







ಸುಸಂಸ್ಕೃತ ಸಮಾಜ ನಿರ್ಮಿಸುವಲ್ಲಿ ಪುತ್ತೂರು ದಸರಾ ಕಾರಣೀಭೂತವಾಗಿ ಸಂತೋಷದ ಉತ್ಸವದ ಮೆರುಗನ್ನು ನೀಡಲಿ: ಗೋಪಾಲಕೃಷ್ಣ ಭಟ್



ಪುತ್ತೂರು: ಪುತ್ತೂರು ಶ್ರೀ ಮಹಾಲಿಂಗೇಶ್ವರ ದೇವಸ್ಥಾನದ ವಠಾರದಲ್ಲಿರುವ ಶ್ರೀ ಶಾರದಾ ಭಜನಾ ಮಂದಿರದಲ್ಲಿ ನವರಾತ್ರಿ ಉತ್ಸವ, ಶಾರದೋತ್ಸವ, ಚಂಡಿಕಾಹೋಮದ ಪ್ರಯುಕ್ತ 92ನೇ ವರ್ಷದ ಪುತ್ತೂರು ದಸರಾ ಕಾರ್ಯಕ್ರಮದ ಆಮಂತ್ರಣ ಪತ್ರಿಕೆ ಬಿಡುಗಡೆಯು ಸೆ.8ರಂದು ಬೆಳಿಗ್ಗೆ ಮಂದಿರದಲ್ಲಿ ನಡೆಯಿತು.



ದ್ವಾರಕಾ ಕನ್ಸ್ಟ್ರಕ್ಷನ್ನ ಆಡಳಿತ ನಿರ್ದೇಶಕ ಗೋಪಾಲಕೃಷ್ಣ ಭಟ್ ಆಮಂತ್ರಣ ಪತ್ರ ಲೋಕಾರ್ಪಣೆಗೊಳಿಸಿ ಮಾತನಾಡಿ, ಯಾವುದೇ ಒಂದು ಕಾರ್ಯಕ್ರಮ ನಿರಂತರವಾಗಿ ನಡೆಯುತ್ತಾ 92ನೇ ವರ್ಷದಲ್ಲಿ ಇದ್ದೇವೆ ಅನ್ನುವಂಥದ್ದೇ ಒಂದು ವಿಶೇಷ. ಸಾಮಾನ್ಯವಾಗಿ ಕಾರ್ಯಕ್ರಮ ಶುರುವಾಗಿ ವರ್ಷಗಳು ಕಳೆದಂತೆ ಜನರಿಗೆ ಆಸಕ್ತಿ ಕಡಿಮೆಯಾಗಿ ನಿಧಾನವಾಗಿ ಅದರ ವರ್ಚಸ್ಸು ಕಡಿಮೆಯಾಗುತ್ತಾ ಹೋಗುತ್ತದೆ. 90 ವರ್ಷ ಕಳೆದಾಗ ಅದು ವಿಜ್ರಂಭಣೆಯನ್ನು ಪಡೆದುಕೊಳ್ಳುತ್ತಿದೆಯೆಂದರೆ ಇಷ್ಟು ವರ್ಷ ಕಳೆದ ನಂತರವೂ ತನ್ನ ಯವ್ವನವನ್ನು ಉಳಿಸಿಕೊಂಡಿದೆ ಎನ್ನುವಂತದ್ದು ತುಂಬಾ ಸಂತೋಷದ ವಿಷಯ. ಪುತ್ತೂರಲ್ಲೂ ದಸರಾ ಬೇಕು ಎಂಬ ಬೇಡಿಕೆಗೆ ಕೆದಂಬಾಡಿಗುತ್ತು ಸೀತಾರಾಮ ರೈ ಮತ್ತು ತಂಡ ಉತ್ಸವವನ್ನು ಕೊಟ್ಟಿದ್ದಾರೆ ಇದು ನಿರಂತರವಾಗಿ ಸಾಗಲಿ, ಇಲ್ಲಿಯ ಉತ್ಸವ ವಿಶಿಷ್ಟವಾಗಿ, ವಿಭಿನ್ನವಾಗಿ, ಸಾಂಸ್ಕೃತಿಕವಾಗಿ ಕಲೆಯನ್ನು ಪ್ರದರ್ಶಿಸುವ ಉತ್ಸವವಾಗಿ ಮೂಡಿಬರುತ್ತಿದೆ, ಸುಸಂಸ್ಕೃತ ಸಮಾಜವನ್ನು ನಿರ್ಮಿಸುವಲ್ಲಿ ಪುತ್ತೂರು ದಸರಾ ಕಾರಣೀಭೂತವಾಗಿ ಪುತ್ತೂರಿನ ಜನತೆಗೆ ಸಂತೋಷದ ಉತ್ಸವದ ಮೆರುಗನ್ನು ನೀಡಲಿ ಎಂದು ಶುಭಹಾರೈಸಿದರು.
ಸಂಪ್ಯ ಮಹಾವಿಷ್ಣು ಮೂರ್ತಿ ದೇವಸ್ಥಾನದ ವ್ಯವಸ್ಥಾಪನಾ ಸಮಿತಿ ಅಧ್ಯಕ್ಷ ಮಹಾವೀರ ಮೆಡಿಕಲ್ ಸೆಂಟರ್ನ ಡಾ. ಸುರೇಶ್ ಪುತ್ತೂರಾಯ ಮಾತನಾಡಿ ಕೆಲವು ವರ್ಷಗಳಿಂದ ಪುತ್ತೂರು ಶಾರದೋತ್ಸವವು ಶಿಸ್ತುಬದ್ಧವಾಗಿ ನಡೆದು ಬರುತ್ತಿದೆ, ಪುತ್ತೂರಿನ ಎಲ್ಲಾ ಮಹಾಜನರ ಸಹಕಾರ ಸಿಕ್ಕಿದೆ, ಈ ವರ್ಷವೂ ಸಿಗಲಿ, ಉತ್ಸವ ವಿಜ್ರಂಭಣೆಯಿಂದ ಶಾರದಾ ಮಾತೆಯ ಕಾರ್ಯವು ನಿರ್ವಿಘ್ನವಾಗಿ ನಡೆಯಲಿ ಎಂದು ಶುಭಹಾರೈಸಿದರು.
ಜಿಲ್ಲಾ ಬಿಜೆಪಿ ಮಾಜಿ ಉಪಾಧ್ಯಕ್ಷ ಬೂಡಿಯಾರ್ ರಾಧಾಕೃಷ್ಣ ರೈ ಮಾತನಾಡಿ ಕರ್ನಾಟಕದ ಜನತೆ ಮೈಸೂರು ದಸರಾವನ್ನು ನೋಡುವಂತೆ ಮುಂದಿನ ದಿವಸಗಳಲ್ಲಿ ಪುತ್ತೂರಿನಲ್ಲಿಯೂ ಪುತ್ತೂರು ದಸರಾವಾಗಲಿ. ಪುತ್ತೂರು ಜಾತ್ರೆ ಸಂದರ್ಭದಲ್ಲಿ ಯಾವ ರೀತಿ ಜನ ಸೇರುತ್ತಾರೆಯೋ ಅದೇ ರೀತಿ ಮುಂದಿನ ದಿನಗಳಲ್ಲಿ ಪುತ್ತೂರು ದಸರಾ ಉತ್ಸವಕ್ಕೂ ಸೇರಲಿ, ಇದು 100 ವರ್ಷಕ್ಕೂ ಮೇಲ್ಪಟ್ಟು, ಮಹಾಲಿಂಗೇಶ್ವರನ ಆಶೀರ್ವಾದದಿಂದ ಪ್ರತೀ ವರ್ಷದಿಂದ ವರ್ಷಕ್ಕೆ ವಿಜ್ರಂಭಣೆಯಿಂದ ಸಾಗಲಿ ಎಂದರು.
ವಿಶ್ವ ಹಿಂದೂ ಪರಿಷತ್ನ ಜಿಲ್ಲಾಧ್ಯಕ್ಷ ಡಾ. ಕೃಷ್ಣಪ್ರಸನ್ನ, ಬಿಜೆಪಿ ನಗರ ಮಂಡಲ ಅಧ್ಯಕ್ಷ ಶಿವಕುಮಾರ್ ಕಲ್ಲಿಮಾರ್, ಬಿಜೆಪಿ ವಕ್ತಾರ ರಾಜೇಶ್ ಬನ್ನೂರು, ಒಕ್ಕಲಿಗ ಸಮುದಾಯ ಪತ್ತಿನ ಸಹಕಾರಿ ಸಂಘದ ಅಧ್ಯಕ್ಷ ಚಿದಾನಂದ ಬೈಲಾಡಿ, ತಮನ್ವಿ ಸಿಲ್ಕ್ನ ಮಾಲಕಿ ಮಾಲಶ್ರೀ, ಅರಣ್ಯಾಧಿಕಾರಿ ರಾಮಕೃಷ್ಣ ರಾವ್, ಬಿಜೆಪಿ ಗ್ರಾಮಾಂತರ ಮಂಡಲ ಉಪಾಧ್ಯಕ್ಷ ವಿದ್ಯಾಧರ್ ಜೈನ್, ಸ್ವಾಗತ್ ಹೊಟೇಲ್ನ ಸೂರಜ್ ಶೆಟ್ಟಿ, ಸಂತೋಷ್ ರೈ ಕೈಕಾರ, ರಂಜಿತ್ ಬಂಗೇರ, ಶಶಿಧರ್ ನಾಯಕ್, ಪುತ್ತೂರು ಡಯಾಗ್ನಾಸ್ಟಿಕ್ನ ಪ್ರವೀಣ್, ಶ್ರೀಧರ್ ಪಟ್ಲ, ವಿಶ್ವನಾಥ್ ಕುಲಾಲ್, ಶೋಭಾಯಾತ್ರೆ ಸಂಚಾಲಕ ಕೃಷ್ಣ ಎಂ ಅಳಿಕೆ, ವಿಶ್ವನಾಥ ಕುಲಾಲ್, ನಾಗೇಂದ್ರ ಬಾಳಿಗ, ನಿರಂಜನ್ ಮಾನ್ಯ, ಸುರೇಶ್ ರೈ, ರತ್ನಾಕರ ನಾೖಕ್, ವಕೀಲ ಚಿನ್ಮಯ್ ರೈ, ಮಂದಿರ ಅರ್ಚಕ ತಿರುಮಲೇಶ್ವರ ಭಟ್, ಪ್ರಧಾನ ಕಾರ್ಯದರ್ಶಿ ಜಯಂತ್ ಉರ್ಲಾಂಡಿ, ಕೋಶಾಧಿಕಾರಿ ವಸಂತ್ ಕುಮಾರ್, ಜತೆ ಕಾರ್ಯದರ್ಶಿ ಜಲಜಾಕ್ಷಿ, ಪದ್ಮನಾಭ ಹಂದ್ರಟ್ಟ, ಬಿ. ಗಿರೀಶ್ ಕುಮಾರ್, ಗೋಪಾಲ ಆಚಾರ್ಯ, ಫಕೀರ ಗೌಡ, ಪ್ರಮೋದ್, ಗಣೇಶ್ ಶೆಟ್ಟಿಗಾರ, ಸ್ಮಿತಾ ಸುಜಿತ್, ಅಶ್ವಿನಿ ಪವಿತ್ರ ಆಳ್ವ, ಸೌಮ್ಯ, ಸರೋಜಾ, ಶುಭ, ದಿವ್ಯ, ರೇಷ್ಮಾ, ಸಂಗೀತ ಮತ್ತಿತರರು ಉಪಸ್ಥಿತರಿದ್ದರು. ಶೋಭಾಯಾತ್ರೆ ಸಂಚಾಲಕ ನವೀನ್ಕುಲಾಲ್ ಕಾರ್ಯಕ್ರಮ ನಿರೂಪಿಸಿದರು.

ಪುತ್ತೂರು ದಸರಾ ಹೆಸರಿನೊಂದಿಗೆ ಕಾರ್ಯಕ್ರಮಕ್ಕೆ ಚಾಲನೆ: ಕೆದಂಬಾಡಿಗುತ್ತು ಸೀತಾರಾಮ ರೈ
ಕಳೆದ ಕೆಲವು ವರ್ಷಗಳಿಂದ ಪುತ್ತೂರು ಶಾರದೋತ್ಸವ ಎಂಬುದನ್ನು ಈ ವರ್ಷದಿಂದ ಪುತ್ತೂರು ದಸರಾ ನಾಮಧೇಯದೊಂದಿಗೆ ಕಾರ್ಯಕ್ರಮಕ್ಕೆ ಅದ್ದೂರಿ ಚಾಲನೆ ನೀಡಲಿದ್ದೇವೆ. ಪುತ್ತೂರಿನ ದಸರಾವನ್ನು ಪುತ್ತೂರು ನಾಡಹಬ್ಬವಾಗಿ ಆಚರಣೆ ಮಾಡಲು ಭಕ್ತಾದಿಗಳ, ಮಹಾಜನತೆಯ ಸಹಕಾರ ಅಗತ್ಯ. ಕರ್ನಾಟಕ, ಕೇರಳ ರಾಜ್ಯಗಳ, ನಾನಾ ಜಿಲ್ಲೆಗಳ ಕಲಾತಂಡದೊಂದಿಗೆ ದೇವಿಯ ವೈಭವದ ಶೋಭಾಯಾತ್ರೆ ಹೀಗೆಯೇ ನಡೆಯಬೇಕೆನ್ನುವ ಸಂಕಲ್ಪದೊಂದಿಗೆ ಕಳೆದ 3 ವರ್ಷಗಳಿಂದ ಪಟಾಕಿ, ಡಿ.ಜೆ. ಹೊರತುಪಡಿಸಿ ವಿಶೇಷ ಕಾರ್ಯಕ್ರಮ ಆಯೋಜನೆ ಮಾಡಿಕೊಂಡಿದ್ದೇವೆ. ಪುತ್ತೂರು ದಸರಾ ರಾಜ್ಯಾದ್ಯಂತ ಹರಡಬೇಕು ಎಂಬುದು ನಮ್ಮ ಆಶಯ, ದೇವಿಯ ಪೂರ್ಣ ಆಶೀರ್ವಾದದಿಂದ ಈ ಕಾರ್ಯಕ್ರಮ ನಡೆಯುತ್ತಿದೆ. ಶಾರದಾ ಪ್ರತಿಷ್ಠೆ ಬಳಿಕ ಧಾರ್ಮಿಕ, ಸಾಂಸ್ಕೃತಿಕ ಕಾರ್ಯಕ್ರಮ, ಚಂಡಿಕಾಹೋಮ ನಡೆಯಲಿದ್ದು, ಸಮಾಜದ ಗಣ್ಯ ವ್ಯಕ್ತಿಗಳು ಭಾಗವಹಿಸಲಿದ್ದಾರೆ. 92 ವರ್ಷದ ಉತ್ಸವ ದೇಶ-ವಿದೇಶ ವ್ಯಾಪಿ ನೋಡುವ ಹಾಗೆ ನಡೆಸಲಾಗುತ್ತಿದೆ ಎಂದು ಅಧ್ಯಕ್ಷ ಸೀತಾರಾಮ ರೈ ಕೆದಂಬಾಡಿಗುತ್ತು ಹೇಳಿದರು.










