ಒಳಮೊಗ್ರು ಗ್ರಾಪಂ ದೂರದೃಷ್ಟಿ ಯೋಜನೆ ವಿಶೇಷ ಗ್ರಾಮಸಭೆ

0

ಪುತ್ತೂರು: ಒಳಮೊಗ್ರು ಗ್ರಾಮ ಪಂಚಾಯತ್‌ನ ಮುಂದಿನ 5 ವರ್ಷಗಳ ಅವಧಿಗೆ ದೂರದೃಷ್ಟಿ ಯೋಜನೆ ಸಿದ್ಧಪಡಿಸುವ ಬಗ್ಗೆ ವಿಶೇಷ ಗ್ರಾಮ ಸಭೆಯು ಗ್ರಾಪಂ ಅಧ್ಯಕ್ಷೆ ತ್ರಿವೇಣಿ ಪಲ್ಲತ್ತಾರುರವರ ಅಧ್ಯಕ್ಷತೆಯಲ್ಲಿ ದ.17 ರಂದು ಕುಂಬ್ರ ರೈತ ಸಭಾ ಭವನದಲ್ಲಿ ನಡೆಯಿತು.

ಗ್ರಾಮಸ್ಥರಿಂದ ಕಾಮಗಾರಿಗಳ ಬೇಡಿಕೆ ಬಗ್ಗೆ ಅರ್ಜಿ ಹಾಗೂ ಸೂಕ್ತ ಸಲಹೆ ಸೂಚನೆಗಳನ್ನು ಪಡೆದುಕೊಳ್ಳಲಾಯಿತು. ಮಾರ್ಗದರ್ಶಿ ಅಧಿಕಾರಿಯಾಗಿದ್ದ ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆಯ ಸಹಾಯಕ ಶಿಶು ಅಭಿವೃದ್ಧಿ ಯೋಜನಾಧಿಕಾರಿ ಭಾರತಿಯವರು ಯೋಜನೆಯ ಬಗ್ಗೆ ಮಾಹಿತಿ ನೀಡಿದರು. ಗ್ರಾಪಂ ಅಭಿವೃದ್ಧಿ ಅಧಿಕಾರಿ ಅವಿನಾಶ್ ಬಿ.ಆರ್‌ರವರು ದೂರದೃಷ್ಟಿ ಯೋಜನೆಯ ಬಗ್ಗೆ ಮಾಹಿತಿ ನೀಡಿದರು.

ಗ್ರಾಪಂ ಅಧ್ಯಕ್ಷೆ ತ್ರಿವೇಣಿ ಪಲ್ಲತ್ತಾರುರವರ ಮಾತನಾಡಿ, ಗ್ರಾಮದ ಸರ್ವತೋಮುಖ ಅಭಿವೃದ್ಧಿಗೆ ದೂರದೃಷ್ಟಿ ಯೋಜನೆ ಬಹಳ ಅಗತ್ಯವಿದ್ದು ಗ್ರಾಮಸ್ಥರಿಂದ ಬಂದಿರುವ ಕಾಮಗಾರಿಗಳ ಬೇಡಿಕೆಗಳನ್ನು ಪರಿಶೀಲನೆ ಮಾಡಿ ಮುಂದಿನ ಕ್ರಮ ಕೈಗೊಳ್ಳಲಾಗುವುದು ಎಂದರು.

ಗ್ರಾಮಸ್ಥರು ವಿವಿಧ ಬೇಡಿಕೆಗಳನ್ನು ಆಧರಿಸಿ ಅರ್ಜಿಗಳನ್ನು ನೀಡಿದರು. ರಾಜೇಶ್ ರೈ ಪರ್ಪುಂಜರವರು ಮಾತನಾಡಿ, ಪರ್ಪುಂಜದಲ್ಲಿ ಪ್ರಯಾಣಿಕರಿಗೆ ನಿಲ್ಲಲು ಸರಿಯಾದ ಬಸ್ಸು ತಂಗುದಾಣ ಇಲ್ಲದೆ ಸಮಸ್ಯೆಯಾಗುತ್ತಿದೆ. ಈ ಬಗ್ಗೆ ಕಳೆದ 10ವರ್ಷಗಳಿಂದ ಪಂಚಾಯತ್ ಗಮನಕ್ಕೆ ತರಲಾಗುತ್ತಿದ್ದರೂ ಯಾವುದೇ ಪ್ರಯೋಜನ ಆಗಿಲ್ಲ ಎಂದರು. ಪಿಡಿಓ ಅವಿನಾಶ್‌ರವರು ಇದಕ್ಕೆ ಉತ್ತರಿಸಿ, ಪರ್ಪುಂಜದಲ್ಲಿರುವ ಪ್ರಸ್ತುತ ಇರುವ ಬಸ್ಸು ತಂಗುದಾಣವನ್ನು ಅಭಿವೃದ್ಧಿ ಪಡಿಸುವುದು ಅಥವಾ ರಸ್ತೆಯ ಎರಡೂ ಕಡೆಗಳಲ್ಲಿ ಬಸ್ಸು ತಂಗುದಾಣ ನಿರ್ಮಿಸುವ ಬಗ್ಗೆ ಸಾಮಾನ್ಯ ಸಭೆಯಲ್ಲಿ ಚರ್ಚಿಸಿ ಮುಂದಿನ ಕ್ರಿಯಾ ಯೋಜನೆಯಲ್ಲಿ ಅನುದಾನ ಇಡುವ ಬಗ್ಗೆ ಭರವಸೆ ನೀಡಿದರು. ಬಾನಬೆಟ್ಟು ರಸ್ತೆಯನ್ನು ದುರಸ್ತಿ ಮಾಡಿ ಕಾಂಕ್ರಿಟೀಕರಣಗೊಳಿಸಬೇಕು ಎಂದು ರಸ್ತೆಯ ಫಲಾನುಭವಿಯೋರ್ವರು ಮನವಿ ಮಾಡಿಕೊಂಡರು.

ವೇದಿಕೆಯಲ್ಲಿ ಗ್ರಾಪಂ ಕಾರ್ಯದರ್ಶಿ ಜಯಂತಿ ಉಪಸ್ಥಿತರಿದ್ದರು. ಸಭೆಯಲ್ಲಿ ಗ್ರಾಪಂ ಸದಸ್ಯರುಗಳು, ಅಂಗನವಾಡಿ ಕಾರ್ಯಕರ್ತೆಯರು, ಶಾಲಾ ಶಿಕ್ಷಕರು, ಗ್ರಾಮಸ್ಥರು, ಆರೋಗ್ಯ ಕಾರ್ಯಕರ್ತೆಯರು ಉಪಸ್ಥಿತರಿದ್ದರು. ಪಿಡಿಓ ಅವಿನಾಶ್ ಬಿ.ಆರ್ ವಂದಿಸಿ, ಕಾರ್ಯಕ್ರಮ ನಿರೂಪಿಸಿದರು. ಸಿಬ್ಬಂದಿಗಳಾದ ಕೇಶವ, ಜಾನಕಿ, ಗುಲಾಬಿ, ಮೋಹನ್, ಪೂವಯ್ಯ ಸಹಕರಿಸಿದರು.

LEAVE A REPLY

Please enter your comment!
Please enter your name here