ಲಿ ಘೋಷಣೆ ಮಾಡಿದರು.


ಸಭೆಯು ಆ.20ರಂದು ಆರ್ಯಾಪು ಗ್ರಾ.ಪಂನ ನೇತಾಜಿ ಸುಭಾಷ್‌ಚಂದ್ರ ಬೋಸ್ ಸಭಾಂಗಣದಲ್ಲಿ ನಡೆಯಿತು. ಸಭೆಯ ಅಧ್ಯಕ್ಷತೆ ವಹಿಸಿದ್ದ ಅವರು ಮಾತನಾಡಿ, ವರದಿ ವರ್ಷದಲ್ಲಿ ಸಂಘವು 127 ಸದಸ್ಯರಿಂದ ರೂ.42,000 ಪಾಲು ಬಂಡವಾಳ ಹೊಂದಿದೆ. ವರದಿ ವರ್ಷದಲ್ಲಿ ಸಂಘವು ಹೈನುಗಾರರಿಂದ 1,29,824.7ಲೀಟರ್ ಹಾಲು ಖರೀದಿಸಿ, 1,10,966.2ಲೀ. ಹಾಲನ್ನು ಒಕ್ಕೂಟಕ್ಕೆ ಸರಬರಾಜು ಮಾಡಲಾಗಿದೆ. 18,858.50 ಲೀಟರ್ ಹಾಲನ್ನು ಸ್ಥಳೀಯವಾಗಿ ಮಾರಾಟ ಮಾಡಿದೆ. ಇದರಿಂದ ಸಂಘಕ್ಕೆ ರೂ.10,18,359 ಆದಾಯ ಬಂದಿರುತ್ತದೆ. 676.20 ಲೀಟರ್ ಮಾದರಿ ಹಾಲು ಆಗಿರುತ್ತದೆ. 250 ಕೆ.ಜಿ ಲವಣ ಮಿಶ್ರಣ ಹಾಗೂ 340ಕೆಜಿ ಸಮೃದ್ಧಿ, 450 ಚೀಲ ಪಶು ಆಹಾರ ಮಾರಾಟ ಮಾಡಲಾಗಿದೆ. ಇತರ ಆದಾಯಗಳಾದ ಪ್ರವೇಶ ಧನದಿಂದ ರೂ.60, ಒಕ್ಕೂಟದ ಡಿವಿಡೆಂಡ್ ರೂ.11,850, ಒಕ್ಕೂಟದ ಬೋನಸ್ ರೂ.22,333.51, ಉಳಿತಾಯ ಖಾತೆ ಬಡ್ಡಿಯಿಂದ ರೂ.27,019 ಹಾಗೂ ಧನ ವಿನಿಯೋಗದಿಂದ ರೂ.1,26,842 ಆದಾಯ ಬಂದಿದೆ. ಸಂಘದ ಎಲ್ಲಾ ಖರ್ಚು ವೆಚ್ಚಗಳನ್ನು ಕಳೆದು ರೂ.3,75,543.72 ನಿವ್ವಳ ಲಾಭಗಳಿಸಿದೆ. ಲೆಕ್ಕ ಪರಿಶೋಧನೆಯಲ್ಲಿ ಸಂಘವು ಎ ಶ್ರೇಣಿ ಪಡೆದುಕೊಂಡಿದೆ ಎಂದರು.


ದ.ಕ ಹಾಲು ಒಕ್ಕೂಟದ ವಿಸ್ತರಣಾಧಿಕಾರಿ ವಿದ್ಯಾ ಮಾತನಾಡಿ, ಅಲ್ಪ ಸ್ಥಳದಲ್ಲಿ ಕಾರ್ಯನಿರ್ವಹಿಸುತ್ತಿರುವ ಸಂಪ್ಯದ ಹಾಲು ಉತ್ಪಾದಕರ ಸಹಕಾರ ಸಂಘವು ಉತ್ತಮ ರೀತಿಯಲ್ಲಿ ಕಾರ್ಯನಿರ್ವಹಿಸುತ್ತಿದೆ. ಬಾಡಿಗೆ ಕಟ್ಟಡಲ್ಲಿ ಕಾರ್ಯನಿರ್ವಹಿಸುತ್ತಿರುವ ಸಂಘಕ್ಕೆ ಸ್ವಂತ ಕಟ್ಟಡ ನಿರ್ಮಾಣವಾಗಬೇಕು. ಕಟ್ಟಡ ನಿರ್ಮಾಣಕ್ಕೆ ಒಕ್ಕೂಟದಿಂದ ಧನ ಸಹಾಯ ನೀಡುತ್ತಿದೆ. ಇದನ್ನು ಸದುಪಯೋಗ ಪಡಿಸಿಕೊಂಡು ಅತೀ ಶೀಘ್ರದಲ್ಲಿ ಸ್ವಂತ ಕಟ್ಟಡ ನಿರ್ಮಿಸಬೇಕು ಎಂದು ತಿಳಿಸಿದ ಅವರು ರಬ್ಬರ್ ಮ್ಯಾಟ್, ಹಾಲು ಕರೆಯುವ ಯಂತ್ರ, ಹುಲ್ಲು ಕತ್ತರಿಸುವ ಯಂತ್ರ ಸಹಿತ ಹಲವು ಯೋಜನೆಗಳನ್ನು ನೀಡುತ್ತಿದ್ದು ಅವುಗಳನ್ನು ಸದುಪಯೋಗ ಪಡಿಸಿಕೊಂಡು ಹೈನುಗಾರಿಕೆಯನ್ನು ಅಭಿವೃದ್ಧಿ ಪಡಿಸುವಂತೆ ಹೇಳಿದರು.


ದ.ಕ ಹಾಲು ಒಕ್ಕೂಟದ ಪಶು ವೈದ್ಯಾಧಿಕಾರಿ ಡಾ.ಅನುದೀಪ್ ಮಾತನಾಡಿ, ಹಸುಗಳ ಸಾಕಾಣಿಕೆ, ಸುರಕ್ಷತಾ ವಿಧಾನಗಳು, ವಿಮೆಗಳು ಹಾಗೂ ಅಧಿಕ ಹಾಲು ಕೊಡುವ ವಿವಿಧ ತಳಿಗಳ ಬಗ್ಗೆ ಮಾಹಿತಿ ಹಾಗೂ ಹೈನುಗಾರಿಕೆಯಲ್ಲಿ ವೈಜ್ಞಾನಿಕ ವಿಧಾನಗಳ ಮಾಹಿತಿ ನೀಡಿದರು.


ಸನ್ಮಾನ, ಬಹುಮಾನ ವಿತರಣೆ:
ಸಂಘದಲ್ಲಿ 19 ವರ್ಷಗಳ ಕಾಲ ಹಾಲು ಪರೀಕ್ಷಕಿಯಾಗಿ ಕರ್ತವ್ಯ ನಿರ್ವಹಿಸಿ ನಿವೃತ್ತರಾದ ಪ್ರೇಮ, ಸಂಘದ ಹಿರಿಯ ಸದಸ್ಯರಾದ ಶೇಖರ ಪೂಜಾರಿ ಕಟ್ಟದಬೈಲು, ವಿಶ್ವನಾಥ ಪೂಜಾರಿ ಸಂಟ್ಯಾರು ಅವರನ್ನು ಸನ್ಮಾನಿಸಲಾಯಿತು. ವರದಿ ಸಾಲಿನಲ್ಲಿ ಸಂಘಕ್ಕೆ ಅತೀ ಹೆಚ್ಚು ಹಾಲು ಪೂರೈಸಿದ ನವೀನ್ ಗೌಡ(ಪ್ರ), ವಸಂತ ಗೌಡ ಕುಕ್ಕಾಡಿ(ದ್ವಿ) ಬಹುಮಾನ ಹಾಗೂ ಎಲ್ಲಾ ಹಾಲು ಉತ್ಪಾದಕರಿಗೆ ಪ್ರೋತ್ಸಾಹಕ ಬಹುಮಾನ ವಿತರಿಸಲಾಯಿತು.


ನಿರ್ದೇಶಕರಾದ ಶಂಕರನಾರಾಯಣ ಭಟ್ ಕೆ., ಶ್ರೀಕೃಷ್ಣ ಭಟ್, ಸಂದೀಪ್ ಬಿ., ಆನಂದ ಗೌಡ ಕುಕ್ಕಾಡಿ ವೇದಿಕೆಯಲ್ಲಿ ಉಪಸ್ಥಿತರಿದ್ದರು. ನಿರ್ದೇಶಕರಾದ ಹೇಮಲತಾ ಕುಕ್ಕಾಡಿ ಸ್ವಾಗತಿದರು. ಉಪಾಧ್ಯಕ್ಷೆ ಜ್ಯೋತಿ ಕೆ.ಎಲ್., ನಿರ್ದೇಶಕರಾದ ಶಿವಪ್ರಸಾದ್ ಕೆ. ಗಣೇಶ್ ಎಮ್. ವಿವಿಧ ಕಾರ್ಯಕ್ರಮ ನಿರ್ವಹಿಸಿದರು. ಪೂರ್ಣಿಮಾ ಪಿ. ಪುತ್ತೂರಾಯ ಕಾರ್ಯಕ್ರಮ ನಿರ್ವಹಿಸಿದರು. ಕಾರ್ಯದರ್ಶಿ ರಜತಾ ವರದಿ, ಆಯ-ವ್ಯಯ ಮಂಡಿಸಿದರು. ಹಾಲು ಪರೀಕ್ಷಕಿ ಭವಾನಿ ಸಹಕರಿಸಿದರು. ಸಭಾ ಕಾರ್ಯಕ್ರಮದ ಬಳಿಕ ಸಹಭೋಜನ ನಡೆಯಿತು.

LEAVE A REPLY

Please enter your comment!
Please enter your name here