ಪುತ್ತೂರು:ರೈಲ್ವೇ ಇಲಾಖೆಯ ಬಂಟ್ವಾಳ ರೈಲು ನಿಲ್ದಾಣದಲ್ಲಿ ರೂ.23ಕೋಟಿ ಹಾಗೂ ಸುಬ್ರಹ್ಮಣ್ಯ ರೈಲು ನಿಲ್ದಾಣದಲ್ಲಿ ರೂ.20ಕೋಟಿ ವೆಚ್ಚದಲ್ಲಿ ನಡೆಯಲಿರುವ ವಿವಿಧ ಅಭಿವೃದ್ಧಿ ಕಾಮಗಾರಿಗಳಿಗೆ ಫೆ.26ರಂದು ಶಿಲಾನ್ಯಾಸ ನಡೆಯಲಿದೆ.
ದೇಶದಾದ್ಯಂತ ಸುಮಾರು 2500 ರೈಲು ನಿಲ್ದಾಣಗಳಲ್ಲಿ ನಡೆಯಲಿರುವ ವಿವಿಧ ಅಭಿವೃದ್ಧಿ ಯೋಜನೆಗಳಿಗೆ ಪ್ರಧಾನ ಮಂತ್ರಿ ನರೇಂದ್ರ ಮೋದಿಯವರು ಏಕ ಕಾಲದಲ್ಲಿ ವೀಡಿಯೋ ಕಾನ್ಫರೆನ್ಸ್ ಮೂಲಕ ಶಿಲಾನ್ಯಾಸ ನೆರವೇರಿಸಲಿದ್ದಾರೆ. ಒಟ್ಟು 554 ರೈಲು ನಿಲ್ದಾಣಗಳಲ್ಲಿ ಅಮೃತ್ ಭಾರತ್ ಯೋಜನೆಯಲ್ಲಿ ಅಭಿವೃದ್ಧಿ ಕಾಮಗಾರಿಗಳು ನಡೆಯಲಿದೆ. ಬಂಟ್ವಾಳದಲ್ಲಿ ನಡೆಯುವ ಬೃಹತ್ ಕಾರ್ಯಕ್ರಮದಲ್ಲಿ ಸಂಸದ ನಳಿನ್ ಕುಮಾರ್ ಕಟೀಲು ಹಾಗೂ ಜಿಲ್ಲೆಯ ಶಾಸಕರು ಭಾಗವಹಿಸಲಿದ್ದಾರೆ.
ಈ ಯೋಜನೆಯ ಮೂಲಕ ವಿಐಪಿ ವಿಶ್ರಾಂತಿ ಕೊಠಡಿ, ಪ್ರಥಮ ದರ್ಜೆ ವಿಶ್ರಾಂತಿ ಕೊಠಡಿ, ಹವಾನಿಯಂತ್ರಿತ ವಿಶ್ರಾಂತಿ ಕೊಠಡಿಗಳು, ಪ್ಲಾಟ್ ಫಾರಂ ಶೆಲ್ಟರ್, ಅಪಘಾತ ತಪ್ಪಿಸುವ ನಿಟ್ಟಿನಲ್ಲಿ ಫೂಟ್ ಓವರ್ ಬ್ರಿಡ್ಜ್, ಫೂಟ್ ಅಂಡರ್ ಬ್ರಿಡ್ಜ್, ಹೊಸ ವಿನ್ಯಾಸದಲ್ಲಿ ನಿಲ್ದಾಣದ ಕಟ್ಟಡ ನಿರ್ಮಾಣ ಸೇರಿದಂತೆ ಹಲವು ಅಭಿವೃದ್ಧಿ ಕಾಮಗಾರಿಗಳು ನಡೆಯಲಿದೆ ಎಂದು ರೈಲ್ವೇ ಇಲಾಖೆಯ ಪ್ರಕಟಣೆ ತಿಳಿಸಿದೆ.