ಸಮಾಜ ಸೇವೆಯ ಮೂಲಕ ಅಂತರಾಷ್ಟ್ರೀಯ ಮಾನ್ಯತೆ : ವಿಕ್ರಮ್‌ ದತ್ತ ಉಪ್ಪಿನಂಗಡಿ ರೋಟರಿ ಕ್ಲಬ್ ಪದಪ್ರದಾನ

0

ಉಪ್ಪಿನಂಗಡಿ: ಅಂತರಾಷ್ಟ್ರೀಯ ಸಂಸ್ಥೆಯಾಗಿರುವ ರೋಟರಿಯ ಧ್ಯೇಯವೇ ಸಮಾಜ ಸೇವೆಯಾಗಿದ್ದು, ತನ್ನನು ಸಮಾಜಮುಖಿ ಸೇವೆಗಳಿಗೆ ಅರ್ಪಿಸಿಕೊಳ್ಳುವ ಮೂಲಕ ಅಂತರಾಷ್ಟ್ರೀಯ ಮಾನ್ಯತೆ ಪಡೆದಿದೆ ಎಂದು ರೋಟರಿ ಜಿಲ್ಲಾ 3181ರ ಗವರ್ನರ್ ವಿಕ್ರಮ್‌ದತ್ತ ತಿಳಿಸಿದರು.
ರೋಟರಿ ಕ್ಲಬ್ ಉಪ್ಪಿನಂಗಡಿ ಇದರ ನೂತನ ಅಧ್ಯಕ್ಷರು ಹಾಗೂ ಆಡಳಿತ ಮಂಡಳಿಗೆ ಪದಪ್ರದಾನ ನೆರವೇರಿಸಿ ಮಾತನಾಡಿದ ಅವರು, ರೋಟರಿಯ ಪ್ರತಿಯೋರ್ವರೂ ಸೇವಾ ಮನೋಭಾವನೆಯಿಂದ ಗುರುತಿಸಿಕೊಳ್ಳಬೇಕಾಗಿದ್ದು, ನಾವು ಮಾಡಿದ ಕೆಲಸಗಳಲ್ಲಿ ತೃಪ್ತಿ ನಮ್ಮದಾದಾಗ ಮಾತ್ರ ಉತ್ತಮ ಕಾರ್ಯಗಳನ್ನು ಸಮಾಜಕ್ಕೆ ನೀಡಲು ಸಾಧ್ಯ ಎಂದರು.

ಮುಖ್ಯ ಅತಿಥಿಯಾಗಿದ್ದ ವಲಯ 4ರ ಸಹಾಯಕ ಗವರ್ನರ್ ಲಾರೆನ್ಸ್ ಗೊನ್ಸಾಲ್ವಿಸ್ ಮಾತನಾಡಿ, ಜಗತ್ತಿನಲ್ಲಿ ಪೊಲೀಯೋ ನಿರ್ಮೂಲನೆ ಮಾಡಬಹುದು ಎಂಬ ಕನಸನ್ನು ಕಂಡು ಅದನ್ನು ನನಸು ಮಾಡಲು ತನ್ನನ್ನು ತಾನು ಅರ್ಪಣೆ ಮಾಡಿಕೊಂಡದ್ದು ರೋಟರಿ ಸಂಸ್ಥೆಯಾಗಿದೆ. ಉಪ್ಪಿನಂಗಡಿಯ ರೋಟರಿಯಲ್ಲಿ ಈ ಬಾರಿ ಮಹಿಳಾ ಮಣಿಗಳ ಸಾರಥ್ಯವಿದ್ದು, ಹೊಸ ಭರವಸೆ ಮೂಡಿಸಿದೆ ಎಂದರು.
ವಲಯ 4ರ ವಲಯ ಸೇನಾನಿ ರವೀಂದ್ರ ದರ್ಬೆ ಮಾತನಾಡಿ, ರೋಟರಿಯೊಂದಿಗೆ ಸೇರಿ ಹಲವಾರು ಸಮಾಜಮುಖಿ ಕಾರ್ಯಗಳನ್ನು ನಡೆಸುವ ಭಾಗ್ಯ ನನಗೆ ಲಭಿಸಿದೆ. ಹಿರೇಬಂಡಾಡಿ ಸರಕಾರಿ ಶಾಲೆಗಳ ವಾಚನಾಲಯಕ್ಕೆ 10 ಸಾವಿರ ರೂ. ಮೌಲ್ಯದ ಪುಸ್ತಕಗಳನ್ನು ಒದಗಿಸುವ ಯೋಜನೆ ಹಾಕಿಕೊಂಡಿದ್ದು, ಅದನ್ನು ಈ ಸಂದರ್ಭ ಈಡೇರಿಸಲಾಗಿದೆ. ಈ ಅವಧಿಯಲ್ಲಿ ಉಪ್ಪಿನಂಗಡಿಯ ರೋಟರಿಯಿಂದ ಹಲವಷ್ಟು ಸಮಾಜಮುಖಿ ಕಾರ್ಯಗಳು ನಡೆಯಲಿ ಎಂದರು.
ಜಿಲ್ಲಾ ಪ್ರೊಜೆಕ್ಟ್ ಉದ್ಘಾಟಿಸಿ ಮಾತನಾಡಿದ ರೋಟರಿ ಕ್ಲಬ್ ಪುತ್ತೂರು ಘಟಕದ ಅಧ್ಯಕ್ಷ ಜಯರಾಜ್ ಭಂಡಾರಿ, ಯುವಕರಲ್ಲಿ ನಾಯಕತ್ವ ಗುಣವನ್ನು ಮೂಡಿಸಿ, ಸಮಾಜದಲ್ಲಿ ಅವರನ್ನು ಸಮಾಜಮುಖಿ ಚಿಂತನೆಯ ವ್ಯಕ್ತಿಗಳನ್ನಾಗಿ ಬೆಳೆಸುವ ಸಂಸ್ಥೆ ರೋಟರಿಯಾಗಿದ್ದು, ರೋಟರಿ ಎಂದರೆ ಸಮಾಜ ಸೇವೆಗಾಗಿಯೇ ಇರುವ ಸಂಸ್ಥೆಯಾಗಿದೆ. ಆದ್ದರಿಂದ ಇನ್ನಷ್ಟು ಯುವಕರು ರೋಟರಿಗೆ ಬಂದು ತಮ್ಮನ್ನು ಸಮಾಜ ಸೇವೆಯಲ್ಲಿ ತೊಡಗಿಸಿಕೊಳ್ಳಬೇಕು ಎಂದರು.
ಉಪ್ಪಿನಂಗಡಿ ರೋಟರಿ ಕ್ಲಬ್‌ನ ಅಧ್ಯಕ್ಷೆಯಾಗಿ ಪದಪ್ರದಾನ ಸ್ವೀಕರಿಸಿ ಮಾತನಾಡಿದ ಅನುರಾಧ ಆರ್. ಶೆಟ್ಟಿ, ಅನಿರೀಕ್ಷಿತವಾಗಿ ಈ ಅವಕಾಶ ನನಗೆ ಬಂದಿದೆ. ರೋಟರಿಯ ಆಶಯದಂತೆ ಹತ್ತು ಹಲವು ಸಮಾಜಮುಖಿ ಕೆಲಸಗಳೊಂದಿಗೆ ಸಮಾಜದ ಕೆಳಸ್ತರದಲ್ಲಿರುವವರ ಬಾಳಿನಲ್ಲಿ ಬೆಳಕಿನ ಕಿರಣಗಳನ್ನು ಮೂಡಿಸಲು ಪ್ರಯತ್ನಿಸುತ್ತೇನೆ. ಈ ಬಾರಿಯ ಜಿಲ್ಲಾ ಯೋಜನೆ ಅಂಗನವಾಡಿಗಳ ಪುನಶ್ಚೇತನವಾಗಿದ್ದು, ಈಗಾಗಲೇ ನಾವು ಹತ್ತು ಹಲವು ಯೋಜನೆಗಳನ್ನು ಹಮ್ಮಿಕೊಂಡಿದ್ದೇವೆ. ಓರ್ವ ಅಧ್ಯಕ್ಷೆಯಾಗಿ ಹಿರಿ- ಕಿರಿಯ ಸದಸ್ಯರ ಸಲಹೆ ಪಡೆದು, ಅವರ ಮಾರ್ಗದರ್ಶನದಂತೆ ಸಮಾಜಮುಖಿ ಕೆಲಸಗಳಲ್ಲಿ ತೊಡಗಿಸಿಕೊಳ್ಳಲಿದ್ದೇನೆ ಎಂದರು.
ಕಾರ್ಯದರ್ಶಿಯಾಗಿ ಆಶಾಲತಾ ಜಗದೀಶ್, ಕೋಶಾಧಿಕಾರಿಯಾಗಿ ಸ್ವರ್ಣ ಪೊಸವಳಿಕೆ, ದಂಡಾಧಿಕಾರಿಯಾಗಿ ವಂದನಾ, ರೋಟರಿ ಕ್ಲಬ್‌ನ ನಿರ್ದೇಶಕರಾಗಿ ವಿಜಯಕುಮಾರ್ ಕಲ್ಲಳಿಕೆ (ಕ್ಲಬ್ ಸರ್ವೀಸ್), ಶ್ರೀಕಾಂತ್ ಪಟೇಲ್ (ಪೊಕೇಶನಲ್ ಸರ್ವೀಸ್), ಸ್ವರ್ಣೇಶ್ (ಕಮ್ಯೂನಿಟಿ ಸರ್ವೀಸ್), ಡಾ. ರಾಜಾರಾಮ್ ಕೆ.ಬಿ. (ಅಂತರಾಷ್ಟ್ರೀಯ ಸೇವೆ), ಅಬೂಬಕ್ಕರ್ ಪುತ್ತಾ (ಯುವಜನ ಸೇವೆ) ಮತ್ತಿತರರು ಪದಪ್ರದಾನ ಸ್ವೀಕರಿಸಿದರು.
ಕಾರ್ಯಕ್ರಮದಲ್ಲಿ ರಮೇಶ್ ಕೆ.ಪಿ, ರಾಜಶೇಖರ ಶೆಟ್ಟಿ, ಡಾ. ಸುಪ್ರಿಯಾ ನಿರಂಜನ್ ರೈ, ಭರತ್ ಕೆ.ಆರ್. ಅವರನ್ನು ನೂತನ ಸದಸ್ಯರನ್ನಾಗಿ ಸೇರಿಸಿಕೊಳ್ಳಲಾಯಿತು. ಶೈಕ್ಷಣಿಕ ಸಾಧನೆಗಾಗಿ ಆಶಿಕಾ ಎಂ., ಆಕಾಂಕ್ಷ ಶೆಟ್ಟಿ, ರೈನಾಝ್ ಹಾಗೂ ಡಾಡ್ಜ್‌ಬಾಲ್‌ನ ಅಂತರಾಷ್ಟ್ರೀಯ ತೀರ್ಪುಗಾರರಾಗಿ ಆಯ್ಕೆಯಾಗಿರುವ ವಿಜೇತ್ ಕುಮಾರ್ ಜೈನ್ ಅವರನ್ನು ಸನ್ಮಾನಿಸಲಾಯಿತು. ರೋಟರಿ ಮಾಜಿ ಅಧ್ಯಕ್ಷ ಚಂದಪ್ಪ ಮೂಲ್ಯ ಅವರ ಪ್ರಾಯೋಜಕತ್ವದಲ್ಲಿ ಅಡೆಕ್ಕಲ್ ಅಂಗನವಾಡಿ ಕೇಂದ್ರಕ್ಕೆ ನೀರಿನ ಟ್ಯಾಂಕ್ ನೀಡಲಾಯಿತು ಹಾಗೂ ರೋಟರಿಯಿಂದ ಇನ್ನು ಕೆಲವು ಅಂಗನವಾಡಿಗಳಿಗೆ ನೆರವು ನೀಡಲು ಯೋಜನೆ ರೂಪಿಸಲಾಯಿತು.
ಕಾರ್ಯಕ್ರಮದಲ್ಲಿ ರೋಟರಿ ಪೂರ್ವಾಧ್ಯಕ್ಷರಾದ ಜಗದೀಶ್ ನಾಯಕ್, ಕಾರ್ಯದರ್ಶಿ ಗಿರಿಧರ ನಾಯಕ್, ಖಜಾಂಚಿ ಸ್ವರ್ಣೇಶ್ ಗಾಣಿಗ, ರೋಟರಿಗಳಾದ ನವೀನ್ ಬ್ರಾಗ್ಸ್, ಡಾ. ನಿರಂಜನ್ ರೈ, ಗುಣಕರ ಅಗ್ನಾಡಿ, ಅಝೀಝ್ ಬಸ್ತಿಕ್ಕಾರ್, ವಿಜಯಕುಮಾರ್ ಕಲ್ಲಳಿಕೆ, ಹರೀಶ್ ನಾಯಕ್ ನಟ್ಟಿಬೈಲು, ಇಕ್ಬಾಲ್ ಪಾಂಡೇಲು, ಜಾನ್ ಕೆನ್ಯೂಟ್, ಪುರಂದರ ರೈ ಬಾರ್ಲ ಮತ್ತಿತರರು ಉಪಸ್ಥಿತರಿದ್ದರು. ಅಬ್ದುರ್ರಹ್ಮಾನ್ ಯುನಿಕ್ ಹಾಗೂ ದಿವಾಕರ ಆಚಾರ್ಯ ಕಾರ್ಯಕ್ರಮ ನಿರೂಪಿಸಿದರು.

LEAVE A REPLY

Please enter your comment!
Please enter your name here