ಅಭಿವೃದ್ದಿಯಲ್ಲಿ ನಾವು ಎಂದೂ ರಾಜಕೀಯ ಮಾಡಿಲ್ಲ- ಕ್ಷೇತ್ರದ ಮೂಲೆ ಮೂಲೆಗೂ ಅನುದಾನ: ಮಠಂದೂರು
ಪುತ್ತೂರು; ಅಭಿವೃದ್ದಿಯಲ್ಲಿ ರಾಜಕಾರಣ ಮಾಡಬಾರದು ಎಂಬುದು ಬಿಜೆಪಿ ಸಿದ್ದಾಂತವಾಗಿದೆ, ನಾವು ಅನುದಾನ ಇಡುವಾಗ ಲಾಭ, ನಷ್ಟದ ಲೆಕ್ಕಾಚಾರ ಮಾಡುವುದೇ ಇಲ್ಲ, ಅಭಿವೃದ್ದಿಯೊಂದೇ ನಮ್ಮ ಮೂಲಗುರಿಯಾಗಿದೆ ಎಂದು ಪುತ್ತೂರು ಶಾಸಕರಾದ ಸಂಜೀವ ಮಠಂದೂರು ಹೇಳಿದರು.
ಅವರು ನೆಟ್ಟಣಿಗೆ ಮುಡ್ನೂರು ಗ್ರಾಮದ ಪಂಚೋಡಿ-ಗಾಳಿಮುಖ-ಕರ್ನೂರು ರಸ್ತೆಯ ಡಾಮರೀಕರಣಕ್ಕೆ ಶಿಲಾನ್ಯಾಸ ನೆರವೇರಿಸಿ ಮಾತನಾಡಿದರು.
ನಾನು ಶಾಸಕನಾದ ಬಳಿಕ ಇದೇ ರಸ್ತೆಗೆ ಕಾಂಕ್ರೀಟೀಕರಣಕ್ಕೆ 60 ಲಕ್ಷ ರೂ ಅನುದಾನವನ್ನು ನೀಡಿದ್ದೆ, ಈ ರಸ್ತೆಯ ಸುಮಾರು 5 ಕಿ ಮೀ ವ್ಯಾಪ್ತಿಯಲ್ಲಿ ಸಂಪೂರ್ಣವಾಗಿ ಹದಗೆಟ್ಟಿತ್ತು. ತನ್ನ ಅವಧಿ ಮುಗಿಯುವ ಮೊದಲೇ ಡಾಮರೀಕರಣಕ್ಕೆ ಅನುದಾನ ಬಿಡುಗಡೆ ಮಾಡುತ್ತೇನೆ ಎಂದು ಭರವಸೆ ಕೊಟ್ಟಿದ್ದೆ. ಕೊಟ್ಟ ಮಾತಿನಂತೆ 3.88 ಲಕ್ಷ ರೂ ಅನುದಾನವನ್ನು ಬಿಡುಗಡೆ ಮಾಡಿದ್ದು ಕಾಮಗಾರಿಗೆ ಶಿಲಾನ್ಯಾಸ ನೆರವೇರಿಸಲಾಗಿದೆ ಮುಂದಿನ ಕೆಲವೇ ದಿನಗಳಲ್ಲಿ ಕಾಮಗಾರಿ ಪೂರ್ಣಗೊಳ್ಳಲಿದೆ. ರಾಜಕೀಯ ಮಾಡುವವರು ಮಾಡುತ್ತಲೇ ಇರಲಿ ಅದರಲ್ಲಿ ನನಗೇನು ಅಭ್ಯಂಥರವಿಲ್ಲ. ನಾನೊಬ್ಬ ಶಾಸಕನಾಗಿ ಅನುದಾನ ಇಡುವಾಗ ಎಲ್ಲೂ ರಾಜಕೀಯ ಮಾಡಿಲ್ಲ, ಮಾಡುವುದೂ ಇಲ್ಲ ಎಂದು ಶಾಸಕರು ಹೇಳಿದರು.
ಗಡಿಗ್ರಾಮದ ಮತ್ತು ಕೇರಳಕ್ಕೆ ಸಂಪರ್ಕ ಕಲ್ಪಿಸುವ ಈ ರಸ್ತೆ ಅಭಿವೃದ್ದಿಯಾಗಬೇಕು ಎಂಬುದು ನನ್ನ ಕಸನಾಗಿತ್ತು ಅದು ಕೊನೇ ಗಳಿಗೆಯಲ್ಲಿ ಈಡೇರಿದ್ದು ಸಂತೋಷ ತಂದಿದೆ ಎಂದು ಹೇಳಿದರು. ಈ ರಸ್ತೆಯ ಅಭಿವೃದ್ದಿಯ ಜೊತೆಗೆ ಇನ್ನಷ್ಟು ರಸ್ತೆಗಳು, ಸೇತುವೆಗಳ ನಿರ್ಮಾಣಕ್ಕೆ ಶಿಲಾನ್ಯಾಸವನ್ನು ನೆರವೇರಿಸಲಾಗಿದೆ. ಎಲ್ಲಾ ಕಾಮಗಾರಿಗಳಿಗೂ ಅನುದಾನ ಬಿಡುಗಡೆಯಾಗಿದೆ, ಅನುದಾನ ಬಿಡುಗಡೆಯಾಗದೆ ಶಿಲಾನ್ಯಾಸ ಮಾಡುವ ಪ್ರವೃತ್ತಿ ನಮಗಿಲ್ಲ ಎಂದು ಹೇಳಿದರು.
ಏಟಿಗೆ ಎದುರೇಟು ನೀಡಿದ ಶಾಸಕರು
ಪಂಚೋಡಿ-ಕರ್ನೂರು- ಗಾಳಿಮುಖ ರಸ್ತೆಯ ಡಾಮರಿಕರಣಕ್ಕೆ ಒತ್ತಾಯಿಸಿ ಹಲವು ಬಾರಿ ಪ್ರತಿಭಟನೆಗಳು ನಡೆದಿದ್ದವು. ಪ್ರತಿಭಟನೆ ಮಾಡಿದವರು ರಾಜಕೀಯ ಲಾಭಕ್ಕೋಸ್ಕರ ಮಾಡಿರಬಹುದು. ಈ ಭಾಗದಲ್ಲಿ ಕಾಂಗ್ರೆಸ್ ಪಕ್ಷ ಬೆಂಬಲಿತರ ಸಂಖ್ಯೆ ಅಧಿಕವಾಗಿರುವ ಕಾರಣ ಪುತ್ತೂರು ಶಾಸಕರು ಈ ರಸ್ತೆಗೆ ಅನುದಾನ ನೀಡುತ್ತಿಲ್ಲ ಎಂದು ಪ್ರತಿಭಟನೆ ನಡೆಸಿದ್ದ ಕಾಂಗ್ರೆಸ್ ಮುಖಂಡರು ಆರೋಪಿಸಿದ್ದರು. ವಿನಯಕುಮಾರ್ ಸೊರಕೆ ಶಾಸಕರಾದ ಸಂದರ್ಭದಲ್ಲಿ ಈ ರಸ್ತೆ ಅಭಿವೃದ್ದಿ ಕಂಡಿತ್ತು ಆ ಬಳಿಕ ಯಾವ ಜನಪ್ರತಿನಿಧಿಗಳೂ ಇಲ್ಲಿನ ರಸ್ತೆಯ ಬಗ್ಗೆ ನಿರ್ಲಕ್ಷ್ಯಭಾವನೆ ತೋರಿದ್ದರು ಎಂಬ ಆರೋಪವನ್ನು ಮಾಡಿದ್ದರು. ಈ ಆರೋಪಕ್ಕೆ ಪ್ರತ್ಯುತ್ತರ ನೀಡಿದ ಶಾಸಕರು ನಾವು ಅಭಿವೃದ್ದಿಯಲ್ಲಿ ಎಂದೂ ರಾಜಕೀಯ ಮಾಡಿಲ್ಲ, ಆರೋಪ ಮಾಡಿದವರು ಈ ಮೊದಲು ರಾಜಕೀಯ ಲೆಕ್ಕಾಚಾರದಿಂದ ಅಭಿವೃದ್ದಿ ಕೆಲಸವನ್ನು ಮಾಡಿರಬಹುದು. ಕ್ಷೇತ್ರದ ಪ್ರತೀ ಮೂಲೆ ಮೂಲೆಯ ರಸ್ತೆ ಅಭಿವೃದ್ದಿಯಾಗಬೇಕೆಂಬುದು ನಮ್ಮ ಉದ್ದೇಶವಾಗಿದೆ. ಅಭಿವೃದ್ದಿ ಮಾಡುವಾಗ ನಮಗೆ ಧರ್ಮ, ಜಾತಿ, ಮತ ಬೇದ ಯಾವುದೂ ಕಾಣುವುದೇ ಇಲ್ಲ, ನಮ್ಮದೇನಿದ್ದರೂ ಅಭಿವೃದ್ದಿಯೇ ಮೂಲಮಂತ್ರವಾಗಿದೆ. ಕರ್ನೂರು- ಪಂಚೋಡಿ ರಸ್ತೆಗೆ ೩ಕೋಟಿ ಚಿಲ್ಲದೆ ಅನುದಾನ ನೀಡಿದ್ದು ರಾಜಕೀಯ ಲಾಭದ ಲೆಕ್ಕಾಚಾರದಿಂದಲ್ಲ ಎಂದು ತಿರುಗೇಟು ನೀಡಿದ್ದು ಮಾತ್ರವಲ್ಲದೆ ಜನ ಸಾಮಾನ್ಯರು ಸುಳ್ಳು ಆರೋಪ ಮಾಡುವವರ ಬಗ್ಗೆ ಜಾಗೃತರಾಗಿರಬೇಕು ಎಂದು ಹೇಳಿದರು.
ಕಾರ್ಯಕ್ರಮದಲ್ಲಿ ಸ್ಥಳೀಯ ಬಿಜೆಪಿ ನಾಯಕರು, ಕಾರ್ಯಕರ್ತರು ಉಪಸ್ಥಿತರಿದ್ದು ಅನುದಾನ ಬಿಡುಗಡೆ ಮಾಡುವ ಮೂಲಕ ಜನರ ಬೇಡಿಕೆಯನ್ನು ಈಡೇರಿಸಿದ ಶಾಸಕರಿಗೆ ಅಭಿನಂದನೆಯನ್ನು ಸಲ್ಲಿಸಿದರು.