






ಭವ್ಯ ಭಜನಾ ಮೆರವಣಿಗೆ-ಸಾಧಕರಿಗೆ ಸನ್ಮಾನ


ಪುತ್ತೂರು: ಯುವಕ ಮಂಡಲಗಳು ಸಮಾಜದ ಶಕ್ತಿಯಾಗಿದ್ದು ಸಾಮಾಜಿಕ, ಸಾಂಸ್ಕೃತಿಕ ಕ್ಷೇತ್ರಕ್ಕೆ ತನ್ನದೇ ಆದ ಕೊಡುಗೆಗಳನ್ನು ನೀಡುತ್ತಾ ಬಂದಿದೆ ಎಂದು ಭಕ್ತಕೋಡಿ ಶ್ರೀರಾಮ ಭಜನಾ ಮಂದಿರದ ಅಧ್ಯಕ್ಷ ಬಿ.ಕೆ ಜನಾರ್ದನ ಗೌಡ ಭಕ್ತಕೋಡಿ ಹೇಳಿದರು.
ರಾಜ್ಯ ಪ್ರಶಸ್ತಿ ಪುರಸ್ಕೃತ ಶ್ರೀ ಷಣ್ಮುಖ ಯುವಕ ಮಂಡಲ ಮತ್ತು ಶ್ರೀ ಗೌರಿ ಮಹಿಳಾ ಮಂಡಲದ ಆಶ್ರಯದಲ್ಲಿ ಭಕ್ತಕೋಡಿ ಶ್ರೀರಾಮ ಭಜನಾ ಮಂದಿರದ ವಠಾರದಲ್ಲಿ ಸೆ.4ರಂದು ನಡೆದ 25ನೇ ವರ್ಷದ ಮೊಸರು ಕುಡಿಕೆ ಉತ್ಸವವನ್ನು ದೀಪ ಬೆಳಗಿಸಿ ಉದ್ಘಾಟಿಸಿ ಅವರು ಮಾತನಾಡಿದರು.




ರಾಜ್ಯ ಯುವ ಸಂಘಗಳ ಒಕ್ಕೂಟ ಬೆಂಗಳೂರು ಇದರ ಪ್ರ.ಕಾರ್ಯದರ್ಶಿ ಸುರೇಶ್ ರೈ ಸೂಡಿಮುಳ್ಳು ಮಾತನಾಡಿ ಯುವಕ ಮಂಡಲಗಳು ಸಮಾಜಕ್ಕೆ ತನ್ನದೇ ಆದ ಕೊಡುಗೆಯನ್ನು ನೀಡುತ್ತಿದ್ದು ಷಣ್ಮುಖ ಯುವಕ ಮಂಡಲವು ಅನೇಕ ಸಮಾಜಮುಖಿ ಕಾರ್ಯಕ್ರಮಗಳ ಮೂಲಕ ಸಕ್ರಿಯ ಯುವಕ ಮಂಡಲವಾಗಿ ಗುರುತಿಸಿಕೊಂಡಿದೆ, ಪ್ರತೀ ವರ್ಷ ಶ್ರೀ ಕೃಷ್ಣ ಜನ್ಮಾಷ್ಟಮಿಯನ್ನು ಅರ್ಥಪೂರ್ಣವಾಗಿ ಆಚರಿಸುತ್ತಿದ್ದು ನಾಡಿನ ಆಚಾರ, ವಿಚಾರ, ಸಂಸ್ಕೃತಿಗಳ ಉಳಿವಿಗೆ ಯುವಕ ಮಂಡಲಗಳ ಕೊಡುಗೆ ಅಪಾರವಾದುದು ಎಂದು ಹೇಳಿದರು.
ಷಣ್ಮುಖ ಯುವಕ ಮಂಡಲದ ಗೌರವ ಸಲಹೆಗಾರರಾದ ಶ್ರೀನಿವಾಸ್ ಎಚ್.ಬಿ ಮಾತನಾಡಿ ಷಣ್ಮುಖ ಯುವಕ ಮಂಡಲವು ಅನೇಕ ಪ್ರತಿಭೆಗಳಿಗೆ ವೇದಿಕೆ ಕೊಟ್ಟ ಯುವಕ ಮಂಡಲವಾಗಿದ್ದು ಊರಿನಲ್ಲಿ ಅರ್ಹರಿಗೆ ಸಹಾಯ ಮೂಲಕ ತನ್ನ ಜವಾಬ್ದಾರಿಯನ್ನು ಅತ್ಯುತ್ತಮವಾಗಿ ನಿಭಾಯಿಸುತ್ತಿದೆ, ಊರಿನಲ್ಲಿ ಯುವಕ ಮಂಡಲಗಳು ಸಕ್ರಿಯವಾಗಿದ್ದಾಗ ಅಲ್ಲಿ ಗಲಾಟೆ ಗದ್ದಲ ಇರುವುದಿಲ್ಲ, ಶಾಂತಿ ನೆಮ್ಮದಿ ಇರುತ್ತದೆ ಎಂದು ಹೇಳಿದರು.
ಯುವಕ ಮಂಡಲದ ಗೌರವ ಸಲಹೆಗಾರ ಜಿ.ಕೆ ಪ್ರಸನ್ನ ಮಾತನಾಡಿ ಷಣ್ಮುಖ ಯುವಕ ಮಂಡಲ ಉತ್ತಮ ಕೆಲಸ ಕಾರ್ಯಗಳ ಮೂಲಕ ಗುರುತಿಸಿಕೊಂಡಿದೆ ಎಂದರು.
ಯುವಕ ಮಂಡಲದ ಗೌರವ ಸಲಹೆಗಾರ ಶಶಿಧರ್ ಎಸ್.ಡಿ ಮಾತನಾಡಿ ಪ್ರತೀ ವರ್ಷ ಯುವಕ ಮಂಡಲದ ವತಿಯಿಂದ ಮೊಸರು ಕುಡಿಕೆ ಉತ್ಸವ ಅದ್ದೂರಿಯಾಗಿ ನಡೆಯುತ್ತಿದ್ದು ಒಗ್ಗಟ್ಟಿನ ಫಲವಾಗಿ ಇಂತಹ ಕಾರ್ಯಕ್ರಮ ಹಮ್ಮಿಕೊಳ್ಳಲು ಸಾಧ್ಯವಾಗುತ್ತದೆ ಎಂದರು.
ಸ್ವಾಗತಿಸಿ ಪ್ರಾಸ್ತಾವಿಕವಾಗಿ ಮಾತನಾಡಿದ ಸರ್ವೆ ಶ್ರೀ ಷಣ್ಮುಖ ಯುವಕ ಮಂಡಲದ ಅಧ್ಯಕ್ಷ ಗೌತಮ್ರಾಜ್ ಕರುಂಬಾರು ಅವರು ರಾಜ್ಯ ಪ್ರಶಸ್ತಿ ಪುರಸ್ಕೃತ ಶ್ರೀ ಷಣ್ಮುಖ ಯುವಕ ಮಂಡಲವು ಸಾಮಾಜಿಕ, ಶೈಕ್ಷಣಿಕ, ಸಾಂಸ್ಕೃತಿಕ ಕಾರ್ಯಕ್ರಮಗಳ ಮೂಲಕ ಗುರುತಿಸಿಕೊಂಡಿದ್ದು ಸಾಮಾಜಿಕ ಬದ್ದತೆ ಮತ್ತು ಸಮಾಜಪರವಾದ ಕಳಕಳಿಯುಳ್ಳ ಕ್ರಿಯಾಶೀಲ ಯುವಕರ ತಂಡ ಎನ್ನುವ ಹೆಗ್ಗಳಿಕೆಗೆ ಪಾತ್ರವಾಗಿದೆ, ರಾಜ್ಯದ ಅತ್ಯುತ್ತಮ ಯುವಕ ಮಂಡಲಗಳಲ್ಲಿ ಒಂದಾಗಿ ಗುರುತಿಸಲ್ಪಟ್ಟಿರುವ ನಮ್ಮ ಯುವಕ ಮಂಡಲದ ಆಶ್ರಯದಲ್ಲಿ ಈ ಬಾರಿ 25ನೇ ವರ್ಷದ ಮೊಸರು ಕುಡಿಕೆ ಉತ್ಸವವನ್ನು ಅದ್ದೂರಿಯಾಗಿ ಆಚರಿಸಲಾಗುತ್ತಿದೆ ಎಂದು ಹೇಳಿದರು. ವಿಶೇಷವಾಗಿ ಸರ್ವೆ ಗ್ರಾಮಸ್ಥರ ಸಹಕಾರದಿಂದ ಕಳೆದ 25 ವರ್ಷಗಳೀಂದ ನಮ್ಮ ಯುವಕ ಮಂಡಲವು ಯಶಸ್ವಿಯಾಗಿ ಮುನ್ನಡೆಯುತ್ತಿದ್ದು ಗ್ರಾಮದ ಸರ್ವತೋಮುಖ ಅಭಿವೃದ್ಧಿಗೂ ತನ್ನದೇ ಆದ ಕೊಡುಗೆಗಳನ್ನು ನೀಡುತ್ತಾ ಬಂದಿದೆ. ಮುಂದಕ್ಕೂ ವಿವಿಧ ಯೋಜನೆಗಳೊಂದಿಗೆ ನಾವು ಕಾರ್ಯಪ್ರವೃತ್ತರಾಗಲಿದ್ದೇವೆ ಎಂದು ಹೇಳಿದರು.
ಅಧ್ಯಕ್ಷತೆ ವಹಿಸಿದ್ದ ಶ್ರೀ ಷಣ್ಮುಖ ಯುವಕ ಮಂಡಲದ ಗೌರವಾಧ್ಯಕ್ಷ ವಸಂತ ಎಸ್.ಡಿ ಮಾತನಾಡಿ ಯುವಕ ಮಂಡಲದ ಆಶ್ರಯದಲ್ಲಿ 25ನೇ ವರ್ಷದ ಶ್ರೀಕೃಷ್ಣ ಜನ್ಮಾಷ್ಟಮಿ ಆಚರಣೆ ನಡೆಯುತ್ತಿರುವುದು ನಮಗೆಲ್ಲಾ ಅತೀವ ಸಂತಸ ತಂದಿದ್ದು ಶ್ರೀಕೃಷ್ಣ ಜನ್ಮಾಷ್ಟಮಿಯ ಮಹತ್ವವನ್ನು ಪ್ರತಿಯೊಬ್ಬರೂ ತಿಳಿಯಬೇಕಾದ ಅವಶ್ಯಕತೆಯಿದೆ ಎಂದು ಹೇಳಿದರು. ಯುವಕ ಮಂಡಲದ ವತಿಯಿಂದ ಗ್ರಾಮದ ಸಾಧಕರನ್ನು ಗುರುತಿಸಿ ಸನ್ಮಾನಿಸಿರುವುದು ಒಳ್ಳೆಯ ಬೆಳವಣಿಗೆ ಎಂದ ಅವರು ಊರವರಿಂದ ಸಿಗುವ ಸನ್ಮಾನ, ಗೌರವ ಅದು ರಾಷ್ಟ್ರಪ್ರಶಸ್ತಿಗಿಂತಲೂ ಮಿಗಿಲಾದುದು ಎಂದು ಅವರು ಹೇಳಿದರು.

ಸಾಧಕರಿಗೆ ಸನ್ಮಾನ:
ಹಿರಿಯ ದೈವ ನರ್ತಕರಾದ ಕರಿಯ ಅಜಲ ಹಾಗೂ ದ.ಕ ಜಿಲ್ಲಾ ರಾಜ್ಯೋತ್ಸವ ಪ್ರಶಸ್ತಿ ಪುರಸ್ಕೃತ ಯಕ್ಷಗಾನ ಕಲಾವಿದ ವಿನೋದ್ ರೈ ಸೊರಕೆ ಅವರನ್ನು ಶಾಲು ಹೊದಿಸಿ, ಸ್ಮರಣಿಕೆ, ಫಲಪುಷ್ಪ ನೀಡಿ ಸನ್ಮಾನಿಸಿ ಗೌರವಿಸಲಾಯಿತು. ಯುವಕ ಮಂಡಲದ ಕಾರ್ಯಕಾರಿ ಸಮಿತಿ ಸದಸ್ಯ ಕಮಲೇಶ್ ಎಸ್.ವಿ ಹಾಗೂ ಭಾಸ್ಕರ ಬಂಗಾಡಿ ಸನ್ಮಾನ ಪತ್ರ ವಾಚಿಸಿದರು. ಸನ್ಮಾನಿತಗೊಂಡ ಕರಿಯ ಅಜಲ ಹಾಗೂ ವಿನೋದ್ ರೈ ಸೊರಕೆ ಮಾತನಾಡಿ ಕೃತಜ್ಞತೆ ಸಲ್ಲಿಸಿದರು. ಕಳೆದ 24 ವರ್ಷಗಳಿಂದ ಮೊಸರು ಕುಡಿಕೆ ಉತ್ಸವದ ಕಂಬದ ತಯಾರಿ ಮಾಡಿಕೊಡುವ ಸುರೇಶ್ ಆಚಾರ್ಯ ಭಕ್ತಕೋಡಿ ಅವರನ್ನು ಇದೇ ಸಂದರ್ಭದಲ್ಲಿ ಸನ್ಮಾನಿಸಿ ಗೌರವಿಸಲಾಯಿತು.

ಯುವಕ ಮಂಡಲದ ಕಾರ್ಯಕಾರಿ ಸಮಿತಿಯ ಸಂಚಾಲಕ ರಾಮಣ್ಣ ಪೂಜಾರಿ ಭಕ್ತಕೋಡಿ, ಕಾರ್ಯಕ್ರಮ ಸಂಯೋಜಕ ಹರೀಶ್ ಅಲೇಕಿ, ಶ್ರೀ ಗೌರಿ ಮಹಿಳಾ ಮಂಡಲದ ಅಧ್ಯಕ್ಷೆ ಕುಶಲ ನಾಗೇಶ ಪಟ್ಟೆಮಜಲು ವೇದಿಕೆಯಲ್ಲಿ ಉಪಸ್ಥಿತರಿದ್ದರು. ಶ್ರೀ ಷಣ್ಮುಖ ಯುವಕ ಮಂಡಲದ ಪ್ರ.ಕಾರ್ಯದರ್ಶಿ ಗೌತಮ್ ಪಟ್ಟೆಮಜಲು ವಂದಿಸಿದರು. ಕಾರ್ಯಕಾರಿ ಸಮಿತಿ ಸದಸ್ಯ ಎಸ್.ಎಂ ಶರೀಫ್ ಸರ್ವೆ ಕಾರ್ಯಕ್ರಮ ನಿರೂಪಿಸಿದರು. ಯುವಕ ಮಂಡಲದ ಪದಾಧಿಕಾರಿಗಳು, ಸದಸ್ಯರು ಸಹಕರಿಸಿದರು.

ಆಕರ್ಷಕ ಭಜನಾ ಮೆರವಣಿಗೆ:
ಬೆಳಿಗ್ಗೆ ಶ್ರೀಕೃಷ್ಣ ವೇಷಧಾರಿ ಪುಟಾಣಿಗಳ ಜೊತೆ ಭಜನೆ ಹಾಗೂ ಚೆಂಡೆವಾದನಗಳ ಮೆರವಣಿಗೆ ನಡೆಯಿತು. ಭಕ್ತಕೋಡಿ ಅಂಗನವಾಡಿ ವಠಾರದಿಂದ ಭಕ್ತಕೋಡಿ ಶ್ರೀರಾಮ ಭಜನಾ ಮಂದಿರದ ವರೆಗೆ ಮೆರವಣಿಗೆ ನಡೆಯಿತು. ಸಭಾ ಕಾರ್ಯಕ್ರಮದ ಬಳಿಕ ಪುರುಷರಿಗೆ, ಮಹಿಳೆಯರಿಗೆ ಹಾಗೂ ಮಕ್ಕಳಿಗೆ ವಿವಿಧ ಆಟೋಟ ಸ್ಪರ್ಧೆ ನಡೆಯಿತು.










