ಪುತ್ತೂರು:ವೀರಮಂಗಲದ ಶ್ರೀಕೃಷ್ಣ ಕಲಾ ಕೇಂದ್ರದ 21ನೇ ವರ್ಷದ ಸಂಭ್ರಮಾಚರಣೆಯ ಅಂಗವಾಗಿ ನಡೆಯುವ 4ನೇ ವರ್ಷದ ಶ್ರೀಕೃಷ್ಣ ಲೀಲೋತ್ಸವವು ಸೆ.1ರಂದು ವೀರಮಂಗಲ ಶ್ರೀ ವಿಷ್ಣುಮೂರ್ತಿ ದೇವಸ್ಥಾನದಲ್ಲಿ ನಡೆಯಲಿದೆ.
ಕಾರ್ಯಕ್ರಮದಲ್ಲಿ ಬೆಳಿಗ್ಗೆ ಶ್ರೀವಿಷ್ಣು ಸಹಸ್ರನಾಮಾರ್ಚನೆ, ವೀರಮಂಗಲ ಶ್ರೀ ಮಹಾವಿಷ್ಣುಮೂರ್ತಿ ಭಜನಾ ಮಂಡಳಿಯವರಿಂದ ಭಜನೆ, ಮನರಂಜನಾ ಸ್ಪರ್ಧೆಗಳು, ಮಧ್ಯಾಹ್ನ ಸವಣೂರು ಶ್ರವಣರಂಗ ಪ್ರತಿಷ್ಠಾನದ ತಾರಾನಾಥ ಸವಣೂರು ನಿರ್ದೇಶನದಲ್ಲಿ ವೀರಮಂಗಲ ಪಿಎಂಶ್ರೀ ಶಾಲಾ ವಿದ್ಯಾರ್ಥಿಗಳಿಂದ ‘ರಾಣಿ ಶಶಿಪ್ರಭೆ’ ಎಂಬ ಯಕ್ಷಗಾನ ನಡೆಯಲಿದೆ. ಅಪರಾಹ್ನ ಗೋಪೂಜೆ, ಮುದ್ದುಕೃಷ್ಣ ಮೆರವಣಿಗೆ, ಸಂಜೆ ನೃತ್ಯಾರ್ಚನೆ ನಡೆಯಲಿದೆ. ನಂತರ ನಡೆಯುವ ಧಾರ್ಮಿಕ ಸಭಾ ಕಾರ್ಯಕ್ರಮದಲ್ಲಿ ವೀರಮಂಗಲ ಶ್ರೀ ವಿಷ್ಣುಮೂರ್ತಿ ದೇವಸ್ಥಾನದ ವಿಶ್ವಸ್ಥ ಮಂಡಳಿ ಪೂರ್ವಾಧ್ಯಕ್ಷ ವಾಸುದೇವ ಇಡ್ಯಾಡಿ ಅಧ್ಯಕ್ಷತೆ ವಹಿಸಲಿದ್ದಾರೆ. ಕೊಂಬೆಟ್ಟು ಸರಕಾರಿ ಪದವಿ ಪೂರ್ವ ಕಾಲೇಜಿನ ಉಪ ಪ್ರಾಂಶುಪಾಲ ವಸಂತ ಮೂಲ್ಯ ಪಿ., ವೀರಮಂಗಲ ಪಿಎಂಶ್ರೀ ಸರಕಾರಿ ಹಿ.ಪ್ರಾ ಶಾಲೆಯ ಸಹಶಿಕ್ಷಕಿ ಶೋಭಾ ಪಿ., ಭಕ್ತಕೋಡಿ ಎಸ್‌ಜಿಎಂ ಪ್ರೌಢಶಾಲಾ ಸಹಶಿಕ್ಷಕ ಮೋಹನ್ ಕುಮಾರ ಎನ್. ಅಭ್ಯಾಗತರಾಗಿ ಆಗಮಿಸಲಿದ್ದಾರೆ. ವೀರಮಂಗಲ ಶ್ರೀ ವಿಷ್ಣುಮೂರ್ತಿ ದೇವಸ್ಥಾನದ ವ್ಯವಸ್ಥಾಪನಾ ಸಮಿತಿ ಪೂರ್ವಾಧ್ಯಕ್ಷ ವೆಂಕಟಸುಬ್ರಾಯ ಮರಡಿತ್ತಾಯ ಹೊರಳಾಡಿ ಇವರಿಗೆ ಗೌರವಾರ್ಪಣೆ ನಡೆಯಲಿದೆ. ಸಭಾ ಕಾರ್ಯಕ್ರಮದ ಬಳಿಕ ಗೋಪಾಲಕೃಷ್ಣ ವೀರಮಂಗಲ ರಚಿಸಿ, ನಿರ್ದೇಶಿಸಿದ ‘ಕೃಷ್ಣಾವತಾರ’ಎಂಬ ನೃತ್ಯರೂಪಕ ನಡೆದ ಬಳಿಕ ರಾತ್ರಿ ಅನ್ನಸಂತರ್ಪಣೆ ನಡೆಯಲಿದೆ ಎಂದು ಶ್ರೀಕೃಷ್ಣ ಕಲಾ ಕೇಂದ್ರದ ಅಧ್ಯಕ್ಷ ಗೋಪಾಲಕೃಷ್ಣ ಕೆ ತಿಳಿಸಿದ್ದಾರೆ.