ರಬೀವುಲ್ ಅವ್ವಲ್ – ಕರುಣೆ ಮತ್ತು ಬೆಳಕಿನ ಮಾಸ

0

ಇಸ್ಲಾಮಿಕ್ ಇತಿಹಾಸದಲ್ಲಿ ರಬೀವುಲ್ ಅವ್ವಲ್ ತಿಂಗಳಿಗೆ ಅತ್ಯುನ್ನತ ಸ್ಥಾನವಿದೆ. ‘ರಬೀ’ ಎಂದರೆ ಅರೇಬಿಕ್ ಭಾಷೆಯಲ್ಲಿ ‘ವಸಂತ’ ಎಂದರ್ಥ. ಹೇಗೆ ವಸಂತ ಕಾಲವು ಪ್ರಕೃತಿಗೆ ಹೊಸ ಜೀವ ಮತ್ತು ಅಂದವನ್ನು ನೀಡುತ್ತದೆಯೋ, ಹಾಗೆಯೇ ಈ ತಿಂಗಳಿನಲ್ಲಿ ಪ್ರವಾದಿ ಮಹಮ್ಮದ್ (ಸ) ಅವರ ಆಗಮನವು ಆಧ್ಯಾತ್ಮಿಕವಾಗಿ ಕತ್ತಲೆಯಲ್ಲಿದ್ದ ಮಾನವ ಕುಲಕ್ಕೆ ಹೊಸ ಬೆಳಕು ಮತ್ತು ಮಾರ್ಗದರ್ಶನವನ್ನು ನೀಡಿತು. ಈ ತಿಂಗಳ 12 ರಂದು ಪ್ರವಾದಿ ಮಹಮ್ಮದ್ (ಸ) ಅವರು ಸೌದಿ ಅರೇಬಿಯಾದ ಪವಿತ್ರ ಮಕ್ಕಾ ನಗರದಲ್ಲಿ ಜನಿಸಿದರು. ಆದ್ದರಿಂದಲೇ ಪ್ರಪಂಚದಾದ್ಯಂತ ಈ ತಿಂಗಳಲ್ಲಿ ಪ್ರವಾದಿಯವರ ಜೀವನಾಧಾರಿತ ಉಪನ್ಯಾಸಗಳು, ಪ್ರಾರ್ಥನೆಗಳು ಮತ್ತು ಅವರ ಸಂದೇಶಗಳನ್ನು ನೆನಪಿಸಿಕೊಳ್ಳುವ ಕಾರ್ಯಕ್ರಮಗಳು ಜರುಗುತ್ತವೆ.

ಪ್ರವಾದಿ ಮಹಮ್ಮದ್ (ಸ) ಅವರ ವ್ಯಕ್ತಿತ್ವವು ಅತ್ಯಂತ ಉನ್ನತ ಮತ್ತು ಅನುಕರಣೀಯವಾದದ್ದು. ಪ್ರವಾದಿತ್ವ ದೊರೆಯುವ ಮುನ್ನವೇ, ಅವರ ಸತ್ಯಸಂಧತೆ ಮತ್ತು ಪ್ರಮಾಣಿಕತೆಯನ್ನು ಕಂಡು ಮಕ್ಕಾದ ಜನರು ಅವರನ್ನು ‘ಅಲ್-ಅಮೀನ್’ (ವಿಶ್ವಾಸಿ) ಮತ್ತು ‘ಅಸ್-ಸಾದಿಕ್’ (ಸತ್ಯವಂತ) ಎಂದು ಕರೆಯುತ್ತಿದ್ದರು. ಪವಿತ್ರ ಕುರ್‌ಆನ್ ವಾಕ್ಯವೊಂದರಲ್ಲಿ ಹೇಳಿರುವಂತೆ, “ನಾವು ನಿಮ್ಮನ್ನು ಜಗತ್ತಿಗೆ ಕರುಣೆಯಾಗಿ ಹೊರತು ಕಳುಹಿಸಿಕೊಟ್ಟಿಲ್ಲ” (ಅಲ್-ಅಂಬಿಯಾ: 107). ಅವರು ಶತ್ರುಗಳಿಗೂ ಕ್ಷಮೆಯನ್ನು ನೀಡಿದ ಮಹಾನ್ ದಯಾಮಯಿಯಾಗಿದ್ದರು.
ಇಡೀ ಅರೇಬಿಯಾದ ನಾಯಕರಾಗಿದ್ದರೂ, ಅವರು ಅತ್ಯಂತ ಸರಳ ಜೀವನ ನಡೆಸಿದರು. ನೆಲದ ಮೇಲೆಯೇ ಮಲಗುತ್ತಿದ್ದರು, ತಮ್ಮ ಬಟ್ಟೆ ಮತ್ತು ಪಾದರಕ್ಷೆಗಳನ್ನು ತಾವೇ ಹೊಲಿದುಕೊಳ್ಳುತ್ತಿದ್ದರು. ಬಡವ-ಬಲ್ಲಿದ, ಕಪ್ಪು-ಬಿಳುಪು ಎಂಬ ಯಾವುದೇ ತಾರತಮ್ಯವಿಲ್ಲದೆ ಪ್ರತಿಯೊಬ್ಬರಿಗೂ ಸಮಾನ ಗೌರವ ನೀಡುತ್ತಿದ್ದರು. ಬಾಲಕರು, ವೃದ್ಧರು, ನೌಕರರು ಮತ್ತು ಅನಾಥರ ಹಕ್ಕುಗಳನ್ನು ಎತ್ತಿಹಿಡಿದರು. ಮಾನವರಷ್ಟೇ ಅಲ್ಲದೆ, ಪ್ರಾಣಿಗಳಿಗೆ ಹಿಂಸೆ ನೀಡಬಾರದು, ಅವುಗಳಿಗೆ ಆಹಾರ ನೀಡಬೇಕು ಎಂದು ಬೋಧಿಸಿದ ಪರಿಸರ ಹಾಗೂ ಜೀವಪ್ರೇಮಿಯಾಗಿದ್ದರು.

ಪ್ರವಾದಿ ಮಹಮ್ಮದ್ (ಸ) ಅವರು ತಮ್ಮ ಜೀವನದ ಉದ್ದಕ್ಕೂ ಜಗತ್ತಿಗೆ ಸಾರಿದ ಸಾರ್ವಕಾಲಿಕ ಸಂದೇಶಗಳು ಮಾನವಕುಲಕ್ಕೆ ಅತ್ಯಂತ ಪ್ರಸ್ತುತವಾಗಿವೆ. ಸೃಷ್ಟಿಕರ್ತನಾದ ಒಬ್ಬನೇ ದೇವರನ್ನು ಆರಾಧಿಸಿ ಮತ್ತು ಯಾವುದೇ ಜೀವಿ ಅಥವಾ ವಸ್ತುವನ್ನು ದೇವರಿಗೆ ಸಮಾನವಾಗಿ ಮಾಡಬೇಡಿ ಎಂಬುದು ಅವರ ಮೂಲ ಸಂದೇಶವಾಗಿತ್ತು.”ಅರಬನಿಗೆ ಅರಬೇತರನಿಗಿಂತ ಅಥವಾ ಬಿಳಿಯವನಿಗೆ ಕಪ್ಪು ವರ್ಣದವನಿಗಿಂತ ಯಾವುದೇ ಶ್ರೇಷ್ಠತೆಯಿಲ್ಲ. ದೇವಭಯ ಮತ್ತು ಉತ್ತಮ ನಡತೆ ಮಾತ್ರ ಒಬ್ಬನನ್ನು ಶ್ರೇಷ್ಠನನ್ನಾಗಿ ಮಾಡುತ್ತದೆ” ಎಂದು ಸಾರಿದರು. ಸಮಾಜದಲ್ಲಿ ಹೆಣ್ಣುಮಕ್ಕಳನ್ನು ಜೀವಂತವಾಗಿ ಹೂತುಹಾಕುತ್ತಿದ್ದ ಕಾಲದಲ್ಲಿ, ಹೆಣ್ಣಿಗೆ ಆಸ್ತಿಯಲ್ಲಿ ಹಕ್ಕು, ಶಿಕ್ಷಣದ ಹಕ್ಕು ಮತ್ತು ಪತಿಯ ಆಯ್ಕೆಯ ಹಕ್ಕನ್ನು ನೀಡಿದರು. “ತಾಯಿಯ ಪಾದದಡಿಯಲ್ಲಿ ಸ್ವರ್ಗವಿದೆ” ಎಂದು ತಾಯಂದಿರ ಸ್ಥಾನಮಾನವನ್ನು ಎತ್ತಿಹಿಡಿದರು. ದ್ವೇಷವನ್ನು ಪ್ರೀತಿಯಿಂದ, ಹಿಂಸೆಯನ್ನು ಶಾಂತಿಯಿಂದ ಗೆಲ್ಲಬೇಕು ಎಂಬುದು ಅವರ ತತ್ವವಾಗಿತ್ತು. ಮಕ್ಕಾವನ್ನು ಗೆದ್ದಾಗ, ತಮಗೆ ನೂರಾರು ಹಿಂಸೆ ನೀಡಿದ್ದ ಶತ್ರುಗಳನ್ನು ಯಾವುದೇ ಸೇಡಿನ ಭಾವನೆಯಿಲ್ಲದೆ ಕ್ಷಮಿಸಿದರು. ಪ್ರವಾದಿ ಮಹಮ್ಮದ್ (ಸ) ಅವರು ತಮ್ಮ ಜೀವನದ ಕೊನೆಯ ಹಜ್ಜ್ ಸಂದರ್ಭದಲ್ಲಿ ನೀಡಿದ ‘ವಿದಾಯ ಪ್ರವಚನ’ ಮಾನವಕುಲದ ಇತಿಹಾಸದಲ್ಲಿಯೇ ಅತ್ಯಂತ ಪ್ರಭಾವಶಾಲಿ ಮತ್ತು ಮಹತ್ವದ ಮಾನವ ಹಕ್ಕುಗಳ ಘೋಷಣೆಯಾಗಿದೆ. ಸುಮಾರು 1,400 ವರ್ಷಗಳ ಹಿಂದೆ ನೀಡಲಾದ ಈ ಐತಿಹಾಸಿಕ ಸಂದೇಶವು ಸಾರ್ವಕಾಲಿಕ ಮೌಲ್ಯಗಳನ್ನು ಹೊಂದಿದ್ದು, ಜಗತ್ತಿಗೆ ಶಾಂತಿ, ಸಮಾನತೆ ಮತ್ತು ನ್ಯಾಯದ ದಾರಿಯನ್ನು ತೋರಿಸುತ್ತದೆ.


ಹಿಜರಿ ಶಕ 10 ರಲ್ಲಿ, ಅರಾಫಾತ್‌ ಮೈದಾನದ ‘ಜಬಲ್ ಅಲ್-ರಹ್ಮಾ’ (ಕರುಣೆಯ ಬೆಟ್ಟ) ಮೇಲೆ ನೆರೆದಿದ್ದ ಅನುಯಾಯಿಗಳನ್ನು ಉದ್ದೇಶಿಸಿ ಪ್ರವಾದಿಯವರು ಈ ಮಹತ್ವದ ಭಾಷಣ ಮಾಡಿದ್ದರು. ಪ್ರತಿಯೊಬ್ಬ ಮಾನವನ ಜೀವ, ಆಸ್ತಿ ಮತ್ತು ಗೌರವವನ್ನು ಕಾಪಾಡುವುದು ಪ್ರತಿಯೊಬ್ಬರ ಕರ್ತವ್ಯ. ಯಾರೊಬ್ಬರ ಜೀವ ಅಥವಾ ಆಸ್ತಿಯನ್ನು ಅಕ್ರಮವಾಗಿ ಕಬಳಿಸುವುದು ಮಹಾಪಾಪ. ಹುಟ್ಟು, ಬಣ್ಣ, ಜಾತಿ ಅಥವಾ ವಂಶದ ಆಧಾರದ ಮೇಲೆ ಯಾರೂ ಶ್ರೇಷ್ಠರಲ್ಲ. ಸಮಾಜದಲ್ಲಿ ಪ್ರತಿಯೊಬ್ಬ ಮಾನವನೂ ಸಮಾನ.


ಮಹಿಳೆಯರನ್ನು ಗೌರವದಿಂದ ಕಾಣಬೇಕು, ಅವರ ಹಕ್ಕುಗಳನ್ನು ಒದಗಿಸಬೇಕು ಮತ್ತು ಅವರ ಮೇಲೆ ಯಾವುದೇ ರೀತಿಯ ದೌರ್ಜನ್ಯ ಎಸಗಬಾರದು. ಬಡ್ಡಿಯು ಸಮಾಜದ ಬಡವರನ್ನು ಮತ್ತಷ್ಟು ಬಡವರನ್ನಾಗಿ ಮಾಡುತ್ತದೆ. ಆರ್ಥಿಕ ಶೋಷಣೆಯಿಂದ ಸಮಾಜವನ್ನು ಮುಕ್ತಗೊಳಿಸುವುದು ಅಗತ್ಯ. ಹಳೆಯ ದ್ವೇಷಗಳನ್ನು ಮರೆತು, ಸಮಾಜದಲ್ಲಿ ಶಾಂತಿ ಮತ್ತು ಸಹೋದರತೆಯನ್ನು ಸ್ಥಾಪಿಸಬೇಕು.ಪ್ರವಾದಿ ಮಹಮ್ಮದ್ (ಸ) ಅವರ ಈ ಅಂತಿಮ ಪ್ರವಚನವು ವಿಶ್ವಕ್ಕೆ ನೀಡಿದ ಅತ್ಯುನ್ನತ ‘ಮಾನವ ಹಕ್ಕುಗಳ ಸನದು’ ಆಗಿದೆ. ಜನಾಂಗೀಯ ತಾರತಮ್ಯ, ಮಹಿಳೆಯರ ಮೇಲಿನ ದೌರ್ಜನ್ಯ ಮತ್ತು ಆರ್ಥಿಕ ಶೋಷಣೆಯಿಂದ ಜಗತ್ತನ್ನು ಮುಕ್ತಗೊಳಿಸಲು ಈ ಪ್ರವಚನವು ಇಂದಿಗೂ ದಾರಿದೀಪವಾಗಿದೆ. ಈ ತತ್ವಗಳನ್ನು ಜೀವನದಲ್ಲಿ ಅಳವಡಿಸಿಕೊಳ್ಳುವುದೇ ಪ್ರವಾದಿಯವರಿಗೆ ನಾವು ನೀಡುವ ನಿಜವಾದ ಗೌರವವಾಗಿದೆ.

ರಬೀವುಲ್ ಅವ್ವಲ್ ತಿಂಗಳು ಕೇವಲ ಆಚರಣೆಗೆ ಮಾತ್ರ ಸೀಮಿತವಾಗದೆ, ಅವರ ಜೀವನ ಮೌಲ್ಯಗಳನ್ನು ನಮ್ಮ ಜೀವನದಲ್ಲಿ ಅಳವಡಿಸಿಕೊಳ್ಳುವ ತಿಂಗಳಾಗಬೇಕು. ಪ್ರವಾದಿಯವರ ಜೀವನ ಚರಿತ್ರೆ ಓದುವುದು,ಅವರ ತ್ಯಾಗ, ಬೋಧನೆ ಮತ್ತು ನಡತೆಯನ್ನು ಆಳವಾಗಿ ಅಧ್ಯಯನ ಮಾಡುವುದು, ಸ್ವಲಾತ್ (ಆಶೀರ್ವಾದ) ಹೇಳುವುದು, ಪ್ರವಾದಿಯವರ ಮೇಲೆ ಹೆಚ್ಚಿನ ಪ್ರಾರ್ಥನೆ ಮತ್ತು ಸ್ವಲಾತ್‌ಗಳನ್ನು ಸಲ್ಲಿಸುವುದು, ದಾನ-ಧರ್ಮ ಮಾಡುವುದು, ಬಡವರಿಗೆ, ಅನಾಥರಿಗೆ ಆಹಾರ ಮತ್ತು ಅಗತ್ಯ ಸಹಾಯಗಳನ್ನು ತಲುಪಿಸುವುದು, ಉತ್ತಮ ನಡತೆ ರೂಪಿಸಿಕೊಳ್ಳುವುದು, ಸತ್ಯ ಮಾತನಾಡುವುದು, ನೆರೆಹೊರೆಯವರೊಂದಿಗೆ ಪ್ರೀತಿಯಿಂದಿರುವುದು ಮತ್ತು ಎಲ್ಲರೊಂದಿಗೆ ಸೌಹಾರ್ದತೆಯಿಂದ ಬಾಳುವುದು ನಮ್ಮ ಆಧ್ಯತೆಯಾಗಬೇಕು.
ಅವರ ಬೋಧನೆಗಳು ಕೇವಲ ಒಂದು ನಿರ್ದಿಷ್ಟ ಸಮುದಾಯಕ್ಕಷ್ಟೇ ಅಲ್ಲದೆ ಇಡೀ ಮಾನವಕುಲಕ್ಕೆ ಶಾಂತಿ, ಕರುಣೆ ಮತ್ತು ಸನ್ಮಾರ್ಗದ ದಾರಿದೀಪವಾಗಿವೆ. ಈ ಪವಿತ್ರ ತಿಂಗಳಿನಲ್ಲಿ ಅವರ ಮಾರ್ಗದರ್ಶನದಂತೆ ಜೀವಿಸಲು ನಾವೆಲ್ಲರೂ ಪ್ರತಿಜ್ಞೆ ಮಾಡಬೇಕಿದೆ.

LEAVE A REPLY

Please enter your comment!
Please enter your name here